ಮಲೇರಿಯಾ ಬಗೆಗೆ ಮುಂಜಾಗ್ರತೆ ಇರಲಿ: ಜಿ.ಎಂ.ಆರಾಧ್ಯ

0
106

ದಾವಣಗೆರೆ,ಜೂ.23:ಖಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಖಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಮಲೇರಿಯಾ ಬಗ್ಗೆ ನಮಗೆ ಮಾಹಿತಿ ಗೊತ್ತಿದ್ದಲ್ಲಿ ನಾವು ಇತರರಿಗೂ ಹೇಳಬಹುದು. ಈ ನಿಟ್ಟಿನಲ್ಲಿ ನಮಗೆ ತಿಳುವಳಿಕೆ ಅಗತ್ಯವಾಗಿದೆ ಎಂದು ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರಾಧ್ಯ ಹೇಳಿದರು.
ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಶೂನ್ಯ ಮಲೇರಿಯಾ ಗುರಿಯನ್ನು ತಲುಪಿ ಎಂಬ ಧೈಯವಾಕ್ಯದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮದ ಮೂಲಕ ನಾವು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ನಮ್ಮನ್ನು, ನಮ್ಮ ನಾಡನ್ನು ಮಲೇರಿಯಾ ಮುಕ್ತ ನಾಡನ್ನಾಗಿ ಮಾಡಲು ಶ್ರಮಿಸೋಣ. ಮಳೆಗಾಲ ಪ್ರಾರಂಭವಾಗಿದ್ದು, ಮಲೇರಿಯಾ ಹರಡುವ ಕಾಲ ಇದಾಗಿದೆ. ಹೀಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ಹರಿದುಹೋಗುವ ಚರಂಡಿಗಳನ್ನು ಶುಚಿಗೊಳಿಸಬೇಕು, ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಂಡು ಮಲೇರಿಯಾ ಹರಡದಂತೆ ಎಚ್ಚರವಹಿಸಬೇಕು ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಲೇರಿಯಾ ರೋಗವು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಹರಡುವ ಖಾಯಿಲೆಯಾಗಿದ್ದು, ಇದನ್ನು ಡಾ.ರೋನಾಲ್ಡೊ ರಾಸ್ ಅವರು 1897 ರಲ್ಲಿ ಕಂಡುಹಿಡಿದ ಪ್ರಯುಕ್ತ 1997 ರಿಂದ ಪ್ರತಿವರ್ಷ ಜೂನ್ ತಿಂಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಮಾಡಲಾಗುತ್ತದೆ.

ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗುವಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಖಾಯಿಲೆಗಳು ಹರಡುತ್ತವೆ. ಮಾನ್ಸೂನ್ ಆರಂಭಕ್ಕೂ ಮುಂಚೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಿ ಮಲೇರಿಯಾ ನಿಯಂತ್ರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2025 ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿಯಾಗಿದೆ. 2015 ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 26 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, 2020ರಲ್ಲಿ ಕೇವಲ 4 ಪ್ರಕರಣಗಳು ಕಂಡುಬಂದಿದೆ. ಈ ವರ್ಷ ಯಾವುದೇ ಪ್ರಕರಣ ವರದಿಯಾಗಿಲ್ಲ, ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.

ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವಚ್ಚತೆ ಇಲ್ಲದೇ ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮೈನಿಂಗ್ ಪ್ರದೇಶದ ವ್ಯಾಪ್ತಿಯ ಕ್ವಾರಿಗಳಲ್ಲಿ, ಟೈರು, ಎಳನೀರು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಮಲೇರಿಯಾವನ್ನು ನಿಯಂತ್ರಿಸಲು ಖಾಯಿಲೆÀಯನ್ನು ಶೀಘ್ರ ಪತ್ತೆ ಹಚ್ಚಿ ಸಂಪೂರ್ಣ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. 24 ಗಂಟೆಗಳಲ್ಲಿ ರಕ್ತ ಲೇಪನಗಳ ಪರೀಕ್ಷೆ ಮಾಡುವುದು, ಜಿಲ್ಲೆಯ ವಲಸಿಗರ ಮತ್ತು ಹೊರರಾಜ್ಯದ ವಲಸಿಗರ ಸಮೀಕ್ಷೆ ಮಾಡುವುದು, ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು, ಮಲೇರಿಯಾ ಪತ್ತೆಯಾದ ಗ್ರಾಮ, ಪ್ರದೇಶಗಳಲ್ಲಿ ಸಂಪರ್ಕ ಅಥವಾ ಸಮೂಹ ರಕ್ತಲೇಪನಾ ಸಂಗ್ರಹ ಮಾಡುವುದು ಮತ್ತು ಐ.ಇ.ಸಿ ಚಟುವಟಿಕೆಗಳನ್ನು ಮಾಡಿಸುವುದು, ಸ್ವಚ್ಛ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನು ಬಿಡುಗಡೆ ಮಾಡುವುದು ಹೀಗೆ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಸೊಳ್ಳೆಗಳಿಂದ ಮಲೇರಿಯಾ ಹರಡದಂತೆ ತಡೆಗಟ್ಟಲು ಮನೆಯ ಸುತ್ತಮುತ್ತ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು. ನಿಂತ ನೀರಿಗೆ ವಾರಕ್ಕೊಮ್ಮೆಯಂತೆ ಲಾರ್ವಾನಾಶಕ ಅಥವಾ ಸುಟ್ಟ ಇಂಜಿನ್ ಆಯಿಲ್, ಸೀಮೆ ಎಣ್ಣೆ ಹಾಕುವುದು. ಸ್ವ ರಕ್ಷಣೆಗಾಗಿ ಸೊಳ್ಳೆಪರದೆ, ಸಂಜೆ ಹೊತ್ತಲ್ಲಿ ಧೂಪದ ಹೊಗೆ ಹಾಕುವುದು, ಒಡೋಮಸ್, ಸೊಳ್ಳೆ ಬತ್ತಿ, ಸೊಳ್ಳೆ ನಿವಾರಕಗಳು, ಕಿಟಕಿಗಳಿಗೆ ಜಾಲರಿ ಬಡಿಸುವುದು ಸೊಳ್ಳೆ ಬ್ಯಾಟ್ ಮುಂತಾದವುಗಳನ್ನು ಬಳಸಬೇಕು ಎಂದು ಡಾ. ವೆಂಕಟೇಶ್ ಹೇಳಿದರು.
ಜಿಲ್ಲಾ ವರದಿಗಾರ ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಹಳ್ಳಿ ಮತ್ತು ಕೊಳಚೆ ಪ್ರದೇಶದಲ್ಲಿರುವ ಜನರಿಗೆ ಜಾಗೃತಿ ಅಗತ್ಯವಾಗಿದ್ದು, ಈ ಕಾರ್ಯಕ್ರಮದ ಉದ್ದೇಶ ಅವರಿಗೆ ತಿಳುವಳಿಕೆ ಮೂಡಿಸಬೇಕಾಗಿದೆ. ಈಗಾಗಲೇ ದೇಶವು ಪೋಲಿಯೋ ಮುಕ್ತ ಭಾರತವಾಗಿದ್ದು ಈ ನಿಟ್ಟಿನಲ್ಲಿ ಮಲೇರಿಯಾ ಮುಕ್ತ ದೇಶವನ್ನಾಗಿ ಮಾಡಲು ಶ್ರಮಿಸೋಣ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್ ಮಾತನಾಡಿ, ಮಲೇರಿಯಾ ಮಾಸಾಚರಣೆ ಅಂಗವಾಗಿ ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎಂಬ ಘೋಷ ವಾಕ್ಯದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಜನರಿಗೆ ಆರೋಗ್ಯ, ಸ್ವಚ್ಚತೆ ಬಗ್ಗೆ ತಿಳುವಳಿಕೆ ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಮಾಧ್ಯಮಗಳಾದ ಕಲಾ ತಂಡ, ಸಂಗೀತ ಕಾರ್ಯಕ್ರಮಗಳ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುತ್ತಾ ಬಂದಿದೆ. ಸಾರ್ವಜನಿಕರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈವರೆಗೆ ದೇಶವನ್ನು ಪೋಲಿಯೋ ಮುಕ್ತವನ್ನಾಗಿ ಮಾಡಿದ್ದು, ಅದೇ ರೀತಿ ಮಲೇರಿಯಾ ಮುಕ್ತವನ್ನಾಗಿ ಮಾಡಬೇಕಾಗಿದೆ. ಆರೋಗ್ಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಸತತ ಪರಿಶ್ರಮದಿಂದ ಮಲೇರಿಯಾ ಪ್ರಕರಣಗಳು ಪ್ರತಿ ವರ್ಷ ಇಳಿಮುಖವಾಗುತ್ತಿವೆ. ಎಲ್ಲಾ ಇಲಾಖೆಗಳ ಸಹಯೋಗ, ಪತ್ರಕರ್ತರ ಸಹಕಾರದೊಂದಿಗೆ 2025 ರ ವೇಳೆಗೆ ಮಲೇರಿಯಾವನ್ನು ನಿರ್ಮೂಲನೆ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ತಿಪ್ಪೇಸ್ವಾಮಿ, ಪತ್ರಕರ್ತರು, ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here