ಪೊಲೀಸ್‌ ಕಿರುಕುಳದ ನಿಟ್ಟಿನಲ್ಲಿ ಗೋವಾದಲ್ಲಿ ಮೂವರು ಕನ್ನಡಿಗರ ಆತ್ಮಹತ್ಯೆ

0
460

ಗೋವಾದಲ್ಲಿ ಮೂವರು ಕನ್ನಡಿಗರ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಿರುಕುಳದ ನಿಟ್ಟಿನಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು ಗೋವಾದಲ್ಲಿ ಕನ್ನಡಿಗರು ಎಂಥ ಅಪಾಯಕಾರಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದಿದ್ದಾರೆ. ಗೋವಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮುದ್ದೇಬಿಹಾಳ ಮೂಲದ ಒಂದೇ ಕುಟುಂಬದ ಮೂವರು ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗೋವಾದಲ್ಲಿ ಕನ್ನಡಿಗರ ಬದುಕು ಎಂಥಾ ಡೋಲಾಯಮಾನ ಪರಿಸ್ಥಿತಿಯಲ್ಲಿದೆ, ಅಲ್ಲಿ ಕನ್ನಡಿಗರು ಎಂಥ ಅಪಾಯಕಾರಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮೂವರ ಆತ್ಮಹತ್ಯೆ ನಂತರ ಪೊಲೀಸರೂ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತರಾತುರಿಯಲ್ಲಿ ಪಂಚನಾಮೆ ನಡೆಸಿದ್ದಾರೆ ಎಂಬ ಆರೋಪ ಸ್ಥಳೀಯ ಕನ್ನಡ ಸಂಘಟನೆಗಳಿಂದ ವ್ಯಕ್ತವಾಗಿದೆ. ಈ ಬಗ್ಗೆಗೋವಾ ಮುಖ್ಯಮಂತ್ರಿ ಕೂಡಲೇ ಗಮನ ಹರಿಸಬೇಕು. ಪೊಲೀಸ್‌ ಕಿರುಕುಳದ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ಈ ಮೂಲಕ ಕನ್ನಡಿಗರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗೋವಾದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯಗಳಿಗೆ ಕೊನೆಮೊದಲಿಲ್ಲ ಎಂಬಂತಾಗಿದೆ. ಕನ್ನಡಿಗರನ್ನು ಒಕ್ಕಲೆಬ್ಬಿಸುವುದರಿಂದ ಆರಂಭಿಸಿ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ಸಿಲುಕಿಸುವ ವರೆಗೆ ವಿಧವಿಧದ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಬಗ್ಗೆ ಕರ್ನಾಟಕ ಸರ್ಕಾರವೂ ಗಮನಹರಿಸಬೇಕು. ನಾನೂ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here