ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ :ಸಚಿವ ಸುರೇಶ್ ಕುಮಾರ್ ಹೇಳಿಕೆ

0
86

ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ನಡೆಸುತ್ತಿದೆ. ನಿಗದಿತ ದಿನಾಂಕದಂತೆ ಜುಲೈ 19 ರಿಂದ 22 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ 2021ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ಮೈಸೂರಿನಲ್ಲಿ ಆಯೋಜಿಸಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಪರೀಕ್ಷೆ ನಡೆಸಲು ಸರ್ಕಾರ ಈಗಾಗಲೇ ಕೋವಿಡ್-19  ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರೂಪಿಸಲಾಗಿರುವ ಕೊರೊನಾ ಮಾರ್ಗಸೂಚಿಗಳನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತದೆ. ಯಾವುದಾದರೂ ವಿದ್ಯಾರ್ಥಿಗಳಲ್ಲಿ ಕೋವಿಡ್-19 ರೋಗಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಇಚ್ಛಿಸಿದ್ದಲ್ಲಿ ಹತ್ತಿರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವರು ಪರೀಕ್ಷೆ ಬರೆಯಬಹುದು. ಈ ನಿರ್ಣಾಯಕ ಪರೀಕ್ಷೆಯನ್ನು ಏರ್ಪಡಿಸಲು ಸರ್ಕಾರ ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

‘ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳಿಗೆ ಶಿಕ್ಷೆಯಲ್ಲ, ಆದರೆ ಭವಿಷ್ಯದಲ್ಲಿ ಅವರು ವೃತ್ತಿಜೀವನ ರೂಪಿಸಿಕೊಳ್ಳಲು, ತಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಈ ನಿರ್ಣಾಯಕ ಪರೀಕ್ಷೆ ಸಹಕಾರಿಯಾಗಿದೆ. ಹೀಗಾಗಿ ಕೊರೊನಾ ಸಂಕಷ್ಟದ ನಡುವೆಯೂ ಪರೀಕ್ಷೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ. ಕಳೆದ ವರ್ಷದ 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಎಸ್‌ಎಸ್‌ಎಲ್‌ಸಿಗೆ ಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಬೇಕಾದ ಅನಿರ್ವಾಯತೆ ಎದುರಾಗಿದೆ. ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ಬಡ್ತಿ ನೀಡುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮವಲ್ಲವೆಂದು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು 2 ಸೆಟ್ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತವೆ. ವಿದ್ಯಾರ್ಥಿಗಳಿಗೆ ಗೊತ್ತುಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ಶೀಟ್ ಗಳನ್ನು ನೀಡಲಾಗುತ್ತದೆ. ಪರೀಕ್ಷೆಗೂ ಮುನ್ನ ನಾನು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದಲ್ಲಿ ಪಾಲ್ಗೊಂಡು ಚರ್ಚೆ ನಡೆಸುತ್ತೇನೆ. ಪರೀಕ್ಷಾ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಮತ್ತು ಯಾವುದೇ ರೀತಿಯ ಅನುಮಾನಗಳಿದ್ದಲ್ಲಿ ಅದನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ ಪರೀಕ್ಷಾ ವಿಚಾರವಾಗಿ ಚರ್ಚಿಸಲು ಮುಂದಿನ 2 ದಿನ ಎಲ್ಲಾ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಮತ್ತು ಬ್ಲಾಕ್ ಶಿಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದೇನೆಂದು ತಿಳಿಸಿದ್ದಾರೆ. 

ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಬರೋಬ್ಬರಿ 8.76 ಲಕ್ಷ ವಿದ್ಯಾರ್ಥಿಗಳು 73,066 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷ 48,000 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಕೋವಿಡ್-19 ಕಾರಣ ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. 

LEAVE A REPLY

Please enter your comment!
Please enter your name here