ಆಂಧ್ರ ಸಿಎಂ ಜಗನ್ ಸಹೋದರಿ ವೈ.ಎಸ್. ಶರ್ಮಿಳಾ ರವರಿಂದ ತೆಲಂಗಾಣದಲ್ಲಿ ಇಂದು ಹೊಸ ಪಕ್ಷ ಘೋಷಣೆ

0
147

ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ವೈ.ಎಸ್​. ರಾಜಶೇಖರ ರೆಡ್ಡಿ ಅಕಾಲಿಕ ಮರಣಕ್ಕೆ ತುತ್ತಾದ ನಂತರ ಅವರ ವೈ.ಎಸ್​. ಜಗನ್​ ಮೋಹನ್ ರೆಡ್ಡಿ ಕಾಂಗ್ರೆಸ್​ನಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಿ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಗಾದಿಗೆ ಏರಿರುವುದು ಇತಿಹಾಸ. ಆದರೆ, ಅವರ ಸಹೋದರಿ ವೈ.ಎಸ್​. ಶರ್ಮಿಳಾ ಅವರ ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಇಂದು ತೆಲಂಗಾಣದಲ್ಲಿ ತಮ್ಮ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿಯೇ ಪಕ್ಷ ಸ್ಥಾಪನೆಗೆ ಪ್ರಯತ್ನ ನಡೆಸಿದ್ದ ಅವರು ಇಂದು ತಮ್ಮ ತಂದೆಯ ಜನ್ಮದಿನದ ಅಂಗವಾಗಿ ಹೊಸ ಪಕ್ಷಕ್ಕೆ ರಾಜಧಾನಿ ಹೈದ್ರಾಬಾದ್​ನಲ್ಲಿ ಚಾಲನೆ ನೀಡಿದ್ದಾರೆ. ಈ ಸುದ್ದಿಯೊಂದಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜಕೀಯದಲ್ಲಿ ಹೊಸ ಗಾಳಿ ಬೀಸತೊಡಗಿದೆ. ಹತ್ತಾರು ಚರ್ಚೆಗಳು ಶುರುವಾಗಿವೆ.

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಕೆಲವೇ ಜನ ಭಾಗವಹಿಸುವ ಇಂದಿನ ಕಾರ್ಯಕ್ರದಲ್ಲಿ ಪಕ್ಷದ ಪ್ರಣಾಳಿಕೆ ಮತ್ತು ಧ್ವಜ ಬಿಡುಗಡೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. ಶರ್ಮಿಳಾರವರ ತಾಯಿ ವೈ.ಎಸ್ ವಿಜಯಮ್ಮ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಹೈದ್ರಾಬಾದ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ತಮ್ಮ ಪಕ್ಷದ ಚಟುವಟಿಕೆಗಳನ್ನು ತೆಲಂಗಾಣ ರಾಜ್ಯಕ್ಕೆ ಸೀಮಿತಗೊಳಿಸಲಿದ್ದಾರೆಯೇ ಅಥವಾ ಆಂಧ್ರ ಪ್ರದೇಶಕ್ಕೂ ವಿಸ್ತರಿಸಲಿದ್ದಾರೆಯೇ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಮಾತನಾಡಿರುವ ವೈ.ಎಸ್​. ಶರ್ಮಿಳಾ, “ನಾನು ಇಲ್ಲಿಯೇ ಹುಟ್ಟಿದ್ದೇನೆ, ಇಲ್ಲಿಯೇ ಬೆಳಿದಿದ್ದೇನೆ. ನನ್ನ ಮಕ್ಕಳಿಗೆ ಇಲ್ಲಿಯೇ ಜನ್ಮ ನೀಡಿದ್ದೇನೆ. ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಇಲ್ಲಿಯೇ ನನ್ನ ಹೊಸ ಪಕ್ಷವನ್ನು ಸ್ಥಾಪಿಸಿದ್ದು, ನನ್ನ ತಂದೆಯ ಆಶಯದಂತೆ ರಾಜಕೀಯ ನಡೆಸುತ್ತೇನೆ” ಎಂದು ತಿಳಿಸಿದ್ದಾರೆ. ಆದರೆ, ತಮ್ಮ ಸಹೋದರಿಯ ಈ ನಡೆ ಕುರಿತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅಂತರ ಕಾಯ್ದುಕೊಂಡಿದ್ದಾರೆ.

ತಮ್ಮ ತಂದೆ ವೈ.ಎಸ್ ರಾಜಶೇಖರ್‌ ರೆಡ್ಡಿಯವರ ಆಡಳಿತವನ್ನು ಮರುಸ್ಥಾಪಿಸುವುದು ನನ್ನ ಗುರಿ. ತೆಲಂಗಾಣದಲ್ಲಿ ಪ್ರಬಲ ವಿರೋಧ ಪಕ್ಷವಿಲ್ಲ. ಖಾಲಿ ಇರುವ ಉದ್ಯೋಗಗಳನ್ನು ತುಂಬಿಲ್ಲ ಎಂದು ಸಿಎಂ  ಕೆ.ಸಿ. ಚಂದ್ರಶೇಖರ ರಾವ್ ಸರ್ಕಾರವನ್ನು ಟೀಕಿಸಿದ್ದಾರೆ. ಅಲ್ಲದೇ ತಾನು ಸ್ವತಂತ್ರವಾಗಿ ಜನರಿಗಾಗಿ ಕೆಲಸ ಮಾಡುತ್ತೇನೆಯೇ ಹೊರತು ಟಿಆರ್‌ಎಸ್ ಅಥವಾ ಬಿಜೆಪಿಗಾಗಿ ಕೆಲವು ಮಾಡುವುದಿಲ್ಲ ಎಂದೂ ಶರ್ಮಿಳಾ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here