ಸಂಭಾವನೀಯ ಕೋವಿಡ್ 3 ಅಲೆಯನ್ನು ನಿಯಂತ್ರಿಸಲು ಸಜ್ಜಾಗಿ: ಡಾ: ಅಶ್ವಥ್ ನಾರಾಯಣ ಸಿ.ಎನ್

0
85

ಕೋವಿಡ್ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಸೈನಿಕರಿದ್ದಂತೆ, ಸಂಭವನೀಯ ಕೋವಿಡ್ 3 ನೇ ಅಲೆಯನ್ನು ತಡೆಗಟ್ಟಿ ಉತ್ತಮ ರೀತಿಯಲ್ಲಿ ನಿರ್ವಹಿಸಲು ಈಗಿನಿಂದಲೇ ಸಜ್ಜಾಗಬೇಕಿದೆ ಎಂದು‌ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ತಿಳಿಸಿದರು.

ಅವರು ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ, ಅಂಗನವಾಡಿ ಮೇಲ್ವಿಚಾರಕರಿಗೆ ಮತ್ತು ಕಾರ್ಯಕರ್ತೆಯರಿಗೆ‌ ಹಾಗೂ ಆಶಾ ಮೇಲ್ವಿಚಾರಕರಿಗೆ ಮತ್ತು ಸುಗಮಗಾರರಿಗೆ ಕೋವಿಡ್ -19 ರ ಸೋಂಕಿತ ಮಕ್ಕಳ ಆರೈಕೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ನಿರ್ವಹಣೆ ಕುರಿತು ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ 3 ನೇ ಅಲೆಯಲ್ಲಿ ಮಕ್ಕಳ ಆರೈಕೆ, ಪೋಷಕರು ಮಕ್ಕಳ ಮೇಲೆ ವಹಿಸಬೇಕಾದ ನಿಗಾ, ಪ್ರಾಥಮಿಕ ಹಂತದಲ್ಲೇ ಗುರುತಿಸುವುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಮಕ್ಕಳ ತಜ್ಞರು ಕಾರ್ಯಗಾರದಲ್ಲಿ ನೀಡಲಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಮುಂದಿನ ದಿನಗಳಲ್ಲಿ ಎದುರಿಸಬಹುದಾದ ಸಮಸ್ಯೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಹ ತಿಳಿಸಲಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಮಾಹಿತಿ ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರೇರೆಪಿಸಿದರು.

ಆಕ್ಸಿಜನ್ ಕೊರತೆಯಾಗದಂತೆ ಎಲ್ಲಾ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಟರ್ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ರಾಮನಗರ ಜಿಲ್ಲಾಆಸ್ಪತ್ರೆಯಲ್ಲಿ 20 ಕೆಎಲ್ ಆಕ್ಸಿಜನ್ ಸ್ಟೋರೇಜ್ ಪ್ಲಾಂಟ್ ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ 6 ಕೆ.ಎಲ್ ಸ್ಟೊರೇಜ್ ಪ್ಲಾಂಟ್ ಸಿದ್ದಪಡಿಸಲಾಗುತ್ತಿದೆ ಎಂದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 25 ಐ.ಸಿ.ಯು ಬೆಡ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಮನಗರ ಹೊಸ ಜಿಲ್ಲಾ ಆಸ್ಪತ್ರೆಯನ್ನು ಸುಸಜ್ಜಿತವಾಗಿ,ಸಂಪೂರ್ಣವಾಗಿ, ಕಾರ್ಯರೂಪಕ್ಕೆ ಬರಲಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ‌ ತಂತ್ರಜ್ಞಾನ: .ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿರುವ ಕೊರತೆಯನ್ನು ಬಗೆಹರಿಸಲಾಗುವುದು. ತಂತ್ರಜ್ಞಾನವನ್ನು ಸಹ ಅಳವಡಿಸಿಕೊಳ್ಳಲಾಗುವುದು‌. ರಿಮೋಟ್ ಐ.ಸಿ.ಯುಗಳನ್ನು ಇಂಟರ್ ಫೇಸ್ ಮಾಡಿ ತಂತ್ರಜ್ಞಾನವನ್ನು ಬಳಸಿ ಅಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಬಹುದು ಹಾಗೂ ಚಿಕಿತ್ಸೆಗೆ ಬೇಕಿರುವ ಸಲಹೆ ಹಾಗೂ ಸೂಚನೆಗಳನ್ನು ಸಹ ನೀಡಬಹುದು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆ ಹಾಗೂ ಸವಾಲುಗಳಿದ್ದರೂ, ಜಿಲ್ಲೆಯಲ್ಲಿ ಕೋವಿಡ್ 1 ಹಾಗೂ 2 ಅಲೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಸ್ಟೋರೇಜ್ ವ್ಯವಸ್ಥೆ ಇಲ್ಲದಿದ್ದರೂ ಜಂಬೂ ಸಿಲಿಂಡರ್ ಬಳಸಿ ಕೆಲಸ ನಿರ್ವಹಿಸಲಾಗಿದೆ. ಇಲ್ಲಿ ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಡಾಃ ರಾಕೇಶ್ ಕುಮಾರ್. ಕೆ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಜಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ . ಜವರೆ ಗೌಡ ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ನಿರಂಜನ್ ಬಿ.ಎಸ್, , ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ|| ಶಶಿಧರ್,ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ|| ಪದ್ಮ. ಜಿ.ಎಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here