ಅಸ್ಸಾಂನಲ್ಲಿ ಗೋಹತ್ಯೆ ನಿಷೇಧ: ದೇವಾಲಯದ ಸುತ್ತಮುತ್ತ ಮಾಂಸ ಮಾರಾಟ ಮಾಡುವಂತಿಲ್ಲ

0
120

ಭಾರತದಲ್ಲಿ ಬಿಜೆಪಿ ಪಕ್ಷದ ಆಡಳಿತ ಇರುವ ಎಲ್ಲಾ ರಾಜ್ಯಗಳಲ್ಲೂ ಗೋ ಹತ್ಯೆ ನಿಷೇಧ ಮಸೂದೆ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಇದೇ ಸಾಲಿನಲ್ಲಿ ಇದೀಗ ಅಸ್ಸಾಂ ರಾಜ್ಯ ಸಹ ಹೆಜ್ಜೆ ಹಾಕಿದ್ದು, ಅಸ್ಸಾಂನ ವಿಧಾನಸಭೆಯಲ್ಲಿ ಇಂದು ಅಲ್ಲಿನ ಸಿಎಂ ಹಿಮಂತ ಬಿಸ್ವಾ ಹೊಸ “ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ- 2021” ಮಸೂದೆಯನ್ನು ಮಂಡಿಸಲಾಗಿದ್ದು, ಗೋಹತ್ಯೆ, ಗೋ ಸಾಗಾಣಿಕೆಗೆ ನಿರ್ಬಂಧ ಹೇರಿದ್ದಾರೆ. ಇದರ ಪ್ರಕಾರ ಗೋಮಾಂಸ ಸೇವಿಸದ ಹಿಂದೂ, ಜೈನ, ಸಿಖ್ ಮತ್ತು ಇತರ ಸಮುದಾಯಗಳು ವಾಸಿಸುವ ಪ್ರದೇಶಗಳಲ್ಲಿ ಎಲ್ಲೂ ಗೋಮಾಂಸ ಮಾರಾಟ ಮಾಡದಂತೆ ನಿಷೇಧಿಸಲಾಗಿದೆ.

ಇದಲ್ಲದೆ, ಹಿಂದೂ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳು ಇರುವ ಪ್ರದೇಶದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಸಾಗಣೆ ಮಾಡುವಂತಿಲ್ಲ ಎಂದು ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಮಸೂದೆ ಮಂಡಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ ಅಸ್ಸಾಂ ವಿಧಾನಸಭೆಯಲ್ಲಿ “ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ- 2021” ಮಂಡಿಸಿದ್ದಾರೆ.

ಈ ಮಸೂದೆ ಅಂಗೀಕರಿಸಲ್ಪಟ್ಟರೆ ಜಾನುವಾರುಗಳ ವಧೆ, ಸೇವನೆ, ಅಕ್ರಮ ಸಾಗಣೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. 1950 ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯಲ್ಲಿ, ಗೋಹತ್ಯೆ, ಗೋಮಾಂಸ ಸೇವನೆ, ಅಕ್ರಮ ಸಾಗಣೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ನಿಬಂಧನೆಗಳ ಕೊರತೆಯಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಹೇಳಿದ್ದರು.

ಇನ್ನು ಈ ಮಸೂದೆ ಜಾರಿಯಾದರೇ, ನೆರೆಯ ರಾಜ್ಯಗಳು ಅಸ್ಸಾಂ ಸರ್ಕಾರದ ಅನುಮತಿ ಇಲ್ಲದೆ ರಾಜ್ಯದಲ್ಲಿ ಗೋಮಾಂಸ ಮತ್ತು ಗೋಮಾಂಸ ಉತ್ಪನ್ನಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಿರುವುದಿಲ್ಲ.

ಮಸೂದೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರತಿಪಕ್ಷದ ನಾಯಕ ಡೆಬಬ್ರತಾ ಸಾಕಿಯಾ,”ಹೊಸ ಮಸೂದೆಯಲ್ಲಿ ಸಾಕಷ್ಟು ಸಮಸ್ಯಾತ್ಮಕ ವಿಷಯಗಳಿವೆ. ಅದನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ. ಉದಾಹರಣೆಗೆ, ದೇವಾಲಯ, ಧಾರ್ಮಿಕ ಸಂಸ್ಥೆಗಳಿರುವ 5 ಕಿ.ಮೀ. ಒಳಗೆ ಗೋಮಾಂಸ ಮಾರಾಟ ಮಾಡುವಂತಿಲ್ಲ ಎಂದಿದೆ. ದೇವಾಲಯವನ್ನು ಯಾರಾದರೂ ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದ್ದರಿಂದ ಇದು ತುಂಬಾ ಅಸ್ಪಷ್ಟವಾಗುತ್ತದೆ. ಇದು ಬಹಳಷ್ಟು ಕೋಮು ಗಲಭೆಗಳಿಗೂ ಕಾರಣವಾಗಬಹುದು” ಎಂದು ಪ್ರತಿಪಕ್ಷದ ನಾಯಕ ಹೇಳಿದ್ದಾರೆ.

“ಇದು ಹಸುಗಳನ್ನು ರಕ್ಷಿಸುವ ಅಥವಾ ಹಸುಗಳನ್ನು ಗೌರವಿಸುವ ಮಸೂದೆ ಅಲ್ಲ. ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಲು ಮತ್ತು ಸಮುದಾಯಗಳನ್ನು ಮತ್ತಷ್ಟು ಬೇರ್ಪಡಿಸಲು ಇದನ್ನು ತರಲಾಗಿದೆ. ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ ಮತ್ತು ತಿದ್ದುಪಡಿ ನಿರ್ಣಯಗಳನ್ನು ತರಲು ಪ್ರಯತ್ನಿಸುತ್ತೇವೆ” ಎಂದು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಶಾಸಕ ಅಮೀನುಲ್ ಇಸ್ಲಾಂ ಹೇಳಿದ್ದಾರೆ

ಈ ಮಸೂದೆ ಪ್ರಕಾರ ತಪ್ಪಿತಸ್ಥರೆಂದು ಸಾಬೀತಾದ ಆರೋಪಿಗೆ ಕನಿಷ್ಠ ಮೂರು ವರ್ಷಗಳವರೆಗೆ (ಎಂಟು ವರ್ಷಗಳವರೆಗೆ ವಿಸ್ತರಿಸಬಹುದು) ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. (5 ಲಕ್ಷ ರೂ.ವರೆಗೆ) ದಂಡ ಅಥವಾ ಎರಡನ್ನೂ ವಿಧಿಸಬಹುದು. ಪುನರಾವರ್ತಿತ ಅಪರಾಧಿಗಳಿಗೆ, ಶಿಕ್ಷೆಯನ್ನು ದ್ವಿಗುಣಗೊಳಿಸಲಾಗುತ್ತದೆ.

LEAVE A REPLY

Please enter your comment!
Please enter your name here