ಜೀವನವೂ ಹೊತ್ತಿಗೆಯೂ

0
84

ಒಲವೆಂಬ ಹೊತ್ತಿಗೆಯಲ್ಲಿ ನಾನೊಂದು ಶೂನ್ಯ ಬಿಂದು
ತಿಳಿಯದಾದೆ ಸ್ವಾರ್ಥ ಸಾಧಿಸಿ ನೀನು ಪಡೆದದ್ದೇನೆಂದು
ಮರೆಯುವ ನನ್ನೆಲ್ಲಾ ಪ್ರಯತ್ನಗಳೆಲ್ಲವೂ ನಿತ್ಯ ವಿಫಲ
ಎಲ್ಲೇಯಿದ್ದರೂ ನಿನ್ನ ನೆನಪುಗಳೆಲ್ಲವೂ ಸದಾ ವಿಫುಲ

ಮರೆಯ ಬಯಸುವೆನಾದರೂ ಮರೆಯಲಾಗುತ್ತಿಲ್ಲ
ಮರಳಿ ಬಂದರೂ ನಿನ್ನ ಸ್ವಾಗತಿಸುವ ಮನಸ್ಸಿಲ್ಲ
ಕಾಡಿ ಮನವ ರಾಡಿಗೊಳಿಸುವ ಮಾತಿಗೂ ಮುನ್ನ
ದೂರ ಸರಿದು ಎದೆಗೊಳವ ತಿಳಿಗೊಳಿಸು ನೀ ಇನ್ನ

ಶಾಂತವಾಗಿದ್ದ ಹೃದಯವಿಂದು ಚಿತೆಗೇರಿ ಕುಳಿತಿದೆ
ನೀನಾಡಿದ ಮಾತುಗಳೆಲ್ಲವೂ ನನ್ನೆದೆಯ ಕೊಲ್ಲುತ್ತಿವೆ
ಬರಿದಾಗದ ಭಾವನೆಗಳ ಆಗರ ಮೊಗೆದಷ್ಟೂ ಆಳ
ಮಾತು ಕೇಳದೆ ಮನವು ಮೌನದಲಿ ಬಳಲಿದೆ ತನುವು

ಕನಸು ಕಾಣುವ ಕಂಗಳಲ್ಲಿ ಉಳಿದ ನಿನ್ನದೇ ಬಿಂಬ
ಅಳಿಸಲಾಗದೇ ಶಪಿಸಲಾಗದೇ ನರಳುತಿರುವೆ ಕಾಂಬ
ಕುಂತಲ್ಲಿ ನಿಂತಲ್ಲಿ ಹರಿವ ಅಶ್ರುಧಾರೆಯ ಸಾಗರ
ವಿಷಾದ ಛಾಯೆ ತುಂಬಿದ ಈ ನೋವು ನಿರಂತರ

ವಿನೋದ ಕರಣಂ. ಬಳ್ಳಾರಿ

LEAVE A REPLY

Please enter your comment!
Please enter your name here