ಬಾಲ್ಯವಿವಾಹ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿ ರಚಿಸಿ

0
78

ಬಳ್ಳಾರಿ,ಆ.11: ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿಗಳನ್ನು ರಚಿಸಿ; ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಬಳ್ಳಾರಿ ತಹಸೀಲ್ದಾರ್ ರೆಹಮಾನ್ ಪಾಷಾ ಅವರು ಹೇಳಿದರು.ನಗರದ ತಾಪಂ ಕಚೇರಿಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಇಲಾಖೆಯಿಂದ ನೇಮಿಸಿದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಸಮನ್ವಯ ಸಾಧಿಸಿ ಬಾಲ್ಯವಿವಾಹಗಳನ್ನು ತಡೆಗಟ್ಟಲು ಮುಂದಾಗಿ. ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲರಿಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಅರಿವುಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮಾಹಿತಿ ಅಂಕಿ ಅಂಶಗಳನ್ನು ಜಂಟಿಯಾಗಿ ದೃಢಿಕರಿಸಿ ತಹಶೀಲ್ದಾರರಿಗೆ ನೀಡಬೇಕು. ವಿವಾಹ ನೋಂದಣಿ ಸಮಯದಲ್ಲಿ ವಧುವಿನ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಿ ನೋಂದಣಿ ಮಾಡಬೇಕು; ಆಧಾರ್ ಕಾರ್ಡ್‍ನ ತಿದ್ದುಪಡಿ ಸಮಯದಲ್ಲಿ 18 ವರ್ಷದೊಳಗಿನ ಬಾಲಕಿಯರ ವಿವರವನ್ನು ಕಡ್ಡಾಯವಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಢೀಕರಣ ಪಡೆಯಬೇಕು ಎಂದು ಅವರು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್.ಉಷಾ ಅವರು ಮಾತನಾಡಿ 18 ವರ್ಷದೊಳಗಿನ ಗರ್ಭಿಣಿ ಬಾಣಂತಿಯರ ಮಾಹಿತಿಯನ್ನು ತಾಲೂಕು ವೈದ್ಯಾಧಿಕಾರಿಗಳು ದೃಢಿಕರಿಸಿ ಅಂಕಿ-ಅಂಶಗಳ ವರದಿ ಹಾಗೂ ವಲಸೆ ಬಂದ ಕಾರ್ಮಿಕರ ಕುಟುಂಬದ ಅಪ್ರಾಪ್ತ ಗರ್ಭೀಣಿಯರ ವೈದ್ಯಕೀಯ ಸೌಲಭ್ಯ, ಅಂಕಿ-ಅಂಶಗಳ ಮಾಹಿತಿಯನ್ನು ಕಾರ್ಮಿಕ ಇಲಾಖೆಯವರು ತಹಶೀಲ್ದಾರರಿಗೆ ಸಲ್ಲಿಸಬೇಕು. ಬಾಲ್ಯವಿವಾಹ ಪೂರ್ಣವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ 14-18 ವರ್ಷ ಬಾಲಕಿಯರ ಕೌಶಲ್ಯ ಅಭಿವೃದ್ಧಿ ಕಾರ್ಯ ಆಯೋಜನೆ ಮಾಡಿದರೆ ಅನುಕೂಲವಾಗಲಿದೆ ಎಂದರು.

2021-22ನೇ ಸಾಲಿನ ತ್ರೈಮಾಸಿಕ ಅವಧಿಯಲ್ಲಿ ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ತಡೆಗಟ್ಟಿದ ಬಾಲ್ಯವಿವಾಹಗಳ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು. ಬಾಲ್ಯವಿವಾಹ ತಡೆಗಟ್ಟಲು ವಿವಿಧ ಇಲಾಖೆಗಳ ಸಹಕಾರ ಕೋರಿದರು. ಬಾಲ್ಯವಿವಾಹಗಳನ್ನು ತಡೆಗಟ್ಟುವಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್‍ಪಾಶಾ, ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿಗಳು, ಗ್ರಾಮೀಣ ಪೋಲಿಸ್ ಠಾಣೆ ಸಿಬ್ಬಂದಿ, ತಾಲೂಕು ಆರೋಗ್ಯ ಅಧಿಕಾರಿಗಳು, ರೀಡ್ಸ್ ಸಂಸ್ಥೆಯ ನಿರ್ದೇಶಕರು ಮತ್ತು ಸಿಬ್ಬಂದಿ, ಬಳ್ಳಾರಿ ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿ, ವಿಶೇಷ ಮಕ್ಕಳ ಘಟಕದ ಕಾನೂನು ಸಲಹೆಗಾರರಾದ ಈಶ್ವರ್‍ರಾವ್, ಡಾನ್ ಬೋಸ್ಕೋ ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here