ಸಚಿವ ಸಂಪುಟದಲ್ಲಿ ಬಳ್ಳಾರಿ, ವಿಜಯನಗರದಿಂದ ಯಾರಿಗೆ ಸಿಗಲಿದೆ ಸಚಿವ ಸ್ಥಾನ.?

0
206

ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರುವ ಶಾಸಕರು ಯಾರು? ಎಂಬುದು ಎಲ್ಲರ ಕುತೂಹಲವಾಗಿದೆ. ಸಚಿವರಾಗಲು ಗಣಿ ನಗರಿಯ ಬಿಜೆಪಿ ಶಾಸಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಖಂಡವಾಗಿದ್ದ ಬಳ್ಳಾರಿಯಲ್ಲಿ ಮೂವರು ಸಚಿವರಿದ್ದರು.

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನ ಹಾಗೂ ಉಸ್ತುವಾರಿಯನ್ನು ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದ ಹಾಗೆ ಗಣಿ ನಗರಿಯಲ್ಲಿ ಎಲ್ಲಿಲ್ಲದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಸವರಾಜ ಬೊಮ್ಮಾಯಿ ಸಂಪುಟವನ್ನು ಬಿ. ಶ್ರೀರಾಮುಲು ಸೇರುವುದು ಖಚಿತವಾಗಿದೆ. ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರು. ಆದರೆ ಅವಳಿ ಜಿಲ್ಲೆಯ ರಾಜಕೀಯದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಜೊತೆಗೆ ಅವರಿಗೆ ಯಾವ ಖಾತೆ ಸಿಗಲಿದೆ? ಎಂಬ ಲೆಕ್ಕಾಚಾರ ಜೋರಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಶ್ರೀರಾಮುಲು ಉಪ ಮುಖ್ಯಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಮೊದಲು ಆರೋಗ್ಯ ಖಾತೆ ನೀಡಲಾಗಿತ್ತು. ಬಳಿಕ ಸಮಾಜ ಕಲ್ಯಾಣ ಖಾತೆ ನೀಡಲಾಯಿತು. ಈ ಬಾರಿ ಡಿಸಿಎಂ ಪಟ್ಟ ಒಲಿದು ಬಂದಿದೆ.

ಯಾವ-ಯಾವ ಶಾಸಕರು? ಅವಳಿ ಜಿಲ್ಲೆಗಳಾದ ವಿಜಯನಗರ ಮತ್ತು ಬಳ್ಳಾರಿಯಲ್ಲಿ ಬಿಜೆಪಿ ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಶಾಸಕರ ಚಿತ್ತ ಸದ್ಯ ಸಚಿವ ಸಂಪುಟ ವಿಸ್ತರಣೆಯ ಮೇಲೆ ಇದೆ. ಸಚಿವ ಸ್ಥಾನ ಪಡೆಯಲು ಶಾಸಕರ ನಡುವೆ ತೀವ್ರ ಪೈಪೋಟಿ ಸಹ ಇದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದಿಂದ ಎಂ. ಎಸ್. ಸೋಮಲಿಂಗಪ್ಪ, ಬಳ್ಳಾರಿ ನಗರ ಕ್ಷೇತ್ರದಿಂದ ಜಿ. ಸೋಮಶೇಖರ ರೆಡ್ಡಿ ಬಿಜೆಪಿ ಶಾಸಕರಾಗಿದ್ದಾರೆ. ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಜಯನಗರ ಕ್ಷೇತ್ರ (ಆನಂದ್ ಸಿಂಗ್), ಕೂಡ್ಲಿಗಿ ಕ್ಷೇತ್ರ (ಎನ್. ವೈ. ಗೋಪಾಲಕೃಷ್ಣ), ಹರಪನಹಳ್ಳಿ ಕ್ಷೇತ್ರ (ಜಿ. ಕರುಣಾಕರ ರೆಡ್ಡಿ) ಬಿಜೆಪಿ ಶಾಸಕರಾಗಿದ್ದಾರೆ. ಜಿಲ್ಲೆಯ ಇನ್ನುಳಿದ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಆನಂದ್ ಸಿಂಗ್ ಸಚಿವರಾಗಿದ್ದರು.

ಬಳ್ಳಾರಿ ಕ್ಷೇತ್ರದ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಸಿರುಗುಪ್ಪ ಶಾಸಕ ಎಂ. ಎಸ್. ಸೋಮಲಿಂಗಪ್ಪ ಸಚಿವ ಸ್ಥಾನ ಪಡೆಯುವುದಕ್ಕೆ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆ ಇದೆ ಎಂದು ಸೋಮಶೇಖರ ರೆಡ್ಡಿ ಬಹಿರಂಗ ಹೇಳಿಕೆಯನ್ನು ಸಹ ನೀಡಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಆನಂದ್ ಸಿಂಗ್ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಹೆಚ್ಚಾಗಿದೆ. ಮತ್ತೊಂದೆಡೆ ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ ಮತ್ತು ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್. ವೈ ಗೋಪಾಲಕೃಷ್ಣ 6 ಬಾರಿ ಶಾಸಕರಾಗಿದ್ದಾರೆ. ಆದ್ದರಿಂದ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅಧಿಯಲ್ಲಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ‌ ಶಾಸಕ ದಿ. ಎಂ. ಪಿ. ಪ್ರಕಾಶ ಉಪ ಮುಖ್ಯಮಂತ್ರಿಯಾಗಿದ್ದರು. ಒಂದೂವರೆ ದಶಕದ ನಂತರ ರಾಜ್ಯದ ಬಿಜೆಪಿ ಸರಕಾರದ ಅವಧಿಯಲ್ಲಿ ಬಿ. ಶ್ರೀರಾಮುಲುಗೆ ಉಪ ಮುಖ್ಯ ಮಂತ್ರಿ ಸ್ಥಾನ ಒಲಿದರೆ ಜಿಲ್ಲೆಗೆ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿ‌ಸ್ಥಾನ ದೊರಕಿದಂತಾಗುತ್ತದೆ. ಸಚಿವ ಸ್ಥಾನದ ವಿಚಾರದಲ್ಲಿ ವಿಜಯನಗರಕ್ಕೆ ಪ್ರತೇಕ ಸಚಿವ ಸ್ಥಾನ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗೆ ಆನಂದ್ ಸಿಂಗ್ ಉಸ್ತುವಾರಿಯಾಗಿದ್ದರು. ಈಗ ವಿಜಯನಗರ ಉಸ್ತುವಾರಿ ಆನಂದ್ ಸಿಂಗ್ ಪಾಲಾದರೆ ಬಿ.ಶ್ರೀರಾಮುಲುಗೆ ಚಿತ್ರದುರ್ಗದ ಜೊತೆ ಬಳ್ಳಾರಿ ಉಸ್ತುವಾರಿಯೂ ಸಿಗುವ ನಿರೀಕ್ಷೆ ಇದೆ.

ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಈ ಕುರಿತು ಮಾತನಾಡಿದ್ದಾರೆ. “ಅವಳಿ ಜಿಲ್ಲೆಗಳಾದ ವಿಜಯನಗರ ಮತ್ತು ಬಳ್ಳಾರಿಯ ಎಲ್ಲಾ‌ ಶಾಸಕರು ಸಚಿವ ಸ್ಥಾನ ಹಾಗೂ ಉಸ್ತುವಾರಿಯನ್ನು ಕೇಳಿದ್ದಾರೆ. ಈ ಕುರಿತು ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೆ ನಮ್ಮ ಪಕ್ಷದ ಶಾಸಕರು ತಲೆಬಾಗುತ್ತಾರೆ. ಇದರಲ್ಲಿ ಯಾವುದೇ ರೀತಿಯಲ್ಲಿ ಭಿನ್ನಭಿಪ್ರಾಯಗಳಿಲ್ಲ, ಎಲ್ಲರೂ ಒಂದಾಗಿರುತ್ತಾರೆ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here