ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

0
492

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಿಂಗಂ ಅಲ್ಲ. ಮೈಸೂರು ಜನರನ್ನ ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ. ಅರಮನೆಯ ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂ ಕೋರ್ಟ್‌ವರೆಗೂ ಹೋದವರು ಮೂರನೇ ದಿನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಮೋದಾ ದೇವಿ ಅವರ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯುತ್ತದಾ? ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಬ್ಬರ ಫೋಟೋ ತೋರಿಸಿ ವಾಗ್ದಾಳಿ ನಡೆಸಿದ್ದಾರೆ.

ಸರ್ವೇ ನಂ. 4 ವ್ಯಾಜ್ಯದಲ್ಲಿ ಜಿಲ್ಲಾಧಿಕಾರಿ ವಾದಿ ಮತ್ತು ರಾಜವಂಶಸ್ಥರು ಪ್ರತಿವಾದಿ. ಆದರೆ ಆ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿ ಅಡ್ಮಿಟ್ ಆಗಲಿಲ್ಲ.‌ ಕೇಸ್ ವಜಾಗೊಂಡ ಮೂರನೇ ದಿನದಲ್ಲಿ ವಾದಿ, ಪ್ರತಿವಾದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಫೋಟೋ ತೆಗೆಸಿಕೊಳ್ಳುವ ನಿಮಗೆ, ರಾಜವಂಶದವರ ಇತಿಹಾಸ ಗೊತ್ತಿರಲಿಲ್ಲವೇ ? ಒಂದು ಕೋಟಿ ರೂಪಾಯಿಗಳ ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕಾಗಿ ನಿಮ್ಮ ಮೇಲೆ ಕ್ರಮ ಆಗಬೇಕು ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ಇನ್ನೂ ವಾಗ್ದಾಳಿ ಮುಂದುವರಿಸಿದ ಸಾ.ರಾ.ಮಹೇಶ್ ಅವರು ಭೂ ಹಗರಣದಿಂದ ತಮ್ಮ ವರ್ಗಾವಣೆಯಾಯ್ತು ಎಂದು ಕತೆ ಕಟ್ಟಿದ್ದರು. ಆದರೆ ಅವರು ಯಾವುದೇ ಭೂಮಿಯನ್ನು ಉಳಿಸಲಿಲ್ಲ. ಶರತ್‌ರನ್ನು 28 ದಿನದಲ್ಲಿ ವರ್ಗಾವಣೆ ಮಾಡಿಸಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘಿಸಿದ್ದರು. ಕೊವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕವನ್ನು ನೀಡಿದ್ದರು. ಸಾ.ರಾ. ಕಲ್ಯಾಣ ಮಂಟಪದ ಬಗ್ಗೆಯೂ ಆರೋಪಿಸಿದ್ದರು. ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣವೆಂದು ಆರೋಪ ಮಾಡಿದ್ದರು. ಈಗ ನಿಯಮ ಉಲ್ಲಂಘಿಸಿಲ್ಲವೆಂದು ಜಿಲಾಧಿಕಾರಿಯಿಂದಲೇ ವರದಿ ಸಲ್ಲಿಕೆಯಾಗಿದೆ. ಲಿಂಗಾಂಬುದಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ರೋಹಿಣಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮನವಿ:
ರೋಹಿಣಿ ವರ್ಗಾವಣೆ ಬಳಿಕ ಹಲವು ಆರೋಪ ಮಾಡಿದ್ದರು. ಅವರು ಮಾಡಿದ್ದ ಎಲ್ಲ ಆರೋಪಗಳು ಸುಳ್ಳು. ರೋಹಿಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಅವರ ಇಲಾಖೆಯ ಅಧಿಕಾರಿಗಳೇ ವರದಿಯನ್ನ ಕೊಟ್ಟಿದ್ದಾರೆ. ಹೀಗಾಗಿ ತಕ್ಷಣವೇ ರೋಹಿಣಿಯನ್ನ ಅಮಾನತು ಮಾಡಬೇಕು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಹಕ್ಕುಚ್ಯುತಿ ಮಂಡನೆಗೆ ಮನವಿ ಮಾಡಿದ್ದೇನೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

ಜೆಡಿಎಸ್ ಒಂಥರಾ ಟ್ರೈನಿಂಗ್ ಸ್ಕೂಲ್.. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್ ನವರೇ:
ಇನ್ನು, ಹುಬ್ಬಳ್ಳಿಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ಜೆಡಿಎಸ್ ಒಂಥರಾ ಟ್ರೈನಿಂಗ್ ಸ್ಕೂಲ್. ಬರ್ತಾರೆ ಕಲಿತಾರೆ ಹೋಗ್ತಾರೆ. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್ ನವರೇ. ಇಲ್ಲಿಗೆ ಬಂದು ಕಲಿತುಕೊಂಡು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ವ್ಯಾಖ್ಯಾನಿಸಿದರು.

LEAVE A REPLY

Please enter your comment!
Please enter your name here