ಚಿರತೆ ಪತ್ತೆ ಕಾರ್ಯಾಚರಣೆ ಪ್ರಗತಿ; ಎನ್.ಆರ್.ಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದ ಜನರ ಸಹಕಾರಕ್ಕೆ ಜಿಲ್ಲಾಧಿಕಾರಿ ಮನವಿ

0
82

ಧಾರವಾಡ: ಸೆ.20: ಕಳೆದ ಎರಡು ಮೂರು ದಿನಗಳಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟ ಹಾಗೂ ಸುತ್ತಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು, ಅದನ್ನು ಪತ್ತೆ ಮಾಡಿ ಹಿಡಿಯುವ ಕಾರ್ಯ ಪ್ರಗತಿಯಲಿದ್ದು, ನೃಪತುಂಗ ಬೆಟ್ಟ, ರಾಜನಗರ ಮತ್ತು ನೃಪತುಂಗ ಬೆಟ್ಟದ ಸುತ್ತಿನ ಪ್ರದೇಶದ ಜನ ಇಳಿಸಂಜೆ ಮತ್ತು ಬೆಳಿಗ್ಗೆ ಎನ್ ಆರ್. ಬೆಟ್ಟಕ್ಕೆ ವಾಯುವಿಹಾರಕ್ಕೆ ಬರದಂತೆ ಮತ್ತು ರಾತ್ರಿ ಸಮಯ ಅನಗತ್ಯವಾಗಿ ಈ ಪ್ರದೇಶದಲ್ಲಿ ಸಂಚರಿಸದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ರಾತ್ರಿ ಮತ್ತು ಹಗಲು ಎರಡು ಪಾಳೆದಲ್ಲಿ ಕಾವಲು ಕಾಯುತ್ತಿದ್ದಾರೆ. ಚಿರತೆ ಹಿಡಿಯಲು ಬೊನ್ ಸಹ ಇಟ್ಟಿದ್ದಾರೆ. ಗದಗ ಹಾಗೂ ಉತ್ತರಕನ್ನಡ ಜಿಲ್ಲೆಗಳಿಂದ ಪಶು ವೈದ್ಯರು, ತಜ್ಞರು ಮತ್ತು ಅಗತ್ಯ ಸಲಕರಣೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಿದ್ದಗೊಳಿಸಿದ್ದಾರೆ.

ಚಿರತೆಯು ಇಳಿಸಂಜೆ, ರಾತ್ರಿ ಮತ್ತು ಬೆಳಗಿನಜಾವ, ನಸುಕಿನ ಸಮಯದಲ್ಲಿ ಇದ್ದ ಸ್ಥಳದಿಂದ ಹೊರಬಂದು ಸಂಚರಿಸುತ್ತದೆ. ಆದ್ದರಿಂದ ಸಾರ್ವಜನಿಕರು ನೃಪತುಂಗ ಬೆಟ್ಟಕ್ಕೆ ಸಾಯಂಕಾಲ, ರಾತ್ರಿ ಮತ್ತು ಬೆಳಿಗ್ಗಿನ ಜಾವ, ಮುಂಜಾನೆ ಸಮಯದಲ್ಲಿ ವಾಯುವಿಹಾರ (ವಾಕಿಂಗ್) ಮಾಡಲು ಹೋಗಬಾರದು ಮತ್ತು ರಾತ್ರಿ ಸಮಯದಲ್ಲಿ ಅನಗತ್ಯವಾಗಿ, ಒಬ್ಬಂಟಿಯಾಗಿ ಯಾರು ಸಂಚರಿಸಬಾರದೆಂದು ಅವರು ತಿಳಿಸಿದ್ದಾರೆ.

ಈ ಕುರಿತು ರಾಜನಗರ ಹಾಗೂ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದ ಸಾರ್ವಜನಿಕರಲ್ಲಿ ಈಗಾಗಲೇ ಡಂಗುರ ಸಾರಿ, ಧ್ವನಿವರ್ಧಕ ಬಳಸಿ ಮಾಹಿತಿ ನೀಡಿ ತಿಳುವಳಿಕೆ ಮೂಡಿಸಲಾಗಿದೆ.

ಚಿರತೆ ಪತ್ತೆ ಮತ್ತು ಹಿಡಿಯುವ ಕಾರ್ಯ ತೀವ್ರವಾಗಿ ನಡೆದಿದ್ದು, ಜನರು ಅನಗತ್ಯವಾಗಿ ಈ ಪ್ರದೇಶದಲ್ಲಿ ಸಂಚರಿಸದೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಾರ್ವಜನಿಕರಲ್ಲಿ
ಕೋರಿದ್ದಾರೆ.

LEAVE A REPLY

Please enter your comment!
Please enter your name here