ಬಳ್ಳಾರಿ ಗ್ರಾಮೀಣ, ಸಿರಗುಪ್ಪ, ಕುರುಗೋಡುಗಳಲ್ಲಿ ಬೃಹತ್ ಪ್ರಮಾಣದ ವಿಶೇಷ ಕೋವಿಡ್ ಲಸಿಕಾ ನೀಡಿಕೆ ಆಂದೋಲನ ಸೆ.22ರಂದು: ಡಿಸಿ ಮಾಲಪಾಟಿ

0
187

ಬಳ್ಳಾರಿ,ಸೆ.20 : ಬಳ್ಳಾರಿ ಗ್ರಾಮೀಣ,ಸಿರಗುಪ್ಪ ಹಾಗೂ ಕುರುಗೋಡು ತಾಲೂಕುಗಳಲ್ಲಿ ಇದೇ ಸೆ.22ರಂದು ಬೃಹತ್ ಪ್ರಮಾಣದ ವಿಶೇಷ ಕೋವಿಡ್ ಲಸಿಕಾ ನೀಡಿಕೆ ಆಂದೋಲನ ನಡೆಸಲಾಗುತ್ತಿದೆ.ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಲಸಿಕಾಕರಣ ಕಡಿಮೆ ಪ್ರಮಾಣವಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ಲಸಿಕಾ ಆಂದೋಲನವನ್ನು ಬಳ್ಳಾರಿ ಗ್ರಾಮೀಣ,ಸಿರಗುಪ್ಪ ಮತ್ತು ಕುರುಗೋಡು ತಾಲೂಕುಗಳಾದ್ಯಂತ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 410ತಂಡಗಳನ್ನ ರಚಿಸಲಾಗಿದ್ದು, ಈ ತಂಡಗಳು ಬುಧವಾರ (ಸೆ.22ರಂದು) ಬೆಳಗ್ಗೆ 7ರಿಂದ ಸಂಜೆಯವರೆಗೆ ವಿವಿಧೆಡೆ ಸ್ಥಾಪಿಸಲಾಗಿರುವ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಿವೆ ಎಂದು ಅವರು ತಿಳಿಸಿದ್ದಾರೆ.
ಲಸಿಕಾ ಕೇಂದ್ರಗಳ ಗುರುತು,ತಂಡಗಳ ನೇಮಕ ಮತ್ತು ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಸೇರಿದಂತೆ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಸೋಮವಾರ ಸಂಜೆ ಈ ತಾಲೂಕುಗಳ ತಹಸೀಲ್ದಾರರು, ನೋಡಲ್ ಅಧಿಕಾರಿಗಳು ಮತ್ತು ಇನ್ನೀತರ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ಬಳ್ಳಾರಿ ಗ್ರಾಮೀಣ, ಸಿರಗುಪ್ಪ,ಕುರುಗೋಡು ತಾಲೂಕುಗಳಲ್ಲಿ 60ಸಾವಿರ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಗುರಿ ಸಾಧಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವ ಸಿದ್ಧತೆಗಳನ್ನು ಮಾಡಬೇಕು ಎಂಬುದಕ್ಕೆ ಸಂಬಂಧಿಸಿದ
ಸರಕಾರ ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಎಲ್ಲ ತಾಲೂಕುಗಳಲ್ಲಿ ಕಂದಾಯ ಇಲಾಖೆ,ನಗರ ಸ್ಥಳೀಯ ಸಂಸ್ಥೆ, ತಾಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‍ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬೃಹತ್ ವಿಶೇಷ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನರು ಸಹ ಮುಂದೆ ಬಂದು ಲಸಿಕೆ ಪಡೆದುಕೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಜನರು, ಗ್ರಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು,ತಾಪಂ ಮತ್ತು ಜಿಪಂ ಸದಸ್ಯರು, ಶಾಸಕರು,ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಮುಂದೆ ಬಂದು ಈ ಲಸಿಕಾ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾವು ಲಸಿಕೆ ಹಾಕಿಸಿಕೊಂಡಿರುತ್ತೀರಿ; ತಾವು ಹಾಕಿಕೊಂಡರಾಯ್ತು ಅಂತ ಅಂದುಕೊಳ್ಳದೇ ತಮ್ಮ ಅಕ್ಕಪಕ್ಕದ ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಮನವೋಲಿಸಿ ಅವರನ್ನು ಲಸಿಕಾಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಉಳಿದೆಡೆ ಎಂದಿನಂತೆ ಲಸಿಕಾ ನೀಡಿಕೆ ಪ್ರಕ್ರಿಯೆ ನಡೆಯಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಎಸಿ ಆಕಾಶ ಶಂಕರ್,ಡಿಎಚ್‍ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here