ಮಹಾತ್ಮ ಗಾಂಧೀಜಿ ಅವರ ಜೀವನವೇ ಸಮಾಜಕ್ಕೆ ಸಂದೇಶ: ಡಾ:ರಾಕೇಶ್ ಕುಮಾರ್ ಕೆ

0
112

ಮಹಾತ್ಮ ಗಾಂಧೀಜಿ ಅವರು ಪಾಲಿಸುತ್ತಿದ್ದ ಸತ್ಯ, ಅಹಿಂಸೆ ಮಾರ್ಗ ಹಾಗೂ ಸರಳ ಜೀವನವೇ
ಸಮಾಜಕ್ಕೆ ಸಂದೇಶ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.1922 ರಲ್ಲಿ ಅಸಹಕಾರ ಚಳುವಳಿ ನಡೆಯುತ್ತಿರುವ ಸಂದರ್ಭದಲ್ಲಿ ಗೋರಕ್ ಪುರ್ ನಲ್ಲಿ ನಡೆದ ಚೌರಿ ಚೌರ ಘಟನೆಯಲ್ಲಿ 20 ಪೊಲೀಸರು ಠಾಣೆಯಲ್ಲಿ ಸಜೀವವಾಗಿ ದಹನವಾಯಿತು. ಇದೇ ಹೋರಾಟ ಮುಂದುವರೆದಿದ್ದರೆ ಹಿಂಸಾ ಮಾರ್ಗದ ಮೂಲಕ ಬೇಗನೇ ಸ್ವಾತಂತ್ರ್ಯ ದೊರಕುತ್ತಿತ್ತು. ಇದನ್ನು ಗಾಂಧೀಜಿಯವರು ವಿರೋಧಿಸಿ ಚಳುವಳಿಯ ಹೊಣೆ ಹೊತ್ತಿ ಐದು ದಿನ ಉಪವಾಸ ಮಾಡಿದರು. ಇದು ಬ್ರಿಟಿಷ್ ಸರ್ಕಾರಕ್ಕೆ ಅಚ್ಚರಿ‌ ಮೂಡಿಸಿತು. ಶಾಂತಿ ಮತ್ತು ಅಹಿಂಸೆ ಸ್ವಾತಂತ್ರ್ಯ ಹೋರಾಟದ ಅಸ್ತ್ರ ಎಂದರು.

ವಿಶ್ವಾದ್ಯಂತ ನೋಡುತ್ತಿರುವ ಸಿವಿಲ್ ರೈಟ್ ಮುವ್ ಮೆಂಟ್ ಗಳು ಪ್ರಥಮವಾಗಿ ಪ್ರಾರಂಭವಾಗಿದ್ದೆ ಮಹಾತ್ಮ ಗಾಂಧೀಜಿ ಅವರಿಂದ. ಅವರ ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ತ್ಯಾಜ್ಯ ವಸ್ತುಗಳ ನಿರ್ವಹಣೆಯ ಚಿಂತನೆಗಳು ಇಂದು ಸಹ ನಾವು ಅಳವಡಿಸಿಕೊಳ್ಳುತ್ತಿರುವ ರೀತಿ ಅವರ ಚಿಂತನೆಗಳಿಗೆ ಹಿಡಿದ ಕನ್ನಡಿ ಎಂದರು.

ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ಮಾತನಾಡಿ ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಅವರನ್ನು ಕಪ್ಪು ವರ್ಣಿಯರು ಎಂದು 3 ನೇ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುವಂತೆ ಹೊರದೂಡಲಾಗುತ್ತದೆ. ಗಾಂಧೀಜಿ ಅವರು ನ್ಯಾಟಲ್ ಇಂಡಿಯನ್ ಕಾಂಗ್ರೆಸ್‌ ನ್ನು ಸ್ಥಾಪಿಸಿ ರೂಪು ರೇಷುಗಳನ್ನು ರಚಿಸಿ ವರ್ಣ ಹಾಗೂ ಜನಾಂಗೀಯ ದ್ವೇಷದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾಗುತ್ತಾರೆ ಎಂದರು.

ಗಾಂಧೀಜಿ ಅವರು ಭಾರತಕ್ಕೆ ಬಂದ ನಂತರ ವಕೀಲ ವೃತ್ತಿ ಮಾಡದೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ‌.ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಅಪಾರವಾಗಿ ಶ್ರಮಿಸುತ್ತಾರೆ.
ಸತ್ಯಾಗ್ರಹ ಮತ್ತ ಅಹಿಂಸೆ ಅವರ ಮೂಲಮಂತ್ರವಾಗಿತ್ತು. ಜನ ಸಮಾನ್ಯರನ್ನು ಒಗ್ಗೂಡಿಸಿಕೊಂಡು ಸತ್ಯಾಗ್ರಹ ಮತ್ತ ಅಹಿಂಸೆಯ ಮೂಲಕ ಬ್ರಿಟಿಷ್ ಆಳ್ವಿಕೆಗೆ ಅಸಹಕಾರ ನೀಡಿ ಹೋರಾಟ ನಡೆಸುತ್ತಾರೆ ಎಂದರು.

ಗಾಂಧೀಜಿ ಅವರನ್ನು ಮಹಾತ್ಮ, ರಾಷ್ಟ್ರದ ಪಿತಾಮಹ, ಬಾಪೂಜಿ ಎನ್ನುತ್ತೇವೆ. ಗಾಂಧೀಜಿ ಅವರು ಕೂಡ ಸಾಮಾನ್ಯ ವ್ಯಕ್ತಿಯಾಗಿದ್ದರು. ಬಾಲ್ಯದಲ್ಲಿ ಕಳ್ಳತನ, ಧೂಮಪಾನ, ಮಾಂಸಹಾರ ಸೇವಿಸದ ಕುಟುಂಬದಲ್ಲಿ ಜನಸಿದ್ದರು ಪ್ರಚೋದನೆಗೆ ಒಳಗಾಗಿ ಮಾಂಸ ಸೇವೆನೆ ಸಹ ಮಾಡಿದ್ದರು. ನಂತರ ತಪ್ಪಿಗೆ ಪಶ್ಚಾತಾಪ ಪಟ್ಟು, ತಪ್ಪುಗಳನ್ನು ತಿದ್ದಿಕೊಂಡು ಮಹಾತ್ಮರಾದರು.ಸತ್ಯ ಹರಿಶ್ಚಂದ್ರ ಹಾಗೂ ಶ್ರವಣನ ನಾಟಕಗಳು ಅವರ ಜೀವನದ ಮೇಲೆ ಪರಿಣಾಮ ಬೀರಿತು. ನೇರ ನಡೆ, ನುಡಿ ಸತ್ಯವನ್ನು ರೂಡಿಸಿಕೊಂಡರು. ಈ ಹಿನ್ನಲೆಯಲ್ಲಿ ಜನರು ಅವರನ್ನು ಅನುಸರಿಸುತ್ತಿದ್ದರು. ಅವರು ನಡೆಸಿದ ಚಳುವಳಿಯಲ್ಲಿ‌ ಪಾಲ್ಗೊಳ್ಳುತ್ತಿದ್ದರು. ಅವರ ಪರಿಶ್ರಮದ ಫಲವಾಗಿ ನಾವು ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ ಎಂದರು.

ಸಬರಮತಿ ಆಶ್ರಮದಲ್ಲಿ ಅವರು ನಡೆಸಿದ ಸರಳ ಜೀವನ ಎಲ್ಲರಿಗೂ ಮಾದರಿ. ಅವರು ತಮ್ಮ ಕ್ಷೌರ, ಬಟ್ಟೆ, ಶೌಚಾಲಯದ ಸ್ವಚ್ಛತೆ ಯನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಆಶ್ರಮದಲ್ಲಿ ಪ್ರಾರ್ಥನೆ ಮತ್ತು ಭಜನೆ ನಿರಂತರವಾಗಿ ನಡೆಯುತ್ತಿತ್ತು‌ ಇದು ಅವರಿಗೆ ಮಾನಸಿಕ ಶಕ್ತಿ ನೀಡುತ್ತಿತ್ತು. ಅವರು ನೀಡಿರುವ ಆದರ್ಶದ ದಾರಿಯಲ್ಲಿ ಎಲ್ಲರೂ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಸವರಾಜು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here