ಎಲ್ಲ ಕಚೇರಿಗಳಲ್ಲೂ ಆಂತರಿಕ ಸಮಿತಿ ರಚನೆ ಕಡ್ಡಾಯ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸಂವಿಧಾನದ ಆಶಯಕ್ಕೆ ಮಾರಕ – ಸದಾಶಿವ ಪ್ರಭು.

0
132

ದಾವಣಗೆರೆ ಡಿ.09: ದೇಶದ ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದ್ದು, ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ಪ್ರತಿಯೊಂದು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ಕಚೇರಿಯಲ್ಲಿಯೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಆಂತರಿಕ ಸಮಿತಿ ರಚಿಸುವುದು ಕಡ್ಡಾಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಳವಳ ವ್ಯಕ್ತಪಡಿಸಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013 ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಅರಿವು ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮದು ಸನಾತನ ಸಂಸ್ಕøತಿಯ ದೇಶವಾಗಿದ್ದು, ಎಲ್ಲಿ ನಾರಿಯನ್ನು ಗೌರವಿಸುವರೊ, ಪೂಜಿಸುವರೋ ಆ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಗೌರವಪೂರ್ವಕವಾಗಿ ಜೀವಿಸುವ ಸ್ವಾತಂತ್ರ್ಯ, ಸಮಾನತೆಯನ್ನು ನಮ್ಮ ದೇಶದ ಸಂವಿಧಾನ ಕಲ್ಪಿಸಿಕೊಟ್ಟಿದೆ. ಆದರೆ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು, ಸಂವಿಧಾನ ಕಲ್ಪಿಸಿರುವ ಸಮಾನತೆ, ಸ್ವಾತಂತ್ರ್ಯದ ಆಶಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ದೇಶದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗುವಂತಹ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಸರ್ಕಾರ ಇಂತಹ ದೌರ್ಜನ್ಯ ತಡೆಗಟ್ಟಿ, ಮಹಿಳೆಯರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ 2013 ರಲ್ಲಿಯೇ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ ಜಾರಿಗೊಳಿಸಿದ್ದು, ಮಹಿಳೆಯರ ರಕ್ಷಣೆಗೆ ಇದು ದೊಡ್ಡ ಮೈಲಿಗಲ್ಲಾಗಿದೆ. ಇದರನ್ವಯ 10 ಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪ್ರತಿಯೊಂದು ಖಾಸಗಿ, ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿಯೂ ಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಆಂತರಿಕ ಸಮಿತಿ ರಚಿಸುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಅದು ಅಪರಾಧವಾಗುತ್ತದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಇಂತಹ ಸಮಿತಿಗಳು ಪರಿಣಾಮಕಾರಿಯಾಗಿವೆ. ಆದರೆ ಕೆಲವೆಡೆ ಇಂತಹ ಆಂತರಿಕ ಸಮಿತಿಗಳು ರಚನೆಯಾಗಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಡಿವೈಎಸ್‍ಪಿ ಕನ್ನಿಕಾ ಸಕ್ರಿವಾಲ್ ಮಾತನಾಡಿ, ದೇಶದಲ್ಲಿ ಕೆಲಸದ ಸ್ಥಳಗಳಲ್ಲಿ ಸುಮಾರು ಶೇ. 48 ರಷ್ಟು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ದೇಶದ ಅಭಿವೃದ್ಧಿ ಸೂಚ್ಯಂಕ ಜಿಡಿಪಿ ಬೆಳವಣಿಗೆಯಲ್ಲಿ ಕೇವಲ ಶೇ. 18 ರಷ್ಟು ಮಾತ್ರ ಮಹಿಳೆಯರ ಪಾಲಿದೆ ಎಂಬುದು ವಿಪರ್ಯಾಸವಾಗಿದೆ. ಕೇವಲ ಹಾಯ್, ಹಲೋ ಎನ್ನುವುದು, ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಹೊಗಳುವುದು ಲೈಂಗಿಕ ದೌರ್ಜನ್ಯವಲ್ಲ. ಕೆಲಸ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಂದರೇನು, ಯಾವುದು ಲೈಂಗಿಕ ದೌರ್ಜನ್ಯ ಎಂಬುದನ್ನು ಅಧಿನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಧಿನಿಯಮದ ಕುರಿತು ಮಹಿಳಾ ನೌಕರರಲ್ಲಿ ಅರಿವಿನ ಕೊರತೆಯಿದೆ. ಮಹಿಳೆಯರು ಕಚೇರಿಗಳಲ್ಲಿ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ, ಉತ್ತಮ ಸೇವೆ ಸಲ್ಲಿಸುವಂತಹ ಪೂರಕ ವಾತಾವರಣ ಇರಬೇಕು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಜಿಲ್ಲಾ ಮಟ್ಟದ ಆಂತರಿಕ ಸಮಿತಿಯ ಸರ್ಕಾರೇತರ ಸಂಘದ ಪ್ರತಿನಿಧಿ, ವಕೀಲರು ಹಾಗೂ ಕಾಳಿಕಾಂಬ ಸಂಘದ ಅಧ್ಯಕ್ಷೆ ಅನಿತಾ ಸಿ.ಪಿ. ಅವರು ವಿಶೇಷ ಉಪನ್ಯಾಸ ನೀಡಿ, ಲೈಂಗಿಕ ದೌರ್ಜನ್ಯ ತಡೆಗಟ್ಟಲು ಇಂತಹ ಒಂದು ಕಾಯ್ದೆ ಜಾರಿಯಲ್ಲಿದೆ, ದೌರ್ಜನ್ಯ ಕುರಿತು ಯಾರಿಗೆ ದೂರು ಕೊಡಬೇಕು, ಪ್ರತಿ ಕಚೇರಿಗಳಲ್ಲೂ ಆಂತರಿಕ ಸಮಿತಿಗಳಿವೆ, ಇದು ರಚನೆಗೊಂಡಿವೆ ಎಂಬುದರ ಬಗ್ಗೆ ಬಹಳಷ್ಟು ಮಹಿಳಾ ನೌಕರರಿಗೆ ಅರಿವೇ ಇಲ್ಲ. ಮಹಿಳೆಗೆ ಆ ದೇವರು ಜೀವಕ್ಕೆ ಜೀವ ಕೊಡುವ ಶಕ್ತಿ, ಸೌಂದರ್ಯ, ಬುದ್ದಿ ಎಲ್ಲವನ್ನೂ ಕೊಟ್ಟ, ಆದರೆ ದೈಹಿಕ ಅಬಲೆಯನ್ನಾಗಿಸಿದ. ಆದರೆ ಮಹಿಳೆ ಮಾನಸಿಕವಾಗಿ ಅಬಲೆಯಲ್ಲ. ಬಹಳಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಉದ್ಯೋಗ ಕಳೆದುಕೊಳ್ಳುವ ಭಯ, ಸಮಾಜ ಏನನ್ನುತ್ತದೆಯೋ ಎನ್ನುವ ಆತಂಕದಿಂದಾಗಿ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳುವುದು ಸರಿಯಲ್ಲ. ಮಹಿಳೆಯರು ಎಂತಹದೇ ಪರಿಸ್ಥಿತಿಯನ್ನಾದರೂ ಧೈರ್ಯದಿಂದ ಎದುರಿಸಲು ಹಿಂಜರಿಯಬಾರದು. ಮೌನ ಹಾಗೂ ಹಿಂಜರಿಕೆಯೇ ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತದೆ. ಒಂದು ದೂರು ಮುಂದೆ ಆಗುವಂತಹ ಎಷ್ಟೋ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಲ್ಲದು. ಮಹಿಳಾ ನೌಕರರು ಕೆಲಸ ಸ್ಥಳದಲ್ಲಿ ತಮ್ಮ ವೈಯಕ್ತಿಕ ಜೀವನ, ಮನೆಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಸಲುಗೆ ದುರುಪಯೋಗಕ್ಕೆ ಕಾರಣವಾಗುತ್ತದೆ. ಈಗಿನ ಕಾಲದಲ್ಲಿ ಕೇವಲ ದೈಹಿಕ ದೌರ್ಜನ್ಯ ಮಾತ್ರವಲ್ಲ, ಮೊಬೈಲ್‍ನಲ್ಲಿ ಅಶ್ಲೀಲ ಸಂದೇಶ, ಫೋಟೋ, ವಿಡಿಯೋ ಶೇರ್ ಮಾಡುವುದು ಕೂಡ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ನೊಂದವರಿಗೆ, ಶೋಷಣೆಗೆ ಒಳಗಾದವರಿಗೆ ಸಹದ್ಯೋಗಿಗಳು ಧೈರ್ಯ ನೀಡುವ, ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕು. ಲೈಂಗಿಕ ದೌರ್ಜನ್ಯ ತಡೆಗಟ್ಟಲು ಜಾರಿಯಲ್ಲಿರುವ ಕಾಯ್ದೆ ಕುರಿತು ಪ್ರತಿ 06 ತಿಂಗಳಿಗೊಮ್ಮೆ ಇಂತಹ ಕಾರ್ಯಗಾರಗಳು ನಡೆಯಬೇಕು, ಅಂದಾಗ ಮಾತ್ರ ಮಹಿಳೆಯರು ಜಾಗೃತರಾಗಿ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅವರು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರು ಮಾತನಾಡಿ, ಪುರಾತನ ಕಾಲದಿಂದಲೂ ಮಹಿಳೆಗೆ ಉನ್ನತ ಸ್ಥಾನವಿದೆ. ತೊಟ್ಟಿಲು ತೂಗಿದ ಕೈ ಜಗತ್ತನ್ನೇ ಆಳಬಲ್ಲದು. ಪುರುಷ ಪ್ರಧಾನವಾಗಿರುವ ಸಮಾಜದಲ್ಲಿ ಮಹಿಳೆ ಅವಕಾಶದಿಂದ ವಂಚಿತಳಾಗುತ್ತಾಳೆ ಎಂದರಿತೇ, ನಮ್ಮ ಸಂವಿಧಾನ ಸಮಾತೆಯ ಅವಕಾಶ ಕಲ್ಪಿಸಿದೆ. ಮಹಿಳೆಯರಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಶೇ. 33 ರಷ್ಟು ಮೀಸಲಿದ್ದರೆ, ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ಮೀಸಲಾತಿ ಇದೆ. ಮಹಿಳೆ ಅಡುಗೆ ಮನೆಗೆ ಸೀಮಿತವಾಗಿದ್ದ 12ನೇ ಶತಮಾನದ ಕಾಲದಲ್ಲಿಯೇ ಅಕ್ಕಮಹಾದೇವಿ, ತಮ್ಮ ವಚನಗಳ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೊಡುಗೆ ನೀಡಿ, ಮಹಿಳೆ ಸ್ಥಾನವನ್ನು ಅತಿ ಎತ್ತರಕ್ಕೆ ತಂದರು. ಮಹಿಳೆಗೆ ತಾಳ್ಮೆ, ಸಹನೆ ಪುರುಷರಿಂಗಿಂತಲೂ ಹೆಚ್ಚು ಇದೆ. ಅಂದಮಾತ್ರಕ್ಕೆ ಲೈಂಗಿಕ ದೌರ್ಜನ್ಯವನ್ನು ಏಕೆ ಸಹಿಸಿಕೊಳ್ಳಬೇಕು. ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಷಿತರಿಗೆ ಆಂತರಿಕ ಸಮಿತಿಗಳು, ಕಾನೂನು ಸೇವಾ ಪ್ರಾಧಿಕಾರಗಳ ರಕ್ಷಣೆ ಹಾಗೂ ನೆರವು ಇದ್ದೇ ಇದೆ. ಅಲ್ಲದೆ ಇಂತಹ ಸಂದರ್ಭದಲ್ಲಿ ನೊಂದವರ ಹೆಸರು ಗೌಪ್ಯವಾಗಿಡಲು ಅವಕಾಶವಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿವೈಎಸ್‍ಪಿ ಬಸವರಾಜ ನಾಯಕ್, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಪಾಲಿಕೆ ಉಪ ಆಯುಕ್ತರಾದ ನಳಿನಾ ಮುಂತಾದವರು ಉಪಸ್ಥಿತರಿದ್ದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಮಹಿಳಾ ನೌಕರರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here