ಜೀವ ವೈವಿಧ್ಯತೆಯನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿ : ರಮೇಶ್

0
140

ರಾಮನಗರ, ಅ.೦೫ : ಪರಿಸರಕ್ಕೆ ಪ್ರತಿಯೊಂದು ಜೀವಿಯು ತನ್ನದೆ ಆದ ಕೊಡುಗೆ ನೀಡುತ್ತದೆ. ಪರಿಸರದ ಸಮತೋಲನಕ್ಕಾಗಿ ಜೀವ ವೈವಿದ್ಯತೆಯನ್ನು ರಕ್ಷಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್ ಅವರು ತಿಳಿಸಿದರು.

ಅವರು ಇಂದು ರಾಮನಗರದ ರಾಮದೇವರ ಬೆಟ್ಟದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಇವರ ಜಂಟಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಅಭಿಯಾನ ಕಾರ್ಯಕ್ರಮ ಕುರಿತು ಮಾತನಾಡಿದರು.

ಸ್ಥಳೀಯವಾಗಿ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯತೆ ಗಳನ್ನು ಗುರುತಿಸಿ ಕೀಟಗಳು, ವಿವಿಧ ತಳಿ ಸಸ್ಯಗಳ ಭಾವಚಿತ್ರ, ವಿಡಿಯೋ ಸಂಗ್ರಹಿಸಿ ಪುಸ್ತಕ ಹಾಗೂ ಸಿಡಿ ರೂಪಿಸಿ ಎಲ್ಲರಿಗೂ ಮಾಹಿತಿ ದೊರಕುವಂತಾಗಬೇಕು. ಗುರುತಿಸುವ ಜೀವ ವೈವಿಧ್ಯತೆ ನಶಿಸಿಹೋಗದಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿಯೊಬ್ಬರಿಗೂ ಗಿಡ-ಮರಗಳ ಪ್ರಾಮುಖ್ಯತೆ ತಿಳಿದಿದೆ. ಪ್ರಸ್ತುತ ರಾಮನಗರ ಜಿಲ್ಲೆ ೧೮% ಅರಣ್ಯ ಪ್ರದೇಶ ಹೊಂದಿದೆ. ಗಿಡಗಳನ್ನು ನೆಟ್ಟಿ ಬೆಳಿಸಲು ಶ್ರಮಿಸಿದರೆ ೧೫-೨೦ ವರ್ಷಗಳಲ್ಲಿ ಅರಣ್ಯ ಪ್ರದೇಶ ವಿಸ್ತರಣೆಯಾಗಲಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ದೇವರಾಜು ಅವರು ಮಾತನಾಡಿ ಜೀವ ವೈವಿಧ್ಯತೆ ಉಳಿಸಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೆಲಸವಾಗಬೇಕಿದೆ.
ರಾಮನಗರ ವಿಶೇಷವೆಂದರೆ ಹೆಚ್ಚು ಬೆಟ್ಟ ಪ್ರದೇಶ ಹೊಂದಿದ್ದು, ರಾಮದೇವರ ಬೆಟ್ಟ, ಎಸ್.ಆರ್.ಎಸ್ ಬೆಟ್ಟ, ಕಬ್ಬಾಳು ಬೆಟ್ಟ ಹೊಂದಿದೆ. ರಾಮನಗರ ಜಿಲ್ಲೆ ಬೆಂಗಳೂರಿಗೆ ಹತ್ತಿರವಿದ್ದು, ಆಧುನೀಕರಣದಿಂದ ಪರಿಸರದ ಮೇಲೆ ಹೊಡೆತ ಬಿದ್ದು, ಕಾಡು ನಶಿಸಿ ಪ್ರಾಣಿಗಳ ಸಂಕುಲ ಕಡಿಮೆಯಾಗುತ್ತಿದೆ ಎಂದರು.

ಅರಣ್ಯ ಸಂರಕ್ಷಣೆ ಮತ್ತು ಜೀವವೈವಿಧ್ಯತೆ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎನ್ ಜಗನ್ನಾಥ ಹಾಗೂ ಜೀವ ವೈವಿಧ್ಯ ಕಾಯ್ದೆ ಕುರಿತು ಬೆಂಗಳೂರು ವಿಶ್ವ ವಿದ್ಯಾಲಯ ಡಾ. ನಾಗರಾಜ ನಾಯ್ಕ್ ಎಂ ಇವರು ಉಪನ್ಯಾಸ ನೀಡಿದರು.

ಅರಣ್ಯ ರಕ್ಷಕ ಚಂದ್ರು, ಪರಿಸರ ಪ್ರೇಮಿ ಮತ್ತು ಪ್ರಗತಿಪರ ರೈತ ಕೆ.ಎಂ.ನಾಗರಾಜು ಹಾಗೂ ಕ್ಷೇಮಾಭಿವೃದ್ಧಿ ಅರಣ್ಯ ನೌಕರ ದೊಡ್ಡಯ್ಯ ಅವರಿಗೆ ಅಭಿನಂದನ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜೀವ ವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಅರೇಕಲ್, ಸಾಮಾಜಿಕ ಅರಣ್ಯ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ವಿ. ಭೈರಾರೆಡ್ಡಿ, ಸಾಮಾಜಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ.ಜಿ.ಸಿ ಇನ್ನಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here