ಸಮಾಜದಲ್ಲಿ‌ ಸುಗಮ‌ ಜೀವನಕ್ಕೆ ಮಾನವ ಹಕ್ಕು ಅವಶ್ಯಕ: ಡಾ ರಾಕೇಶ್ ಕುಮಾರ್ ಕೆ

0
73

ಜಾತಿ, ವರ್ಣ, ಸ್ತ್ರೀ-ಪುರುಷ ಎಂಬ ಯಾವುದೇ ರೀತಿಯ ಭೇದವಿಲ್ಲದೇ ಪ್ರತಿಯೊಬ್ಬ ನಾಗರಿಕರಿಗೂ ಸಮಾಜದಲ್ಲಿ ಸುಗಮ ಜೀವನ ನಡೆಸಲು ಮಾನವ ಹಕ್ಕು ಅವಶ್ಯಕ‌ ಎಂದು ಜಿಲ್ಲಾಧಿಕಾರಿ‌ ಡಾ: ರಾಕೇಶ್ ಕುಮಾರ್ ಕೆ ಅವರು‌ ತಿಳಿಸಿದರು.

ಅವರು‌ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕದ‌ ಸಂತುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ‌ ಹಾಗೂ ಮಕ್ಕಳ ಹಕ್ಕುಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಮಾನವ ಹಕ್ಕುಗಳು ಪ್ರತಿ ವ್ಯಕ್ತಿಯ ಹುಟ್ಟಿನಿಂದಲೇ ಬರುತ್ತವೆ. ಹಕ್ಕುಗಳಿಗೆ ಅದರದೇ ಆದ ಚೌಕಟ್ಟು ಇರುತ್ತದೆ. ಭಾರತ ದೇಶದಲ್ಲಿ ಸಂವಿಧಾನ ರಚಿಸುವ ಸಂದರ್ಭದಲ್ಲೇ ಬಹಳಷ್ಟು ಹಕ್ಕುಗಳನ್ನು ನೀಡಲಾಗಿದೆ. ನೀಡಲಾಗಿರುವ ಹಕ್ಕನ್ನು ಉತ್ತಮ ಜೀವನ ನಡೆಸಲು ಬಳಸಿಕೊಳ್ಳಬೇಕು. ನಮ್ಮ ಹಕ್ಕುಗಳ ರಕ್ಷಣೆ ಜೊತೆಗೆ ಬೇರೆಯವರ ಹಕ್ಕುಗಳಿಗೆ ದಕ್ಕೆ ಬಾರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಗುರುತರ ಜವಾಬ್ದಾರಿಯಾಗಿದೆ ಎಂದರು.

ಮಕ್ಕಳಿಗೆ ಶಿಕ್ಷಣದ ಹಕ್ಕು, ನರೇಗಾ ಯೋಜನೆಯಲ್ಲಿ ಕನಿಷ್ಠ 100 ದಿನಗಳ ಕೆಲಸ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಹಕ್ಕು ನೀಡಲಾಗಿದೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಹಕ್ಕುಗಳಿರುತ್ತದೆ. ಭಾರತ ದೇಶದಲ್ಲಿ ನಮಗೆ ನೀಡಲಾಗಿರುವ ಹಕ್ಕುಗಳ ಬಗ್ಗೆ ತಿಳಿದುಕೊಂಡು ಅದನ್ನು ಗೌರವಿಸಿ ಜೀವನ ನಡೆಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ‌ ವೆಂಕಟಪ್ಪ ಅವರು ಮಾತನಾಡಿ ಪ್ರತಿ ವರ್ಷ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತದೆ.ಮೂಲಭೂತ ಹಾಗೂ ಮಾನವ ಹಕ್ಕುಗಳು ಬಹಳಷ್ಟು ಹಕ್ಕುಗಳು ಒಂದೇ ರೀತಿ ಇದೆ. ಸಂವಿಧಾನದ ಆರ್ಟಿಕಲ್ 14 ರಿಂದ 21 ರವರೆಗೆ ಮೂಲಭೂತ ಹಕ್ಕುಗಳನ್ನು ತಿಳಿಸುತ್ತದೆ. ಇವುಗಳ ಉಲ್ಲಂಘನೆಯಾದರೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಮಾನವ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬೇಕು ಎಂದರು.

ಮಾಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಂಬಂಧಿಸಿದಂತೆ ಪೋಸ್ಕೋ‌ ಕಾಯ್ದೆ, ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಕಾಯ್ದೆಗಳಿವೆ. ಇವುಗಳನ್ನು ಮಕ್ಕಳ ಜೀವನವನ್ನು ಸುಂದರಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಜಾರಿಗೆ ತರಲಾಗಿದೆ ಎಂದರು.

ರಾಮನಗರ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗೆ ಆದ್ಯತೆ ನೀಡಿ ವಿಲೇವಾರಿ ಮಾಡಲಾಗುತ್ತಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಹೆಣ್ಣು ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ‌ ಕರ್ನಾಟಕ ಸಂತ್ರಸ್ತ ಪರಿಹಾರ ನಿಧಿ 2011 ರಡಿ ಪರಿಶೀಲಿಸಿ 1-10 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿದೆ. ರಾಮನಗರ ಜಿಲ್ಲೆಯಲ್ಲಿ‌ಈ ನಿಧಿಯಡಿ ಬಹಳಷ್ಟು ಪ್ರಕರಣಗಳಲ್ಲಿ ಪರಿಹಾರ‌ ಒದಗಿಸಲಾಗಿದೆ ಎಂದರು.

ಡಿ ಓ ಎಸ್ ಪಿ ಮೋಹನ್ ಕುಮಾರ್ ಅವರು ಮಾತನಾಡಿ ಕೆಲವು ದೇಶಗಳಲ್ಲಿ ಪ್ರಜೆಗಳಿಗೆ ಹಕ್ಕುಗಳ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ವಿಲ್ಲ. ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ, ಮಕ್ಕಳು , ಮಾನವ ಸೇರಿದಂತೆ ಬಹಳಷ್ಟು ಹಕ್ಕುಗಳನ್ನು ನೀಡಲಾಗಿದೆ. ಮಗುವಿಗೆ ತಾಯಿಯ ಗರ್ಭದಲ್ಲಿ ಇರುವಗಲೇ ಹಕ್ಕು ಹಾಗೂ ರಕ್ಷಣೆ ಪ್ರಾರಂಭವಾಗುತ್ತದೆ. ಮಕ್ಕಳ ಹಕ್ಕುಗಳು ಹಾಗೂ ರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಮಕ್ಕಳಿಗೆ ಹೆಚ್ಚು ರಕ್ಷಣೆ ನೀಡಲಾಗುತ್ತಿದೆ. ಮಕ್ಕಳಿಗೆ‌ ಕಡ್ಡಾಯ ಶಿಕ್ಷಣದ ಹಕ್ಕಿನ ಬಗ್ಗೆ ತಿಳಿದಿರುವವರು ಬಾಲ ಕಾರ್ಮಿಕ ಮಕ್ಕಳು ಕಂಡುಬಂದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಮಕ್ಕಳಿಗೆ ಶಿಕ್ಷಣ ಪಡೆದುಕೊಳ್ಳುವಂತೆ ಮಾಡಿ. ಪೋಷಕರು ಮನೆಯಲ್ಲಿ ಮಕ್ಕಳೊಂದಿಗೆ ಹೆಚ್ಚು‌ ಮಾತನಾಡಿ, ಇದರಿಂದ ಮಕ್ಕಳು ತೊಂದರೆಗೆ ಒಳಗಾಗಿದ್ದರೆ ಮುಕ್ತವಾಗಿ ತಿಳಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್,
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ‌ ಪರಶುರಾಮ್, ಸಂಪನೂಲ ವ್ಯಕ್ತಿ ಮಾರ್ಗರೇಟ್ ಸಂಪತ್ ಸೇರಿದಂತೆ ಇನ್ನಿತರ ಗಣ್ಯರು‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here