ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಿ: ಡಿಸಿ ಪವನ್ ಕುಮಾರ್ ಮಾಲಪಾಟಿ

0
68

ಬಳ್ಳಾರಿ,ಮೇ 05 : ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಮತ್ತು ಬಾಲಕಾರ್ಮಿಕರ ಪೋಷಕರಿಗೆ ಮನವೋಲಿಸಿ ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಗ್ಯಾರೇಜ್, ಅಂಗಡಿ, ಹೋಟೆಲ್, ವೈನ್‍ಶಾಪ್, ರೆಸ್ಟೋರೆಂಟ್ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡುವಂತಹ ಬಾಲ ಕಾರ್ಮಿಕರನ್ನು ಗುರುತಿಸಿ ಮತ್ತು ದುಡಿಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದ ಡಿಸಿ ಮಾಲಪಾಟಿ ಅವರು ಆ ಮಕ್ಕಳಿಗೆ ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವಂತೆ ಸೂಚಿಸಿದರು.
ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸದಲ್ಲಿ ನೇಮಿಸಿಕೊಂಡು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಅಂತವರ ವಿರುದ್ಧ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಈ ಹಿನ್ನಲೆಯಲ್ಲಿ ತಿಂಗಳಿಗೊಮ್ಮೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಪರಿಶೀಲನೆ ನಡೆಸಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
2015ರಿಂದ ಪ್ರಸ್ತಕ ಸಾಲಿನವರೆಗೆ ನಡೆಸಿದ ದಾಳಿಗಳ ಬಗ್ಗೆ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಲಕಾರ್ಮಿಕ ಯೋಜನೆಗಳಲ್ಲಿ ಮಾರ್ಗಸೂಚಿಗಳನ್ನು ಆಳವಡಿಸುವುದರ ಮೂಲಕ ಕಿಶೋರಕಾರ್ಮಿಕರ ಅಭಿವೃದ್ಧಿಪಡಿಸಬೇಕು ಎಂದರು.
ರಾಷ್ಟ್ರೀಯ ಬಾಲಕಾರ್ಮಿಕರ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ ಅವರು, ಬಾಲಕಾರ್ಮಿಕ ಶಾಲೆಗಳಲ್ಲಿ ಅಭ್ಯಾಸ ಮಾಡಿ ಉನ್ನತ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಖನಿಜಾ ನಿಧಿಯಿಂದ ಶುಲ್ಕ ಮರುಪಾವತಿ ಹಾಗೂ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಸಮೀಕ್ಷೆಯಲ್ಲಿ ಕಂಡು ಬಂದ ಕಿಶೋರಕಾರ್ಮಿಕರಿಗೆ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸುವ ಕುರಿತು ಪ್ರಸ್ತಾಪಿಸಿದರು.
ಜಿಲ್ಲೆಯಲ್ಲಿ ಗುರುತಿಸಲಾದ ಬಾಲಕಾರ್ಮಿಕರ ಪೋಷಕರಿಗೆ ವಿವಿಧ ನಿಗಮಗಳಿಂದ ಆದ್ಯತೆ ಮೇರೆಗೆ ಆರ್ಥಿಕ ಸಹಾಯ ನೀಡುವುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here