ಕಲಬುರಗಿ ಭಾಗದ ರೈತರಿಗೆ ಡಿಸಿಸಿ ಬ್ಯಾಂಕ್ ನ ಅಗತ್ಯತೆ ತುಂಬಾ ಇದೆ -ಸಚಿವ ಮುರುಗೇಶ್ ನಿರಾಣಿ

0
99

ಕಲಬುರಗಿ.ನ.1-ಕಲಬುರಗಿ ಭಾಗದ ರೈತರಿಗೆ ಡಿಸಿಸಿ ಬ್ಯಾಂಕನ ಅವಶ್ಯಕತೆ ತುಂಬಾ ಇದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ಆರ್. ನಿರಾಣಿ ಅವರು ಅಭಿಪ್ರಾಯಪಟ್ಟರು.
ಸೋಮವಾರ ನಗರದ ಡಾ.ಎಸ್.ಎಮ್. ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಕಲಬುರಗಿಯ ವತಿಯಿಂದ ಆಯೋಜಿಸಲಾಗಿದ್ದ ಮಿನಿ ಎಟಿಎಂ, ಸಾಲ ವಿತರಣೆ, ಸಾಲ ವಸೂಲಾತಿ ಕಾರ್ಯಾಗಾರ ಹಾಗೂ ಸಹಕಾರ ಸಪ್ತಾಹದ ಪೂರ್ವಸಿದ್ಧತೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ರೈತರ ಕಷ್ಟ ಕಾಲದಲ್ಲಿ ಸಹಕಾರವಾಗಲು ಡಿಸಿಸಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತವೆ. ಜಗತ್ತಿಗೆ ಬ್ಯಾಂಕಿಂಗ್ ಪರಿಕಲ್ಪನೆ ನೀಡಿದ ಹೆಮ್ಮೆ ಕರ್ನಾಟಕದ ಬ್ಯಾಂಕುಗಳಿಗೆ ಸಲ್ಲುತ್ತದೆ ಎಂದ ಅವರು, ರೈತ ದೇಶಕ್ಕೆ ಕೇವಲ ಅನ್ನ ನೀಡುವಾತ ಅಲ್ಲದೇ ದೇಶದ ಶಕ್ತಿದಾತನು ಆಗಿದ್ದಾನೆ. ಅಂತಹ ರೈತರ ಸಹಾಯಕ್ಕೆ ಸದಾ ಡಿಸಿಸಿ ಬ್ಯಾಂಕ್‍ಗಳು ಸ್ಪಂದಿಸಿಬೇಕು ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ಒಂದು ಸಹ ಬೃಹತ್ ಕೈಗಾರಿಕಾ ಕಾರ್ಖಾನೆ ಇಲ್ಲದೆ ಇರುವುದು ನೋವಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಗೆ ಬೃಹತ್ ಕೈಗಾರಿಕೆಗಳ ಆಗಮನದಿಂದ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂದರು.
ವಿಷನ್ -2050 ಮೂಲಕ ಮುಂದಿನ 30 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯೂ ಶಿಕ್ಷಣ, ಕೈಗಾರಿಕೆ, ಕೃಷಿ, ಮೂಲಸೌಕರ್ಯ, ಐಶಾರಾಮಿ ಹೊಟೇಲ್ ಉದ್ಯಮ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಅವಿರತ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದರು.
ಕಲಬುರಗಿಯಲ್ಲಿ ಇಸ್ರೇಲ್ ಮಾದರಿಯ ತೋಟಗಾರಿಕೆ ಮಾಡಲು ತಜ್ಞರ ತಂಡ ಬಂದು ತರಬೇತಿ ನೀಡಲಿದೆ ಹಾಗೂ ವಿಮಾನ ತಯಾರಿಕಾ ಕಂಪನಿಯೊಂದಕ್ಕೆ ಕಲಬುರಗಿಯಲ್ಲಿ ವಿಮಾನ ಬಿಡಿ ಭಾಗ ತಯಾರಿಕೆ ಘಟಕ ಸ್ಥಾಪಿಸಲು ಅಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸೇಡಂ ಶಾಸಕ ಹಾಗೂ ಡಿಸಿಸಿ ಬ್ಯಾಂಕನ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್, ನಮ್ಮ ಡಿಸಿಸಿ ಬ್ಯಾಂಕ್ ಇದುವರೆಗೂ 176 ಕೋಟಿ ರೂಪಾಯಿಗಳ ಸಾಲ ರೈತರಿಗೆ ನೀಡಿದೆ. ಮುಂದಿನ ದಿನಗಳಲ್ಲಿ 5 ಸಾವಿರ ಕೋಟಿ ವ್ಯವಹಾರ ಮಾಡುವ ಗುರಿ ಹೊಂದಿದ್ದು, ಸುಮಾರು ಒಂದು ಸಾವಿರ ಯುವಕರಿಗೆ ಉದ್ಯೋಗ ನೀಡುವ ಭರವಸೆ ಅವರು ನೀಡಿದರು.
ಡಿಸಿಸಿ ಬ್ಯಾಂಕ್ ಮೂಲಕ ಕಷ್ಟದಲ್ಲಿರುವ ರೈತರಿಗೆ ಬೆಂಬಲ ನೀಡಲಾಗುವುದು. 21ನೇ ಸ್ಥಾನದಲ್ಲಿದ್ದ ನಮ್ಮ ಬ್ಯಾಂಕ್ ಈಗ 11ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಟಾಪ್ 5 ಸ್ಥಾನದಲ್ಲಿ ತರುವ ಸರ್ವ ಪ್ರಯತ್ನ ಮಾಡಲಾಗುವುದು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಹೇಳಿದರು.
ಸಹಕಾರ ಸಂಘಗಳ ಅಪರ ನಿಬಂಧಕ ದಿವಾಕರ್ ಎ.ಸಿ ಅವರು ಕಾರ್ಯಗಾರದಲ್ಲಿ ಡಿಸಿಸಿ ಬ್ಯಾಂಕಿನ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಆಳಂದ ಶಾಸಕ ಸುಭಾಷ್ ಗುತ್ತೇದಾರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಡಿಸಿಸಿ ಬ್ಯಾಂಕ್‍ನ ಉಪಾಧ್ಯಕ್ಷ ಸುರೇಶ್ ಆರ್ ಸಜ್ಜನ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ್ ಸೇರಿದಂತೆ ಕಲಬುರಗಿ, ಯಾದಗಿರಿ ಜಿಲ್ಲೆಯ ಎಲ್ಲಾ ಡಿಸಿಸಿ ಬ್ಯಾಂಕನ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here