ತಂಬಾಕು ಮುಕ್ತ ವಲಯಗಳನ್ನಾಗಿಸಲು ಅಧಿಕಾರಿಗಳು ಶ್ರಮಿಸಬೇಕು:ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ

0
75

ಕಲಬುರಗಿ,ಆ.24 -ತಂಬಾಕು ಮುಕ್ತ ವಲಯಗಳನ್ನಾಗಿಸಲು ಪ್ರತಿ ತಾಲೂಕು ಮಟ್ಟದ ಅಧಿಕಾರಿಗಳು ಶ್ರಮಿಸಬೇಕು ಎಂದು ಕಲಬುರಗಿ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿಯೂ ಆದ ಡಾ.ಶಂಕರ ವಣಿಕ್ಯಾಳ ಅವರು ತಿಳಿಸಿದರು.

ಮಂಗಳವಾರ ಅಪರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಸರ್ಕಾರಿ, ಸರ್ಕಾರೇತರ ಕಚೇರಿ ಕಟ್ಟಡಗಳಲ್ಲಿ ತಂಬಾಕು ನಿಷೇಧ ಕುರಿತು ನಾಮಫಲಕ ಅಳವಡಿಸಬೇಕು ಎಂದು ಅವರು ಹೇಳಿದರಲ್ಲದೆ, ಪ್ರತಿ ಹಳ್ಳಿಗಳನ್ನು ತಂಬಾಕು ಮುಕ್ತವಲಯಗಳನ್ನಾಗಿ ಘೋಷಿಸಬೇಕು. ಶಾಲಾ-ಕಾಲೇಜು ಸುತ್ತಮುತ್ತ ನಿಯಮಾನುಸಾರ ತಂಬಾಕು ಮಾರಾಟ ಮಾಡುತ್ತಿದ್ದರೆ, ಅಂತಹವರ ವಿರುದ್ಧ ಕ್ರಮಕೈಗೊಳ್ಳಿ. ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ತಂಬಾಕು ಮುಕ್ತ ತಾಣಗಳನ್ನಾಗಿಸಬೇಕು ಎಂದು ಅವರು ಹೇಳಿದರು.

ತಾಲೂಕು ಮಟ್ಟದಲ್ಲಿ ತಹಶೀಲಾರ್, ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ತಂಬಾಕು ನಿಯಂತ್ರಣಾಧಿಕಾರಿ ಜೊತೆಗೂಡಿ ತಂಬಾಕು ಮುಕ್ತ ವಲಯಗಳನ್ನಾಗಿಸಲು ಕ್ರಮಕೈಗೊಳ್ಳಬೇಕು ಎಂದರು. ತಹಶೀಲ್ದಾರ್ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಇದೀಗ ಶಾಲೆ-ಕಾಲೇಜುಗಳು ಆರಂಭವಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಜೊತೆಗೂಡಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ಸೂಚಿಸಿದರು.

ಯಾವ ಸ್ಥಳದಲ್ಲಿ ತಂಬಾಕು ಕುರಿತು ಎಚ್ಚರಿಕೆಯ ನಾಮಫಲಕಗಳಿರುವುದಿಲ್ಲವೋ ಅದಕ್ಕೆ ಕಾರಣರಾದವರ ವಿರುದ್ಧ ಕೋಟ್ಪಾ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಬೇಕು ಎಂದರು. ನಿರ್ಲಕ್ಷ್ಯ ತೋರುವವರನ್ನು ಜವಾಬ್ದಾರಿ ನಾಗರೀಕರನ್ನಾಗಿಸಿ, ಅವರನ್ನು ಮಾನಸಿಕವಾಗಿ ಪರಿವರ್ತನೆ ಮಾಡಿ, ತಂಬಾಕು ಮುಕ್ತ ಸಮಾಜದ ಗುರಿ ಸಾಧಿಸಬೇಕು ಎಂದರು.

ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ವಿವಿಧ ತಾಲೂಕಿನ ತಹಶೀಲ್ದಾರರು, ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ, ಕಲಬುರಗಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here