ಕೆಲ ದಿನ ಬಿಡುವು ನೀಡಿದ್ದ ಮಳೆ ಈಗ ಮತ್ತೆ ಕೆಲವೆಡೆ ಆರಂಭ

0
101

ಜಿಲ್ಲೆಯಲ್ಲಿ ಎರಡು ದಿನದಿಂದ ವಾತವರಣದಲ್ಲಿ ಬದಲಾವಣೆ ಆಗಿದ್ದು ಆಷಾಢದ ಗಾಳಿಯ ಜತೆ ಆಗಾಗ ಸೋನೆಯಂತೆ ಮಳೆ ಸುರಿಯುತ್ತಿದೆ. ಮಲೆನಾಡಿಗೆ ಅಂಟಿಕೊಂಡಿರುವ ನ್ಯಾಮತಿ, ಹೊನ್ನಾಳಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜೋರು ಗಾಳಿಯೊಂದಿಗೆ ಆಗಾಗ ಸಾಧಾರಣ ಮಳೆ ಸುರಿಯುತ್ತಿದೆ.

ಕೆಲ ದಿನ ಬಿಡುವು ನೀಡಿದ್ದ ಮಳೆ ಈಗ ಮತ್ತೆ ಕೆಲವೆಡೆ ಆರಂಭವಾಗಿದೆ. ಈಗಾಗಲೇ ಕಳೆದ ಕೆಲ ದಿನಗಳ ಜೋರು ಮಳೆಯಿಂದ ಈಗಾಗಲೇ ಬಯಲು ಸೀಮೆಯ ಮಳೆಯಾಶ್ರಿತ ಕೃಷಿಯ ಬೆಳೆಗಳಿಗೆ ಶೀತಭಾದೆ ಶುರುವಾಗಿದೆ. ಆದರೆ ನೀರಾವರಿ ಭಾಗದಲ್ಲಿ ಈಗ ಭತ್ತ ನಾಟಿಗೆ ಸಿದ್ಧತೆ ನಡೆದಿದ್ದು ಅವರಿಗೆ ಅನುಕೂಲ ಆಗಿದೆ.

ದಾವಣಗೆರೆ ನಗರದಲ್ಲೂ ಮೋಡ ಮುಸುಕಿದ ವಾತಾವರಣವಿದ್ದು ಎರಡು ದಿನದಿಂದ ಆಗಾಗ ಕೆಲ ನಿಮಿಷ ಸೋನೆಯಂತೆ ಸುರಿಯುತ್ತಿದೆ. ತಾಲೂಕಿನ ಮಾಯಕೊಂಡ, ಆನಗೋಡು, ಕುಕ್ಕುವಾಡ ಭಾಗದಲ್ಲೂ ಮೋಡ ಮುಸುಕಿದ ವಾತಾವರಣದೊಂದಿಗೆ ಸೋನೆಯಂತೆ ಸುರಿದಿದೆ.

ಈ ಭಾಗಕ್ಕೆ ಮಳೆಯ ಅಗತ್ಯವಿಲ್ಲ, ಬೆಳೆಗಳಿಗೆ ಬಿಸಿಲು ಬೇಕಿದೆ. ಈಗಾಗಲೇ ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ ಕೆಂಪಾಗಿ ಹಾಳಾಗುವ ಹಂತ ತಲುಪಿದೆ. ಒಂದೆರಡು ದಿನ ಬಿಸಿಲು ಜೋರಾದರೆ ಅನುಕೂಲ ಆಗುತ್ತಿತ್ತು, ಆದರೀಗ ಮಳೆಯ ವಾತಾವರಣ ಕಂಡು ಬರುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ.

ನ್ಯಾಮತಿ: ನ್ಯಾಮತಿ ಪಟ್ಟಣ ಮತ್ತು ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಆಗಾಗ ಜಿಟಿ ಜಿಟಿ ಇನ್ನೊಮ್ಮೆ ತುಂತುರು ಮಳೆ ಸುರಿಯುತ್ತಿದ್ದು, ತಣ್ಣನೆ ಗಾಳಿಯಿಂದಾಗಿ ಶೀತ ವಾತಾವರಣ ಕಂಡು ಬರುತ್ತಿದೆ. ಮಲೆನಾಡಿನ ಸೆರಗಿನ ಊರು ಈಗ ಸಂಪೂರ್ಣ ಮಲೆನಾಡಿನಂತಾಗಿದೆ.

ಗುರುವಾರ , ಶುಕ್ರವಾರ , ಶನಿವಾರ ಮೂರು ದಿನ ಬೆಳಿಗ್ಗೆಯಿಂದಲೂ ಮೋಡ ಕವಿದಿತ್ತು. ಒಂದೆಡೆ ಮೋಡ ಕವಿದ ವಾತಾವರಣ, ಇನ್ನೊಂದೆಡೆ ಆಗಾಗ ಜಿಟಿ ಜಿಟಿ ಇನ್ನೊಮ್ಮೆ ತುಂತುರು ಮಳೆ ಸುರಿಯುತ್ತಿದೆ. ಇಡೀ ದಿನ ಚಳಿಯ ಅನುಭವ ಹೆಚ್ಚಾಗಿತ್ತು.

ಆಗಾಗ ಜೋರಾದ ಗಾಳಿಯೊಂದಿಗೆ ನ್ಯಾಮತಿ ತಾಲೂಕಿನ ಹಳೇ ಮಳಲಿ , ಚೀಲೂರು , ಕೋಟೆಹಾಳ್‌ , ಮರಿಗೊಂಡನಹಳ್ಳಿ , ಕುರುವ , ಗೋವಿನಕೋವಿ ಸವಳಂಗ ಸೇರಿ ಅನೇಕ ಗ್ರಾಮಗಳ ವ್ಯಾಪ್ತಿಯಲಿ ಮಳೆ ಸುರಿಯಿತು. ತಾಲೂಕಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಇದರಿಂದ ಕೃಷಿ ಕಾರ್ಯಗಳು ಕೂಡ ಬಿರುಸುಗೊಂಡಿವೆ. ಬೆಳಿಗ್ಗೆಯಿಂದಲೇ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿ ಉಂಟು ಮಾಡಿತು.

ಮುಂದಿನ ಮೂರು ದಿನ ಸಾದಾರಣ ಮಳೆ
ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಸಾದಾರಣ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ. 3 ರಂದು ಹೊರತು ಪಡಿಸಿದರೆ ಆ. 1 ರಿಂದ ಆ. 4 ರವರೆಗೆ 2 ರಿಂದ 4.2 ಮಿಮೀವರೆಗೂ ಮಳೆಯಾಗಲಿದೆ.

ಆ.1 ಮತ್ತು 2 ರಂದು ಚನ್ನಗಿರಿ 4.2, ದಾವಣಗೆರೆ 2.5, ಹರಿಹರ 2.1, ಹೊನ್ನಾಳಿ 3.3 ಹಾಗೂ ಜಗಳೂರು ತಾಲೂಕಲ್ಲಿ 0.7 ಮಿಮೀ ಮಳೆ ಆಗಲಿದೆ. ಆ. 4 ರಂದು ಎಲ್ಲ ತಾಲೂಕುಗಳಲ್ಲಿ 2 ಮಿಮೀವರೆಗೂ ಮಳೆಯಾಗಲಿದೆ ಎಂದು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಗ್ರಾಮೀಣ ಕೃಷಿ ಹವಮಾನ ಸೇವಾ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ. ಆರ್‌. ನಾಗರಾಜ್‌ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here