ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆಗೆ ಸೂಚನೆ

0
92

ಹಾಸನ,ನ.24 :- ನಗರ/ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೈರ್ಮಲ್ಯ ಶೌಚಾಲಯ/ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಪದ್ದತಿ ಅನುಸರಿಸುತ್ತಿರುವವರ ಸಮೀಕ್ಷೆಯನ್ನು ಮರು ಸಮೀಕ್ಷೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಮ್ಯಾನುವಲ್ ಸ್ಕ್ಯಾವೆಂಜರ್ ಪದ್ಧತಿ ಅನುಸರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಅಲ್ಲದೆ ಈ ರೀತಿಯಲ್ಲಿ ತೊಡಗಿರುವವರಿಗೆ ಪ್ರತ್ಯೇಕ ವಸತಿ ಕಲ್ಪಿಸಿಸ ಬೇಕಾಗಿದೆ ಈ ಬಗ್ಗೆ ನಿಖರ ಅಂಕಿ ಅಂಶಗಳ ಕ್ರೋಡೀಕರಣವಾಗ ಬೇಕಾಗಿರುವುದರಿಂದ ಮತ್ತೊಮ್ಮೆ ಸಮೀಕ್ಷೆ ನಡೆಸಿ ಕೈಯಲ್ಲಿ ಶೌಚಗುಂಡಿ ಸ್ವಚ್ಛತೆ ನಡೆಸದೇ ಇರುವವರ ಬಗ್ಗೆ ಖಾತರಿಪಡಿಸಿಕೊಳ್ಳಿ ಎಂದರು.
ಸಕಲೇಶಪುರ ಪಟ್ಟಣದಲ್ಲಿ ಪೌರಕಾರ್ಮಿಕ ಕಾಲೋನಿ ಕೊಳಚೆ ಪ್ರದೇಶದಲ್ಲಿ ಪಿ.ಎಂ.ಎ.ವೈ-ಹೆಚ್.ಎಫ್.ಎ ಯೋಜನೆಯಡಿಯಲ್ಲಿ 65 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಹಾಸನ ನಗರಸಭೆ ವ್ಯಾಪ್ತಿಯ ನಿರ್ಮಲ ನಗರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆ ಅವರು ಹೇಳಿದರು.
ಚನ್ನರಾಯಪಟ್ಟಣ ಪುರಸಭೆ ಮಾಲೀಕತ್ವದ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ವೇ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸದರಿ ನಿವಾಸಿಗಳಿಗೆ ಹೆಸರು ನೋಂದಣಿ ಮಾಡಿಸುವಂತೆ ಕವಿತಾ ರಾಜಾರಾಮ್ ಅವರು ತಿಳಿಸಿದರು.
ಹಾಸನ ನಗರಸಭೆ ಹಾಗೂ ತಾಲೂಕಿನ ಪುರಸಭಾ/ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಾಯಂ ಹಾಗೂ ನೇರಪಾವತಿ ಪೌರಕಾರ್ಮಿಕರಿಗೆ ಶೂ ಹ್ಯಾಂಡ್ ಗ್ಲೌಸ್, ಮಾಸ್ಕ್, ರಿಪ್ಲೆಕ್ಟೀವ್ ಜಾಕೆಟ್ ಇತರೆ ಕಿಟ್ ವಿತರಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುನೀತ್ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್ ನಿರ್ದೇಶಕರಾದ ಮಂಜುನಾಥ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here