ಖ್ಯಾತ ಛಾಯಾಗ್ರಾಹಕ ಶಿವಮೊಗ್ಗನಾಗರಾಜ್ ಮತ್ತೊಂದು ಪ್ರಶಸ್ತಿ: ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ.

0
81

ಶಿವಮೊಗ್ಗ: ಪುಣೆಯ ದ ಫೋಟೋಗ್ರಫಿಕ್ ಸೊಸೈಟಿ(ಪಿ.ಎಸ್.ಪಿ.) ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಶಿವಮೊಗ್ಗ ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಮತ್ತೊಂದು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.


ಪಿ.ಎಸ್.ಪಿ. ನಡೆಸಿದ ಈ ಸ್ಪರ್ಧೆಯಲ್ಲಿ ದೇಶದ ನೂರಾರು ಛಾಯಾ ಚಿತ್ರಗ್ರಾಹಕರು ಸ್ಪರ್ಧಿಸಿದ್ದರು. ಶಿವಮೊಗ್ಗ ನಾಗರಾಜ್ ಎರಡನೇ ಬಹುಮಾನ ಪಡೆದಿದ್ದಾರೆ.
ಪೆಂಡಮಿಕ್(ಸಾಂಕ್ರಾಮಿ ರೋಗಗಳು) ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದು, ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬನನ್ನು ಅವಸರವಾಗಿ ಆಸ್ಪತ್ರೆಗೆ ಸಾಗಿಸುವ ಮತ್ತು ಆ ವ್ಯಕ್ತಿಯ ಸಂಬಂಧಿಕರ ಆತಂಕದ ಚಿತ್ರವನ್ನು ಇವರು ಸೆರೆಹಿಡಿದಿದ್ದರು. ಇದೊಂದು ಮಾನವೀಯತೆಯ ಚಿತ್ರವಾಗಿತ್ತು. ಇದನ್ನು ಮಾನ್ಯ ಮಾಡಿದ ತೀರ್ಪುಗಾರರ ತಂಡವು ನಾಗರಾಜ್ ಅವರಿಗೆ ಈ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯ ಮೊತ್ತ ಹಾಗೂ ಪದಕವನ್ನು ನಾಗರಾಜ್ ಈಗಾಗಲೇ ಪಡೆದಿದ್ದಾರೆ.


ಶಿವಮೊಗ್ಗ ನಾಗರಾಜ್ ಈಗಾಗಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಈ ಹಿಂದೆ ನ್ಯೂಯಾರ್ಕ್, ನಾರ್ತ್ ಮೆಸಿಡೋನಿಯಾ, ಬಾಂಗ್ಲಾದೇಶ, ಶ್ರೀಲಂಕಾ, ಭಾರತ ಸೇರಿದಂತೆ ಹಲವು ಛಾಯಾಗ್ರಾಹಕ ಸಂಸ್ಥೆಗಳು ನಡೆಸಿದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ರಾಜ್ಯ, ರಾಷ್ಟ್ರಕ್ಕೂ ಗೌರವ ತಂದುಕೊಟ್ಟಿದ್ದಾರೆ. ನಾಗರಾಜ್ ಮೂಲತಃ ಪರಿಸರ ಛಾಯಾಗ್ರಾಹಕರಾಗಿದ್ದಾರೆ. ಪತ್ರಿಕೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರು ತೆಗೆದ ಹಕ್ಕಿಗಳ ಫೋಟೋಗಳು ಯುಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕ ಹೆಸರು ಮಾಡಿವೆ. ಅನೇಕ ಬಾರಿ ಛಾಯಾ ಚಿತ್ರ ಪ್ರದರ್ಶನ ನಡೆಸಿದ ನಾಗರಾಜ್ ಅವರ ಕ್ಯಾಮೆರಾದ ಕಣ್ಣಿನಲ್ಲಿ ಪ್ರೀತಿ, ಅಂತಃಕರಣ, ವಿಸ್ಮಯ ಚೆಲುವು, ಮಾನವೀಯತೆ ಬಡತನ, ರಾಜಕೀಯ ಸೇರಿದಂತೆ ಹಲವು ವಿಷಯ ಅಡಕವಾಗಿದ್ದು, ಇವರ ಸಾಧನೆಗೆ ಗೆಳೆಯರ ಬಳಗ ಅಭಿನಂದನೆ ಸಲ್ಲಿಸಿದೆ. ಮತ್ತಷ್ಟು ಎತ್ತರಕ್ಕೆ ಬೆಳೆಯಲ್ಲಿ ಎಂದು ಅವರನ್ನು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here