ಸುಳ್ಳು ಹೇಳಿ ಅಮಾನತಾದ ಕೊಟ್ಟೂರು ಠಾಣೆ ಐವರು ಪೊಲೀಸರು

0
526

ಕೊಟ್ಟೂರು:ಜೂನ್:06:-ಅಮಾನತಾದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸಹಕಾರಿಯಾಗುವಂತೆ ಇಲಾಖಾ ತನಿಖಾ ವಿಚಾರಣೆ ವೇಳೆ ಸುಳ್ಳು ಹೇಳಿದ್ದರಿಂದ ಕೊಟ್ಟೂರು ಠಾಣೆಯ ಐವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕುಮಾರ ಪತ್ರಿ, ಹ್ಯಾಟಿ ಬಸವರಾಜ್, ಕವಿತಾಬಾಯಿ, ತಿಪ್ಪಣ್ಣ ಹಾಗೂ ಬಸವರಾಜ ಅಮಾನತುಗೊಂಡವರು.
ಕಾರಣ: ಕಳೆದ
ಮೇ 14ರಂದು ನಡೆದ ಸಭೆಯಲ್ಲಿ ಪಿಎಸ್‌ಐ ವಿಜಯಕೃಷ್ಣ ಅವರು ಅಕ್ರಮ ಮರಳು ಸಾಗಾಣಿಕೆ ಸಂಬಂಧ ಹೆಚ್ಚಿನ ದೂರುಗಳು ಬಂದಿದ್ದು, ಆ ಪ್ರದೇಶಕ್ಕೆ ನಿಮ್ಮನ್ನು ನಿಯೋಜಿಸಲಾಗಿದ್ದು, ಗಸ್ತು ತಿರುಗಬೇಕೆಂದು ಕಾನ್‌ಸ್ಟೆಬಲ್ ಉತ್ತಂಗಿ ಕೊಟ್ರಗೌಡ ಅವರಿಗೆ ಸೂಚಿಸಿದ್ದರು. ಆದರೆ, ಕಾನ್‌ಸ್ಟೆಬಲ್ ಉತ್ತಂಗಿ ಕೊಟ್ರಗೌಡ ಆ ಬೀಟ್ ನನ್ನದಲ್ಲ, ನಾನು ಅಲ್ಲಿಗೆ ಹೋಗುವುದಿಲ್ಲ ಎಂದು ಪಿಎಸ್‌ಐ ವಿರುದ್ಧ ಏಕವಚನದಲ್ಲಿ ಮಾತನಾಡಿ ಅವರಿಗೆ ಬೆದರಿಕೆ ಹಾಕಿದ್ದ.

ಠಾಣಾಧಿಕಾರಿ ಮಾಹಿತಿ ಮೇರೆಗೆ ಎಸ್ಪಿ ಡಾ. ಅರುಣ್ ಕೆ. ಅವರು ಮೇ 17ರಂದು ಉತ್ತಂಗಿ ಕೊಟ್ರಗೌಡ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದರು. ನಂತರ ಇಲಾಖಾ ತನಿಖಾ ವಿಚಾರಣೆಗೆ ಆದೇಶಿಸಿದ್ದರು.

ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ವಿ.ಎಸ್. ಅವರು ಕೈಗೊಂಡಿದ್ದ ತನಿಖೆ ವೇಳೆ ಐವರು ಪೊಲೀಸರು, ಉತ್ತಂಗಿ ಕೊಟ್ರಗೌಡ ಅವರಿಗೆ ಸಹಕಾರಿಯಾಗುವಂತೆ ಸುಳ್ಳು ಹೇಳಿದ್ದರು. ಬಳಿಕ ತನಿಖಾಧಿಕಾರಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಸಭೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಉತ್ತಂಗಿ ಕೊಟ್ರಗೌಡ ದುರ್ವರ್ತನೆ ತೋರಿರುವುದು ಗೊತ್ತಾಗಿದೆ. ಸತ್ಯ ಗೊತ್ತಿದ್ದರೂ ಸುಳ್ಳು ಹೇಳಿ ದುರ್ ವರ್ತನೆ, ಅಶಿಸ್ತು ತೋರಿದ್ದರಿಂದ ಐವರನ್ನು ನಿನ್ನೆ ಅಮಾನತುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here