ವಿಮ್ಸ್‍ನಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮ, ಕಾನೂನುಬದ್ಧ ದತ್ತುಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಲಿ: ನ್ಯಾ.ಪುಷ್ಪಾಂಜಲಿದೇವಿ

0
147

ಬಳ್ಳಾರಿ,ನ.29 : ಯಾವುದೇ ವ್ಯಕ್ತಿ ಎಂತಹುದೇ ಉದ್ದೇಶಕ್ಕಾಗಿ ಮಕ್ಕಳನ್ನು ಮಾರುವುದು ಅಥವಾ ಕೊಳ್ಳುವ ಅಪರಾಧವನ್ನು ಮಾಡಿದ್ದೇ ಆದಲ್ಲಿ ಅಂತಹ ವ್ಯಕ್ತಿಗಳಿಗೆ 05ವಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್.ಪುಷ್ಪಾಂಜಲಿದೇವಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಮ್ಸ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ವಿಮ್ಸ್‍ನ ವೈದ್ಯಕೀಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ರೀತಿಯ ಅಪರಾಧವನ್ನು ಮಗುವಿನ ಸುಪರ್ದಿ ಹೊಂದಿರುವ ವ್ಯಕ್ತಿ, ಹೆರಿಗೆ ಆಸ್ಪತ್ರೆ ಅಥವಾ ನರ್ಸಿಗ್ ಹೋಂನ ಸಿಬ್ಬಂದಿ ಮಾಡಿದ್ದೇ ಆದಲ್ಲಿ ಅಂತಹವರಿಗೆ 03 ವರ್ಷಗಳವರೆಗೆ ಕಡಿಮೆ ಇಲ್ಲದಂತೆ 07 ವರ್ಷಗಳಿಗೆ ವಿಸ್ತಿರಿಸಬಹುದಾದ ಕಾರಾಗೃಹದ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ವಿವರಿಸಿದ ಅವರು ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುವಂತೆ ಸೂಚಿಸಿದರು.
ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವುದು. ದತ್ತು ಪೋಷಕರಿಗೆ ವಿಶೇಷ ದತ್ತು ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಭೇಟಿ ಮಾಡಲು ಹಾಗೂ ಕಡ್ಡಾಯವಾಗಿ ಆಪ್ತಸಮಾಲೋಚನೆಗೆ ಒಳಗಾಗುವಂತೆ ತಿಳಿಸುವುದು. ಜೈವಿಕ ತಾಯಿ ಮಗುವನ್ನು ಒಪ್ಪಿಸಲು ಇಚ್ಛಿಸಿದಾಗ ಮಗುವನ್ನು ಹಿಂದಕ್ಕೆ ಪಡೆಯಲು ಮನವೊಲಿಸುವುದು, ಒಂದು ವೇಳೆ ಒಪ್ಪದಿದ್ದಲ್ಲಿ ತಾಯಿಯನ್ನು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂರ್ಪಕಿಸಲು ತಿಳಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಎಂ.ಡಿ.ಪವಿತ್ರಾ ಅವರು ಮಾತನಾಡಿ ಮಕ್ಕಳ ರಕ್ಷಣೆ ಪೋಷಣೆ ಸಂಸ್ಥೆಗಳಲ್ಲಿರುವ ಯಾವುದೇ ಸಿಬ್ಬಂದಿ ಅಥವಾ ಅದರ ಉಸ್ತುವಾರಿಯಲ್ಲಿರುವ ವ್ಯಕ್ತಿಗಳು ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ದೈಹಿಕ ಶಿಕ್ಷೆ ನೀಡಿದ್ದೇ ಆದಲ್ಲಿ ಅಂತಹ ವ್ಯಕ್ತಿಗಳಿಗೆ ಮೊದಲು ಅಪರಾಧಕ್ಕೆ ರೂ.10 ಸಾವಿರ ದಂಡ ಮತ್ತು ಮುಂದಿನ ಪ್ರತಿ ಅಪರಾಧಕ್ಕೆ 03 ತಿಂಗಳ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನು ವಿಧಿಸಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ ಅವರು ಮಾತನಾಡಿ, ಮಗು ಹಾಗೂ ಜೈವಿಕ ಪೋಷಕರ ಸಂಬಂಧವನ್ನು ಕಾನೂನು ಬದ್ಧವಾಗಿ ಕೊನೆಗಾಣಿಸಿ ಮಗು ಮತ್ತು ದತ್ತು ಪೋಷಕರ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬಲಪಡಿಸುವ ಕಾನೂನು ಬದ್ಧ ಪ್ರಕ್ರಿಯೆವಾಗಿರುತ್ತದೆ. ಜೈವಿಕ ಮಗು ಹೊಂದಿರುವಂತಹ ಎಲ್ಲಾ ಹಕ್ಕುಗಳು ಮತ್ತು ಜವಾಬ್ದಾರಿಗಳು ಹಾಗೂ ಸವಲತ್ತುಗಳನ್ನು ದತ್ತು ಮಗು ಕೂಡ ಹೊಂದಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಮಾತನಾಡಿ, ದತ್ತು ಕಾರ್ಯಕ್ರಮ ಪ್ರಕ್ರಿಯೆ ಮತ್ತು ಕಾನೂನಿನಲ್ಲಿರುವ ಅವಕಾಶಗಳು ಕುರಿತು ಎಲ್ಲಾ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಮತ್ತು ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂಗಳಿಗೆ ತಿಳಿಸಬೇಕು ಎಂದರು.
ಅಕ್ರಮ ದತ್ತು ಅಪರಾಧ ಎಂಬ ಕುರಿತು ಬೋರ್ಡ್ ಹಾಕುವುದು. ನರ್ಸಿಂಗ್ ಹೋಂ ಅಥವಾ ಆಸ್ಪತ್ರೆ ಸ್ವಾಗತ ಕೇಂದ್ರಗಳಲ್ಲಿ ದತ್ತು ಸಂಸ್ಥೆಯ ಮಾಹಿತಿಯನ್ನು ಒದಗಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು ಅವರು ದತ್ತು ಕಾರ್ಯಕ್ರಮ, ಕಾನೂನು ಪ್ರಕ್ರಿಯೆ ಮತ್ತು ಪ್ರಸ್ತುತ ಜಾಲ್ತಿಯಲ್ಲಿರುವ ದತ್ತು ಸಂಬಂಧಿಸಿದ ಕಾನೂನುಗಳ ಬಗ್ಗೆ ವಿವರವಾಗಿ ತಿಳಿಸಿದರು. ಹಾಗೂ ದತ್ತು ಕಾರ್ಯಕ್ರಮವನ್ನು ಉತ್ತೇಜಿಸಲು ನೀಡಬೇಕಾದ ಮಾಹಿತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಕಾನೂನಿನಲ್ಲಿರುವ ದಂಡನಾ ಕ್ರಮಗಳು ಬಗ್ಗೆ ಸಂಪೂರ್ಣ ಮಾಹಿತಿ ನರ್ಸಿಂಗ್ ಹೆರಿಗೆ ಮತ್ತು ಪ್ರಸೂತಿ ವಿಭಾಗದ ವಿದ್ಯಾರ್ಥಿ ನರ್ಸಿಂಗ್ ಹೋಂ ವಿದ್ಯಾರ್ಥಿಗಳಿಗೆ ಹಾಗೂ ವ್ಯಧ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕಾನೂನು ಮಾಹಿತಿಯನ್ನು ಈ ಸಂದರ್ಭದಲ್ಲಿ ತಿಳಿಸಿಕೊಟ್ಟರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರಾಜಾನಾಯ್ಕ ಎಸ್ ಮತ್ತು ಡಾನ್‍ಬಾಸ್ಕೋ ಜಿಲ್ಲಾ ಸಂಯೋಜಕ ಗಣೇಶ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಮ್ಸ್ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ,ವಿಮ್ಸ್ ಸಿಇಒ ಚನ್ನಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಆಶ್ವಿನಿಕುಮಾರ್ ಸಿಂಗ್, ವಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ದುರುಗಪ್ಪ, ಪ್ರಾಧ್ಯಾಪಕರು ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಸುಮಾನ್ ಗಡ್ಡಿ, ಮಕ್ಕಳ ರಕ್ಷಣಾಧಿಕಾರಿಗಳಾದ ಡಿ.ಗಂಗಾಧರ್,ಚನ್ನಬಸಪ್ಪ ಪಾಟೀಲ್, ಈಶ್ವರರಾವ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here