ಹಿಂದುಳಿದ ವರ್ಗಗಳ ಆಯೋಗದಿಂದ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ, ಬೇಡಿಕೆ ಸಲ್ಲಿಸಿರುವ ಇತರೆ ಜಾತಿಗಳ ಕುರಿತೂ ಅಧ್ಯಯನ ಕೈಗೊಳ್ಳುತ್ತೇವೆ- ಜಯಪ್ರಕಾಶ್ ಹೆಗ್ಡೆ.

0
184

ದಾವಣಗೆರೆ ಡಿ. 22: ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿ 3ಬಿ ಯಿಂದ 2ಎ ಗೆ ಸೇರ್ಪಡಗೊಳಿಸುವುದಕ್ಕೆ ಸಂಬಂಧ ದಾವಣಗೆರೆ ಜಿಲ್ಲೆಯಿಂದಲೇ ಅಧ್ಯಯನ ಪ್ರಾರಂಬಿಸಿದ್ದು, ಇದರ ಜೊತೆ ಜೊತೆಗೆ, ಆಯೋಗಕ್ಕೆ ಬೇಡಿಕೆ ಸಲ್ಲಿಸಿರುವ ಇತರೆ ಜಾತಿ, ಸಮುದಾಯಗಳ ಕುರಿತೂ ಸಮೀಕ್ಷೆ, ಅಧ್ಯಯನವನ್ನು ಆಯೋಗವು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದರು.

ವಿವಿಧ ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಮಾಹಿತಿ ಸಂಗ್ರಹಣೆ ಮತ್ತು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿ 3ಬಿ ಯಿಂದ 2ಎ ಗೆ ಸೇರ್ಪಡಗೊಳಿಸುವುದಕ್ಕೆ ಸಂಬಂಧ ಈಗಾಗಲೆ ಸಮೀಕ್ಷೆ ಹಾಗೂ ಅಧ್ಯಯನ ಪ್ರಾರಂಭಿಸಿದ್ದೇವೆ. ಈಗಾಗಲೆ ಕೆಲ ಹಿಂದುಳಿದ ಜಾತಿ ಪಟ್ಟಿಯಲ್ಲಿರುವ ಸಮಾಜಗಳು ತಮ್ಮನ್ನು ಬೇರೆ ಬೇರೆ ವರ್ಗಗಳಿಗೆ ಸೇರಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಲ್ಲದ ಕೆಲ ಜಾತಿಗಳು ತಮ್ಮನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿವೆ, ಹಾಗಾಗಿ ಬೇಡಿಕೆ ಇರುವ ಎಲ್ಲಾ ಜಾತಿಗಳವರ ಮನವಿಗಳನ್ನೂ ಪರಿಶೀಲಿಸಲಾಗುವುದು. ಬೇರೆ ಬೇರೆ ಜಾತಿ, ವರ್ಗಗಳ ಅಧ್ಯಯನಕ್ಕಾಗಿ ಆಯೋಗವು ಪ್ರತ್ಯೇಕವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಅಧ್ಯಯನ ನಡೆಸುವುದು ಸಮಂಜಸವಲ್ಲ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಧ್ಯಯನ ಮಾಡುವುದರ ಜೊತೆ, ಜೊತೆಗೆ, ವಿವಿಧ ಜಾತಿ, ಸಮುದಾಯದ ಜನರ ಸಂಸ್ಕøತಿ, ಜೀವನೋಪಾಯ, ಬದುಕಿನ ಇತರೆ ಆಯಾಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ವರ್ಗ 1 ರಲ್ಲಿ 95, 2ಎ ನಲ್ಲಿ 102, 3ಎ-03 ಹಾಗೂ 3ಬಿ ರಲ್ಲಿ 06 ಜಾತಿಗಳು ಇವೆ. ಆದರೆ ಇವೆಲ್ಲವುಗಳಲ್ಲಿ ಉಪಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ಯಾವ ಜಾತಿ, ಯಾವ ವರ್ಗಕ್ಕೆ ಹೋದಾಗ, ಪರಿಸ್ಥಿತಿ ಏನಾಗಬಹುದು ಎಂಬೆಲ್ಲ ಅಂಶಗಳನ್ನೂ ನಾವು ಅಧ್ಯಯನ ನಡೆಸಬೇಕಾಗುತ್ತದೆ. ರಾಜ್ಯದ 9-10 ಜಿಲ್ಲೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಯೋಜಿಸಲಾಗಿದೆ.

ರಾಜ್ಯದ ಅನಾಥಾಶ್ರಮದಲ್ಲಿರುವ ಅನಾಥ ಮಕ್ಕಳಿಗೆ ಸಂಬಂಧಿಸಿದಂತೆ ಅವರು ಯಾವ ಜಾತಿ, ವರ್ಗಗಳಿಗೆ ಸೇರುತ್ತಾರೆಂಬುದನ್ನು ಪರಿಶೀಲಿಸಿಲು ನಿರ್ಧರಿಸಲಾಗಿದೆ. ಅನಾಥ ಮಕ್ಕಳ ಜಾತಿ ನಿರ್ಧಾರ ಕುರಿತಂತೆ ಈಗಾಗಲೆ ತೆಲಂಗಾಣ, ರಾಜಸ್ಥಾನ ರಾಜ್ಯದಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು ಇರುವ ಅನಾಥ ಮಕ್ಕಳು ಎಷ್ಟು, ಅವರ ಪ್ರಸ್ತುತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತಂತೆಯೂ ವರದಿ ಸಂಗ್ರಹಿಸಿ, ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಿ ಹಾಗೂ ಬಾಲಕರಿಗಾಗಿ ಪ್ರತ್ಯೇಕ ಬಾಲಮಂದಿರಗಳಿವೆ. ಅನಾಥವಾಗಿರುವ 18 ಬಾಲಕಿಯರು, 19 ಬಾಲಕರಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಏಕ ಪೋಷಕರಿರುವ 49 ಮಕ್ಕಳು ಇದ್ದರೆ, 14 ಮಕ್ಕಳು ತಂದೆ, ಅಥವಾ ತಾಯಿ ಇದ್ದರೂ ಕಡುಬಡವರ ಮಕ್ಕಳಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ 03 ಮಕ್ಕಳಿದ್ದರೆ, 373 ಮಕ್ಕಳು ಏಕ ಪೋಷಕರನ್ನು ಹೊಂದುವಂತಾಗಿದೆ. ಸಂಪೂರ್ಣ ಅನಾಥರಾಗಿರುವ, ತಂದೆ ತಾಯಿ ಯಾರೆಂದು ತಿಳಿಯದಿರುವ ಮಕ್ಕಳಿಗೆ ಜಾತಿ ಪ್ರಮಾಣಪತ್ರ ನೀಡಿಕೆಯಲ್ಲಿ ಸಮಸ್ಯೆ ಇದೆ ಎಂದರು. ಅನಾಥ ಮಕ್ಕಳ ಸಂಪೂರ್ಣ ವಿವರವನ್ನು ಆಯೋಗಕ್ಕೆ ಸಲ್ಲಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು.
ಉಪಜಾತಿಗಳಿಗೆ ಜಾತಿ ದೃಢೀಕರಣ ಸಮಸ್ಯೆ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾತನಾಡಿ, ಕುಂಬಾರ, ಗಾಣಿಗ, ಮಡಿವಾಳ, ಹಡಪದ ಮುಂತಾದ ವೃತ್ತಿಯ ಸಮಾಜದವರು ಹಲವು ವರ್ಷಗಳ ಹಿಂದೆ, ದಾಖಲಾತಿಗಳಲ್ಲಿ ತಮ್ಮ ಉಪಜಾತಿಯ ಹಿಂದೆ ಲಿಂಗಾಯತ ಎನ್ನುವ ಪದ ಬಳಸಿ ನೀಡಿದ ಪರಿಣಾಮವಾಗಿ, ಅವರೆಲ್ಲರೂ 3ಬಿ ವರ್ಗದಲ್ಲಿನ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆದರೆ ವಾಸ್ತವವಾಗಿ ಅವರು, ಕುಂಬಾರ, ಗಾಣಿಗ, ಮಡಿವಾಳ, ಹಡಪದ ಮೊದಲಾದ ವರ್ಗದವರೇ ಆಗಿದ್ದಾರೆ. ಹೀಗಿದ್ದರೂ, ಅವರಿಗೆ ನಿಯಮದನ್ವಯ 2ಎ ಪ್ರಮಾಣಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಆಯೋಗವು ಇವೆಲ್ಲವುಗಳನ್ನೂ ಪರಿಶೀಲಿಸುವುದು ಅಗತ್ಯವಾಗಿದೆ ಎಂದರು. ಚನ್ನಗಿರಿ ತಹಸಿಲ್ದಾರ್ ಪಟ್ಟರಾಜಗೌಡ ಮಾತನಾಡಿ, ಶಾಲೆಗೇ ಹೋಗದ, ವಿದ್ಯಾಭ್ಯಾಸ ಮಾಡಿರದವರಿಗೆ ಜಾತಿ ದೃಢೀಕರಣ ಪತ್ರ ನೀಡುವುದು ಸಮಸ್ಯೆಯಾಗುತ್ತಿದೆ, ಅಂತಹವರ ತಂದೆ, ಸಹೋದರ, ಸಹೋದರಿಯ ಜಾತಿ ಪ್ರಮಾಣಪತ್ರ ಪಡೆದು, ನಿರ್ಧಾರ ಕೈಗೊಳ್ಳಲಾಗುತ್ತಿದೆ. ಗಾಣಿಗ, ಮಡಿವಾಳ, ಕುಂಬಾರ ಮುಂತಾದ ಹಿಂದುಳಿದ ವರ್ಗಗಳಿಗೆ ಒಬಿಸಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರು. ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಪ್ರತಿಕ್ರಿಯಿಸಿ, ಜಾತಿಯನ್ನು ತಂದೆಯ ಜಾತಿ ಆಧರಿಸಿಯೇ ಪ್ರಮಾಣಪತ್ರ ನೀಡಬೇಕಾಗುತ್ತದೆ. ಪ್ರಸ್ತುತ ಸರ್ಕಾರದ ನಿಯಮಗಳು ಏನಿವೆಯೋ, ಅಧಿಕಾರಿಗಳನ್ನು ಅದನ್ನೇ ಪಾಲಿಸಬೇಕು. ಆಯೋಗವು, ವರದಿ ಸಲ್ಲಿಸಿದ ಬಳಿಕ, ಸರ್ಕಾರ ತೀರ್ಮಾನ ಕೈಗೊಳ್ಳುವವರೆಗೂ, ಯಾವುದನ್ನೂ ಬದಲಾವಣೆ ಮಾಡುವುದು ಬೇಡ ಎಂದು ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಇಂತಹ ಯೋಜನೆಗಳ ಅನುಷ್ಠಾನದಲ್ಲಿರುವ ತೊಡಕುಗಳ ಬಗ್ಗೆಯೂ ಅಧ್ಯಯನ ನಡೆಸಲಾಗುವುದು. ಉದಾಹರಣೆಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‍ವೆಲ್ ಕೊರೆಯಿಸಿ, ವರ್ಷಾನುಗಟ್ಟಲೆ ಅವುಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದು ಕಂಡುಬಂದಿದೆ. ಇದೇ ರೀತಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿಯೂ ಯಾವುದಾದರೂ ಸಮಸ್ಯೆಗಳಿದ್ದಲ್ಲಿ, ವರದಿ ಸಂಗ್ರಹಿಸಿ, ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎನ್.ಆರ್.ಶೇಖರ್ ಮಾತನಾಡಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಒಟ್ಟು 07 ಅಭಿವೃದ್ಧಿ ನಿಗಮಗಳಿದ್ದು, ಗಂಗಾಕಲ್ಯಾಣ ಯೋಜನೆಯಡಿ 2018-19, 19-20 ನೇ ಸಾಲಿಗೆ ಸಂಬಂಧಿಸಿದಂತೆ ಪ್ರಕರಣ ರಾಜ್ಯ ಮಟ್ಟದಲ್ಲಿಯೇ ನ್ಯಾಯಾಲಯದಲ್ಲಿರುವುದರಿಂದ ಅನುಷ್ಟಾನ ಬಾಕಿ ಇದೆ. ಉಳಿದಂತೆ ಎಲ್ಲ ಯೋಜನೆಗಳಲ್ಲೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳು 50 ಲಕ್ಷ ರೂ. ಸಾಲ ವಸೂಲಾತಿ ಗುರಿ ಇದ್ದು, ಕೇವಲ 5 ರಿಂದ 10 ಲಕ್ಷ ರೂ. ವಸೂಲಿ ಆಗುತ್ತಿದೆ. ನಿಗಮದಿಂದ ನೀಡಲಾದ ಸಾಲ ಸೌಲಭ್ಯ ಮನ್ನಾ ಆಗುವುದಿಲ್ಲ ಎಂಬ ಅರಿವು ಮೂಡಿಸಲಾಗುತ್ತಿದ್ದು, ವಸೂಲಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗಪ್ಪ ಅವರು ಮಾತನಾಡಿ, 2015 ರಲ್ಲಿ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 19.59 ಲಕ್ಷ ಜನಸಂಖ್ಯೆಯಿದ್ದು, ಒಟ್ಟು 4.31 ಲಕ್ಷ ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಗೆ ಇನ್ನೂ 3 ಹಾಸ್ಟೆಲ್‍ಗಳ ಅಗತ್ಯವಿದ್ದು, ನಿವೇಶನ ಲಭ್ಯವಿದೆ, ಆದರೆ ಕಟ್ಟಡ ನಿರ್ಮಾಣಕ್ಕ ಅನುದಾನ ಬಿಡುಗಡಯಾಗಬೇಕಿದೆ, ಹೆಚ್ಚುವರಿ ವಿದ್ಯಾರ್ಥಿಗಳಿಗಾಗಿ ಇನ್ನೂ 400 ಹಾಸಿಗೆ, ಹಾಗೂ 200 ಮಂಚಗಳ ಅಗತ್ಯವಿದೆ. ಜಾತಿ ಸಿಂಧುತ್ವ ಪ್ರಮಾಣಪತ್ರಕ್ಕೆ ಈ ಹಿಂದೆ ಕೇವಲ ಜಿಲ್ಲಾಧಿಕಾರಿಗಳು ಹಾಗೂ ಬಿಸಿಎಂ ಅಧಿಕಾರಿಗಳು ಮಾತ್ರ ಸಹಿ ಹಾಕುವ ಪದ್ಧತಿ ಇತ್ತು. ಇಲಾಖೆಯ ಸೂಚನೆಯಂತೆ ಇದೀಗ, ಜಿಲ್ಲಾಧಿಕಾರಿಗಳು, ಬಿಸಿಎಂ ಅಧಿಕಾರಿಗಳ ಜೊತೆಗೆ ತಹಸಿಲ್ದಾರರು, ಆಯಾ ತಾಲೂಕು ಕಲ್ಯಾಣಾಧಿಕಾರಿ ಕೂಡ ಸಿಂಧುತ್ವ ಪ್ರಮಾಣಪತ್ರಕ್ಕೆ ಸಹಿ ಮಾಡಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇದು ಸಿಂಧುತ್ವ ಪ್ರಮಾಣ ಪತ್ರ ನೀಡಿಕೆಯಲ್ಲಿ ಅನಗತ್ಯ ವಿಳಂಬವಾಗಲು ಕಾರಣವಾಗುತ್ತದೆ. ಆಯೋಗವು ಇದನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಹೇಳಿದರು.
ಎಲ್ಲ ವಿಶ್ವವಿದ್ಯಾಲಯಗಳು, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಸರ್ಕಾರದ ಎಲ್ಲ ಇಲಾಖಾ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳ ಜಾತಿ, ವಿದ್ಯಾರ್ಹತೆ, ಹುದ್ದೆ ಸೇರಿದಂತೆ ಹಲವು ವಿವರಗಳನ್ನು ಒದಗಿಸುವಂತೆ ಕೋರಿ ಆಯೋಗವು ಈಗಾಗಲೆ ನಮೂನೆ ಸಿದ್ದಪಡಿಸಿ, ಆಯಾ ಇಲಾಖೆಗಳಿಗೆ ಸಲ್ಲಿಸಿದ್ದು, ಕೆಲವು ಇಲಾಖೆಗಳು ವರದಿ ನೀಡಿವೆ. ಎಲ್ಲ ಇಲಾಖೆಗಳಿಂದ ಮಾಹಿತಿ ಬಂದ ಬಳಿಕ, ಇದರ ಬಗ್ಗೆಯೂ ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರುಗಳಾದ ರಾಜಶೇಖರ್, ಕಲ್ಯಾಣಕುಮಾರ್, ಕೆ.ಟಿ. ಸುವರ್ಣ, ಅರುಣ್‍ಕುಮಾರ್. ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ರಿಷ್ಯಂತ್ ಸಿ.ಬಿ., ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here