ಯೇಸು ಕ್ರಿಸ್ತನ ಕುರಿತಾದ ಒಂದೆರಡು ಕಿರು ಓದುಗಳು

0
57

ಯೇಸು ಕ್ರಿಸ್ತನ ಬಗೆಗೆ ಆಗಾಗ ಅಲ್ಲಲ್ಲಿ ಕಥೆ ಕೇಳಿದ್ದು, ಒಂದಷ್ಟು ಕಥಾನಕಗಳಲ್ಲಿ ಓದಿದ್ದು, ನನ್ನ ಆತ್ಮೀಯ ಗೆಳೆಯರೊಡನೆ ಹಾಗೂ ಕುಟುಂಬದವರೊಡನೆ ಸಹಾ ಚರ್ಚಿಗೆ ಹೋಗಿದ್ದು ಇತ್ಯಾದಿ ಮಾಡಿದ್ದುಂಟಾದರೂ ಒಂದಷ್ಟು ಆತ್ಮೀಯ ಓದು ಸಾಧ್ಯವಾದರೆ ಮಾಡಬೇಕು ಎಂಬ ಹಂಬಲ ಫಲಿಸಿದ್ದು ಜಿ. ಪಿ. ರಾಜರತ್ನಂ ಅವರ ‘ಯೇಸು ಕ್ರಿಸ್ತ’ ಎಂಬ ಈ ಪುಸ್ತಕದ ಮುಖೇನ.

ಜಿ. ಪಿ. ರಾಜರತ್ನಂ ಅವರು ಈ ಕೃತಿಯಲ್ಲಿರುವ ತಮ್ಮ ಬಿನ್ನಹದಲ್ಲಿ “ಇದು ಮಕ್ಕಳನ್ನು ಉದ್ದೇಶಿಸಿ ಬರೆದ ಜೀವನ ಕಥೆಯೇ ಹೊರತು ದೊಡ್ಡವರಿಗಾಗಿ ಬರೆದ ಜೀವನ ಚರಿತ್ರೆಯಲ್ಲವೆಂದು ತಿಳಿಸಬಯಸುತ್ತೇನೆ” ಎಂದು ಸ್ಪಷ್ಟಪಡಿಸುತ್ತಾರೆ. ನನಗೆ ಅರ್ಥವಾಗುವುದೂ ಕೂಡಾ ಇಂತಹ ಬರಹಗಳು ಮಾತ್ರವೇ!

ಈ ಕೃತಿಯನ್ನು ಓದಿದಾಗ ನನಗರಿವಿಲ್ಲದಂತೆ ಇದೆಲ್ಲೋ ನಮ್ಮ ಕೃಷ್ಣನ ಕಥೆಯನ್ನೇ ಹೋಲುತ್ತಿದೆಯಲ್ಲಾ ಎಂಬ ಭಾವನೆ ಮೂಡಿತು. ಬಹುಶಃ ಜಿ. ಪಿ. ರಾಜರತ್ನಂ ಅವರ ಅಪ್ಯಾಯಮಾನವಾದ ಶೈಲಿಯಿಂದ ನನಗೆ ಹಾಗನ್ನಿಸಿರಲಿಕ್ಕೆ ಸಾಧ್ಯ.

ಯೇಸು ಮತ್ತು ಕೃಷ್ಣರ ಹೊಂದಾಣಿಕೆ ನನ್ನಲ್ಲಿ ಮೂಡಲು ನಾನು ಓದಿದ ಗೋವಿಂದ ಪೈ ಅವರ ಕುರಿತ ಬರಹದಲ್ಲಿದ್ದ ಈ ಮಾತುಗಳು ಕೂಡಾ ಕಾರಣವಿದ್ದಿರಬಹುದು. “ಎಲ್ಲಿಯ ಕೃಷ್ಣ – ಎಲ್ಲಿಯ ಕ್ರಿಸ್ತ? ಆದರೆ ಗೋವಿಂದ ಪೈ ಅವರ ಆದ್ಯಾತ್ಮಿಕ ಪ್ರಜ್ಞೆಗೆ ಆ ಇಬ್ಬರೂ ಒಂದೇ ಶಕ್ತಿಯ ಎರಡು ಅವತಾರಗಳೆಂಬ ಪೂಜ್ಯಭಾವನೆ! ಸಂಪ್ರದಾಯಬದ್ಧವಾದ ಧಾರ್ಮಿಕ ಪ್ರಪಂಚದಲ್ಲಿ ಇದಕ್ಕಿಂತಲೂ ಕ್ರಾಂತಿಕಾರಕವಾದ ತರ್ಕವನ್ನು ಹೂಡಲು ಸಾಧ್ಯವೇ? ಪೈ ಅವರು ತಮ್ಮ ‘ಯೇಸುಕೃಷ್ಣ’ ಎಂಬ ಕವಿತೆಯಲ್ಲಿ ಈ ಅಸದೃಶ ಸಾಮ್ಯವನ್ನು ಎತ್ತಿ ತೋರಿಸಿದ್ದಾರೆ. ಕೃಷ್ಣನು ಸೆರೆಮನೆಯಲ್ಲಿ ಹುಟ್ಟಿದರೆ, ಯೇಸುವು ದನದ ಕೊಟ್ಟಿಗೆಯಲ್ಲಿ ಹುಟ್ಟಿದವನು. ಒಬ್ಬ ಕೊಳಲೂದಿ ದನಗಾಹಿ ಎನಿಸಿದರೆ, ಇನ್ನೊಬ್ಬ ಬಡಗಿಯ ಕೆಲಸವನ್ನು ಅವಲಂಬಿಸಿದವನು. ಒಬ್ಬ ರಾಧೆಯ ಪ್ರೇಮಪಾಶದಲ್ಲಿ ಬಂಧಿತನಾದರೆ, ಇನ್ನೊಬ್ಬ ಮಗ್ದಲದ ಮರಿಯಳ ಅನುರಾಗಕ್ಕೆ ಪಾತ್ರನಾಗುತ್ತಾನೆ. ಒಬ್ಬ ಕೌರವನಿಂದ ಬಂಧಿತನಾದರೆ, ಇನ್ನೊಬ್ಬನು ತನ್ನವರ ಮೂಲಕವೇ ತಲೆಗೆ ಮುಳ್ಳಿನ ಕಿರೀಟವನ್ನು ತೊಡಬೇಕಾಗುತ್ತದೆ. ಈ ತೆರನಾದ ಸಾದೃಶ್ಯ ಪರಂಪರೆಯನ್ನು ಪಟ್ಟಿ ಮಾಡಿ, ಕಡೆಗೆ ಪೈ ಅವರು “ಯದುನಾಥನೆ ಯೂದನಾಥನಲ್ಲವೇ?” ಎಂದು ವಿಸ್ಮಯಚಕಿತರಾಗುವರು.”

ಒಂದಂತೂ ನಿಜ, ಧಾರ್ಮಿಕ ವಿಚಾರಗಳನ್ನು ಪ್ರಚಾರ ಮಾಡುವವರಿಗಿಂತ ಹೃದಯವಂತ ವ್ಯಕ್ತಿಗಳು ದೊಡ್ಡ ವ್ಯಕ್ತಿತ್ವಗಳ ಪರಿಚಯ ಮಾಡಿಕೊಟ್ಟಾಗ ಅದು ನಮ್ಮಂತಹ ಸಾಮಾನ್ಯ ಬುದ್ಧಿಮತ್ತೆಯ ಹೃದಯ ಮತ್ತು ಚಿಂತನೆಗಳನ್ನು ಮುಟ್ಟುವ ಪರಿ ಅಸದೃಶವಾದದ್ದು. ಜಿ. ಪಿ. ರಾಜರತ್ನಂ ಮತ್ತು ಗೋವಿಂದ ಪೈ ಅಂತಹ ಹಿರಿಯರಿಗೆ ನಾವು ಎಷ್ಟು ನಮಿಸಿದರೂ ಸಾಲದು.

ಕೃಪೆ:-‘ಕನ್ನಡ ಸಂಪದ’

LEAVE A REPLY

Please enter your comment!
Please enter your name here