ವಿಶ್ವ ಮಾನವನಿಗೆ ನಮನ,ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ

0
84

ದಾವಣಗೆರೆ, ಡಿ. 29:ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಗಣ್ಯಮಾನ್ಯರಿಂದ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರು ಹಾಗೂ ಸಾಹಿತಿಗಳೂ ಆದ ಬಿ.ಎನ್. ಮಲ್ಲೇಶ್ ಮಾತನಾಡಿ, ಕುವೆಂಪು ರವರು ನಾವುಗಳು ಕೇವಲ ಮನುಷ್ಯ ಅಥವಾ ಮಾನವರಾಗದೇ ವಿಶ್ವ ಮಾನವರಾಗೋಣ ಎಂದಿದ್ದಾರೆ. ಅಂತಹ ಮಹನೀಯರನ್ನು ಫೋಟೋಗಷ್ಟೇ ಸೀಮಿತಗೊಳಿಸದೆ ಅವರ ವಿಚಾರಧಾರೆ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನಮ್ಮ ನಡವಳಿಕೆಗಳಲ್ಲೂ ಬದಲಾವಣೆ ಮಾಡಿಕೊಳ್ಳೋಣ ಎಂದರು.

ಕನ್ನಡ ನಾಡು ನುಡಿಯ ಬಗೆಗೆ ಅಪಾರ ಅಭಿಮಾನ ಹೊಂದಿದ್ದ ಅವರು, ಕನ್ನಡ ಹೆಸರಷ್ಟೇ ಅಲ್ಲ, ಅದೊಂದು ಮಂತ್ರ, ಶಕ್ತಿ, ಮೈಮನಗಳನ್ನ ರೋಮಾಂಚನಗೊಳಿಸುವ ದಿವ್ಯ ಶಕ್ತಿ ಎಂದು ನಂಬಿದ್ದರು. ಇದರೊಂದಿಗೆ ಹೆಣ್ಣಿನ ಬಗೆಗೂ ಅಪಾರ ಗೌರವ ಹೊಂದಿದ್ದ ಅವರು, ಹಾಸ್ಯ ಪ್ರಜ್ಞೆಯ ಮೂಲಕ ಪ್ರಸಂಗವೊಂದನ್ನು ಹೇಳುತ್ತಿದ್ದರು. ಕಾಲ್ಪನಿಕವಾಗಿ ತಾನು ಮರಣಹೊಂದಿ ಸ್ವರ್ಗದ ಬಾಗಿಲಿಗೆ ಹೋದಾಗ ನಾನು ರಾಷ್ಟ್ರ ಕವಿ ಎಂದರೂ ಸ್ವರ್ಗದ ಬಾಗಿಲು ತೆರೆಯಲಿಲ್ಲ, ನಾನು ರಾಮಾಯಣ ದರ್ಶನಂ ಪುಸ್ತಕ ಬರೆದಿದ್ದೇನೆಂದರೂ ಬಾಗಿಲು ತೆರೆಯಲಿಲ್ಲ, ಕೊನೆಗೆ ನಾನು ಹೇಮಾವತಿಯ ಗಂಡ ಎಂದಾಗ ಸ್ವರ್ಗದ ಬಾಗಿಲು ತೆರೆಯಿತು ಎಂದು ಹೇಳುತ್ತಾ ನಾವು ಹೆಣ್ಣನ್ನ ಪೂಜಿಸಿದರೆ ಸಾಲದು, ಅವರಿಗೆ ಗೌರವ ಕೊಡಬೇಕು, ಅದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈ ಮೂಲಕ ಹೇಳಿದ್ದಾರೆ ಎಂದರು.

ವೈಚಾರಿಕತೆಗೂ ಬಹಳ ಒತ್ತುಕೊಟ್ಟಿದ್ದ ಅವರು ಮೂಢನಂಬಿಕೆ ಸೇರಿದಂತೆ ಅಜ್ಞಾನ ಹೋಗಲಾಡಿಸಿ, ವೈಚಾರಿಕತೆ ಬೆಳಸಿಕೊಳ್ಳಿ ಎಂದು ಯುವಜನಾಂಗಕ್ಕೆ ಕರೆ ನೀಡಿದ್ದು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಿದ್ದರೆಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕುವೆಂಪು ಅವರು ನೀಡಿರುವ ಮಾನವೀಯ ಮೌಲ್ಯಗಳು ಮತ್ತು ಬದುಕಿನ ಸಂದೇಶಗಳನ್ನ ಪುನರ್‍ಮನನ ಮಾಡಿಕೊಳ್ಳಬೇಕಾಗಿದೆ, ನಮ್ಮನ್ನು ನಾವು ಯಾವುದೇ ಧರ್ಮ, ಜಾತಿಗೂ ಕಟ್ಟಿಹಾಕಿಕೊಳ್ಳದೇ ಮನುಷ್ಯರಾಗಿ ಬದುಕೋಣ ಎಂದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಒಕ್ಕಲಿಗ ಸಮಾಜದ ಮುಖಂಡರಾದ ಅಶೋಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೌಸರ್ ರೇಷ್ಮ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನಜ್ಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು. ಕಾರ್ಯಕ್ರಮದ ಅಂಗವಾಗಿ ಕುವೆಂಪುರವರ ವಿಶ್ವ ಮಾನವ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಿದರು.

LEAVE A REPLY

Please enter your comment!
Please enter your name here