ಮಲೇರಿಯಾ ತಡೆಗಟ್ಟಲು ಎಲ್ಲಾ ಇಲಾಖೆಗಳು ಶ್ರಮಿಸಿ : ಜಿಲ್ಲಾಧಿಕಾರಿ

0
104

ದಾವಣಗೆರೆ -ಮಲೇರಿಯಾ ಪ್ರಕರಣಗಳು ಕಡಿಮೆ ಇದ್ದರು ಕೂಡ ನಮ್ಮ ಜಿಲ್ಲೆ ಇನ್ನೂ ಮಲೇರಿಯಾ ಮುಕ್ತವಾಗಿಲ್ಲ. ಹಾಗಾಗಿ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳ ಪಾತ್ರ ಪ್ರಮುಖವಾಗಿದ್ದು ಮಲೇರಿಯಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶೂನ್ಯ ಮಲೇರಿಯಾ ಗುರಿಯನ್ನು ತಲುಪಿ ಎಂಬ ಧೈಯವಾಕ್ಯದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ” ಕಾರ್ಯಕ್ರಮ ಹಾಗೂ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲ ಪ್ರಾರಂಭವಾಗಿದ್ದು, ಮಲೇರಿಯಾ ಹರಡುವ ಕಾಲ ಇದಾಗಿದೆ. ಹೀಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ಹರಿದುಹೋಗುವ ಚರಂಡಿಗಳನ್ನು ಶುಚಿಗೊಳಿಸಬೇಕು, ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಂಡು ಮಲೇರಿಯಾ ಹರಡದಂತೆ ಎಚ್ಚರವಹಿಸಬೇಕು ಎಂದರು.

ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವಚ್ಚತೆ ಇಲ್ಲದೇ ಹೋದಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮೈನಿಂಗ್ ಪ್ರದೇಶದ ವ್ಯಾಪ್ತಿಯ ಕ್ವಾರಿಗಳಲ್ಲಿ, ಟೈರು, ಎಳನೀರು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಟರಾಜ್ ಮಾತನಾಡಿ, 2025 ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿಯಾಗಿದೆ. 2015 ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 26 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, 2020ರಲ್ಲಿ ಕೇವಲ 4 ಪ್ರಕರಣಗಳು ಕಂಡುಬಂದಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಧಾನಕಾರ ಎಂದರು.

ಸೊಳ್ಳೆಗಳಿಂದ ಮಲೇರಿಯಾ, ಡೆಂಗಿ, ಚಿಕನ್‍ಗೂನ್ಯ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಕಂಡುಬರುತ್ತವೆ. ಇದನ್ನು ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ, ತಾಲ್ಲೂಕು ಮಟ್ಟದಲ್ಲಿ ಮಾಧ್ಯಮ ಮಿತ್ರರಿಗೆ ಅಡ್ವೊಕಸಿ ಕಾರ್ಯಗಾರ, ಡಿಜಿಟಲ್ ಪ್ರದರ್ಶನ ಫಲಕಗಳ ಮೂಲಕ ಸ್ಕ್ರೋಲಿಂಗ್ ಮೆಸೆಜ್ ಗಳನ್ನು ಕಳುಹಿಸುವುದು, ಡಂಗುರ ಅಥವಾ ಟಾಂಟಾಂ ಮೂಲಕ ಜಾಗೃತಿ ಮೂಡಿಸುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದರು.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಲ್ಲೂಕುವಾರು ಭೇಟಿ ನೀಡಿ ಒಟ್ಟು 137 ನೀರಿನ ಸಂಗ್ರಹಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 60 ಲಾರ್ವಾಹಾರಿ ಮೀನು ಇರುವ ನೀರಿನ ಸಂಗ್ರಹಗಳಿದ್ದು, 77 ಲಾರ್ವಾಹಾರಿ ಮೀನು ಇರುವ ನೀರಿನ ಸಂಗ್ರಹಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ 60 ಲಾರ್ವಾಹಾರಿ ಮೀನು ಇರುವ ನೀರಿನ ಸಂಗ್ರಹಗಳು ಇದೆ ಎಂದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 4 ಮಲೇರಿಯಾ, 44 ಡೆಂಗ್ಯು, 18 ಚಿಕುಂಗುನ್ಯ ಪ್ರಕರಣಗಳು ವರದಿಯಾಗಿದೆ. ಇಬ್ಬರಲ್ಲಿ ಕೋವಿಡ್ ಜತೆ ಡೆಂಗ್ಯು ಸೋಂಕು ಬಂದಿದ್ದು ಇದೀಗ ಗುಣಮುಖರಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ 4 ಜನರಲ್ಲಿ ಮೆದುಳು ಜ್ವರದ ಲಕ್ಷಣಗಳು ಕಂಡುಬಂದಿದ್ದು ಖಚಿತಪಟ್ಟಿಲ್ಲ ಎಂದು ಮಾಹಿತಿ ನೀಡಿದರು.

ವೈದ್ಯಕೀಯ ಇಲಾಖೆಯವರು ಎಲ್ಲ ಜ್ವರ ಪ್ರಕರಣಗಳ ರಕ್ತ ಲೇಪನ ಸಂಗ್ರಹಿಸಿ ಪರೀಕ್ಷೆ ಮಾಡಬೇಕು ಹಾಗೂ ಪ್ರತಿದಿನ ಮಾಹಿತಿಯನ್ನು ದಾಖಲಿಸಬೇಕು. ವರದಿಯನ್ನು ಪ್ರತಿ ತಿಂಗಳ ಕೊನೆಯಲ್ಲಿ ಕಚೇರಿಗೆ ಸಲ್ಲಿಸಬೇಕು. ಮಲೇರಿಯಾ ಪ್ರಕರಣಗಳು ಖಚಿತಪಟ್ಟರೆ ತಕ್ಷಣ ಜಿಲ್ಲಾ ವಿ.ಬಿ.ಡಿ.ಸಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಷ್ಕøತ ಚಿಕಿತ್ಸೆ ನಿಡಬೇಕು ಎಂದರು.

ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಮಲೇರಿಯಾ ಪರೀಕ್ಷೆ ಮಾಡಲೆಂದು ಪ್ರತ್ಯೇಕವಾಗಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಸಂಪೂರ್ಣ ಜವಬ್ದಾರಿ ನೀಡಿ. ಅವರು ಕಡ್ಡಾಯವಾಗಿ ಪರೀಕ್ಷೆ ಮಾಡಿ ವರದಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಆದೇಶ ನೀಡಿದರು.

ಡಾ.ನಟರಾಜ್ ಮಾತನಾಡಿ, ಗ್ರಾಮಗಳಲ್ಲಿ ಗುಂಡಿ, ತಗ್ಗುಗಳು ಆಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿಗಳಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಬೇಕು. ನಲ್ಲಿ ಪೈಪುಗಳು ಸೋರದಂತೆ ತಡೆಗಟ್ಟಬೇಕು. ಮೇಲ್ಛಾವಣಿಯ ತೊಟ್ಟಿಗಳು ಹಾಗೂ ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚಬೇಕು ಎಂದರು.

ಇದಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ನಗರದ ಹಲವು ವಾರ್ಡ್‍ಗಳಲ್ಲಿ ದಿನಕ್ಕೆ ಎರಡು ಬಾರಿ ಬೋರ್ ನೀರು ಬಿಡಲಾಗುತ್ತಿದ್ದು, ನೀರನ್ನು ಹೆಚ್ಚು ಪೋಲು ಮಾಡುವುದು ಕಂಡುಬಂದಿದೆ. ಹಲವೆಡೆ ನಲ್ಲಿ ಪೈಪುಗಳು ಸೋರುವುದನ್ನು ಕಂಡು ಖುದ್ದಾಗಿ ಬಂದ್ ಮಾಡಿ ಬಂದಿದ್ದೇನೆ. ಕೆಲವು ಜಿಲ್ಲೆಗಳಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ಇಲ್ಲಿ ನೀರನ್ನು ಸುಮ್ಮನೇ ವ್ಯರ್ಥ ಮಾಡುತ್ತಿರುವುದು ಬೇಸರದ ಸಂಗತಿ. ಎಲ್ಲಾ ತಾಲ್ಲೂಕಿನ ಟಿಹೆಚ್‍ಒ ಹಾಗೂ ಇಒ ಗಳು ಈ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದರು.

ಡಾ.ನಟರಾಜ್ ಮುಂದುವರೆಸಿ, ನೀರಾವರಿ ಯೋಜನೆಗಳಡಿ ಕೆಲಸಕ್ಕಾಗಿ ಬರುವ ಕಾರ್ಮಿಕರು ಹಾಗೂ ಅವರ ಚಲನವಲನದ ಬಗ್ಗೆ ಮುಂಚಿತವಾಗಿ ಆರೋಗ್ಯ ಇಲಾಖೆಗೆ ತಿಳಿಸಬೇಕು. ಸೂಕ್ತ ತಾಂತ್ರಿಕ ವಿಧಾನಗಳನ್ನು ಅನುಸರಿಸುವುದರ ಮೂಲಕ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಯಂತ್ರಣದಲ್ಲಿಡಬೇಕು ಎಂದರು.
ಇದಕ್ಕೆ ಜಿಲ್ಲಾಧಿಕಾರಿ, ವಲಸೆ ಕಾರ್ಮಿಕರು ಯಾವ ಇಲಾಖೆಯಡಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಆಯಾ ಇಲಾಖೆಯವರೇ ಖುದ್ದಾಗಿ ಕಾರ್ಮಿಕರ ಕುರಿತು ಅವರು ಎಲ್ಲಿಂದ ಬಂದಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಹಾಗೂ ಕೈಗಾರಿಕ ವಲಯಗಳಲ್ಲಿ ಹೆಚ್ಚು ಜನ ವಲಸೆ ಬರುತ್ತಿರುವುದು ಕಂಡು ಬಂದಿದ್ದು, ಹೊಸ ಕಾರ್ಮಿಕರು ಬಂದಾಗ ಆರೋಗ್ಯ ಇಲಾಖೆಗೆ ತಿಳಿಸಬೇಕು. ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

ಡಾ.ನಟರಾಜ್ ಮಾತನಾಡಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳ ಸಭೆ ನಡೆಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಟಾನವನ್ನು ಪರಿಶೀಲಿಸುವುದು, ಅಂಗನವಾಡಿ ಕಾರ್ಯಕರ್ತರುಗಳ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವುದು, ವೈಯಕ್ತಿಕ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಹಾಸ್ಟೆಲ್‍ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಲ್ಲಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆಪರದೆ ಹಾಗೂ ರೆಪೆಲೆಂಟ್‍ಗಳ ಉಪಯೋಗ, ಕಿಟಕಿಗಳಿಗೆ ಜಾಲರಿ ಹಾಕಿದರೆ ಮನೆಯೊಳಗೆ ಸೊಳ್ಳೆ ಬರುವುದನ್ನು ತಡೆಗಟ್ಟಬಹುದು. ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಸೊಳ್ಳೆರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್‍ಗಳನ್ನು ನಿರ್ಮಿಸುವಂತೆ ಅಗತ್ಯವಾದ ನಿಯಮಾವಳಿಗಳನ್ನು ಜಾರಿಗೊಳಿಸಬೇಕು ಮತ್ತು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸಬೇಕು. ವಾರಕೊಮ್ಮೆ ಸೊಳ್ಳೆನಾಶಕ ದ್ರವಣವನ್ನು ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಸಿಂಪಡಿಸಬೇಕು. ನಗರ ಪ್ರದೇಶಗಳಲ್ಲಿ ಅನಾಫಿಲಿಸ್ ಸೊಳ್ಳೆಯು ಸಿಮೆಂಟ್ ತೊಟ್ಟಿ, ಸಿಂಟೆಕ್ಸ್, ಡ್ರಂಗಳಲ್ಲಿ ಉತ್ಪತ್ತಿಯಾಗುವುದರಿಂದ ಅವುಗಳನ್ನು ನಿರಂತರವಾಗಿ ಮುಚ್ಚುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ಮಲೇರಿಯಾ ನಿಯಂತ್ರಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳು: ಮಲೇರಿಯಾವನ್ನು ಶೀಘ್ರ ಪತ್ತೆ ಹಚ್ಚಿ ಸಂಪೂರ್ಣ ಚಿಕಿತ್ಸೆ ನೀಡುವುದು. 24 ಗಂಟೆಗಳಲ್ಲಿ ರಕ್ತ ಲೇಪನಗಳ ಪರೀಕ್ಷೆ ಮಾಡುವುದು, ಜಿಲ್ಲೆಯ ವಲಸಿಗರ ಮತ್ತು ಹೊರರಾಜ್ಯದ ವಲಸಿಗರ ಸಮೀಕ್ಷೆ ಮಾಡುವುದು, ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು, ಮಲೇರಿಯಾ ಪತ್ತೆಯಾದ ಗ್ರಾಮ, ಪ್ರದೇಶಗಳಲ್ಲಿ ಸಂಪರ್ಕ ಅಥವಾ ಸಮೂಹ ರಕ್ತಲೇಪನಾ ಸಂಗ್ರಹ ಮಾಡುವುದು ಮತ್ತು ಐ.ಇ.ಸಿ ಚಟುವಟಿಕೆಗಳನ್ನು ಮಾಡಿಸುವುದು, ಸ್ವಚ್ಛ ನೀರಿನ ತಣಗಳಿಗೆ ಲಾರ್ವಾಹಾರಿ ಮೀನು (ಗಪ್ಪಿ ಮತ್ತು ಗ್ಯಾಂಬೂಸಿಯ) ಬಿಡುಗಡೆ ಮಾಡುವುದು ಹೀಗೆ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.

ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಅನುಸರಿಸುವ ಕ್ರಮಗಳು : ಮನೆಯ ಸುತ್ತಮುತ್ತ ತಗ್ಗು ಪ್ರದೇಶಗಳಲ್ಲಿ ನೀಡು ಸಂಗ್ರಹವಾಗದಂತೆ ನೋಡಿಕೊಳ್ಳುವುದು. ನಿಂತ ನೀರಿಗೆ ವಾರಕ್ಕೊಮ್ಮೆಯಂತೆ ಲಾರ್ವಾನಾಶಕ ಅಥವಾ ಸುಟ್ಟ ಇಂಜೀನ್ ಆಯಿಲ್, ಸೀಮೆ ಎಣ್ಣೆ ಹಾಕುವುದು. ಸ್ವ ರಕ್ಷಣೆಗಾಗಿ ಸೊಳ್ಳೆಪರದೆ, ಸಂಜೆ ಹೊತ್ತಲ್ಲಿ ಧೂಪದ ಹೊಗೆ ಹಾಕುವುದು, ಒಡೋಮಸ್, ಸೊಳ್ಳೆ ಬತ್ತಿ, ಸೊಳ್ಳೆ ನಿವಾರಕಗಳು, ಕಿಟಕಿಗಳಿಗೆ ಜಾಲರಿ ಬಡಿಸುವುದು ಸೊಳ್ಳೆ ಬ್ಯಾಟ್ ಮುಂತಾದವುಗಳನ್ನು ಬಳಸಬೇಕು ಎಂದರು.

ಸಭೆಯಲ್ಲಿ ಆಯುಕ್ತ ವಿಶ್ವನಾಥ್ ಮುದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್‍ಒ ಡಾ.ನಾಗರಾಜ್, ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಡಿಯುಡಿಸಿ ಯೋಜನಾಧಿಕಾರಿ ನಜ್ಮ, ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ರೇಣುಕಾರಾಧ್ಯ, ಡಾ.ಜಯಪ್ರಕಾಶ್ ಸೇರಿದಂತೆ ಎಲ್ಲಾ ತಾಲ್ಲುಕುಗಳ ಟಿಹೆಚ್‍ಒ, ತಾ.ಪಂ. ಇಒ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here