ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ; ಗ್ರಂಥಾಲಯ ಉದ್ಘಾಟನೆ

0
113

ಮಡಿಕೇರಿ ಡಿ.31:-‘ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರಿಗೆ ಸಮ’ ಆಗಿದ್ದು, ಒಳ್ಳೆಯ ಪುಸ್ತಕ ಅಧ್ಯಯನದಿಂದ ಮಾನಸಿಕ ನೆಮ್ಮದಿ ಮತ್ತು ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಸಾಹಿತಿಗಳು ಮತ್ತು ಚಿಂತಕರಾದ ಅರವಿಂದ ಚೊಕ್ಕಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಭೋದಕ ಆಸ್ಪತ್ರೆಯಲ್ಲಿ ‘ಅಕ್ಷರ ಆರೋಗ್ಯ ಅಭಿಯಾನ’ ಪ್ರಯುಕ್ತ ಗ್ರಂಥಾಲಯ ಉದ್ಘಾಟಿಸಿ, ಬಳಿಕ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಕಾವೇರಿ ಬ್ಲಾಕ್‍ನ ಉಪನ್ಯಾಸ ಕೊಠಡಿಯಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಸ್ತಕ ಓದುವುದರಿಂದ ವಿಶಾಲ ಮನೋಭಾವ ಬೆಳೆಯುತ್ತದೆ. ಜೊತೆಗೆ ಅಗಾಧ ಜ್ಞಾನ ಶಕ್ತಿ ಪಡೆಯಬಹುದಾಗಿದೆ. ಆದ್ದರಿಂದ ಗ್ರಂಥಾಲಯ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಪ್ರತಿಯೊಬ್ಬರ ಚಲನಶೀಲತೆಗೆ ಪುಸ್ತಕದ ಒಡನಾಟ ಇರಬೇಕು. ಆ ನಿಟ್ಟಿನಲ್ಲಿ ಅಲ್ಲಲ್ಲಿ ಗ್ರಂಥಾಲಯ ಆರಂಭಿಸಬೇಕು. ಗ್ರಂಥಾಲಯದ ಪುಸ್ತಕದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಪ್ರತಿಯೊಬ್ಬರ ಜೀವನದಲ್ಲೂ ಗುರಿ ಇರುತ್ತದೆ. ಅದನ್ನು ಸಾಧಿಸಲು ಹೆಚ್ಚಿನ ಪುಸ್ತಕ ಅಧ್ಯಯನ ಮಾಡಬೇಕು. ಪುಸ್ತಕ ಮೂಲಕ ಅನುಭವ ಅಂತರಂಗದ ಧಾರಣ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.

ಸೃಜನಶೀಲ ಸಾಹಿತ್ಯಕ್ಕೆ ಗ್ರಂಥಾಲಯ ಸಹಕಾರಿಯಾಗಿದ್ದು, ಆ ದಿಸೆಯಲ್ಲಿ ಕಥೆ, ಕಾವ್ಯ, ಕವಿತೆ, ಕಾದಂಬರಿ ಹಾಗೂ ಆತ್ಮ ಕಥನಗಳನ್ನು ಅಧ್ಯಯನ ಮಾಡಬೇಕು ಎಂದು ಅರವಿಂದ ಚೊಕ್ಕಾಡಿ ಅವರು ಹೇಳಿದರು.
ಒಳ್ಳೆಯ ಪುಸ್ತಕವನ್ನು ಓದುವುದರಿಂದ ಜೀವನವನ್ನು ಸಮಗ್ರ ದೃಷ್ಟಿ ಕೋನದಿಂದ ನೋಡಲು ಸಹಕಾರಿಯಾಗುತ್ತದೆ. ಸಾಹಿತ್ಯವು ಪ್ರತಿಯೊಬ್ಬರನ್ನು ಹೆಚ್ಚು ಸಂವೇದನಾಶೀಲರನ್ನಾಗಿ ಮಾಡುತ್ತದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಗಿದ್ದು, ಇವುಗಳ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದಕ ಆಸ್ಪತ್ರೆಯಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಒಳ್ಳೆಯ ಪುಸ್ತಕ ನೀಡುವ ಮೂಲಕ ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾತನಾಡಿ ಗ್ರಂಥಾಲಯ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದ್ದು, ಪ್ರಚಲಿತ ವಿದ್ಯಮಾನಗಳು ಹಾಗೂ ಪುಸ್ತಕಗಳ ಅಧ್ಯಯನದಿಂದ ಉತ್ತಮ ಮಾಹಿತಿ ಪಡೆದು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ಮಂಜುನಾಥ್, ನಿವಾಸಿ ವೈದ್ಯಕೀಯ ಅಧಿಕಾರಿ ಡಾ.ರೂಪೇಶ್ ಗೋಪಾಲ್, ಡಾ.ಮನೋಹರ್ ಪಾಟ್ಕರ್ ಇತರರು ಇದ್ದರು.
ಡಾ.ರಾಘವೇಂದ್ರ ನಿರೂಪಿಸಿದರು. ಡಾ.ದರ್ಶನ್ ಸ್ವಾಗತಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ.ಕುಶ್ವಂತ್ ಕೋಳಿಬೈಲು ವಂದಿಸಿದರು.

LEAVE A REPLY

Please enter your comment!
Please enter your name here