ಬಳ್ಳಾರಿ,ಫೆ.09 :ಇದುವರೆಗೆ ಕೋವಿಡ್ ಸೊಂಕಿತರ ಚಿಕಿತ್ಸೆಗೆ ಉಪಯೋಗಿಸುತ್ತಿದ್ದ ಬಳ್ಳಾರಿಯ ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಇನ್ಮುಂದೆ ಟ್ರಾಮಾಕೇರ್ ಸೇವೆಗಳು ಲಭ್ಯವಾಗಲಿವೆ.
ಫೆ.12ರಂದು ಬೆಳಗ್ಗೆ 11.30ಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಟ್ರಾಮಾಕೇರ್ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ.ಶಾಸಕರು ಮತ್ತು ಸಂಸದರು ಹಾಗೂ ಜನಪ್ರತಿನಿಧಿಗಳು,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಸೇವೆಗಳಿಗೆ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಟ್ರಾಮಾಕೇರ್ ಆಸ್ಪತ್ರೆಯಲ್ಲಿ ತಜ್ಞವೈದ್ಯರು ಹಾಗೂ ಅಧಿಕಾರಿಗಳ ಪೂರ್ವಸಿದ್ಧತಾ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಅರ್ಥೋಪೆಡಿಕ್(ಹಸ್ತಿ ಚಿಕಿತ್ಸಾ ವಿಭಾಗ),ನ್ಯೂರೋಸರ್ಜರಿ(ನರರೋಗ ಚಿಕಿತ್ಸಾ ವಿಭಾಗ),ಪ್ಲಾಸ್ಟಿಕ್ ಸರ್ಜರಿ(ಸ್ವರೂಪ ಚಿಕಿತ್ಸಾ ವಿಭಾಗ), ಅರವಳಿಕೆ ಶಾಸ್ತ್ರ ವಿಭಾಗಗಳ ಸೇವೆಗಳನ್ನು ಆರಂಭಿಸಲಾಗುತ್ತಿದೆ ಎಂದು ನಿರ್ದೇಶಕ ಡಾ.ಗಂಗಾಧರಗೌಡ ಅವರು ತಿಳಿಸಿದರು.