ಜನಪರ ಕಾಳಜಿಗಳಿಂದ ದುಡಿದ ಅಪರೂಪದ ರಾಜಕಾರಣಿ; ವಿ.ಎಸ್.ಆಚಾರ್ಯ

0
108

ಇಂದು ರಾಜಕಾರಣದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು ಲೋಕವನ್ನಗಲಿದ ದಿನ. ಅವರು 2012ರ ಫೆಬ್ರವರಿ 14ರಂದು ಈ ಲೋಕವನ್ನಗಲಿದರು. ಅಂದಿನ ದಿನದಲ್ಲಿ ಅವರು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದರು.

ಡಾ. ವಿ. ಎಸ್ ಆಚಾರ್ಯ ಅವರು 1940ರ ಜುಲೈ 6ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಕಟ್ಟೆ ಶ್ರೀನಿವಾಸ್. ತಾಯಿ ಕೃಷ್ಣವೇಣಿ ಅಮ್ಮ. ಉಡುಪಿ ನಗರ ಸಭಾಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ರಾಜಕೀಯ ಆರಂಭಿಸಿದ ಆಚಾರ್ಯರು ನಾಲ್ಕು ದಶಕಗಳ ಸುದೀರ್ಘ ಅನುಭವ, ಪಕ್ಷ ನಿಷ್ಠೆಗಳಿಂದ ಬಿಜೆಪಿ ಪಕ್ಷದ ಹಿರಿಯ ರಾಜಕೀಯ ಧುರೀಣರೆನಿಸಿದ್ದರು.

ಡಾ.ಆಚಾರ್ಯ, ವೃತ್ತಿಯಲ್ಲಿ ವೈದ್ಯರು. ಆದರೆ, ಪ್ರವೃತಿಯಲ್ಲಿ ರಾಜಕಾರಣಿ. ಮಣಿಪಾಲದ ಕೆಎಂಸಿಯಲ್ಲಿ 1965ರಲ್ಲಿ ಎಂಬಿಬಿಎಸ್ ಪದವಿ ಪಡೆದ ಡಾ.ಆಚಾರ್ಯಾವರು ವೈದ್ಯರಾಗಿ ವೃತ್ತಿ ಆರಂಭಿಸಿದರೂ, 1967ರಲ್ಲಿ ಜನಸಂಘದ ಮೂಲಕ ರಾಜಕೀಯವನ್ನು ಪ್ರವೇಶಿಸಿದರು. 1968ರಲ್ಲಿ ಪಕ್ಷವನ್ನು ಉಡುಪಿ ನಗರ ಸಭೆಯಲ್ಲಿ ಅಧಿಕಾರಕ್ಕೇರುವಂತೆ ಮಾಡಿದ ಡಾ.ಆಚಾರ್ಯ, 28ರ ಕಿರು ಹರೆಯದಲ್ಲೇ ಉಡುಪಿ ನಗರ ಸಭೆಯ ಕಿರಿಯ ಅಧ್ಯಕ್ಷರೆನಿಸಿಕೊಂಡರು. ಅಂದು ಅವರು ತಮ್ಮ ಅಧಿಕಾರವಧಿಯಲ್ಲಿ ಕೈಗೆತ್ತಿಕೊಂಡ ಸ್ವರ್ಣ ಕುಡಿಯುವ ನೀರಿನ ಯೋಜನೆ ಉಡುಪಿ ನಗರಕ್ಕೆ ಈಗಲೂ ನೀರುಣಿಸುತ್ತಿದೆ.

ವಿ. ಎಸ್.ಆಚಾರ್ಯ ಅವರ ಅಧ್ಯಕ್ಷಾವಧಿಯಲ್ಲಿ ‘ತಲೆಯ ಮೇಲೆ ಮಲ ಹೊರುವ’ ಅನಿಷ್ಟ ಪದ್ಧತಿಯನ್ನು ದೇಶದಲ್ಲೇ ಮೊದಲ ಬಾರಿಗೆ ರದ್ದು ಪಡಿಸಿದ ಕೀರ್ತಿ ಉಡುಪಿ ನಗರ ಸಭೆಗೆ ದೊರಕಿತು. ನೂತನ ನಗರಾಡಳಿತ ಕಚೇರಿ, ಭೂಗತ ಚರಂಡಿ ವ್ಯವಸ್ಥೆ, ನಗರದಲ್ಲಿ ಸುಧಾರಿತ ರಸ್ತೆ, ನಗರ ಯೋಜನಾ ಮಂಡಳಿ ರಚನೆ ಮುಂತಾದವು ಇದೇ ಅವಧಿಯಲ್ಲಿ ಜಾರಿಗೊಂಡವು.

ಎರಡು ಅವಧಿಗೆ ನಗರ ಸಭೆಗೆ ಆಯ್ಕೆಯಾದ ಡಾ.ಆಚಾರ್ಯ ಎಂಟು ವರ್ಷಗಳ ಕಾಲ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿದ್ದರು. 1983ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ರಾಜ್ಯ ವಿಧಾನ ಸಭೆಯನ್ನು ಪ್ರವೇಶಿಸಿದ ಆಚಾರ್ಯ ವಿಧಾನ ಮಂಡಲದಲ್ಲಿ ಪಕ್ಷದ ಶಾಸಕಾಂಗ ನಾಯಕರಾಗಿದ್ದರು.

ಅಚಾರ್ಯ ಅವರು ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ನಡೆಸಿದ ರಾಮಕೃಷ್ಣ ಹೆಗಡೆ ನೇತೃತ್ವದ ರಾಜ್ಯದ ಮೊದಲ ಕಾಂಗ್ರೇಸ್ಸೇತರ ಸರಕಾರದ ಅವಧಿಯಲ್ಲಿ ಹುಂಡೇಕರ್ ನೇತೃತ್ವದ ಜಿಲ್ಲಾ ಪುನಾರಚನಾ ಸಮಿತಿ ರಚನೆಗೆ ಶ್ರಮಿಸಿದ್ದರು. ಡಾ.ಆಚಾರ್ಯ ಅವರು ಸಚಿವರಾಗಿ ಹಾಗೂ ಭಾರತೀಯ ಜನಸಂಘ, ಜನತಾ ಪಾರ್ಟಿ ಹಾಗೂ ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇ ಅಲ್ಲದೆ ಜನಪರ ಕಾಳಜಿಗಳಿಂದ ದುಡಿದ ಅಪರೂಪದ ರಾಜಕಾರಣಿ.

LEAVE A REPLY

Please enter your comment!
Please enter your name here