ಸ್ಪರ್ಧೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು; ಕೆ.ಎಸ್.ವಿಜಯ

0
102

ಕಲಬುರಗಿ.ಮಾ.30- ಸ್ಪರ್ಧೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಹೊರತು, ಅಣಕು ಸ್ಪರ್ಧೆ ಆಗಬಾರದು ಎಂದು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಹೆಚ್ಚುವರಿ ರಜಿಸ್ಟ್ರಾರ್ ಜನರಲ್ ಕೆ.ಎಸ್.ವಿಜಯ ಅವರು ತಿಳಿಸಿದರು.

ಬುಧವಾರ ನಗರದ ಹೊಸ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಮತ್ತು ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು ಕಲಬುರಗಿ ಇವರ ಸಹಯೋಗದೊಂದಿಗೆ ಕಲಬುರಗಿ ವಲಯ ಮಟ್ಟದ ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆಯ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟಂತಹ ಜವಾಬ್ದಾರಿಯನ್ನು ಶಿಸ್ತು ಮತ್ತು ಶಾಂತಿಯಿಂದ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಆಯೋಜಿಸುವಂತಹ ಇಂತಹ ಸ್ಪರ್ಧೆಗಳಲ್ಲಿ ಧೈರ್ಯದಿಂದ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಇದು ನಿಮ್ಮ ಜೀವನಕ್ಕೆ ಕಂಡಂತಹ ಕನಸು ನನಸು ಮಾಡಿಕೊಳ್ಳುವುದಕ್ಕೆ ಬುನಾದಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಡಾ. ದೀಲಿಷ್ ಶಶಿ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವದರಿಂದ ಸ್ಪರ್ಧಾಮನೋಭಾವನೆ ಜೊತೆಗೆ ಧೈರ್ಯ ಮತ್ತು ಧನತ್ಮಾಕತೆ ಬೆಳೆಯುತ್ತದೆ. ನಿಮ್ಮ ಕನಸನ್ನು ಸಕಾರಗೊಳ್ಳಲು ನಿಮಗೆ ಸಹಾಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಮುಂದೆ ನಿಮ್ಮ ಜೀವನದಲ್ಲಿ ಯಾವುದೇ ಹುದ್ದೆಯಲ್ಲಿ ಸೇರಿದರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಕಲಬುರಗಿ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಶಿವಾನಂದ ಎಚ್.ಲೇಂಗಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಂಗ ಓದಿದರೆ ನಮ್ಮ ಭವಿಷ್ಯ ಬದಲಾಗಲ್ಲ, ಸಂವಿಧಾನ ಓದಿದರೆ ನಮ್ಮ ಭವಿಷ್ಯ ಬದಲಾಗುತ್ತದೆ. ದೇವಾಲಯಕ್ಕೆ ಹೋದರೆ ನಮ್ಮ ಭವಿಷ್ಯ ಬದಲಾಗಲ್ಲ, ಗ್ರಂಥಾಲಯಕ್ಕೆ ಹೋದರೆ ನಮ್ಮ ಭವಿಷ್ಯ ಬದಲಾಗುತ್ತದೆ. ಬಸವಣ್ಣನವರ ಸಿದ್ದಾಂತದಂತೆ ನಮ್ಮ ಬದುಕು ರೂಪಿಸಬೇಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಪ್ರಶಸ್ತಿ ವಿತರಣೆ: ಈ ಕಾರ್ಯಕ್ರಮದಲ್ಲಿ ಕಲಬುರಗಿಯ ವಲಯದ ಏಳು ಜಿಲ್ಲೆಗಳ ಎಲ್ಲಾ ಕಾನೂನು ಕಾಲೇಜುಗಳು ಹಾಗೂ ಚುನಾಯಿತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ 75 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 15 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಲಬುರಗಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಪ್ರಶಸ್ತಿ ವಿತರಿಸಿದರು.

ಬೆಂಗಳೂರು ಕಾಸಂಸು ಸಂಶೋಧನಾ ಮುಖ್ಯಸ್ಥರಾದ ಡಾ. ರೇವಯ್ಯ ಒಡೆಯರ್, ಕಲಬುರಗಿ ವಿಸಕಾ ಕಾಲೇಜಿನ ಕಾರ್ಯಕ್ರಮದ ನೋಡಲ್ ಅಧಿಕಾರಿ ವಾಣಿ ಮರಡಿ, ಸುಭಾಷ ಚಂದ್ರ ದೊಡ್ಡಮನಿ ಹಾಗೂ ಶ್ರೀಮಂತ ಓಳಕರ್ ಅವರು ತೀರ್ಪುಗಾರರಾಗಿದ್ದರು.

LEAVE A REPLY

Please enter your comment!
Please enter your name here