ಪ್ರತಿ ವಲಯ ಕಚೇರಿಯ ಇಬ್ಬರೂ ಪೌರ ಕಾರ್ಮಿಕರಿಗೆ ಸನ್ಮಾನ, ಸಂವಿಧಾನದ ಆಶಯವನ್ನು ಎಲ್ಲರೂ ಅರಿಯಿರಿ;ಆಯುಕ್ತ ಡಾ.ಗೋಪಾಲಕೃಷ್ಣ ಬಿ

0
79

ಹುಬ್ಬಳ್ಳಿ :ಮಾ.30: ಸಂವಿಧಾನದಿಂದ ಉತ್ತಮ ಜೀವನ ಹಾಗೂ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ. ಡಾ.ಬಾಬು ಜಗಜೀವನ್ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಪ್ರತಿ ವಲಯ ಕಚೇರಿಯ ಇಬ್ಬರೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ ಹೇಳಿದರು.

ಹುಬ್ಬಳ್ಳಿಯ ಪಾಲಿಕೆ ಸಭಾಂಗಣದಲ್ಲಿ ಇಂದು ಏಪ್ರಿಲ್ 5 ರಂದು ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂರವರ 115ನೇ ಜಯಂತಿ ಹಾಗೂ ಏಪ್ರೀಲ್ 14 ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜಯಂತಿ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಸ್ಥಳೀಯ ಕಲಾ ತಂಡಗಳಿಂದ ಕ್ರಾಂತಿ ಗೀತೆ, ಜಗ್ಗಲಿಗೆ, ಕರಡಿ ಮಜಲುಗಳಿಗೆ ಮೆರವಣಿಗೆಯಲ್ಲಿ ಅವಕಾಶ ನೀಡಲಾಗುವುದು. ಪಾಲಿಕೆ ವಲಯ ಕಚೇರಿಗಳಿಂದ ಒಂದೊಂದು ಸ್ತಬ್ಧ ಚಿತ್ರದ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಅತೀ ಹೆಚ್ಚು ಅಂಕ ಪಡೆದ 5 ಜನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಮೆರವಣಿಗೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರದ ಶಿಷ್ಟಾಚಾರದಂತೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಆಚರಣೆಗಳು ಆಡಂಬರಕ್ಕೆ ಮಾತ್ರ ಸೀಮಿತ ಆಗಬಾರದು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರ ಕುರಿತು ತಿಳಿದುಕೊಂಡವರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. “ಸರ್ವರಿಗೂ ಸಂವಿಧಾನ” ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಪೌರ ಕಾರ್ಮಿಕರು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಬ್ಯಾನರ್ ಹಾಕುವುದು, ತೆಗೆಯುವುದು ನಿಮ್ಮದೇ ಜವಾಬ್ದಾರಿ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಗುರುನಾಥ ಉಳ್ಳಿಕಾಶಿ ಮಾತನಾಡಿ, ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಚಿಂತನೆಗಳು ಕುರಿತ ಸಂಪುಟವನ್ನು ನೀಡಬೇಕು. ‘ಭಾರತ ಭಾಗ್ಯ ವಿದಾತ್’ ಅಂಬೇಡ್ಕರ್ ಚಿತ್ರ ಪ್ರದರ್ಶನ ಆಗಬೇಕು. ಇಬ್ಬರೂ ಮಹಾನಾಯಕರ ಜಯಂತಿ ಅಚ್ಚುಕಟ್ಟಾಗಿ ನಡೆಯಬೇಕು‌. ನ್ಯಾ. ನಾಗಮೋಹನ ದಾಸ್ ಅವರ ಸಂವಿಧಾನ ಓದು ಪುಸ್ತಕ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ನ್ಯಾಯವಾದಿ ಲಕ್ಷ್ಮಣ್ ಬೀಳಗಿ,
ಸಂವಿಧಾನದ ಆಶಯವನ್ನು ಎಲ್ಲರಿಗೂ ತಿಳಿಸುವ ಕೆಲಸವಾಗಬೇಕು. ಜಯಂತಿಗಳನ್ನು ಸಪ್ತಾಹದ ರೀತಿಯಲ್ಲಿ ಆಚರಣೆ ಮಾಡಬೇಕಾಗಿದೆ. ಪೊಲೀಸ್ ಅಧಿಕಾರಿಗಳಿಂದ ಯಾವುದೇ ರೀತಿಯಲ್ಲಿ ಜಯಂತಿಗೆ ತೊಂದರೆ ಆಗಬಾರದು. ಬ್ಯಾನರ್ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಸಭೆಗೆ ತಿಳಿಸಿದರು.

ಪಾಲಿಕೆ ಜಂಟಿ ಆಯುಕ್ತ ಮಾಧವ್ ಗಿತ್ತೆ, ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನ್ನವರ, ತಹಶೀಲ್ದಾರ ಶಶಿಧರ್ ಮಾಡ್ಯಾಳ, ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ಸಮಾಜದ ಮುಖಂಡರಾದ ಪ್ರಕಾಶ ಕ್ಯಾರಕಟ್ಟಿ, ಸುರೇಶ ಖಾನಾಪುರ, ಗಂಗಾಧರ, ಶಶಿಕಾಂತ ಬಿಜವಾಡ, ಬಸವರಾಜ ಬೊಮ್ಮನಾಳ, ಮಾರುತಿ ದೊಡ್ಡಮನಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here