ಪ್ರಶಾಂತ್ ಕಿಶೋರ್ ಬಿಚ್ಚಿಟ್ಟ ಆ ರಹಸ್ಯ ಏನು?

0
369

ಕೆಲ ದಿನಗಳ ಹಿಂದೆ ಕರ್ನಾಟಕದ ಹಿರಿಯ ನಾಯಕರೊಬ್ಬರು ಎಲೆಕ್ಷನ್ ಸ್ಪೆಷಲಿಸ್ಟ್ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿದರು.
ಈ ಭೇಟಿಗೂ ಮುನ್ನ ಅವರು ಪ್ರಶಾಂತ್ ಕಿಶೋರ್ ಅವರಿಗೆ ಒಂದು ಅಸೈನ್ ಮೆಂಟು ಕೊಟ್ಟಿದ್ದರು.
ಕರ್ನಾಟಕದ ರಾಜಕೀಯ ಪರಿಸ್ಥಿತಿ ಏನು?ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ?ಎಂಬುದು ಅವರು ಕೊಟ್ಟ ಅಸೈನ್ ಮೆಂಟು.
ಇದರ ಆಧಾರದ ಮೇಲೆ ಕರ್ನಾಟಕದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿದ ಪ್ರಶಾಂತ್ ಕಿಶೋರ್ ಒಂದು ವರದಿಯನ್ನು ತಯಾರಿಸಿದ್ದರು.
ಕರ್ನಾಟಕದ ಈ ಹಿರಿಯ ನಾಯಕರು ತಮ್ಮನ್ನು ಭೇಟಿಯಾದಾಗ ಪ್ರಶಾಂತ್ ಕಿಶೋರ್ ಈ ವರದಿಯನ್ನು ತೆಗೆದು ಮುಂದಿಟ್ಟರು.
ಅವರು ಕೊಟ್ಟ ವರದಿಯನ್ನು ನೋಡಿದ ಆ. ಹಿರಿಯ ನಾಯಕರು‌ ಹೌಹಾರಿದರಂತೆ. ಕಾರಣ?ಕರ್ನಾಟಕದ 224 ಕ್ಷೇತ್ರಗಳ ಪೈಕಿ 169 ಕ್ಷೇತ್ರಗಳಲ್ಲಿ ಮತದಾರರು ಈಗಿರುವ ಮೂರೂ ರಾಜಕೀಯ ಪಕ್ಷಗಳ ಬಗ್ಗೆ ನಿರಾಸಕ್ತಿ ತೋರಿಸಿದ್ದರು.
ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಪಕ್ಷಗಳು ನಡೆಸಿದ ಆಡಳಿತ ನೋಡಿದ್ದೇವೆ.ಅವರಿಂದ ರಾಜ್ಯ ಪ್ರಗತಿಯಾಗುತ್ತದೆ ಎಂಬುದು ಭ್ರಮೆ ಅಂತ ಹೇಳಿದ್ದರಂತೆ.
ಅರ್ಥಾತ್,ಕರ್ನಾಟಕದ ನೆಲ ತನಗೆ ಭರವಸೆ ತುಂಬಬಲ್ಲ ನಾಲ್ಕನೇ ಶಕ್ತಿಯನ್ನು ಎದುರು ನೋಡುತ್ತಿದೆ.ಆದರೆ ಎಲ್ಲಿಯವರೆಗೆ ಇದು ಸಾಧ್ಯವಿಲ್ಲವೋ?ಅಲ್ಲಿಯವರೆಗೆ ಗೊಣಗಿಕೊಂಡಾದರೂ ಇರುವವರಲ್ಲಿ ಯಾರು ಬೆಟರ್ರು ಅಂತ ತೀರ್ಮಾನಿಸಿ ಮತ ನೀಡುತ್ತದೆ ಎಂಬುದು ಪ್ರಶಾಂತ್ ಕಿಶೋರ್ ಕೊಟ್ಟ ವರದಿಯ ಸಾರಾಂಶ

ಅಂದ ಹಾಗೆ ಕರ್ನಾಟಕದ ನೆಲ ನಾಲ್ಕನೇ ಶಕ್ತಿಯೊಂದನ್ನು ಬಯಸುತ್ತಿದೆ ಎಂಬ ಪ್ರಶಾಂತ್ ಕಿಶೋರ್ ಅವರ ವರದಿ ಏನಿದೆ?ಇದನ್ನು ಹೋಲುವಂತಹ ವರದಿ ಅಮ್ ಆದ್ಮಿ ಪಕ್ಷದ ನಾಯಕ,ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಳಿಯೂ ಇದೆ.
ಇದೇ ಕಾರಣಕ್ಕಾಗಿ ದೆಹಲಿ,ಪಂಜಾಬ್ ಗಳ ಯಶಸ್ಸಿನ ನಂತರ ಅವರು ಕರ್ನಾಟಕದ ಕಡೆ ಕಣ್ಣು ಹಾಯಿಸಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದುಬಿಡುತ್ತೇವೆ ಎಂಬ ಭ್ರಮೆ ಅವರಿಗಿಲ್ಲ.
ಆದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಬೇಕು ಎಂಬುದು ಅವರ ಮೊದಲ ಗುರಿ.
ಇದಾದ ನಂತರ ರಾಜ್ಯದ ನಲವತ್ತರಿಂದ ಐವತ್ತು ಕ್ಷೇತ್ರಗಳಲ್ಲಿ ಠೇವಣಿ ಉಳಿಸಿಕೊಳ್ಳಬೇಕು ಎಂಬುದು ಅವರ ನಿರೀಕ್ಷೆ.
ಇಷ್ಟು ಕ್ಷೇತ್ರಗಳಲ್ಲಿ ಪಕ್ಷ ಠೇವಣಿ ಉಳಿಸಿಕೊಳ್ಳುವುದು ಎಂದರೆ ಯಾರದೋ ಗೆಲುವನ್ನು ಕಸಿದುಕೊಳ್ಳುವುದು ಎಂದರ್ಥ.
ಯಾವಾಗ ತಮಗೆ ಸೋಲಿಸುವ ಶಕ್ತಿ ಬರುತ್ತದೋ?ಆಗ ತಮಗೆ ಹೆದರಿಕೊಳ್ಳುವವರು ಹೆಚ್ಚಾಗುತ್ತಾರೆ.
ಹೀಗೆ ಹೆದರಿಸುವ ಶಕ್ತಿ ಯಾವಾಗ ಬರುತ್ತದೋ?ಅಲ್ಲಿಂದ ಮುಂದೆ ಗೆಲುವಿನ ಕಡೆ ನಡೆಯುವುದು ಸುಲಭ ಎಂಬುದು ಕೇಜ್ರಿವಾಲ್ ಲೆಕ್ಕಾಚಾರ.
ಅಂದರೆ?ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ದೊಡ್ಡ ಯಶಸ್ಸು ಕಾಣುತ್ತದೆ ಎಂಬ ಕನಸು ಅವರಿಗಿಲ್ಲ.ಆದರೆ ಹತ್ತು-ಹದಿನೈದು ಕ್ಷೇತ್ರಗಳಲ್ಲಿ ಗೆಲ್ಲುವಂತಾದರೆ ಮುಂದಿನ ನಡಿಗೆ ಸಲೀಸು ಎಂದವರು ಯೋಚಿಸಿದ್ದಾರೆ.

ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲೀಗ 1983 ರ ಸನ್ನಿವೇಶ ಮರುಕಳಿಸುವಂತೆ ಕಾಣಿಸುತ್ತಿದೆ.
1983 ರ ಹೊತ್ತಿಗೆ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದರು.
ಆದರೆ ಇಂತಹ ಆಕ್ರೋಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಒಂದು ರಾಜಕೀಯ ಶಕ್ತಿ ಇರಲಿಲ್ಲ.
ಹೀಗಾಗಿ ಜನತಾ ಪಕ್ಷದ ನಾಯಕರು ಹಿಂದುಳಿದ ವರ್ಗದ ನಾಯಕ ಬಂಗಾರಪ್ಪ ಅವರ ನೇತೃತ್ವದಲ್ಲಿ ನಿಂತಿದ್ದ ಕ್ರಾಂತಿರಂಗದ ಜತೆ ಕೈ ಜೋಡಿಸಿದರು.
ಕ್ರಾಂತಿರಂಗ ಕಟ್ಟಿದ್ದು ದೇವರಾಜ ಅರಸರಾದರೂ ಅವರು ಬಹುಬೇಗ ತೀರಿಕೊಂಡಾಗ ಆ ಪಕ್ಷದ ಚುಕ್ಕಾಣಿಯನ್ನು ರಪ್ಪಂತ ಕಿತ್ತುಕೊಂಡ ಬಂಗಾರಪ್ಪ ನಾಡಿನ ಗಮನ ಸೆಳೆಯುತ್ತಿದ್ದುದು ನಿಜ.
ಇಂತಹ ಕ್ರಾಂತಿರಂಗದ ಜತೆ ಜನತಾಪಕ್ಷ ಕೈ ಜೋಡಿಸಿದರೂ ಚುನಾವಣೆಯಲ್ಲಿ ಗೆದ್ದಿದ್ದು 90 ಪ್ಲಸ್ ಸೀಟುಗಳನ್ನು ಮಾತ್ರ.
ಅವತ್ತು ಕರ್ನಾಟಕದ ಮತದಾರರು ಯಾವ ಪರಿ ಹರಿದುಹೋಗಿದ್ದರೆಂದರೆ ಜನತಾ ಪಕ್ಷ,ಕ್ರಾಂತಿರಂಗ,ಕಾಂಗ್ರೆಸ್ ಜತೆಗೆ ಬಿಜೆಪಿ ಮತ್ತು ಪಕ್ಷೇತರರೂ ಗಣನೀಯ ಪಾಲು ಪಡೆದಿದ್ದರು.
ಹೀಗಾಗಿ 1983 ರಲ್ಲಿ ರಚನೆಯಾದ ಜನತಾರಂಗ ಸರ್ಕಾರಕ್ಕೆ ಬಿಜೆಪಿ ಮಾತ್ರವಲ್ಲ ಪಕ್ಷೇತರರೂ ಬೆಂಬಲ ನೀಡಿದ್ದರು.
ಹಾಗೆ ನೋಡಿದರೆ ಅದೊಂದು ಹರಕು ಮುರುಕು ಸರ್ಕಾರ.ಮತ್ತು ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಮಯ ನೋಡಿ ಆ ಸರ್ಕಾರವನ್ನು ವಿಸರ್ಜಿಸಿದರು,ಮಧ್ಯಂತರ ಚುನಾವಣೆಗೆ ಹೋದರು.
ಈಗಿನ ಪರಿಸ್ಥಿತಿಯನ್ನು ನೋಡಿದರೆ ನಲವತ್ತು‌ ವರ್ಷಗಳ ನಂತರ ಕರ್ನಾಟಕದ ರಾಜಕೀಯ ಚಿತ್ರ ಹರಕು-ಮುರುಕಾಗಿ ಕಾಣುತ್ತಿದೆ.
ವಸ್ತುಸ್ಥಿತಿ ಎಂದರೆ ಕರ್ನಾಟಕದ ಮೂರೂ ರಾಜಕೀಯ ಶಕ್ತಿಗಳು ಹಲವರಿಂದ ಸಮೀಕ್ಷೆಗಳನ್ನು ಮಾಡಿಸುತ್ತಲೇ‌ ಇವೆ.ಆದರೆ ಇಂತವರು ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವುದು ಗ್ಯಾರಂಟಿ ಅಂತ ಯಾವ ಸಮೀಕ್ಷೆಗಳೂ ಹೇಳುತ್ತಿಲ್ಲ.
ಹೇಗೆ?ಏನು?ಅಂತ ನಾನು ಹೇಳುವುದಿಲ್ಲ.ಆದರೆ 2023 ರ ವಿಧಾನಸಭಾ ಚುನಾವಣೆಯ ನಂತರ ನಾನು ಸಿಎಂ ಆಗುವುದು ಗ್ಯಾರಂಟಿ ಅಂತ ಜೆಡಿಎಸ್ ನಾಯಕ,ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವುದಕ್ಕೆ ಇದೇ‌ ಮುಖ್ಯ ಕಾರಣ.
ಅಂದ ಹಾಗೆ ಬಿಜೆಪಿಯ ಗಳಿಕೆ ತೊಂಭತ್ತಕ್ಕೆ ತಲುಪಿ ತಮ್ಮ ಗಳಿಕೆ ನಲವತ್ತನ್ನು ತಲುಪಬಹುದು ಎಂಬುದು ಕುಮಾರಸ್ವಾಮಿಯವರ ಲೆಕ್ಕಾಚಾರ.
ಹಾಗೊಂದು ವೇಳೆ ಈ ಗಳಿಕೆ ಕಡಿಮೆಯಾದರೂ ಗೆದ್ಧು ಬರುವ ಪಕ್ಷೇತರರ ಪಡೆಯ ಬೆಂಬಲ ಬಿಜೆಪಿ ಜತೆ ನಿಲ್ಲುವವರಿಗೆ ಸಿಗುತ್ತದೆ.
ಅಂದ ಹಾಗೆ ಕರ್ನಾಟಕದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿ ವರಿಷ್ಟರ ಇಚ್ಚೆ.ಯಾಕೆಂದರೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ನೆಲೆ ಅಂತಿದ್ದರೆ ಅದು ಕರ್ನಾಟಕ ಮಾತ್ರ.ಹೀಗಾಗಿ ಈ ನೆಲೆ ಉಳಿಸಿಕೊಳ್ಳದಿದ್ದರೆ ತಮ್ಮದು ಕೇವಲ ನಾರ್ತ್ ಇಂಡಿಯನ್ ಪಾರ್ಟಿ ಎಂಬ ಹೆಸರು ಉಳಿಯುತ್ತದೆ ಎಂಬುದು ಅವರ ಯೋಚನೆ.
ಇದೇ ಕಾರಣಕ್ಕಾಗಿ ಈ ವರ್ಷಾಂತ್ಯದಲ್ಲಿ ಗುಜರಾತ್ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ‌ ಕೂಡಲೇ ಮೋದಿ-ಅಮಿತ್ ಶಾ ಜೋಡಿ ಕರ್ನಾಟಕಕ್ಕೆ ದಂಡೆತ್ತಿ ಬರಲಿದೆ.
ಅವರ ಜತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರಿರುವ ದಂಡು ಕರ್ನಾಟಕಕ್ಕೆ ಬರಲಿದೆ.
ಹೀಗೆ ಬರುವ ಮುಂಚೆ ಕರ್ನಾಟಕದಲ್ಲಿ ತಮ್ಮ ಸಮೀಪ ಸ್ಪರ್ದಿ ಪಕ್ಷ ಯಾವುದೋ?ಅದನ್ನು ದುರ್ಬಲಗೊಳಿಸಲು ಏನು ಮಾಡಬೇಕು ಅಂತ ಮೋದಿ-ಶಾ ರಾಜ್ಯದ ನಾಯಕರಿಗೆ ಹೇಳಿದ್ದಾರಂತೆ.
ಅವರ ಈ ಎಲ್ಲ ಕಸರತ್ತುಗಳು ಅಂತಿಮವಾಗಿ ತಮ್ಮನ್ನು ಸಿಎಂ ಮಾಡುವಲ್ಲಿಗೆ ತಲುಪುತ್ತವೆ ಎಂಬುದು ಕುಮಾರಸ್ವಾಮಿ ನಿರೀಕ್ಷೆ.
ಅಂದ ಹಾಗೆ ತಮ್ಮ ಶಕ್ತಿ ಹೆಚ್ಚಿದ್ದರೂ ಜತೆಗೆ ಬರುವವರ ಕೈ ಹಿಡಿಯಬೇಕು ಎಂಬುದು ಬಿಜೆಪಿಯ ಲೇಟೆಸ್ಟು ಗೇಮ್ ಪ್ಲಾನ್.
ಮೊನ್ನೆ ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಬಂದ ಏಕನಾಥ್ ಶಿಂಧೆ ಅವರನ್ನು ಅದು ಸಿಎಂ ಹುದ್ದೆಯಲ್ಲಿ ಕೂರಿಸಿದ್ದು ಇದಕ್ಕೆ ಸಾಕ್ಷಿ.
ಹೀಗೆ ಬಿಜೆಪಿ ವಿಷಯದಲ್ಲಿ ತಾವು ಹಾಕಿರುವ ಲೆಕ್ಕಾಚಾರ ಉಲ್ಟಾ ಆದರೂ,ಅದರ ಜಾಗದಲ್ಲಿ ಕಾಂಗ್ರೆಸ್ ಬರಬಹುದು.ಸ್ವಯಂಬಲವಿಲ್ಲದಿದ್ದರೆ ಕಾಂಗ್ರೆಸ್ ಕೂಡಾ ತಮಗೇ ಸಿಎಂ ಹುದ್ದೆ ಬಿಟ್ಟುಕೊಡಬೇಕಾಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಯೋಚನೆ.

ಇನ್ನು ಬಿಜೆಪಿ,ಜೆಡಿಎಸ್,ಅಮ್ ಆದ್ಮಿ ಪಕ್ಷಗಳ ಲೆಕ್ಕಾಚಾರ ಏನೇ ಇದ್ದರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್ ಪಕ್ಷವೇ ಎಂಬುದು ಮಾಜಿ ಸಿಎಂ ಸಿದ್ಧರಾಮಯ್ಯ ಅವರ ನಂಬಿಕೆ.
ಅವರ ನಂಬಿಕೆಯ ಕತೆ ಒಂದು ಕಡೆಗಾದರೆ ಮತ್ತೊಂದು ಕಡೆ ಸಿದ್ಧರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವಿರೋಧ ಪಕ್ಷಗಳು ಮಾತ್ರವಲ್ಲ,ಕಾಂಗ್ರೆಸ್ ಪಕ್ಷದಲ್ಲಿರುವ ಅವರ ವಿರೋಧಿಗಳೂ ರಣತಂತ್ರ ರೂಪಿಸುತ್ತಿದ್ದಾರೆ.
2013 ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿ,ಸಿಎಂ ಹುದ್ದೆಯ ರೇಸಿನಿಂದ ಹೇಗೆ ಹಿಂದೆ ಸರಿಸಲಾಯಿತೋ?ಅದೇ ರೀತಿ ಸಿದ್ಧರಾಮಯ್ಯ ಅವರನ್ನು ಔಟ್ ಮಾಡಬೇಕು ಎಂಬುದು ಅವರ ಲೆಕ್ಕಾಚಾರ.
ಸಿಎಂ ಹುದ್ದೆಯ ರೇಸಿನಲ್ಲಿದ್ದವರನ್ನು ಸೋಲಿಸಲು ಎದುರಾಳಿಗಳು ತಂತ್ರ ಹೆಣೆಯುವುದು ಹೊಸತೇನಲ್ಲ.
1962 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಒಂದು ಗುಂಪು ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಿಜಲಿಂಗಪ್ಪ ಅವರು ಸೋಲುವಂತೆ ಮಾಡಿತ್ತು.
99 ರಲ್ಲಿ ಬಿಜೆಪಿ-ಸಂಯುಕ್ತಜನತಾದಳ ಮೈತ್ರಿಕೂಟ ಎದ್ದು ನಿಂತಾಗ ಸಿಎಂ ಹುದ್ದೆಯ ರೇಸಿನಲ್ಲಿದ್ದ ಯಡಿಯೂರಪ್ಪ ಮತ್ತು ಜೆ.ಹೆಚ್.ಪಟೇಲ್ ಪರಸ್ಪರ ಕಾಲೆಳೆದುಕೊಂಡು ಸೋತಿದ್ದರು.
2018 ರಲ್ಲಿ ಸ್ವತ: ಸಿದ್ಧರಾಮಯ್ಯ ಅವರನ್ನು ವಿಪಕ್ಷ-ಸ್ವಪಕ್ಷದ ವಿರೋಧಿಗಳು ಸೇರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಸೋಲಿಸಿದ್ದರು.
ಈ ಸಲ ಅಂತಹ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ ಎಂಬುದು ಸಿದ್ಧರಾಮಯ್ಯ ಅವರಿಗೂ ಗೊತ್ತು.
ಹೀಗಾಗಿ ಅವರು ಸುರಕ್ಷಿತ ಕ್ಷೇತ್ರದ ತಲಾಶೆ ನಡೆಸುತ್ತಿರುವಾಗಲೇ ಅವರ ಬೆಂಬಲಿಗರ ಪಡೆ ಹೊಸ ವರಸೆ ಶುರುವಿಟ್ಟುಕೊಂಡಿದೆ.
ವಿಧಾನಸಭಾ ಚುನಾವಣೆಯ ಸೋಲು-ಗೆಲುವು ಮುಖ್ಯವಲ್ಲ.ಬದಲಿಗೆ ತಮ್ಮ ಶಕ್ತಿಯಿಂದ ಪಕ್ಷವನ್ನು ಗೆಲ್ಲಿಸಬಲ್ಲ ನಾಯಕ ಮುಖ್ಯ.
ಹೀಗೆ ತಮ್ಮ ಶಕ್ತಿಯಿಂದ ತಮ್ಮ ಹಿಂದಿರುವ ಮತಗಳನ್ನು ಬೇರೆಯವರಿಗೆ ವರ್ಗಾಯಿಸಬಲ್ಲವರೇ ನಿಜವಾದ ಜನ ನಾಯಕ.
ಕರ್ನಾಟಕದಲ್ಲಿ ಅಂತಹ ಶಕ್ತಿ‌ಇರುವುದು ಯಡಿಯೂರಪ್ಪ,ಸಿದ್ಧರಾಮಯ್ಯ ಮತ್ತು ಹೆಚ್.ಡಿ.ದೇವೇಗೌಡರಿಗೆ ಮಾತ್ರ.
ಈ ಪೈಕಿ ಯಡಿಯೂರಪ್ಪ ಬಿಜೆಪಿಯ ಭವಿಷ್ಯದ ನಾಯಕರಲ್ಲದೆ ಇರುವುದರಿಂದ ಅವರ ಶಕ್ತಿ ವರ್ಕ್ ಔಟ್ ಆಗುವುದಿಲ್ಲ.ದೇವೇಗೌಡರ ಶಕ್ತಿ ಜೆಡಿಎಸ್ ಗೆ ಸ್ವಲ್ಪ ಲಾಭ ತಂದುಕೊಡಬಹುದು.
ಆದರೆ ಸಿದ್ಧರಾಮಯ್ಯ ತಮ್ಮ ಶಕ್ತಿಯಿಂದ ಬಿಜೆಪಿ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡುವುದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ.
ಹೀಗೆ ಪಕ್ಷವನ್ನೇ ಅಧಿಕಾರಕ್ಕೆ ತರಬಲ್ಲವರು ಚುನಾವಣೆಯಲ್ಲಿ ಗೆದ್ದರೇನು?ಸೋತರೇನು?ಅದೇನೂ ಮುಖ್ಯವಲ್ಲ.
ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಸೋತಿದ್ದರು.ಆದರೆ ಅದು ಅವರು ಸಿಎಂ ಆಗಲು ಅಡ್ಡಿ ಮಾಡಲಿಲ್ಲ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರಲ್ಲ.ಅರ್ಥಾತ್,ದಂಡನ್ನೇ ಗೆಲ್ಲಿಸಿಕೊಂಡು ಬರುವ ಶಕ್ತಿ ಇದ್ದವರು ಸಿಎಂ ಆಗಲು ಬೇರೆ ಮಾನದಂಡಗಳ ಅಗತ್ಯವೇ ಇಲ್ಲ ಎಂಬುದು ಈ ಬೆಂಬಲಿಗರ ವರಸೆ.
ಇದು ಕೂಡಾ ಕರ್ನಾಟಕದ ರಾಜಕಾರಣ ಎಷ್ಟು ಹರಕು ಸ್ಥಿತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here