ಬಿಜೆಪಿ ಪಾಳೆಯದಲ್ಲಿ ಶುರುವಾಯಿತು ಇಂದಿರಾ ಜಪ!

0
89

ಈ ಬಾರಿಯ ರಾಜ್ಯಸಭೆ,ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬುದು ನಿರ್ಧಾರವಾಗುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಇಂದಿರಾ ಜಪ ಆರಂಭವಾಗಿದೆ.
ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದ ಇಂದಿರಾಗಾಂಧಿ ಅವರನ್ನು ನೆನಪಿಸಿಕೊಳ್ಳುವುದು ಬಿಜೆಪಿಗೆ ಹೊಸತೇನಲ್ಲ.
ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಇಂದಿರಾಗಾಂಧಿ‌ ಕೊಡಲಿ ಪೆಟ್ಟು ಹಾಕಿದರು ಅಂತ ಪ್ರತಿವರ್ಷ ಬಿಜೆಪಿ ಪಾಳೆಯ ನೆನಪಿಸಿಕೊಳ್ಳುತ್ತದೆ.
ಅಂತಹ ಇಂದಿರಾಗಾಂಧಿ ಹೆಸರನ್ನು ಈ ಬಾರಿ ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಾಗುತ್ತಿದ್ದಂತೆ ಹಲ ಬಿಜೆಪಿ ನಾಯಕರು ಜಪಿಸಿದರು.
ಅವರಲ್ಲಿ ಬೊಮ್ಮಾಯಿ ಸಂಪುಟದ ಕೆಲ ಹಿರಿಯ ಸಚಿವರಿರುವುದೂ ವಿಶೇಷ.ಟಿಕೆಟ್ ಹಂಚಿಕೆಯ ವಿವರ ಗೊತ್ತಾಗುತ್ತಿದ್ದಂತೆಯೇ, ಬಿಜೆಪಿಯಲ್ಲಿ ಇಂದಿರಾಗಾಂಧಿ ಯುಗ ನಡೆಯುತ್ತಿದೆ ಎಂದವರು ಗೊಣಗಿಕೊಂಡರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಪರಿಷತ್ ಚುನಾವಣೆಯ ಟಿಕೆಟ್ ನಿರಾಕರಿಸಿದ್ದೇ ಇರಬಹುದು.ಅಥವಾ ಇನ್ನು ಕೆಲವರಿಗೆ ಪುರಸ್ಕರಿಸಿದ್ದೇ ಇರಬಹುದು‌.ಒಟ್ಟಿನಲ್ಲಿ ಇದು ಸರ್ವಾಧಿಕಾರದ ವರ್ತನೆ.ಇದಕ್ಕಾಗಿ ಪಕ್ಷ ದಂಡ ತೆರುವ ದಿನಗಳು ದೂರವಿಲ್ಲ ಎಂಬುದು ಈ ನಾಯಕರ ಆತಂಕ.
ಇನ್ನು ಯಡಿಯೂರಪ್ಪ ಕ್ಯಾಂಪಿನ ಸೇನಾಧಿಪತಿ ಅನ್ನಿಸಿಕೊಂಡ ನಾಯಕರೊಬ್ಬರು:ನೆನಪಿನಲ್ಲಿಡಿ.ಇನ್ನು ನಾವು ಮರಳಿ ಅಧಿಕಾರ ಹಿಡಿಯುವುದು ಕನಸು.ಡಿಕೆಶಿ-ಸಿದ್ಧರಾಮಯ್ಯ ಒಗ್ಗೂಡಿ ಹೊರಟರಂತೂ 2013 ರ ರಿಸಲ್ಟು ಗ್ಯಾರಂಟಿ ಎಂದು ಹಲವರ ಮುಂದೆ ಹೇಳತೊಡಗಿದರು.
ಇಲ್ಲ,ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯದೆ ಇರಬಹುದು.ಆದರೆ ಜೆಡಿಎಸ್ ನ ಕುಮಾರಸ್ವಾಮಿ ಅವರ ಜತೆಗೂಡಿ‌ ಮೈತ್ರಿಕೂಟ ಸರ್ಕಾರ ರಚಿಸಬಹುದಲ್ಲವೇ ಎಂದು ಆಪ್ತರೊಬ್ಬರು ಕೇಳಿದರೆ,ತಪ್ಪಿಯೂ ಅಂತಹ ಕನಸಿಟ್ಟುಕೊಳ್ಳಬೇಡಿ ಎಂದರು.
ಅವರ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅರವತ್ತು ಸೀಟುಗಳನ್ನು ಗೆಲ್ಲುವುದೂ‌ ಕಷ್ಟ.ಬಿಜೆಪಿ ಇಂತಹ ಸ್ಥಿತಿಗಿಳಿದರೆ ನಲವತ್ತು ಸೀಟುಗಳ ಆಸುಪಾಸಿಗೆ ತಲುಪಬಹುದಾದ ಜೆಡಿಎಸ್ ಕೂಡಾ ನಿಸ್ಸಹಾಯಕವಾಗುತ್ತದೆ.ಆ‌ ಮೂಲಕ 2013 ರ ವಿಧಾನಸಭಾ ಚುನಾವಣೆಯ ರಿಸಲ್ಟು ಮರುಕಳಿಸುತ್ತದೆ.ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ.ನೋ ಡೌಟ್.
ಅಂದ ಹಾಗೆ ರಾಜ್ಯಸಭೆ,ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೇಟುಗಳ ಹಂಚಿಕೆಯಲ್ಲಿ ಬಿ.ಎಲ್.ಸಂತೋಷ್ ಕೈ ಮೇಲಾಗಿದೆ ಎಂಬ ಮಾತುಗಳು ಬಿಜೆಪಿ ಪಾಳೆಯದಲ್ಲಿನ ಇಂತಹ ಚರ್ಚೆಗೆ ಕಾರಣ ಎಂಬುದು ರಹಸ್ಯವಲ್ಲ.
ಇಂತಹ ಚರ್ಚೆಗಳೇನೇ‌ ಇದ್ದರೂ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂವರೂ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚು.
ಈ ಪೈಕಿ ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್,ಚಿತ್ರನಟ‌ ಜಗ್ಗೇಶ್ ತಮಗೆ‌ ನಿಗದಿಯಾಗುವ ಮತಗಳಿಂದ ಗೆದ್ದರೆ,ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರು ತಮಗುಳಿದ ಮತ್ತು ಬೇರೆ ಪಕ್ಷಗಳಿಂದ ಬರುವ ಕಾಣಿಕೆಯ ಲಾಭ ಪಡೆದು ಗೆಲ್ಲುತ್ತಾರೆ ಎಂಬುದು ಸಧ್ಯದ ಲೆಕ್ಕಾಚಾರ.

ರಾಜ್ಯಸಭೆ,ವಿಧಾನಪರಿಷತ್ ಚುನಾವಣೆ ಬಿಜೆಪಿ ಕ್ಯಾಂಪಿನಲ್ಲಿ ತರ ತರದ ಚಿತ್ರಗಳನ್ನು ಸೃಷ್ಟಿಸಿದರೆ,ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲೂ ಹಲವು ಚಿತ್ರಗಳನ್ನು ಮೂಡಿಸಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಯಾರಿಗೆ ನೀಡಬೇಕು ಎಂಬ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹಗ್ಗ ಜಗ್ಗಾಟಕ್ಕಿಳಿದರು.
ಈ ಪೈಕಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ನಾಯಕ ಎಸ್.ಆರ್.ಪಾಟೀಲರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದರೆ ಯಾವ ಕಾರಣಕ್ಕೂ ಅವರಿಗೆ ಟಿಕೆಟ್‌ ಕೊಡಬಾರದು ಎಂದು ಸಿದ್ಧರಾಮಯ್ಯ ಪ್ರತಿಪಟ್ಟು ಹಾಕಿದರು.
ಹೀಗೆ ಈ‌ ಇಬ್ಬರು ನಾಯಕರ ಹಗ್ಗ ಜಗ್ಗಾಟದ ನಡುವೆ ಶಾಮನೂರು ಶಿವಶಂಕರಪ್ಪ ಅವರ ಆಪ್ತರಾದ ಅಬ್ದುಲ್ ಜಬ್ಬಾರ್ ಮೊದಲ ಟಿಕೆಟ್ ಪಡೆದರೆ ನಾಗರಾಜ ಯಾದವ್ ಎರಡನೇ ಟಿಕೆಟು ಪಡೆದರು.
ಅಬ್ದುಲ್ ಜಬ್ಬಾರ್‌ ಇದ್ದರೆ ನಾನು ವಿಧಾನಸಭೆ ಚುನಾವಣೆ ಗೆಲ್ಲುವುದು ಸುಲಭ ಎಂಬುದು ಶಾಮನೂರು ಶಿವಶಂಕರಪ್ಪ ಅವರ ಲೆಕ್ಕಾಚಾರ.ಅವರ ಲೆಕ್ಕಾಚಾರಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಿದ ಪರಿಣಾಮವಾಗಿ ಅಬ್ದುಲ್ ಜಬ್ಬಾರ್ ಲಕ್ಕು‌ ಕುದುರಿತು.
ಇನ್ನು ನಾಗರಾಜ ಯಾದವ್ ಪಕ್ಷದ ಎಲ್ಲರಿಗೂ ಬೇಕಾದವರು.ಹೀಗಾಗಿ ಅವರು ಡಿಕೆಶಿ ಕ್ಯಾಂಪಿನವರೂ ಅಲ್ಲ,ಸಿದ್ಧರಾಮಯ್ಯ ಕ್ಯಾಂಪಿನವರೂ ಅಲ್ಲ.
ಉಳಿದಂತೆ ರಾಜ್ಯಸಭೆ ಚುನಾವಣೆಯ ವಿಷಯ ಬಂದಾಗಲೂ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಲೆಕ್ಕಾಚಾರ ಬೇರೆ ಬೇರೆಯಾಗಿತ್ತು.
ಹೇಗಿದ್ದರೂ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗುವುದು ಒಂದು ಸೀಟು ಮಾತ್ರ.ಹೀಗಾಗಿ ಪಕ್ಷದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಕೊಟ್ಟರಾಯಿತು ಅಂತ ಡಿಕೆಶಿ ಯೋಚಿಸಿದ್ದರು.
ಅಂದ ಹಾಗೆ ಜೆಡಿಎಸ್ ಅಭ್ಯರ್ಥಿಯಾದರೂ‌ ಕುಪೇಂದ್ರರೆಡ್ಡಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರು.ಹೀಗಾಗಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುವುದು ತಮಗೆ ಲಾಭದಾಯಕ ಎಂಬುದು ಡಿಕೆಶಿ ಯೋಚನೆ.
ಸಾಲದೆಂಬಂತೆ ಬೆಂಗಳೂರಿನ ಹಿರಿಯ ಶಾಸಕರೊಬ್ಬರು ಕುಪೇಂದ್ರರೆಡ್ಡಿ ಅವರನ್ನು ಡಿಕೆಶಿ ಬಳಿ ಕರೆದುಕೊಂಡು ಹೋಗಿ ಯಸ್ ಅನ್ನಿಸಿದ್ದರಂತೆ.
ಅಂದುಕೊಂಡ ಪ್ರಕಾರ ನಡೆದಿದ್ದರೆ ಕುಪೇಂದ್ರ ರೆಡ್ಡಿ ನಿರಾಯಾಸವಾಗಿ ಆಯ್ಕೆಯಾಗುತ್ತಿದ್ದರು.
ಯಾಕೆಂದರೆ ಜೆಡಿಎಸ್ ಪಕ್ಷದ 32 ಮತಗಳ ಜತೆ,ಕಾಂಗ್ರೆಸ್ ನಲ್ಲಿ ಹೆಚ್ಚುವರಿಯಾಗಿ ಉಳಿಯುವ ಮತಗಳ ಬೆಂಬಲ ಪಡೆದಿದ್ದರೆ ಕುಪೇಂದ್ರರೆಡ್ಡಿ ಅವರಿಗೆ ಸಾಕಿತ್ತು.
ಆದರೆ ಈ ಲೆಕ್ಕಾಚಾರ ನಡೆಯುತ್ತಿದ್ದಂತೆಯೇ ಸಿದ್ಧರಾಮಯ್ಯ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸೋಣ ಅಂತ ಎಲೆ ಮಗುಚಿ ಹಾಕಿದರು.
ಶುರುವಿನಲ್ಲಿ ಜೈರಾಮ್ ರಮೇಶ್ ಅವರೊಬ್ಬರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿತ್ತಾದರೂ, ಸಿದ್ಧರಾಮಯ್ಯ ಆಟದ ನಿಯಮವನ್ನೇ ಬದಲಿಸಿಬಿಟ್ಟರು.
ಪಕ್ಷದ ಎರಡನೇ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬುದೇನೋ ನಿಜ.ಹಾಗಂತ ಸುಮ್ಮನಿದ್ದು ಬಿಟ್ಟರೆ ಜೆಡಿಎಸ್ ಆಟ ಆಡಲು ಅವಕಾಶ ಕೊಟ್ಟಂತಾಗುತ್ತದೆ.ಹಾಗಾಗುವುದು ಬೇಡ ಎಂಬುದು ಸಿದ್ಧರಾಮಯ್ಯ ವಾದ.
ನಾವು ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರೊಬ್ಬರನ್ನು ಕಣಕ್ಕಿಳಿಸೋಣ.ಹೇಗಿದ್ದರೂ ಜೆಡಿಎಸ್ ಪಕ್ಷ ಸೆಕ್ಯುಲರಿಸಂ ಬಗ್ಗೆ ಉದ್ದುದ್ದ ಮಾತನಾಡುತ್ತದೆ.ಅವರದು ಬೈ ಹಾರ್ಟ್ ಸೆಕ್ಯುಲರಿಸಂ ಆದರೆ ನಾವು ನಿಲ್ಲಿಸಿದ ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸಲಿ.ಹಾಗೆ ಮಾಡದಿದ್ದರೆ ಅದಕ್ಕೇ‌ ಕ‌ಳಂಕ ತಗಲುತ್ತದೆ ಎಂಬುದು ಅವರ ಮಾತು.
ಸಿದ್ಧರಾಮಯ್ಯ ಅವರ ಈ ಮಾತಿಗೆ ದುಸುರಾ ಹೇಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಇರಲಿಲ್ಲ.ಹೀಗಾಗಿ‌ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿತು.
ಯಾವಾಗ ಇದು ಸಾಧ್ಯವಾಯಿತೋ?ತದ ನಂತರ ಸಿದ್ಧರಾಮಯ್ಯ ಅವರ ನಡೆಯ ಬಗ್ಗೆ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆಗಳು ಶುರುವಾದವು.
ಅದರ ಪ್ರಕಾರ,ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಕ್ಯಾಂಡಿಡೇಟ್ ಅನ್ನು ಕಣಕ್ಕಿಳಿಸುವ ಮೂಲಕ ಸಿದ್ಧರಾಮಯ್ಯ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯಲು ಹೊರಟಿದ್ದಾರೆ.
ಮೊದಲನೆಯದಾಗಿ,ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆಶಿಗೆ ಇದು ಚೆಕ್ ಮೇಟ್.ಯಾಕೆಂದರೆ ಅವರಿಬ್ಬರಿಗೂ ಕುಪೇಂದ್ರ ರೆಡ್ಡಿ ಗೆದ್ದು ಬರುವುದು ಬೇಕಿತ್ತು.ಆದರೆ ಬದಲಾದ ಸನ್ನಿವೇಶದಲ್ಲಿ ಇದು ಕಷ್ಟ.
ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್ ನ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಲು ಮನಸ್ಸು ಮಾಡದ ಜೆಡಿಎಸ್,ಬಿಜೆಪಿ ಕ್ಯಾಂಡಿಡೇಟ್ ಲೆಹರ್ ಸಿಂಗ್ ಗೆಲ್ಲಲು ಅನುವು ಮಾಡಿಕೊಟ್ಟಿತು.ಅದರ ನಿಜವಾದ ಸೆಕ್ಯುಲರಿಸಂ ಫೇಸು ಇದು ಎಂದು ಎಲ್ಲರೆದುರು ಕೂಗಾಡುವುದು ಸಿದ್ಧರಾಮಯ್ಯ ಅವರ ಯೋಚನೆ.
ಅಷ್ಟೇ ಅಲ್ಲ,ಚುನಾವಣೆಯಲ್ಲಿ ಜೆಡಿಎಸ್ ನಲ್ಲಿರುವ ಅತೃಪ್ತ ಶಾಸಕರು ಕಾಂಗ್ರೆಸ್ ಇಲ್ಲವೇ ಬಿಜೆಪಿಗೆ ಮತ ನೀಡುವಂತಾದರೆ,ಆ ಪಕ್ಷ ಆಗಲೇ ಛಿದ್ರವಾಗಿದೆ ಎಂದು ತೋರಿಸುವುದೂ ಸಿದ್ಧರಾಮಯ್ಯ ಅವರ‌ ಲೆಕ್ಕಾಚಾರ.
ಒಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿ ವಿರೋಧಿ ಮತಗಳಿಗೆ ತಾವೇ ಐಕಾನ್ ಎಂದು ತೋರಿಸುವುದು ಅವರಿಗೆ ಬೇಕಿದೆ.

ಅಂದ ಹಾಗೆ ಸಿದ್ಧರಾಮಯ್ಯ ಅವರ ಈ ಪಟ್ಟಿನಿಂದ ಜೆಡಿಎಸ್ ಮುಜುಗರಕ್ಕೆ ಒಳಗಾಗಿರುವುದು ನಿಜ.
ಅದರ ಲೆಕ್ಕಾಚಾರದ ಪ್ರಕಾರ ಆಟ ನಡೆದಿದ್ದರೆ ಪಕ್ಷದ ಅಭ್ಯರ್ಥಿ ಕುಪೇಂದ್ರರೆಡ್ಡಿ ನಿರಾಯಾಸವಾಗಿ ಗೆಲುವು ಸಾಧಿಸಿದಂತಾಗುತ್ತಿತ್ತು.
ಆದರೆ ಸಿದ್ಧರಾಮಯ್ಯ ಈಗ ಹಾಕಿರುವ ಆಟದಿಂದ ಅದು ಕನಿಷ್ಟ ಪಕ್ಷ ತನ್ನ ಅಸ್ತಿತ್ವಕ್ಕೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಿದೆ.
ಅಂದ ಹಾಗೆ ಕಾಂಗ್ರೆಸ್ ನಲ್ಲಿ ಹಲ ಶಾಸಕರಿಗೆ ಅಸಮಾಧಾನ ಇದೆ.ಆದರೆ ಈ ಅಸಮಾಧಾನ ಜೆಡಿಎಸ್ ಪರವಾಗಿ ಅಡ್ಡ‌ಮತದಾನ ಮಾಡುವಷ್ಟು ಧೈರ್ಯವನ್ನು ಅವರಿಗೆ ಕೊಡುವುದು ಕಷ್ಟ.
ಒಂದು ವೇಳೆ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅವರ ಪರವಾಗಿ ಮತದಾನ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆದರೂ ಸಿಗುತ್ತದೆ.ಆದರೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದರೆ ಫಲವೇನು?ಎಂಬುದು ಈ ಅಸಮಾಧಾನಿತ ಶಾಸಕರ ಯೋಚನೆ.
ಹೀಗಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್ ನಿಂದ ಎಷ್ಟು ಮತ ಪಡೆಯಬಹುದು ಎಂದು ಯೋಚಿಸುವುದಕ್ಕಿಂತ,ತಮ್ಮ ಮತಗಳು ಬಿಜೆಪಿ ಕಡೆ ಹೋಗಬಾರದು ಎಂದು ಯೋಚಿಸುವ ಸ್ಥಿತಿ‌ ಇದೆ.

ಇನ್ನು ಈ ಬಾರಿಯ ರಾಜ್ಯಸಭೆ,ವಿಧಾನಪರಿಷತ್ ಚುನಾವಣೆ ಬಂದ ನಂತರ ಜೆಡಿಎಸ್ ನಾಯಕ,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತುಂಬ ಇರುಸು ಮುರುಸಿಗೆ ಒಳಗಾಗಿದ್ದರಂತೆ.
ಕಾರಣ?ಪಕ್ಷದ ನೆಲೆಗಟ್ಟನ್ನು ಭದ್ರಪಡಿಸಲು ದೊಡ್ಡ ಮಟ್ಟದಲ್ಲಿ ಹೋರಾಡುವುದು ಅವರೇ ಆದರೂ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಅವರ ಮಾತು ನಡೆದಿಲ್ಲವಂತೆ.
ವಿಧಾನಪರಿಷತ್ ಚುನಾವಣೆಯಲ್ಲಿ ಚಿತ್ರನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಅವರಿಚ್ಚೆಯಾಗಿತ್ತು.
ಆದರೆ ದೇವೇಗೌಡರ ಕಿಚನ್ ಕ್ಯಾಬಿನೆಟ್ಟು ಶರವಣ ಅವರಿಗೇ ಟಿಕೆಟ್ ಕೊಡಬೇಕು ಅಂತ ಪಟ್ಟು ಹಿಡಿಯಿತು.
ಯಾವಾಗ ಶರವಣ ಪರವಾಗಿ ಕಿಚನ್ ಕ್ಯಾಬಿನೆಟ್ಟು ಧ್ವನಿ ಎತ್ತಿತೋ?ಆಗ ದೇವೇಗೌಡರು ಅನಿವಾರ್ಯವಾಗಿ ಅದರ‌ ಜತೆ ನಿಲ್ಲಬೇಕಾಯಿತು.ಕುಮಾರಸ್ವಾಮಿ ಏಕಾಂಗಿ ಗೆಟಪ್ಪಿನಲ್ಲಿ ನಿಲ್ಲಬೇಕಾಯಿತು.
ರಾಜ್ಯಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವಿಷಯದಲ್ಲೂ ಅಷ್ಟೇ.ಪಕ್ಷದ ಸೆಕ್ಯುಲರ್ ಫೇಸ್ ಕಟ್ಟಿಗೆ ಫೇರ್ ನೆಸ್‌ಕ್ರೀಮು ಹಚ್ಚಲು ಬಿ.ಎಂ.ಫಾರೂಕ್ ಅವರಿಗೆ ಟಿಕೆಟ್ ಕೊಡಬೇಕು ಎಂಬುದು ಕುಮಾರಸ್ವಾಮಿ ಇಚ್ಚೆಯಾಗಿತ್ತು.
ಆದರೆ ಹೆಚ್.ಡಿ.ರೇವಣ್ಣ ಅವರು:ಈಗ ಪಕ್ಷಕ್ಕೆ ಟಾನಿಕ್ ಕೊಡುವವರು ಬೇಕು.ಹೀಗಾಗಿ ಕುಪೇಂದ್ರರೆಡ್ಡಿ ಅವರಿಗೇ ಟಿಕೆಟ್ ಕೊಡೋಣ ಎಂದು ಹಟ ಹಿಡಿದರಂತೆ.
ಅವರ ಹಟಕ್ಕೆ ಯಥಾಪ್ರಕಾರ ದೇವೇಗೌಡರು‌ ಮಣಿದರು.ಕುಮಾರಸ್ವಾಮಿ ಅವರ ಏಕಾಂಗಿ ಗೆಟಪ್ಪು ಕಂಟಿನ್ಯೂ ಆಯಿತಂತೆ.
ಭಾರ ಹೊರುವವರ ನೆತ್ತಿಗೆ ಖಾರ ಅರೆಯುವವರು ಜಾಸ್ತಿ ಅನ್ನುವುದು ಇದಕ್ಕೇ ಇರಬೇಕು.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here