ಸಾವಿನ ನೆರಳು ನನ್ನನ್ನು ಹೆದರಿಸಿತುಮರೆಯಲಾಗದ ಪಾಠವನ್ನೂ ಕಲಿಸಿತು

0
188

“ಇದು ತಮಾಷೆಯಲ್ಲ,ಸೀರಿಯಸ್ ವಿಷಯ.ನಾನಂದುಕೊಳ್ಳುವಂತೆ ಇದು ಸೀರಿಯಸ್ ಆಗುವುದಿಲ್ಲ.ಹಾಗೇನಾದರೂ ಆದರೆ ನೀನು ಬದುಕುಳಿಯುವುದಿಲ್ಲ.ಹೀಗೆ ಹೆಚ್ಚು ಕಡಿಮೆಯಾಗಿ ನಿನಗೇನಾದರೂ ಆಗುವುದು ನನಗಿಷ್ಟವಿಲ್ಲ” ಅಂತ ಅವರು ಗಂಭೀರವಾಗಿ ಹೇಳಿದರು.
ಅವರ ಹೆಸರು ರವಿ ಬೆಳಗೆರೆ!
ಆಗವರು ಕರ್ಮವೀರದ ಸಂಪಾದಕರಾಗಿದ್ದರು.ನಾನು ವಾರಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ.ಅಂದ ಹಾಗೆ,ಆ ವಾರ,ಪತ್ರಿಕೆಗೆ ಬರೆಯಲು ಹೇಳಿಕೊಳ್ಳುವಂತಹ ರಾಜಕೀಯ ಬೆಳವಣಿಗೆ ಏನಾಗಿರಲಿಲ್ಲ.ಆದರೆ ಡೈಲಿ ಪೇಪರುಗಳಲ್ಲಿ ಸುದ್ದಿ ಇಲ್ಲ ಅಂದಾಗ,ಏನು ಮಾಡಲು ಸಾಧ್ಯ ಎಂದು ಕೈ ತೊಳೆದುಕೊಂಡು ಬಿಡಬಹುದು.ಆದರೆ ವಾರಪತ್ರಿಕೆಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ.
ತಿಪ್ಪರಲಾಗ ಹೊಡೆದರೂ ಸರಿಯೇ,ನಿಮ್ಮ ಪಾಲಿಗೆ ಅಂತ ಇಟ್ಟ ಪೇಜುಗಳನ್ನು ತುಂಬಿಸಲು ನೀವು ಸುದ್ದಿಯನ್ನೋ?ಸ್ಟೋರಿಯನ್ನೋ ಕೊಡಲೇಬೇಕು.
ಹಾಗಂತಲೇ ಅವತ್ತೊಂದು ದಿನ ನಾನು ಪೊಲಿಟಿಕಲ್ ರಿಪೋರ್ಟಿಂಗ್ ಗೆ ಟೆಂಪರರಿ ಡೈವೋರ್ಸು ಕೊಟ್ಟು,ಕ್ರೈಮ್ ಗೆ ಕೈ ಹಾಕಿಬಿಟ್ಟಿದ್ದೆ.ಆ ಕಾಲದಲ್ಲಿ ಕರ್ನಾಟಕದ ನಂಬರ್ ಒನ್ ಭೂಗತ ದೊರೆ ಅನ್ನಿಸಿಕೊಂಡಿದ್ದ ವ್ಯಕ್ತಿ ಮೈಸೂರಿನ ಸಮೀಪ ಅಡಗಿಕೊಂಡಿದ್ದಾರೆ ಎಂಬ ಸ್ಟೋರಿ ಮಾಡಿಬಿಟ್ಟಿದ್ದೆ.
ಹೀಗೆ ಸ್ಪೋರಿ ಮಾಡಿದವನು,ಮುಂದಿನ ವಾರ ಏನು ಮಾಡಬೇಕು?ಎಂಬ ಚಿಂತೆಗೆ ಬಿದ್ದೆನೇ ಹೊರತು,ಬರೆದ ಸ್ಟೋರಿ ಜೀವಕ್ಕೇ ಸಂಚಕಾರ ತರುವ ಮಟ್ಟಕ್ಕೆ ಬೆಳೆಯುತ್ತದೆ ಎಂದು ಊಹಿಸಿರಲಿಲ್ಲ.ಆದರೆ ಅದೇಕೋ,ಏನೋ ಇದ್ದಕ್ಕಿದ್ದಂತೆ ಸದರಿ ಭೂಗತ ದೊರೆಯ ಕುಟುಂಬದ ಒಬ್ಬರು,ನಾನು ಬರೆದ ವಿಷಯವನ್ನು ನೋಡಿ ಸೀರಿಯಸ್ ಆಗಿ ಬಿಟ್ಟಿದ್ದರು.
ಹೀಗಾಗಿಯೇ ಪತ್ರಿಕೆಯ ಸಂಪಾದಕರಿಗೆ ಫೋನು ಮಾಡಿ,ಯಾವುನ್ರೀ ಅವನು?ಮನಸ್ಸಿಗೆ ಬಂದಂತೆ ಬರೆದಿದ್ದಾನೆ?ಎಲ್ಲಿ ಅವನ ವಿಳಾಸ ಕೊಡ್ರೀ.ಕೊಂದು ಹಾಕಿಬಿಡುತ್ತೇನೆ ಎಂದು ಗದರಿಬಿಟ್ಟಿದ್ದರು.
ಅಯ್ಯೋ,ಹೋಗಲಿ ಬಿಡ್ರೀ,ಅದನ್ನು ಓದಿ,ನಿಮ್ಮ ಹೃದಯಕ್ಕೆ ನೋವಾಗಿದ್ದರೆ ಬೇರೆ ಮಾತು.ಆದರೆ ಅದು ಬರೀ ಲೆಕ್ಕಾಚಾರದ ಸ್ಟೋರಿ ಅಂತ ನಮ್ಮ ಸಂಪಾದಕರು ಸಮಾಧಾನ ಹೇಳಿದ್ದರೆ ಮುಗಿದೇ ಹೋಗುತ್ತಿತ್ತೇನೋ?ಆದರೆ ಅವರೋ?ಫುಲ್ಲು ರೈಸಿಂಗ್ ಸ್ಟಾರು.ಹಾಗಂತಲೇ:”ಅರೇ,ಬರೆದಿದ್ದೇವೆ.ಏನೀಗ?ನಾನು ಕೋತ್ವಾಲ್ ರಾಮಚಂದ್ರನಿಂದ ಹಿಡಿದು,ಜಯರಾಜ್ ತನಕ ಎಲ್ಲ ಭೂಗತ ದೊರೆಗಳನ್ನು ನೋಡಿದ್ದೇನೆ ಮೇಡಂ,ಯಾರಿಗೂ ಜಪ್ಪಯ್ಯ ಅಂದಿಲ್ಲ.ಈಗ ನಿಮಗೆ ಹೆದರುತ್ತೇನಾ?”ಅಂತ ತಿರುಗೇಟು ಹೊಡೆದಿದ್ದಾರೆ.
ಅಷ್ಟೇ ಅಲ್ಲ,ಮಾತನಾಡುವ ಭರದಲ್ಲಿ,ನೋಡ್ರೀ,ನಾನು ಡೋಂಟ್ ಕೇರ್ ಮಾಸ್ಟರ್.ಎಂತೆಂತವರೋ ನನ್ನನ್ನು ಹೆದರಿಸಲು ಟ್ರೈ ಕೊಟ್ಟು ರೈಟ್ ಹೇಳಿದ್ದಾರೆ.ಜಾಸ್ತಿ ಮಾತನಾಡಿದರೆ ಅದನ್ನು ಬರೆದವನ ಅಡ್ರೆಸ್ಸು,ಕಾಂಟ್ಯಾಕ್ಟ್ ಫೋನ್ ನಂಬರನ್ನೇ ಕೊಡುತ್ತೇನೆ.ತಗಳ್ರೀ.ಅದೇನು ಮಾಡ್ಕತೀರೋ,ಮಾಡ್ರೀ,ನೋಡೋಣ ಎಂದು ಡಿಟೈಲ್ಸೂ ಕೊಟ್ಟು ಬಿಟ್ಟಿದ್ದಾರೆ.
ಅವರಾಡಿದ ಮಾತಿನ ಧಾಟಿಗೆ ಕೋಪಗೊಂಡ ಭೂಗತ ದೊರೆಯ ಸಂಬಂಧಿ,ಅವರು ಕೊಟ್ಟ ನಂಬರಿಗೆ ಫೋನಿನ ಮೇಲೆ ಫೋನು ಮಾಡಿದ್ದಾರೆ.ಆಗೆಲ್ಲ ಮೊಬೈಲು ಎಲ್ಲಿತ್ತು?ಬೆಂಗಳೂರು ಪ್ರೆಸ್ ಕ್ಲಬ್ಬೇ ನಮಗೆ ತವರು ಮನೆ.ಅಲ್ಲಿದ್ದ ಕಾಯಿನ್ ಬೂತಿನಲ್ಲಿದ್ದ ಫೋನೇ ನಮಗೆ ಕಾಂಟ್ಯಾಕ್ಟ್ ನಂಬರು.ಹೀಗಾಗಿ ಒಂದೇ ಸಮನೆ ಫೋನು ಮೊಳಗತೊಡಗಿದೆ.ಆ ದಿನ ಮಧ್ಯಾಹ್ನ ಹೋಗಿ ನೋಡುತ್ತೇನೆ.ಕ್ಲಬ್ಬಿನ ಮ್ಯಾನೇಜರು ಓಡಿ ಬಂದವರೇ,”ಸಾರ್,ಅದ್ಯಾರೋ,ಲೇಡಿ ನಿಮ್ಮನ್ನು ಕೇಳಿ ಒಂದೇ ಸಮನೆ ಕಾಲ್ ಮಾಡುತ್ತಿದ್ದಾರೆ.ತಕ್ಷಣ ಕಾಂಟ್ಯಾಕ್ಟು ಮಾಡದಿದ್ದರೆ ಕೊಂದು ಹಾಕಿಬಿಡುತ್ತೇವೆ ಎಂದು ಹೇಳಿ ಅನ್ನುತ್ತಿದ್ದಾರೆ.ಏನು ಮಾಡುವುದು?” ಅಂದರು.ಅವರು ಹೀಗೆ ಹೇಳಿದ ಅರ್ಧಗಂಟೆಗೇ ಕ್ಲಬ್ಬಿಗೆ ಬಂದರು ರವಿ ಬೆಳಗೆರೆ!
ಆಗವರ ಬಳಿ ಒಂದು ಬೈಕ್ ಇತ್ತು.ಬಂದವರೇ,ಭೂಗತ ದೊರೆಯ ಹೆಸರು ಹೇಳಿ:ಅರೇಸ್ಕೀ,ನೀನು ಯಾವತ್ತೂ ಪೊಲಿಟಿಕಲ್ ಸುದ್ದಿ ಬರೆಯೋನು?ಅಂಡರ್ ವರ್ಲ್ಡ್ ಬಗ್ಗೆ ಏಕೆ ಬರೆದೆ?ನೋಡಿದರೆ ಆವಮ್ಮ ಬೇರೆ ಸೀರಿಯಸ್ ಆಗಿದ್ದಾರೆ.ನಿನ್ನನ್ನು ಮುಗಿಸೇ ಬಿಡುತ್ತೇವೆ ಅನ್ನುತ್ತಿದ್ದಾರೆ.ಅದೇನು ಅಂತಹ ಸುದ್ದಿ ಬರೆದೆ?ಎಂದರು.
ನಾನು ವಿಷಯ ಹೇಳಿದೆ.ಅದಕ್ಕವರು,ನೋಡು,ನೀನು ಏನು ಬರೆದೆ ಅನ್ನುವುದು ಮುಖ್ಯವಲ್ಲ.ಆದರೆ ಡೈಲಿ ನೀನು ತಿರುಗಾಡುವ ರೂಟ್ ಏನಿದೆ?ಅದನ್ನು ಚೇಂಜ್ ಮಾಡು.ಈಗ ಹೇಳು,ನೀನು ಡೈಲಿ ತಿರುಗಾಡುವ ರೂಟ್ ಯಾವುದು?ಅಂದರೆ ಮನೆಯಿಂದ ಎಷ್ಟು ಗಂಟೆಗೆ ಹೊರಡುತ್ತೀಯ?ಎಷ್ಟು ಗಂಟೆಗೆ ವಾಪಸ್ ಹೋಗುತ್ತೀಯ?ಅಷ್ಟರೊಳಗಾಗಿ ಎಲ್ಲೆಲ್ಲಿ ತಿರುಗುತ್ತೀಯ?ಎಂದರು.
ಅರೇ,ನನ್ನದೇನು ಮಹಾ ರೂಟು.ಬೆಳಿಗ್ಗೆ ಎನ್.ಆರ್.ಕಾಲೋನಿಯಲ್ಲಿ ಮೂವತ್ತೊಂದನೇ ನಂಬರು ಬಸ್ ಹಿಡಿದರೆ ಮೈಸೂರು ಬ್ಯಾಂಕ್ ಗೆ ತಂದುಬಿಡುತ್ತಾರೆ.ಅಲ್ಲಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಹದಿನೈದು ನಿಮಿಷ ನಡೆದರೆ ವಿಧಾನಸೌಧ.ಇಲ್ಲವೇ ನೂರೆಪ್ಪತ್ತೇಳನೇ ನಂಬರು ಬಸ್ ಹಿಡಿದರೆ ವಿಧಾನಸೌಧದ ಪಕ್ಕಕ್ಕೇ ತಂದು ಬಿಸಾಡುತ್ತಾನೆ.ಸಂಜೆ ಅದೇ ನೂರೆಪ್ಪತ್ತೇಳನೇ ನಂಬರ್ ಬಸ್ಸಿನಲ್ಲಿ ವಾಪಸ್ಸು ಹೋಗುತ್ತೇನೆ ಎಂದೆ.
ಹಾಗಿದ್ದರೆ ಸರಿ,ಇಂದಿನಿಂದಲೇ ನಾನು ಹೇಳುವ ತನಕ ರೂಟ್ ಚೇಂಜ್ ಮಾಡು.ಯಾಕೆಂದರೆ ನಿನ್ನ ಮೇಲೆ ಕೋಪ ಮಾಡಿಕೊಂಡಿರುವವರು ನಿಜಕ್ಕೂ ಸೀರಿಯಸ್ ಆಗಿದ್ದರೆ ನಿನ್ನನ್ನು ಫಾಲೋ ಮಾಡುತ್ತಾರೆ.ಒಂದು ದಿನ ಕತೆ ಮುಗಿಯುತ್ತದೆ.ಹಾಗಾಗಬಾರದು ಎಂದರೆ ದಿನಕ್ಕೊಂದು ರೂಟಿನಲ್ಲಿ ತಿರುಗಾಡಬೇಕು.ನೆನಪಿಡು,ವಿಷಯ ತುಂಬ ಸೀರಿಯಸ್ ಆಗಿಬಿಡಬಹುದು ಎಂದು ನಾನು ಹೇಳುತ್ತಿಲ್ಲ.ಆದರೆ ನಾನು ಕೊಟ್ಟ ವಾರ್ನಿಂಗ್ ಪ್ರಕಾರ,ರೂಟು ಚೇಂಜು ಮಾಡಿಕೋ ಎಂದರು.
ಸರಿ,ನಾನು ಅಂದಿನಿಂದಲೇ ರೂಟು ಚೇಂಜ್ ಮಾಡಿಕೊಂಡೆ.ವಿಧಾನಸೌಧದಿಂದ ಶಿವಾಜಿನಗರಕ್ಕೆ ಹೋಗುವುದು,ಮೂವತ್ತೆರಡನೇ ನಂಬರು ಬಸ್ಸಿನಲ್ಲಿ ಎನ್.ಆರ್.ಕಾಲೋನಿಗೆ ಹೋಗುವುದು.ಅದೇ ರೀತಿ ಬೆಳಿಗ್ಗೆ ಮಾಮೂಲು ಟೈಮಿಗಿಂತ ಮುಂಚೆ ಎಪ್ಪತೇಳನೆ ನಂಬರಿನ ಬಸ್ಸು ಹತ್ತಿ ಮಹಾಲಕ್ಷ್ಮೀ ಲೇಔಟು ಎನ್ನುವುದು,ದಾರಿ ಮಧ್ಯೆ ಇಳಿದು ವಿಧಾನಸೌಧಕ್ಕೆ ಬರುವುದು.
ಹೀಗೆ ಸ್ವಲ್ಪ ದಿನ ರೂಟೇನೋ ಚೇಂಜ್ ಮಾಡಿದೆ.ಆದರೆ ಯಾರೋ ನನ್ನನ್ನು ಫಾಲೋ ಮಾಡುತ್ತಿದ್ದಾರೆ ಎಂಬ ನಂಬಿಕೆ ತಲೆಯಲ್ಲಿ ಕುಳಿತು,ಯಾರೇ ದುರುಗುಟ್ಟಿ ಏನನ್ನೋ ನೋಡುತ್ತಿದ್ದರೂ,ನನ್ನನ್ನೇ ನೋಡುತ್ತಿದ್ದಾರೆ ಎಂಬಂತೆ ಭಾಸವಾಗಿ,ಬೆನ್ನ ಹುರಿಯಲ್ಲೆಲ್ಲ ನಡುಕ ಬರುತ್ತಿತ್ತು.
ಯಾರೋ,ನೋಡಿಕೊಂಡವರು ಹಿಂದಿನಿಂದ ಬಂದು ಚಾಕು ಹಾಕಿದರೆ,ಗುಂಡು ಹೊಡೆದರೆ ಏನು ಮಾಡಲು ಸಾಧ್ಯ?ಕೊಲ್ಲಬೇಕೆಂದುಕೊಂಡವರು ಮನಸ್ಸು ಮಾಡಿದ್ದಕ್ಕೆ ರಾಜೀವ್ ಗಾಂಧಿಯಂತವರೇ ಬಿಗಿ ಬಂದೋಬಸ್ತ್ ಇದ್ದರೂ ಬಾಂಬ್ ಧಾಳಿಗೆ ಸಿಲುಕಿ ತೀರಿಕೊಂಡರು.ಇನ್ನು ಪುಟಗೋಸಿ ನಾನ್ಯಾವ ಲೆಕ್ಕ?ಹಾಗಂದುಕೊಂಡೇ ಒಂದು ವಾರ ರೂಟು ಚೇಂಜು ಮಾಡಿ ತಿರುಗಾಡಿದೆ.
ಹೀಗೇ ತಿರುಗುತ್ತಿದ್ದಾಗ ರವಿ ಬೆಳಗೆರೆ ಮತ್ತೆ ಕ್ಲಬ್ಬಿಗೆ ನನ್ನನ್ನು ಹುಡುಕಿಕೊಂಡು ಬಂದರು.ಬಂದವರೇ,ವಿಠ್ಢಲ್,ವಿಷಯದ ಬಗ್ಗೆ ಭೂಗತ ದೊರೆಯೇನೂ ತಲೆ ಕೆಡಿಸಿಕೊಂಡಿಲ್ಲ.ಆದರೆ ಅವರ ಫ್ಯಾಮಿಲಿಯವರು ಯಾಕೆ ಸಿಟ್ಟು ಮಾಡಿಕೊಂಡಿದ್ದಾರೋ?ಗೊತ್ತಾಗುತ್ತಿಲ್ಲ.ಹೀಗಾಗಿ ಚೆಕ್ ಮಾಡಿಕೊಂಡೆ.ಅದಕ್ಕೆ ಭೂಗತ ದೊರೆಯೇ,ಅಯ್ಯೋ,ಅವರೇನು ನನ್ನ ತೇಜೋವಧೆ ಮಾಡಲು ಬರೆದಿದ್ದಾರಾ?ಇಲ್ಲವಲ್ಲ?ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ ಎಂದರಂತೆ.ಹೀಗಾಗಿ ನೀನು ಮಾಮೂಲಿನಂತೆ ತಿರುಗಾಡಿಕೋ ಎಂದರು.
ಅದಾದ ಮರುದಿನದಿಂದ ನನ್ನದು ಯಥಾ ಪ್ರಕಾರದ ಪಯಣ.ಮನಸ್ಸು ಬೇರೆ ಹಗುರವಾಗಿತ್ತಲ್ಲ?ಹೀಗಾಗಿ ಯಾರೇ ನೋಡಿದರೂ ಅದರಲ್ಲಿ ವಿಶೇಷ ಅರ್ಥವೇನೂ ಕಾಣುತ್ತಿರಲಿಲ್ಲ.ಹೀಗಾಗಿ ಆ ಭೂಗತ ದೊರೆಯ ಫ್ಯಾಮಿಲಿಯವರು ತಟಕ್ಕಂತ ಸಿಟ್ಟು ಮಾಡಿಕೊಂಡರು ಅಂತ ನಾನು ಫಟಕ್ಕಂತ ಏನೋ ಆಗಿ ಹೋಗುತ್ತದೆ ಎಂದುಕೊಳ್ಳುವುದು ತಪ್ಪು ಅನ್ನಿಸತೊಡಗಿತು.
ನಾನು ನೋಡಿದಂತೆ,ಇದ್ದಕ್ಕಿದ್ದಂತೆ ನಿಮ್ಮ ವಿರುದ್ಧ ಸಿಟ್ಟು ಮಾಡಿಕೊಳ್ಳುವವರು ಅಷ್ಟೇ ಬೇಗ ಅದನ್ನು ಮರೆತುಬಿಡುತ್ತಾರೆ.ಆದರೆ ನಿಮ್ಮೆದುರು ಏನನ್ನೂ ತೋರಿಸಿಕೊಳ್ಳದೆ,ನೀವು ಬರೆದಿದ್ದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ದ್ವೇಷ ಕಾರುವವರು ಟೈಮು ನೋಡಿ ಸಖತ್ತಾಗಿಯೇ ಗುಡ್ ದಾ ಕಲ್ಲಾಬಿಲ್ಲಿಯಾಗುವಂತೆ ಬಡಿದು ಬಿಡುತ್ತಾರೆ.ಹಾಗಂತ.ಅದು ದೈಹಿಕ ಹಲ್ಲೆಯೇ ಆಗಬೇಕೆಂದಿಲ್ಲ.
ಹೀಗೆ ನೋಡುತ್ತಾ ಹೋದರೆ ಪತ್ರಿಕೋದ್ಯಮದಲ್ಲಿ ನಾವು ಬರೆದಾಗ,ಯಾರು ತಟಕ್ಕಂತ ಸಿಟ್ಟು ಮಾಡಿಕೊಳ್ಳುತ್ತಾರೋ?ವಾಸ್ತವದಲ್ಲಿ ಅವರಿಂದ ತೊಂದರೆಯೇ ಆಗಿಲ್ಲ.ಅದರ ಬದಲು ನಾವು ಬರೆದಾಗ,ಅಯ್ಯೋ,ಪತ್ರಕರ್ತರು ಏನೋ ಟೀಕೆ ಮಾಡುತ್ತೀರಿ ಅಂತ ಸೀರಿಯಸ್ ಆಗಲು ಸಾಧ್ಯವೇ?ಅಂತ ಉದಾರವಾಗಿ ಮಾತನಾಡಿದವರೇ ಮರೆಯಲಾಗದಂತಹ ಗುನ್ನ ಹಾಕಿದ ಉದಾಹರಣೆಗಳು ಸಾಕಷ್ಟಿವೆ.
ಅಂದ ಹಾಗೆ ಈ ರೀತಿ,ತಟಕ್ಕಂತ ಸಿಟ್ಟು ಮಾಡಿಕೊಳ್ಳುವವರ ಪೈಕಿ ಮಾಜಿ ಪ್ರಧಾನಿ ದೇವೇಗೌಡರ ಮಗ ಹೆಚ್.ಡಿ.ರಮೇಶ್ ಕೂಡಾ ಒಬ್ಬರು.ತಮಗೇನೇ ಅನ್ನಿಸಿದರೂ ಅದನ್ನು ತಕ್ಷಣವೇ ವ್ಯಕ್ತಪಡಿಸುವ ರಮೇಶ್,ಯಾವತ್ತೂ ತಮ್ಮ ಸಿಟ್ಟಿಗಾಗಿ ಇನ್ನೊಬ್ಬರ ಮೇಲೆ ಸೇಡು ತೀರಿಸಿಕೊಂಡವರಲ್ಲ.
ಒಂದು ಸಲ ಹೀಗೇ ಆಯಿತು.ಆಗ ದೇವೇಗೌಡರು ರಾಷ್ಟ್ರ ರಾಜಕಾರಣದಲ್ಲಿ ಫುಲ್ಲು ಮಿಂಚಿಂಗು.ಆ ಸಂದರ್ಭದಲ್ಲೇ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿ ಡಿ.ಜಿ.ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ಎಂಬ ಮಾಹಿತಿ ಬಂತು.ಆಗ ನಮ್ಮ ಕೆ.ಎಂ.ಶಿವರಾಜು ಸಖತ್ತು ಆಕ್ಟೀವ್ ಆದವನೇ ಒಂದು ಸ್ಟೋರಿ ತಂದುಬಿಟ್ಟ.
ನೂರೈವತ್ತು ಕೋಟಿ ರೂ ವೆಚ್ಚದಲ್ಲಿ ದೇವೇಗೌಡರು ಡಿ.ಜಿ.ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ಎಂಬುದು ಆ ಸ್ಟೋರಿ.ನಾನು ಅದನ್ನು ನೋಡಿದ್ದೇ ಕೇಳಿದೆ:ಗುರೂ,ನಮ್ಮ ಹಾಯ್ ಬೆಂಗಳೂರ್ ಆಫೀಸು ಇರುವುದು ಅದೇ ಪದ್ಮನಾಭ ನಗರದಲ್ಲಿ.ಬೆಳ್ಳಿಯನ್ನೇ ಬಳಸಿ ಫೌಂಡೇಷನ್ ಹಾಕಿದರೂ ಅಷ್ಟು ದುಡ್ಡು ಖರ್ಚಾಗುವ ಹಾಗೆ ಕಾಣುತ್ತಿಲ್ಲವಲ್ಲ?
ಅಯ್ಯೋ,ಬಿಲ್ಟಿಂಗು ಕಟ್ಟಲು ನೂರೈವತ್ತು ಕೋಟಿ ರೂಪಾಯಿ ಬೇಕಿಲ್ಲಪ್ಪಾ,ಆದರೆ ಆ ಆಸ್ಪತ್ರೆಗೆ ತಂದು ಹಾಕುವ ಮಷೀನ್ನುಗಳು ವಿಪರೀತ ದುಬಾರಿ.ಹೀಗಾಗಿ ನೂರೈವತ್ತು ಕೋಟಿ ರೂ ಖರ್ಚಾಗುತ್ತಿದೆ ಎಂದ.ನಾನು ಸ್ವಲ್ಪ ಹಿಂಜರಿದು, ನೂರೈವತ್ತು ಕೋಟಿ ಎಂಬುದರ ಬದಲು,ಐವತ್ತು ಕೋಟಿ ಎಂದು ಬರೆದೆ.
ಶಿವರಾಜು ಹಿಂದೆ ಮುಂದೆ ನೋಡದೆ,ನೂರೈವತ್ತು ಕೋಟಿ ರೂ ಎಂದು ಬರೆದ.ತಾನು ಬರೆದಿದ್ದಷ್ಟೇ ಅಲ್ಲದೇ ಇಂಗ್ಲೀಷ್ ಪತ್ರಿಕೆಯ ನಮ್ಮ ಸ್ನೇಹಿತರೊಬ್ಬರಿಗೆ ಆ ಸ್ಟೋರಿಯನ್ನು ಕೊಟ್ಟ.ಅವರು ಕ್ರಾಸ್ ಚೆಕ್ ಮಾಡಿಕೊಳ್ಳಬೇಕಲ್ಲ?ಹಾಗಂತಲೇ ಕ್ರಾಸ್ ಚೆಕ್ ಮಾಡಿದ್ದಾರೆ.ಆಗ ಲೈನಿಗೆ ಸಿಕ್ಕ ದೇವೇಗೌಡರ ಮಗ ರಮೇಶ್ ಯಕ್ಕಾ ಮಕ್ಕಾ ಬೈದಾಡಿದ್ದಾರೆ.ಅದೇನ್ರೀ?ನೂರೈವತ್ತು ಕೋಟಿ ಅಂದರೆ?ನೂರೈವತ್ತು ಕೋಟಿ ಗೆ ಎಷ್ಟು ಸೊನ್ನೆಗಳು ಅಂತ ಗೊತ್ತೇನ್ರೀ?ಪ್ರಧಾನಿಯ ಮಗ ಅಂತ ಸುಮ್ಮನಿದ್ದೀನಿ.ಇಲ್ಲದಿದ್ದರೆ ನಿಮ್ಮ ಕೈ ಕಾಲು ಮುರಿಸಿಬಿಡುತ್ತಿದ್ದೆ ಎಂದು ಫೋನಿನಲ್ಲೇ ರಂಪಾಟ ಮಾಡಿಬಿಟ್ಟಿದ್ದಾರೆ.ಪಾಪ,ಆ ಸ್ನೇಹಿತರು ಮರುದಿನ ಬೆಳಿಗ್ಗೆ ಬಂದು,ರಮೇಶ್ ಹೇಳಿದ್ದನ್ನು ವಿವರಿಸುವ ವೇಳೆಗಾಗಲೇ ಆ ಸ್ಟೋರಿ ನಮ್ಮ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿ ಹೋಗಿದೆ.
ಅದನ್ನು ನೋಡಿದ ರಮೇಶ್ ಇನ್ನಷ್ಟು ರಾಂಗ್ ಆಗಿ ಶಿವರಾಜು ಅವರ ಪತ್ರಿಕೆಯ ಕಛೇರಿಗೆ ಫೋನು ಮಾಡಿ ತರ್ರಂ ಬರ್ರಾ ಬೈದಿದ್ದಾರೆ.ಹೀಗೆ ಒಂದು ಕಡೆ ರಮೇಶ್ ಕಛೇರಿಗೇ ಫೋನು ಮಾಡಿರುವುದು,ಮತ್ತೊಂದು ಕಡೆ,ಇಂಗ್ಲೀಷ್ ಪತ್ರಿಕೆಯ ನಮ್ಮ ಸ್ನೇಹಿತರಿಗೆ ಬೈದಾಡಿದ ವಿಷಯ ತಿಳಿದಿದ್ದೇ ತಡ,ಶಿವರಾಜು ಥೇಟ್ ಮುಕ್ಕಣ್ಣ ಈಶ್ವರನ ತರವೇ ಸಿಟ್ಟು ಮಾಡಿಕೊಂಡು ಬಿಟ್ಟ.ಸಿಟ್ಟು ಬಂದಾಗ ಬಲಗೈ ಹೆಬ್ಬೆರಳಿನಿಂದ ಹಣೆಯ ಮಧ್ಯ ಭಾಗಕ್ಕೆ ಹೊಡೆದುಕೊಳ್ಳುವುದು ಅವನ ರೂಢಿ.ಅದೇನು ಮಾಡಿದನೋ?ಏನು ಕತೆಯೋ?ಡಿ.ಜಿ.ಆಸ್ಪತ್ರೆಗೆ ತರಿಸುತ್ತಿರುವ ಮಷೀನುಗಳ ರೇಟಿನ ಪಟ್ಟಿಯನ್ನೇ ತಂದುಬಿಟ್ಟ.ಆ ಮಷೀನುಗಳು ಆಸ್ಪತ್ರೆಗ ಬರುತ್ತವೋ?ಇಲ್ಲವೋ?ಆದರೆ ಮಷೀನುಗಳ ರೇಟು ಮಾತ್ರ ಪಕ್ಕಾ ಆಗಿದ್ದವು.
ಯೋ,ಅದೇನೇ ಆಗಲಿ ಕಣಯ್ಯಾ,ಈ ರೀತಿ ಹೆದರಿಸುವ ಮಟ್ಟಕ್ಕೆ ಅವರು ಹೋಗಿದ್ದಾರೆ ಎಂದರೆ ನಾವು ಬರೆಯದೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ತಾಂಡವ ನೃತ್ಯ ಮಾಡಿದ ಶಿವರಾಜು.ಆದರೆ ರಮೇಶ್ ರನ್ನು ಬಲ್ಲವರೊಬ್ಬರು ನಮ್ಮನ್ನು ಕರೆದು ಹೇಳಿದರು:ರೀ,ನಿಮಗೆ ಬೈದವರು ಯಾರು?ರಮೇಶ್ ತಾನೇ?ಸಿಟ್ಟು ಬಂದಾಗ,ಅವರಿಗೆ ಬೈದು ಅಭ್ಯಾಸವಿದೆಯೇ ಹೊರತು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅಭ್ಯಾಸವಿಲ್ಲ ಕಣ್ರೀ.ಯಾಕೆ?ನೀವು ಕೂಡಾ ಅವರು ಬೈಯ್ಯುವ ಹಾಗೆ ಬರೆದಿಲ್ಲವೇ?ಅದಕ್ಕಾಗಿ ಕೋಪ ಮಾಡಿಕೊಂಡು ಅಂದಿದ್ದಾರೆ.ಹಾಗಂತ,ಅವರು ಯಾವತ್ತೂ ಎಕ್ಸ್ ಟ್ರೀಮ್ ಗೆ ಹೋದವರಲ್ಲ,ಹೋಗುವುದಿಲ್ಲ ಎಂದರು.
ಎಷ್ಟೇ ಆದರೂ ಈ ಮಾತು ಹೇಳಿದವರು ಪಟೇಲರ ಕ್ಯಾಬಿನೆಟ್ಟಿನಲ್ಲಿ ಮಂತ್ರಿಯಾಗಿದ್ದವರು.ಅವರು ನಮ್ಮನ್ನು ಕರೆಸಿ,ಇಂತಹ ಮಾತು ಹೇಳುತ್ತಾ,ಕೊನೆಗೊಂದು ಮಾತು ಹೇಳಿದರು:ನೋಡಿ,ಯಾರು ನಿಮ್ಮ ಮೇಲೆ ತಟಕ್ಕಂತ ಸಿಟ್ಟು ಮಾಡಿಕೊಳ್ಳುತ್ತಾರೋ?ಅವರ ಬಗ್ಗೆ ಫಟಕ್ಕಂತ ಒಂದು ತೀರ್ಮಾನಕ್ಕೆ ಬಂದು ಬಿಡಬೇಡಿ.ಹೇಗೆ ನೀವು ಒಂದು ಸುದ್ದಿಯನ್ನು ಬರೆದು ವಿಷಯವನ್ನು ಮರೆತು ಬೇರೆ ವಿಷಯ ಹುಡುಕುತ್ತೀರೋ?ಹಾಗೆಯೇ ತಟಕ್ಕಂತ ಸಿಟ್ಟು ಮಾಡಿಕೊಳ್ಳುವವರೂ,ಬೈದಾದ ಮೇಲೆ ಬೇರೆ ವಿಷಯದ ಕಡೆ ಗಮನ ಹರಿಸುತ್ತಾರೆ.ಡೋಂಟ್ ಬಿ ಸೀರಿಯಸ್ ಅಂದರು.
ಹೀಗೆ ನೋಡುತ್ತಾ ಹೋದರೆ,ತಟಕ್ಕಂತ ನಮ್ಮ ಮೇಲೆ ಸಿಟ್ಟು ಮಾಡಿಕೊಂಡ ಎಷ್ಟೋ ಜನರಿದ್ದಾರೆ.ಆದರೆ ಅವರು ಯಾವತ್ತೂ ನಮಗೆ ತೊಂದರೆ ಮಾಡಿಲ್ಲ.ಯಾರು ತೊಂದರೆ ಕೊಡಲಾರರು ಎಂದುಕೊಂಡಿದ್ದೇವೋ,ಅವರು ಮುಟ್ಟಿ ನೋಡಿಕೊಳ್ಳುವಂತೆ ಹಿಂಸೆ ಕೊಟ್ಟಿದ್ದಾರೆ.
ಹೀಗಾಗಿ ಹೇಳಿದೆ.ತಟಕ್ಕಂತ ಸಿಟ್ಟು ಮಾಡಿಕೊಳ್ಳುವವರ ಬಗ್ಗೆ ಫಟಕ್ಕಂತ ಒಂದು ತೀರ್ಮಾನಕ್ಕೆ ಬಂದು ಬಿಡಬೇಡಿ.ಅವರು ಹೀಗೇ ಎಂದು ನಿರ್ಧರಿಸಿಬಿಡಬೇಡಿ.ಯಾಕೆಂದರೆ ಪಟಕ್ಕಂತ ಕೋಪಿಸಿಕೊಳ್ಳುವವರಿಗಿಂತ,ಮೌನವಾಗಿದ್ದು ಬಿಡುವವರು ಅಪಾಯಕಾರಿ.ಅಂತವರ ಬಗ್ಗೆ ನೂರು ಸಲ ಯೋಚಿಸಿ.ಎಚ್ಚರದಿಂದಿರಿ.

ಆರ್.ಟಿ.ವಿಠ್ಢಲಮೂರ್ತಿ

LEAVE A REPLY

Please enter your comment!
Please enter your name here