ರಕ್ತದ ಜಲಪಾತ ಗೊತ್ತೆ ? (Blood Falls)

0
135

ಭೂಮಿಯ ಮೇಲೆ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳಿವೆ. ಆದರೂ ನಾವು ಎಲ್ಲ ಗೊತ್ತಿದೆ ಎಂಬಂತೇ ತಲೆಯೆತ್ತಿ ತಿರುಗುತ್ತಿರುತ್ತೇವೆ. ಹಾಗೆ ನೋಡಿದರೆ ನಮಗೆ ಎಳ್ಳುಕಾಳಿನಷ್ಟೂ ಏನೂ ಗೊತ್ತಿಲ್ಲ. ಗೊತ್ತಿರೋದೆಲ್ಲ ತುಂಬಾ ಸ್ವಲ್ಪ. ಎಷ್ಟೊ ವಿಸ್ಮಯಕಾರಿ ವಿಷಯಗಳು ನಮ್ಮ ಭೂಮಿಯಲ್ಲಿವೆ, ಕೆಲವನ್ನು ಅದಕ್ಕೆ ಕಾರಣವೇನು ಎಂದು ಪತ್ತೆಹಚ್ಚಲಾಗಿದೆ ಕೆಲವು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿವೆ.

ಇರಲಿ ವಿಷಯಕ್ಕೆ ಬರೋಣ. ಈ ಜೋಗ ಜಲಪಾತ ಗೊತ್ತು, ನಯಾಗಾರ ಜಲಪಾತ ಗೊತ್ತು, ಇದಾವುದು ರಕ್ತದ ಜಲಪಾತ ? ಅಂತ ಕುತೂಹಲ ಮೂಡಿತಲ್ಲವೇ ? ಇದನ್ನು ನಾವು ನೋಡೋದು ತುಂಬಾ ಕಷ್ಟ. ತುಂಬಾ ದೂರ ಪ್ರಯಾಣ ಮಾಡಬೇಕಾಗುವುದು. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಬೇಕಾಗುವುದು. ಅಲ್ಲದೇ ಅದಕ್ಕೆಲ್ಲ ನಮ್ಮ ದೇಹ, ಆರೋಗ್ಯ, ಮಾನಸಿಕ ಸ್ಥಿತಿಯನ್ನೂ ಸರಿಯಾಗಿ ಇಟ್ಟುಕೊಂಡಿದ್ದರೆ ಹೋಗಿಯೂ ಬರಬಹುದು. ಅಂದಹಾಗೆ ಈ ರಕ್ತದ ಜಲಪಾತ ಇರೋದು ಅಂಟಾರ್ಟಿಕಾದಲ್ಲಿನ ಟೈಲರ್ ಹಿಮನದಿಯಲ್ಲಿ. ಇದರ ಹೆಸರೇ ರಕ್ತದ ಜಲಪಾತ. (Blood Falls)

ಬರೀ ಮಂಜುಗಡ್ಡೆಯೇ ತುಂಬಿರುವ ಇಂತಹ ಸ್ಥಳದಲ್ಲಿ ರಕ್ತದ ಜಲಪಾತ ಎಲ್ಲಿಂದ ಬಂತು ಅಂತ ಅಚ್ಚರಿಯಲ್ಲವೇ ? ನಿಜ ಈ ರಕ್ತದ ಜಲಪಾತ ಹಿಮದ ಮಧ್ಯೆ ಸುರಿಯುತ್ತದೆ. 1911ರವರೆಗೂ ಇದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ನಂತರ ವಿಜ್ಞಾನಿಗಳಿಗೆ ಇದು ಗಮನಕ್ಕೆ ಬಂದಿತಾದರೂ ಯಾತಕ್ಕಾಗಿ ಹೀಗೆ ಎಂಬುದು ಗೊತ್ತಾಗಲಿಲ್ಲ. ಆದರೆ ಬೆಳ್ಳನೆಯ ಹಿಮದ ಮಧ್ಯೆ ಕೆಂಪನೆಯ ರಕ್ತದ ಹಾಗೆ ಸುರಿವ ನೀರು ಮಾತ್ರ ಅಚ್ಚರಿಗಳ ವಿದ್ಯಾಮಾನವಾಗಿತ್ತು. ಆದರೆ ಮುಂದೆ ವಿಜ್ಞಾನಿಗಳು ಈ ಕುರಿತು ಕೂಲಂಕಶವಾಗಿ ಸಂಶೋಧನೆ ಮಾಡಿ ಇದಕ್ಕೆ ಕಾರಣವೇನೆಂದು ಕಂಡುಹಿಡಿದರು. ಜಗತ್ತಿನ ಅತ್ಯಂತ ಶೀತದ ಸ್ಥಳ, ನೀರೂ ಹಿಮವಾಗುವ -17 ಡಿಗ್ರಿ ಶೀತ ಇರುವ ಸ್ಥಳದಲ್ಲಿ ಈ ರೀತಿಯಲ್ಲಿ ಕೆಂಪನೆಯ ನೀರು ಹರೀತಿರೋದಕ್ಕೆ ಕಾರಣವೇನು ಎಂಬುದೇ ಎಲ್ಲರಿಗೂ ಕುತೂಹಲ ಮೂಡಿಸಿತ್ತು. ಹರಿಯುವ ನೀರು ಯಾಕೆ ಹಿಮವಾಗಲಿಲ್ಲ ? ಎಂಬ ಪ್ರಶ್ನೆಯೂ ಉದ್ಭವಿಸಿತ್ತು.

ಅಂಟಾರ್ಟಿಕಾದಲ್ಲಿನ ಟೈಲರ್ ಹಿಮನದಿಯ ದಪ್ಪನೆಯ ಹಿಮಬಂಡೆಯ ಕೆಳಗೆ ಸುಮಾರು 2 ಮಿಲಿಯನ್ ವರ್ಷಗಳ ಹಿಂದೆ ಸೂಕ್ಷ್ಮಜೀವಿಗಳು ವಾಸವಿದ್ದವು. ಹೊರಜಗತ್ತಿನ ಸಂಪರ್ಕಿವಿಲ್ಲದಂತೆ, ಬೆಳಕನ್ನೂ ಕಾಣದಂತೆ, ಶಾಖವೆಂದರೇನೆಂದೇ ತಿಳಿಯದಂತೆ, ಆಮ್ಲಜನಕ ಎಂದರೇನೆಂದೂ ತಿಳಿಯದಂತೆ ದಪ್ಪ ಹಿಮಬಂಡೆಯಡಿಯಲ್ಲಿ ಅಘೋರ ತಪಸ್ಸಿಗೆ ಕುಳಿತಂತೆಯೇ ಇದ್ದವು. ಅಲ್ಲದೆ ಈ ಸರೋವರದಲ್ಲಿಯೇ ಕಬ್ಬಿಣ ಹಾಗು ಲವಣಾಂಶವೂ ಇತ್ತು. ಹೊರಜಗತ್ತಿನ ಆಮ್ಲಜಕನದ ಸಂಪರ್ಕಕ್ಕೆ ಬಂದೊಡನೆ ಈ ಕಬ್ಬಿಣಾಂಶ, ಲವಣಾಂಶ ಹೆಚ್ಚಿರುವುದರಿಂದ ಆ ನೀರು ತಕ್ಷಣವೇ ಕೆಂಪಾಗಿಬಿಟ್ಟಿತು. ಕಬ್ಬಿಣ ತುಕ್ಕು ಹಿಡಿದಾಗ ಬಣ್ಣ ಬರುವುದಿಲ್ಲವೇ ಹಾಗೆ.

ಈ ಹಿಮಬಂಡೆಯ ಕೆಳಗೆ ಇರುವ ಅಗಾಧವಾದ ಸರೋವರದ ನೀರು ಹೆಚ್ಚು ಉಪ್ಪಿನ ಲವಣಾಂಶದಿಂದ ಕೂಡಿದೆ. ಉಪ್ಪಿನಂಶ ಇರುವುದರಿಂದ ನೀರು ಹಿಮಗಟ್ಟುವುದನ್ನು ತಡೆಯುತ್ತದೆ ಅಲ್ಲದೆ ಶಾಖವನ್ನೂ ಬಿಡುಗಡೆ ಮಾಡುತ್ತದೆ ಹೀಗಾಗಿ ನೀರು ಉಕ್ಕಿ ಹಿಮಗಡ್ಡೆಯ ಮೇಲೆ ಹರಿದುಬರುತ್ತಿದೆ. ಈ ನೀರು ಒಂದೇ ಕಡೆಯಿಂದ ಬರದೆ ಹಿಮನದಿಯ ಅಡಿಯಲ್ಲಿನ ವಿವಿಧ ಬಿರುಕುಗಳು, ಪುಟ್ಟ ದಾರಿಗಳ ಮೂಲಕ ಈ ಜಲಪಾತದೆಡೆ ಬರುತ್ತದೆ. ಈ ರೀತಿ ಬರಲು ಸುಮಾರು 1.5 ಮಿಲಿಯನ್ ವರ್ಷಗಳಾಗಿದೆಯೆಂದೂ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಈ ರಕ್ತದ ಜಲಪಾತದ ನಿಗೂಢತೆಯನ್ನು ಅರಿಯಲೆಂದೇ ವಿಜ್ಞಾನಿಗಳು ರೇಡಿಯೋ-ಎಕೋ ಎಂಬ ತಂತ್ರಜ್ಞಾನದ ಮೂಲಕ ಹಿಮನದಿಯ ಕೆಳಗಿನ ರಹಸ್ಯವನ್ನು ಭೇದಿಸಿದ್ದಾರೆ. ಈ ವಿದ್ಯಾಮಾನದ ಪರಿಶೀಲನೆಗಾಗಿ ರಾಡಾರ್ ನ್ನೂ ಸಹ ಬಳಸಲಾಗಿದೆ. ಅಂಟಾರ್ಟಿಕಾದ ಅಗಾಧ ಹಿಮರಾಶಿಯ ಕೆಳಗೆ ಇನ್ನೂ ಏನೇನು ವಿಸ್ಮಯಗಳು ಅಡಗಿವೆಯೋ ಗೊತ್ತಿಲ್ಲ.

ನಮ್ಮಲ್ಲಿಯೂ ಕೆಲವು ಜನ ಹೀಗೇ ರಕ್ತ ಹರಿಸುತ್ತಾರೆ, ಪ್ರಕೃತಿಯ ವಿದ್ಯಾಮಾನದಿಂದಲ್ಲ, ಯಾರೋ, ಎಲ್ಲಿಯೋ ಇರುವ ತಮ್ಮ ನಾಯಕರುಗಳ ಗೆಲುವಿಗಾಗಿ, ಅವರ ಪ್ರತಿಷ್ಠೆಗಾಗಿ, ಜಾತಿ, ಧರ್ಮಗಳಿಗಾಗಿ, ಆಸ್ತಿ, ಅಂತಸ್ತಿನ ದ್ವೇಷಕ್ಕಾಗಿ ವಿನಾಕಾರಣ ಕೆಂಪನೆಯ ರಕ್ತ ಹರಿಸುತ್ತಲೇ ಇರುತ್ತಾರೆ.

ಸಿದ್ಧರಾಮ ಕೂಡ್ಲಿಗಿ
ಚಿತ್ರ ಹಾಗೂ ಮಾಹಿತಿ : ವಿವಿಧ ಮೂಲಗಳಿಂದ

LEAVE A REPLY

Please enter your comment!
Please enter your name here