ಪ್ರಾಮಾಣಿಕತೆ ಅಂದರೆ ಶಾಸ್ತ್ರಿ

0
148

ನಮ್ಮ ಲಾಲ್ ಬಹದ್ದೂರ್ ಅವರ ಜನ್ಮದಿನ ಮಹಾತ್ಮರ ಹುಟ್ಟು ಹಬ್ಬದ ದಿನದಂದೇ. ಈ ಭಾವನೆ ಅಕ್ಟೋಬರ್ 2 ಪುಣ್ಯದಿನ ಎಂಬ ಭಾವವನ್ನು ಪುಷ್ಟೀಕರಿಸುವಂತಿದೆ.

ಲಾಲ್ ಬಹಾದ್ದೂರರು ಮೊಘಲ್‌ಸಾರಾಯ್‌ನಲ್ಲಿ 1904ರ ಅಕ್ಟೋಬರ್ 2ರಂದು ಜನಿಸಿದರು. 1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಓದನ್ನು ಅರ್ಧದಲ್ಲೇ ಬಿಟ್ಟರು. 1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಸಂದಿತು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಶಾಸ್ತ್ರೀಜಿ ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಸ್ವಾತಂತ್ರ್ಯಾನಂತರದಲ್ಲಿ ಗೋವಿಂದ ವಲ್ಲಭ ಪಂತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದ ಶಾಸ್ತ್ರೀಜಿ, 1951ರಲ್ಲಿ ಲೋಕಸಭೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಜೊತೆಗೆ ರೈಲ್ವೆ ಖಾತೆಯನ್ನೂ ನಿರ್ವಹಿಸಿದರು. ಅರಿಯಳೂರು ಬಳಿ ಸಂಭವಿಸಿದ ರೈಲ್ವೆ ದುರಂತದ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದೆ ಸಾರಿಗೆ ಮಂತ್ರಿಯಾಗಿ ಮತ್ತು 1961ರಲ್ಲಿ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1964ರಲ್ಲಿ ಜವಾಹರ್‌ಲಾಲ್ ನೆಹರು ಅವರು ಸಾವನ್ನಪ್ಪಿದಾಗ ಕಾಂಗ್ರೆಸ್‌ನಲ್ಲಿ ಹಲವಾರು ಪ್ರತಿಸ್ಪರ್ಧಿಗಳು ಉದ್ಭವಗೊಂಡ ಹಿನ್ನಲೆಯಲ್ಲಿ ಅತ್ಯಂತ ಸರಳರೂ, ಅಧಿಕಾರದ ಬಗ್ಗೆ ಯಾವುದೇ ವ್ಯಾಮೋಹಗಳಿಲ್ಲದವರೂ ಆದ ಶಾಸ್ತ್ರಿಯವರು ಪ್ರಧಾನಿಯಾಗಿ ಮೂಡಿಬಂದರು.

ಶಾಸ್ತ್ರೀಜಿಯವರ ಆಡಳಿತ ಕಾಲದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಗಳು, ಭಾರತದಲ್ಲಿ ತಲೆದೋರಿದ್ದ ಬರಗಾಲ, ಕ್ಷಾಮ ಪರಿಸ್ಥಿತಿಗಳು ಮತ್ತು ಅದನ್ನು ಶಾಸ್ತ್ರೀಜಿಯವರು ಧೈರ್ಯದಿಂದ ಎದುರಿಸಿದ ಮಾತುಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ಇವುಗಳಲ್ಲಿ ಎದ್ದು ಕಾಣುವ ಗುಣವೆಂದರೆ ಅವರಲ್ಲಿದ್ದ ಪ್ರಾಮಾಣಿಕತೆ, ಸರಳತೆ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ದೃತಿಗೆಡದೆ ನಿಷ್ಠೆಯಿಂದ ಹಗಲಿರುಳೂ ದುಡಿಯುವ ಅಪ್ರತಿಮ ಗುಣ. ಪ್ರಾಮಾಣಿಕತೆ ಎಂಬ ವಿಚಾರ ಬಂದಾಗ ಭಾರತೀಯರಿಗೆ ಪ್ರಧಾನವಾಗಿ ಕಾಣುವ ವ್ಯಕ್ತಿ ಎಂದರೆ ಲಾಲ್ ಬಹದ್ದೂರ್ ಶಾಸ್ತ್ರಿಯವರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ಒಮ್ಮೆ ಒಂದು ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಬೇಕಾದ ಅನಿವಾರ್ಯ ಉಂಟಾಯಿತು. ಆ ರಾಜ್ಯದ ಮುಖ್ಯಮಂತ್ರಿ ಶಾಸ್ತ್ರೀಜಿಯವರಿಗೆ ದೂರವಾಣಿ ಕರೆ ಮಾಡಿ, “ಶಾಸ್ತ್ರೀಜಿ ದಯವಿಟ್ಟು ಕಾರ್ಯಕ್ರಮವನ್ನು ರದ್ದು ಮಾಡಬೇಡಿ. I have made first class arrangements for your visit” ಎಂದು ದೈನ್ಯತೆ ಪ್ರದರ್ಶಿಸಿದರು. ಶಾಸ್ತ್ರೀಜಿ, ಅಷ್ಟೇ ನಯವಾಗಿ ಹೇಳಿದರು, “why did you do first class arrangements for a third class man”. ಶಾಸ್ತ್ರೀಜಿ ಅವರು ಉನ್ನತ ಸ್ಥಾನದಲ್ಲಿದ್ದರೂ ಆ ಸ್ಥಾನದ ಬಗ್ಗೆ ಒಂದಿಷ್ಟೂ ಅಹಂಕಾರ ವ್ಯಾಮೊಹಗಳನ್ನು ಹೊಂದಿರಲಿಲ್ಲ.

ಅಂದಿನ ದಿನಗಳಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರೀಜಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟಪ್ರಾಯದಂತಿದೆ.

1966ರ ಜನವರಿ 11ರಂದು ಶಾಸ್ತ್ರೀಜಿಯವರು ಅಸು ನೀಗಿದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಜನರ ನೂಕು ನುಗ್ಗಲು ಉಂಟಾಗಿ, ಪ್ರಧಾನಿ ನಿವಾಸದ ಮುಂದೆ ನಿಯಂತ್ರಿಸಲು ಅಸಾಧ್ಯ ಸ್ಥಿತಿ ತಲುಪಿತ್ತು. ಶಾಸ್ತ್ರೀಜಿ ಅವರ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ವರ್ ಪ್ರಸಾದ್ ಅವರು ಕಾವಲಗಾರನನ್ನು ಕರೆದು ಏನಾದರೂ ತ್ವರಿತವಾಗಿ ಮಾಡು ಎಂದರು. ಆ ಕಾವಲುಗಾರ ಉತ್ತರಿಸಿದನಂತೆ. “ಸಾರ್ ಕ್ಷಮಿಸಿ, ಈ ಜನರು ಈ ಸತ್ತ ಮಹಾನು ಭಾವನಂತಲ್ಲ! ಈ ಮಹಾನುಭಾವನಾದರೋ ನಾನು ಏನೇ ಹೇಳಿದ್ದರೂ ಅದನ್ನು ತಕ್ಷಣವೇ ಪಾಲಿಸಿಬಿಡುತ್ತಿದ್ದರು ಎಂಬುದರಲ್ಲಿ ನನಗೆ ಕಿಂಚಿತ್ತೂ ಸಂದೇಹವಿಲ್ಲ. ಆದರೆ ಈ ಜನರಾದರೋ ನನ್ನ ಮಾತು ಕೇಳುವಂತಹವರಲ್ಲ.” ರಾಜೇಶ್ವರ ಪ್ರಸಾದ್ ಅವರು ಹೇಳುತ್ತಾರೆ, “ಇದು ಶಾಸ್ತ್ರೀಜಿ ಅವರ ಬಗ್ಗೆ ಇರುವ ಅತ್ಯಂತ ಹಿರಿಯ ಗೌರವಯುತ ವ್ಯಾಖ್ಯಾನ” ಎಂದು.

ಅವರು ನಿಧನರಾದಾಗ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ರೂಪಾಯಿಗಳು. ಅವರ ಬಳಿ ಎಂತಹದ್ದೂ ಆಸ್ತಿ ಇರಲಿಲ್ಲ ಎಂಬುದನ್ನು ಊಹಿಸುವುದೂ ಕಷ್ಟ. ಇಂತಹ ಮಹಾನುಭಾವ ನಮ್ಮ ಪ್ರಧಾನಿ ಆಗಿದ್ದರು ಎಂಬ ಹೆಮ್ಮೆ ನಮ್ಮದು.

ಶಾಸ್ತ್ರಿಗಳು ಆಡಳಿತ ನಡೆಸಿದ ಕಾಲ ದೇಶ ಕಷ್ಟಪಡುತ್ತಿದ್ದ ಕಾಲ. ಕೆಲವೊಮ್ಮೆ ನಾವು ಒಬ್ಬ ಶ್ರೇಷ್ಠ ಪ್ರಧಾನಿ ಅಂದರೆ ಆತನ ಕಾಲದಲ್ಲಿ ನಮ್ಮ ಅಭಿವೃದ್ಧಿ ಎಷ್ಟು ಆಯಿತು. ದೇಶದ ಜಿಡಿಪಿ ಎಷ್ಟು ಹೆಚ್ಚಾಯಿತು ಎಂದು. ಶಾಸ್ತ್ರಿಯವರು ಈ ಎಲ್ಲ ಸೂಚ್ಯಾಂಗಳ ಪರಿಧಿಗೆ ಸಿಲುಕದ ಶ್ರೇಷ್ಠ ಪ್ರಧಾನಿ. ಶ್ರೇಷ್ಠತೆ ಎಂಬುದು ಆರ್ಥಿಕ ಅಭಿವೃದ್ಧಿಯ ಸೂಚಕವಲ್ಲ. ಅಂತಾರಾತ್ಮನನ್ನು ಕಂಡುಕೊಳ್ಳುವ ಪ್ರಾಮಾಣಿಕ ನಡೆ.

ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಾಮಾಣಿಕರೆಂದು ಗುರುತಿಸುವುದರ ಜೊತೆಗೆ, ಅದು ನಮ್ಮ ದಾರಿ ಕೂಡಾ ಆಗಬೇಕು ಎಂಬ ಅರಿವು ಸಹಾ ಬಹು ಮುಖ್ಯ.

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here