ಬೂದಿಯಿಂದ ಮೇಲೆದ್ದು ಬೆಟ್ಟವೇರಿದ ನಾಯಕ

0
88

ಈ ಘಟನೆ ನಡೆದಿದ್ದು ಹೈದ್ರಾಬಾದ್ ನಿಜಾಮನ ಕಾಲದಲ್ಲಿ.
ಅವತ್ತು ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ನಿಜಾಮ ಮಿರ್ ಉಸ್ಮಾನ್ ಅಲಿ ಖಾನ್ ತಕರಾರು ತೆಗೆದಿದ್ದ.
ಏನೇ ಆಗಲಿ,ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ನಾವು ಸಿದ್ಧವಿಲ್ಲ ಎಂಬುದು ಆತನ ತಕರಾರು.
ಆ ಕಾಲದಲ್ಲಿ ತೆಲಂಗಾಣದ ಎಂಟು ಜಿಲ್ಲೆಗಳು,ಮರಾಠವಾಡದ ಐದು ಜಿಲ್ಲೆಗಳು, ಕರ್ನಾಟಕದ ಮೂರು ಜಿಲ್ಲೆಗಳು ಮತ್ತು ಬೀದರ್ ಜಿಲ್ಲೆಯ ಕೆಲ ಪ್ರದೇಶಗಳು ಹೈದ್ರಾಬಾದ್ ಸಂಸ್ಥಾನಕ್ಕೆ ಸೇರಿದ್ದವು.
ಯಾವಾಗ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ನಾನು ಸಿದ್ಧನಿಲ್ಲ ಎಂದು ನಿಜಾಮ ಪಟ್ಟು ಹಿಡಿದನೋ?ಅಗ ಜನ ಸಿಡಿದೆದ್ದರು.
ಸ್ವಾಮಿ ರಮಾನಂದ ತೀರ್ಥರ‌ ನೇತೃತ್ವದಲ್ಲಿ ಕರ್ನಾಟಕದ ಜಿಲ್ಲೆಗಳ ಜನರೂ ಹೋರಾಟಕ್ಕಿಳಿದರು.
ಹೀಗೆ ತನ್ನ ವಿರುದ್ಧ ಬಂಡೆದ್ದವರನ್ನು ನಿರ್ದಯವಾಗಿ ಹತ್ತಿಕ್ಕಲು ಮುಂದಾದ ನಿಜಾಮ ಇದಕ್ಕಾಗಿ ತನ್ನ ಬಳಿ ಇದ್ದ ರಜಾಕಾರರ ಪಡೆಯನ್ನು ಬಳಸಿದ.
ನಿಜಾಮನ ಈ ಖಾಸಾ ಪಡೆ ದಂಗೆ ಎದ್ದ ಜನರನ್ನು ಸಿಕ್ಕ ಸಿಕ್ಕಲ್ಲಿ ಹತ್ಯೆ ಮಾಡಿತು.ಕೊಲೆ,ಸುಲಿಗೆ,ಮಾನಭಂಗ ಎಂಬುದು ಅನು ದಿನದ ಮಾತಾಯಿತು.
ಇಂತಹ ದಿನಗಳಲ್ಲೇ ಬೀದರ್ ಜಿಲ್ಲೆ,ಹುಮ್ನಾಬಾದ್ ತಾಲ್ಲೂಕಿನ ವರವಟ್ಟಿ ಎಂಬ ಗ್ರಾಮಕ್ಕೆ ರಜಾಕಾರರ ಪಡೆ ಲಗ್ಗೆ ಹಾಕಿತು.ಕೈಗೆ ಸಿಕ್ಕವರನ್ನೆಲ್ಲ ಕೊಚ್ಚಿ ಹಾಕಿತು.

ಸಂದರ್ಭದಲ್ಲಿ ರಜಾಕಾರರ ಪಡೆ ಗುಡಿಸಲೊಂದಕ್ಕೆ ಇಟ್ಟ ಬೆಂಕಿಯಿಂದ ಅಲ್ಲಿದ್ದ ತಾಯಿ,ಮಕ್ಕಳು ಸುಟ್ಟು ಬೂದಿಯಾದರು.
ಈ ಘಟನೆ ನಡೆದಾಗ ಬೇರೆ ಊರಿಗೆ ಹೋಗಿದ್ದ ಮನೆಯ ಯಜಮಾನ ಮಾಪಣ್ಣ ವಾಪಾಸು ಬಂದು ನೋಡುತ್ತಾರೆ.ಆದರೆ ಅಲ್ಲೇನಿದೆ?ಕೈ ಹಿಡಿದ ಪತ್ನಿ, ಮಕ್ಕಳ ಸಮೇತ ಸಜೀವ ದಹನವಾಗಿದ್ದಾರೆ.
ಅದನ್ನು ನೋಡಿದ್ದೇ ತಡ,ನೆಲಕ್ಕೆ ಬಿದ್ದು ಮಣ್ಣಲ್ಲಿ ಹೊರಳಾಡುವ ಮಾಪಣ್ಣ, ಹೃದಯ ವಿದ್ರಾವಕವಾಗಿ ರೋಧಿಸುತ್ತಾರೆ.
ಸಂಸಾರಕ್ಕೆ ಸಂಸಾರವೇ ನಾಶವಾದರೆ ಇನ್ನು ಮಾಡುವುದಾದರೂ ಏನು?ಎಂಬ ನೋವಿನ ನಡುವೆಯೇ ಅವರ ಕಣ್ಣಿಗೆ ದೂರದಲ್ಲಿ ಮರವೊಂದಕ್ಕೆ ಕಟ್ಟಿದ ಜೋಲಿ ಕಾಣುತ್ತದೆ.ನಿಟ್ಟಿಸಿ ನೋಡಿದರೆ ಆ ಜೋಲಿಯಿಂದ ಹೊರಚಾಚಿದ ಪುಟಾಣಿ ಕಾಲುಗಳು ಕಾಣಿಸುತ್ತವೆ.
ಅಂತಹ ನೋವಿನಲ್ಲೂ ಧಡಬಡಿಸಿ ಮೇಲೆದ್ದ ಮಾಪಣ್ಣ ಆ ಜೋಲಿಯ ಬಳಿ ಹೋಗುತ್ತಾರೆ.
ಹೀಗೆ ಹೋದವರು ತಮ್ಮೆರಡು ಮೊಣಕೈಗಳಿಂದ ಜೋಲಿಯನ್ನು ಅಗಲಿಸಿ ನೋಡುತ್ತಾರೆ.ನೋಡಿದರೆ ಅದರಲ್ಲಿ ಮಲಗಿರುವುದು ತಮ್ಮ ಮಗ ಎಂಬುದು ಗೊತ್ತಾಗುತ್ತದೆ.
ಪತ್ನಿಯ ಜತೆ ಉಳಿದೆಲ್ಲ ಮಕ್ಕಳು ಸುಟ್ಟು ಬೂದಿಯಾಗಿದ್ದರೆ,ಜೋಲಿಯಲ್ಲಿ ಮಲಗಿಸಿದ ಕಾರಣಕ್ಕಾಗಿ ಈ ಪುಟ್ಟ ಬಾಲಕ ಉಳಿದಿದ್ದಾನೆ.
ಅದನ್ನು ನೋಡಿದ ತಕ್ಷಣವೇ ಮಾಪಣ್ಣ ಮಗನನ್ನು ಎತ್ತಿಕೊಂಡು ಅಲ್ಲಿಂದ ಓಡುತ್ತಾರೆ.
ಇದಾದ ಸ್ವಲ್ಪ ದಿನಗಳಲ್ಲೇ ಸರ್ದಾರ್ ವಲ್ಲಭಬಾಯ್ ಪಟೇಲ್,ವಿಲೀನಕ್ಕೆ ತಕರಾರು ಮಾಡುತ್ತಿದ್ದ ನಿಜಾಮನ ಮೇಲೆ ಮುಗಿಬೀಳುತ್ತಾರೆ.ಭಾರತೀಯ ಸೈನ್ಯವನ್ನು ನುಗ್ಗಿಸಿ ಹೈದ್ರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳುತ್ತಾರೆ.
ಅಂದ ಹಾಗೆ ಈ ಮಧ್ಯೆ ಮಗುವನ್ನೆತ್ತಿಕೊಂಡು ವರವಟ್ಟಿ ಗ್ರಾಮ ತೊರೆದಿದ್ದ ಮಾಪಣ್ಣ ಗುಲ್ಬರ್ಗಕ್ಕೆ ಬರುತ್ತಾರೆ.ಅಲ್ಲಿ ಎಂ.ಎಸ್.ಕೆ ಮಿಲ್ ನಲ್ಲಿ ಕಾರ್ಮಿಕರಾಗಿ ದುಡಿದು ಮಗುವನ್ನು ಸಾಕುತ್ತಾರೆ.
ಮುಂದೆ ಆ ಮಗು, ಅದೇ ಎಂ.ಎಸ್.ಕೆ ಮಿಲ್ ನ‌ ಕಾರ್ಮಿಕ ಮುಖಂಡನಾಗಿ,ಶಾಸಕನಾಗಿ,ಮಂತ್ರಿಯಾಗಿ,ಕೇಂದ್ರದ ರೈಲ್ವೇ ಸಚಿವನಾಗಿ, ಲೋಕಸಭೆ,ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗುವ ಮಟ್ಟಕ್ಕೆ ಬೆಳೆಯುತ್ತದೆ.ಅಂದ ಹಾಗೆ ಈ ಮಗುವಿನ ಹೆಸರು-
ಎಂ.ಮಲ್ಲಿಕಾರ್ಜುನ ಖರ್ಗೆ.
ಇಂತಹ ದಾರುಣ ಹಿನ್ನೆಲೆಯಿಂದ ಬಂದ ಖರ್ಗೆ ಜನಾಂಗ ದ್ವೇಷಿಯಾಗುವುದು ಸುಲಭವಾಗಿತ್ತು.ಆದರೆ ಐವತ್ತು ವರ್ಷಗಳ ಸುಧೀರ್ಘ ಸಂಸದೀಯ ಬದುಕಿನಲ್ಲಿ ಅವರು ಯಾವತ್ತೂ ಘನತೆಯಿಂದ ನಡೆದಿದ್ದಾರೆ.ಮತ್ತೀಗ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ಗಾದಿಯ ಸನಿಹ ಬಂದು ನಿಂತಿದ್ದಾರೆ.
ಇದು ಪ್ರಜಾತಂತ್ರದ ಅದ್ಭುತ ಎಂದರೆ ಅತಿಶಯೋಕ್ತಿಯಲ್ಲ.ನಿಜವಾದ ಅರ್ಥದಲ್ಲಿ ಅವರು ಬೂದಿಯಿಂದ ಮೇಲೆದ್ದು ಬೆಟ್ಟವೇರಿದ ನಾಯಕ.

ಅಂದ ಹಾಗೆ 1972 ರಲ್ಲಿ ಶಾಸನಸಭೆ ಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆಯವರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಆಸೆ ಇದ್ದುದು ಸಹಜ.
ಆದರೆ 2004 ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಇರುವವರೆಗೆ ಅಂತಹ ಆಸೆಗೆ ಅಡ್ಡಿ ಇರಲಿಲ್ಲ.
ಆದರೆ ಈ ಸಮ್ಮಿಶ್ರ ಸರ್ಕಾರದಿಂದ,ಆ ಮೂಲಕ ಜೆಡಿಎಸ್ ಪಾಳೆಯದಿಂದ ಸಿದ್ಧರಾಮಯ್ಯ ಹೊರಬಿದ್ದ ಮೇಲೆ ಖರ್ಗೆ ಅವರ ಆಸೆಗೆ ಧಕ್ಕೆ ತರುವಂತಹ ಬೆಳವಣಿಗೆಗಳು ನಡೆಯತೊಡಗಿದವು
ಅರ್ಥಾತ್,ಜೆಡಿಎಸ್ ನಿಂದ ಹೊರಬಿದ್ದ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಪ್ರವೇಶಿಸಿದ ನಂತರ ಉಭಯ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಶುರುವಾಯಿತು.
ಇದೇನೇ ಇದ್ದರೂ 2008 ರಲ್ಲಿ ಖರ್ಗೆ ಅವರಿಗೆ ಎರಡು ಬಾರಿ ಸಿಎಂ ಆಗುವ ಕನಸು ಬಿತ್ತು.
ಮೊದಲ ಕನಸು ಬೀಳುವ ಕಾಲಕ್ಕೆ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು.ಆ ಸಂದರ್ಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸಿದ್ದರೆ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿತ್ತು.
ಆದರೆ ಕೈ ಪಾಳೆಯದ ಒಳ ಗುದ್ದಾಟ ಪಕ್ಷ ಬಹುಮತ ಗಳಿಸದಂತೆ ನೋಡಿಕೊಂಡಿತು.
ಆ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ 110 ಸ್ಥಾನ ಗಳಿಸಿದರೆ,ಕಾಂಗ್ರೆಸ್,ಜೆಡಿಎಸ್ ಮತ್ತು ಪಕ್ಷೇತರರ ಗಳಿಕೆ 114 ರ ಗಡಿ ತಲುಪಿತ್ತು.
ಈ ಸಂದರ್ಭದಲ್ಲಿ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್‌ ಮುಂದೆ ಒಂದು ಪ್ರಸ್ತಾಪವಿಟ್ಟರು.ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್,ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆ ಮಾಡೋಣ.ಇದಕ್ಕಾಗಿ ಆರು ಮಂದಿ ಪಕ್ಷೇತರರ ಬೆಂಬಲ ಪಡೆಯೋಣ ಎಂಬುದು ದೇವೇಗೌಡರ ಪ್ರಸ್ತಾಪ.
ಈ ಹಂತದಲ್ಲಿ ಕಾಂಗ್ರೆಸ್ ಪಕ್ಷ ತ್ವರಿತ ಹೆಜ್ಜೆ ಇಟ್ಟಿದ್ದರೆ,ಕರ್ನಾಟಕ ಮೊಟ್ಟ ಮೊದಲ ದಲಿತ ಮುಖ್ಯಮಂತ್ರಿಯನ್ನು ನೋಡುತ್ತಿತ್ತು.
ಆದರೆ ಇದು ಸಾಧ್ಯವಾಗುವ ಮುಂಚೆ ಪಕ್ಷೇತರ ಶಾಸಕರ ಬೆಂಬಲ ಗಿಟ್ಟಿಸಿಕೊಂಡ ಯಡಿಯೂರಪ್ಪ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಂಡರು.
ಅಂದ ಹಾಗೆ ಅವತ್ತು ಪಕ್ಷೇತರ ಶಾಸಕರು ಯಡಿಯೂರಪ್ಪ ಅವರ ಜತೆ ಕೈಗೂಡಿಸಲು ನೆರವು ನೀಡಿದವರು,ಆ ಮೂಲಕ ಖರ್ಗೆ ಸಿಎಂ ಆಗದಂತೆ ನೋಡಿಕೊಂಡವರು ಸಿದ್ಧರಾಮಯ್ಯ ಅಂತ ಜೆಡಿಎಸ್ ನಾಯಕರು ಈಗಲೂ ಆರೋಪಿಸುತ್ತಾರೆ.

ಅದೇನೇ ಇರಲಿ,ಒಟ್ಟಿನಲ್ಲಿ ಖರ್ಗೆಯವರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡಲು ಸಿದ್ಧರಾಮಯ್ಯ ಅವರೇ ಕಾರಣ.
ರಾಜ್ಯ ಕಾಂಗ್ರೆಸ್ ನಲ್ಲಿ ಮೇಲುಗೈ ಸಾಧಿಸಲು ಬಡಿದಾಟ ನಡೆದಾಗ ಸಿದ್ಧರಾಮಯ್ಯ ಅವರು ಖರ್ಗೆಯವರಿಗೆ ಘಾಸಿ ಮಾಡಿದರು.
ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಆಪ್ತ ಇಕ್ಬಾಲ್ ಅಹಮದ್ ಸರಡಗಿ ಅವರಿಗೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಖರ್ಗೆ ಯಶಸ್ವಿಯಾದರೆ,ಅದೇ ಸರಡಗಿ ಸೋಲುವಂತೆ ನೋಡಿಕೊಂಡ ಸಿದ್ಧರಾಮಯ್ಯ ಅವರು ಖರ್ಗೆಯವರಿಗೆ ಖೆಡ್ಡಾ ತೋಡಿದರು ಎಂಬ ಆರೋಪ ಶಾಶ್ವತವಾಗುಳಿದಿದೆ.
ಇಂತಹ ಘಟನೆಗಳು ಅಂತಿಮವಾಗಿ ಕೈ ಪಾಳೆಯದ ವರಿಷ್ಟರ ತಲೆನೋವಿಗೆ ಕಾರಣವಾಗಿದ್ದಲ್ಲದೆ ಸಿದ್ಧರಾಮಯ್ಯ ಇಲ್ಲಿಗೆ,ಖರ್ಗೆ ದಿಲ್ಲಿಗೆ ಎಂಬ ಸೂತ್ರ ಜಾರಿ ಮಾಡಲು ಪ್ರೇರೇಪಣೆ ನೀಡಿತು.
ಈ ಬೆಳವಣಿಗೆ ಖರ್ಗೆಯವರ ಅಂತರಂಗಕ್ಕೆ ಹೊಡೆತ ನೀಡಿದರೂ ಅದನ್ನವರು ತೋರ್ಪಡಿಸಲಿಲ್ಲ, ವರಿಷ್ಟರ ತೀರ್ಮಾನವನ್ನು ವಿರೋಧಿಸಲೂ ಇಲ್ಲ.
ಆದರೆ ಈ ಬೆಳವಣಿಗೆ ನಡೆದು ಹದಿಮೂರು ವರ್ಷಗಳುರುಳಿದ ಮೇಲೆ ನೋಡಿದರೆ ಖರ್ಗೆ ಅತ್ಯಂತ ಎತ್ತರಕ್ಕೇರಿ ನಿಂತಿದ್ದಾರೆ.ನಿಜಲಿಂಗಪ್ಪ ಅವರ ನಂತರ ಎ.ಐ.ಸಿ.ಸಿ ಅಧ್ಯಕ್ಷ ಸ್ಥಾನಕ್ಕೆ
ಬಂದು ಕೂರುವ ಭರವಸೆ ಹುಟ್ಟಿಸಿದ್ದಾರೆ.

ಎ.ಐ.ಸಿ.ಸಿ ಅಧ್ಯಕ್ಷ ಸ್ಥಾನಕ್ಕೆ ಈ ತಿಂಗಳ ಮೂರನೇ ವಾರ ನಡೆಯಲಿರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಶಿ ತರೂರ್ ಪ್ರತಿಸ್ಪರ್ಧಿ.
ಹೀಗೆ ಖರ್ಗೆ ಅವರ ವಿರುದ್ಧ ಶಶಿ ತರೂರ್ ಸ್ಪರ್ಧಿಸಿದ್ದರೂ, ಅದು ಸಾಂಕೇತಿಕ ಅಂತ ಹೇಳಲಾಗುತ್ತಿದೆ.
ಆದರೆ ಕಾಂಗ್ರೆಸ್ ಪಕ್ಷದ ಚೌಕಾ ಬಾರಾ ಆಟದ ನಡುವೆ ಖರ್ಗೆ ಅವರೇನಾದರೂ ಸೋತರೆ ಅದು ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಿ,ಬಿಜೆಪಿಗೆ ಲಾಭ ತಂದುಕೊಡುವುದು ನಿಶ್ಚಿತ.
ಅಂದ ಹಾಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಈಗಾಗಲೇ‌ ಒಂದು ಆರೋಪವಿದೆ. ದಲಿತ ಸಮುದಾಯದ ಆತ್ಮಾಭಿಮಾನದ ಸಂಕೇತ ಡಾ.ಬಿ.ಆರ್.ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕಾಂಗ್ರೆಸ್ ಪಕ್ಷ ಅವರ ಸೋಲಿಗೆ ಕಾರಣವಾಯಿತು ಎಂಬುದು ಈ ಆರೋಪ.
ನಾಳೆ ಖರ್ಗೆ ಅವರಿಗೆ ಅಧ್ಯಕ್ಷ ಪಟ್ಟ ಸಿಗದೆ ಹೋದರೂ ಕಾಂಗ್ರೆಸ್ ನೆತ್ತಿಯ ಮೇಲೆ ಕಳಂಕ ಕೂರುತ್ತದೆ
ಎಲ್ಲಕ್ಕಿಂತ ಮುಖ್ಯವಾಗಿ ಇದು ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ‌ ಮುಳುವಾಗಬಹುದು.
ಯಾಕೆಂದರೆ ಕರ್ನಾಟಕದ ನೆಲೆಯಲ್ಲಿ ದಲಿತ ವರ್ಗದ ಬಲಗೈ ಸಮುದಾಯ ಕಾಂಗ್ರೆಸ್ ಪಕ್ಷದ ಜತೆಗಿದೆ.ಅದೇ ರೀತಿ ಎಡಗೈ ಸಮುದಾಯ. ಬಿಜೆಪಿ ಜತೆಗಿದೆ.ಖರ್ಗೆ ಬಲಗೈ ಸಮುದಾಯಕ್ಕೆ ಸೇರಿದವರು.
ನಾಳೆ ಕಾಂಗ್ರೆಸ್ ನಿಂದ ಅವರಿಗೆ ಅವಮಾನವಾಯಿತು ಎಂದರೆ ಬಲಗೈ ಸಮುದಾಯ ಮುನಿಸಿಕೊಳ್ಳುತ್ತದೆ. ಕಾಂಗ್ರೆಸ್ ನಲ್ಲಿ ಈಗಾಗಲೇ ಖರ್ಗೆ ಅವರಿಗೆ ಸಿಎಂ ಹುದ್ದೆಯನ್ನು ತಪ್ಪಿಸುವ ಕೆಲಸವಾಗಿದೆ.ಈಗ ಅಧ್ಯಕ್ಷ ಸ್ಥಾನದ ಕನಸು ಬಿತ್ತಿ ಕಾಲೆಳೆಯಲಾಯಿತು ಎಂದರೆ ಅದು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತದೆ.ಬಿಜೆಪಿ ಸಹಜವಾಗಿಯೇ ಅದರ ಲಾಭ ಪಡೆದುಕೊಳ್ಳುತ್ತದೆ.

ಆದರೆ ರಾಜ್ಯ ಕಾಂಗ್ರೆಸ್ ನ ಕೆಲ ನಾಯಕರ ಪ್ರಕಾರ,ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ವಿಷಯದಲ್ಲಿ ಸೋನಿಯಾಗಾಂಧಿ ಅವರಿಗೆ ಸ್ಪಷ್ಟತೆ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ 2024 ರ ಲೋಕಸಭಾ ಚುನಾವಣೆಗಿಂತ ಒಂದು ವರ್ಷ ಮುಂಚಿತವಾಗಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯಬೇಕು ಎಂಬುದು ಅವರ ನಿರೀಕ್ಷೆ.
ಅರ್ಥಾತ್,ಮುಂದಿನ ವರ್ಷ ಕರ್ನಾಟಕದಲ್ಲಿ ಗೆದ್ದು ಅಧಿಕಾರ ಹಿಡಿದರೆ,ದಿಲ್ಲಿ ಗದ್ದುಗೆಗಾಗಿ ನಡೆಯುವ ಹೋರಾಟಕ್ಕೆ ಕರ್ನಾಟಕದಿಂದ ಅಪಾರ ಶಸ್ತ್ರಾಸ್ತ್ರ ದಕ್ಕುತ್ತದೆ ಎಂಬುದು ಅವರ ಲೆಕ್ಕಾಚಾರ.
1999 ರಿಂದ 2004 ರವರೆಗೆ ಕರ್ನಾಟಕದ ಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿತ್ತಲ್ಲ?
ಆ ಸಂದರ್ಭದಲ್ಲಿ ಕೃಷ್ಣ ಅವರು ಹರಿಸಿದ ನೆರವು 2004 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಶಸ್ಸಿಗೆ ಕಾರಣವಾಯಿತು ಎಂಬುದು ಸೋನಿಯಾಗಾಂಧಿ ಅವರಿಗೆ. ಗೊತ್ತು.
ಹೀಗಾಗಿ ಅವರಿಗೆ ಕರ್ನಾಟಕ ಎಂಬ ಪಾಳೇಪಟ್ಟು ಪಕ್ಷದ ವಶವಾಗಬೇಕಿದೆ.
ಆದರೆ ಇದಕ್ಕಿರುವ ಏಕೈಕ ಅಡ್ಡಿ ಎಂದರೆ ಕರ್ನಾಟಕದಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಒಳಜಗಳ.
ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮಾತ್ರವಲ್ಲ,ಖರ್ಗೆಯವರ ಸ್ಟೇಕ್ ಕೂಡಾ ಇದೆ.ಅದನ್ನವರು ಸೋನಿಯಾಗಾಂಧಿ ಅವರ ಮುಂದೆಯೂ ಹೇಳಿದ್ದರಂತೆ.
ಪಕ್ಷ ಗೆದ್ದು ಅಧಿಕಾರ ಹಿಡಿದರೆ ನನಗೂ ಮೂವತ್ತು ತಿಂಗಳ ಕಾಲಾವಕಾಶ ನೀಡಿ ಎಂದಿದ್ದರಂತೆ.
ಈಗ ಖರ್ಗೆಯವರನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರೆ,ಅವರು ಸಿಎಂ ಹುದ್ದೆಯ ಮೇಲೆ ಕಣ್ಣಿಡುವುದು ಕಷ್ಟ.
ಕಾಂಗ್ರೆಸ್ ನಲ್ಲಿ
ಮುಖ್ಯಮಂತ್ರಿಗಳಾದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹಲವು ಉದಾಹರಣೆಗಳಿವೆ.
ತಮಿಳುನಾಡಿನ ಕಾಮರಾಜ್ ನಾಡಾರ್,ಕರ್ನಾಟಕದ ನಿಜಲಿಂಗಪ್ಪ ಅವರೆಲ್ಲ ಮುಖ್ಯಮಂತ್ರಿಗಳಾಗಿದ್ದು ನಂತರ ಎಐಸಿಸಿ ಅಧ್ಯಕ್ಷರಾದವರು.
ಆದರೆ ಅಧ್ಯಕ್ಷರಾದವರು ಒಂದು ರಾಜ್ಯದ ಮುಖ್ಯಮಂತ್ರಿಗಳಾಗುವುದು ಕೈ ಪಾಳೆಯದಲ್ಲಿ ಕಷ್ಟ.
ಅರ್ಥಾತ್,ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ ಸೋನಿಯಾಗಾಂಧಿಯವರು ಸಿದ್ಧರಾಮಯ್ಯ ಅವರ ದಾರಿಯನ್ನು ಸಾಫ್ ಮಾಡಿದ್ದಾರೆ ಎಂಬುದು ಈ ನಾಯಕರ ಮಾತು.
ಅದೇನೇ ಇದ್ದರೂ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದರೆ ಅದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂಬುದಂತೂ ನಿಜ

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here