ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅಸ್ತಂಗತ

0
166

ಕೂಡ್ಲಿಗಿ:ಆ:12:- ಸತತ ಎರಡು ಅವಧಿಗೆ ಶಾಸಕರಾಗಿ ಉತ್ತಮ ಆಡಳಿತ ನಡೆಸುವ ಮೂಲಕ ಜನಮನ್ನಣೆ ಗಳಿಸಿದ್ದ ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ(79) ಅವರು ಅನಾರೋಗ್ಯದಿಂದ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 1.30 ಗಂಟೆಗೆ ನಿಧನರಾದರು.

ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್.ಟಿ.ಬೊಮ್ಮಣ್ಣ ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಎನ್.ಟಿ ಬೊಮ್ಮಣ್ಣ ಅವರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿ ಅಪಾರ ಬಂಧು ಬಳಗವಿದೆ.

ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಪಾರ್ಥಿವ ಶರೀರವನ್ನು ತುಮಕೂರಿನಿಂದ ಚಿತ್ರದುರ್ಗದಲ್ಲಿರುವ ನಿವಾಸಕ್ಕೆ ತಂದು ಪೂಜೆ ಸಲ್ಲಿಸಲಾಗುವುದು. ನಂತರ, ಕೂಡ್ಲಿಗಿಗೆ ತಂದು ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ. ಆನಂತರ ಅವರ ಹುಟ್ಟೂರಾದ ಕೂಡ್ಲಿಗಿ ತಾಲೂಕಿನ ನರಸಿಂಹನಗಿರಿ ಗ್ರಾಮಕ್ಕೆ ಕೊಂಡೊಯ್ಯಲಾಗುವುದು. ಗುರುವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಎನ್.ಟಿ.ಬೊಮ್ಮಣ್ಣ ಅವರ ನಿಧನಕ್ಕೆ ಕುಟುಂಬದವರು, ಬಂಧುಗಳು, ಗಣ್ಯರು ಸೇರಿ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಪ್ರಭಾವಿ ರಾಜಕಾರಣಿ ಎನ್.ಟಿ.ಬಿ
ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರು ಪ್ರಭಾವಿ ರಾಜಕಾರಣಿಯಾಗಿದ್ದರು. ಕೂಡ್ಲಿಗಿ ತಾಲೂಕಿನ ಮೂಲೆಕಟ್ಟಿನ ಹಳ್ಳಿಯಾಗಿದ್ದ ನರಸಿಂಹನಗಿರಿಯಲ್ಲಿ ವಾಲ್ಮೀಕಿ ಸಮುದಾಯದ ತಮ್ಮಪ್ಪ ಮತ್ತು ಬೋರಮ್ಮ ದಂಪತಿಯ ಐವರು ಮಕ್ಕಳ ಪೈಕಿ ಕೊನೆಯ ಪುತ್ರರಾಗಿ ಎನ್.ಟಿ.ಬೊಮ್ಮಣ್ಣ ಅವರು 1944 ಜುಲೈ 1ರಂದು ಜನಿಸಿದ್ದರು.

ತಮ್ಮೂರಿನಲ್ಲಿ ಪ್ರಭಾವಿಯಾಗಿ ಬೆಳೆಯುತ್ತಾ ಕೂಡ್ಲಿಗಿ ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. ಆನಂತರ, ವಿವಿಧ ಹಂತಗಳಲ್ಲಿ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿದ್ದರು. ಅಲ್ಲದೆ, ಎಲ್ಲಾ ಸಮುದಾಯದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ, ಹಗರಿಬೊಮ್ಮನಹಳ್ಳಿ ಸೇರಿದ್ದ ಆಗಿನ ಕೂಡ್ಲಿಗಿ ಕ್ಷೇತ್ರದಲ್ಲಿ 1984 ರಿಂದ 1994 ರವರೆಗೆ ಕಾಂಗ್ರೆಸ್ ಪಕ್ಷದಿಂದ ಸತತ 2 ಬಾರಿ ಗೆದ್ದು ಶಾಸಕರಾಗಿ ಸೇವೆ ಸಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲದೆ, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎನ್.ಟಿ.ಬೊಮ್ಮಣ್ಣ ಅವರು ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು.

ಶಿಕ್ಷಣಪ್ರೇಮಿ ಬೊಮ್ಮಣ್ಣ:-
ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರು ಶಿಕ್ಷಣ ಪ್ರೇಮಿಯಾಗಿದ್ದರು. ಹಳ್ಳಿಗಾಡಿನ ಪರಿಸರದಲ್ಲಿ ಬೆಳೆದಿದ್ದ ಎನ್.ಟಿ.ಬೊಮ್ಮಣ್ಣ ಅವರಿಗೆ ಬಡವರು, ಹಿಂದುಳಿದವರು ಸೇರಿ ಎಲ್ಲಾ ವರ್ಗದ ಜನರ ಅಭಿವೃದ್ಧಿಯ ತುಡಿತವಿತ್ತು. ಹೀಗಾಗಿಯೇ, ಈಗಲೂ ಕೂಡ್ಲಿಗಿ ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಈ ಹಿಂದೆ ತೀರಾ ಹಿಂದುಳಿದ ಹಳ್ಳಿಗಳಾಗಿದ್ದ ಕೂಡ್ಲಿಗಿ ತಾಲೂಕಿನ ಹುಡೇಂ, ಹುರುಳಿಹಾಳು, ಹಾರಕಬಾವಿ ಸೇರಿದಂತೆ 8 ಕ್ಕೂ ಹೆಚ್ಚು ಪ್ರೌಢಶಾಲೆಗಳನ್ನು ನರಸಿಂಹನಗಿರಿ ವಿದ್ಯಾಸಂಸ್ಥೆಯ ಮೂಲಕ ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿರುವುದು ಸ್ಮರಣೀಯ ಕಾರ್ಯವಾಗಿದೆ.

LEAVE A REPLY

Please enter your comment!
Please enter your name here