ಅನೇಕ ಪೋಷಕಾಂಶಗಳನ್ನು ಹೊಂದಿದ ನುಗ್ಗೆಸೊಪ್ಪಿನ ಮಹತ್ವ

0
132

ಬಾಳೆ ಹಣ್ಣಿಗಿಂತ 15 ಪಟ್ಟು ಪೊಟಾಸಿಯಂ , ಹಾಲಿಗಿಂತ 15 ಪಟ್ಟು ಕ್ಯಾಲ್ಸಿಯಂ,, ಗೋಧಿ ಹುಲ್ಲಿಗಿಂತ 4 ಪಟ್ಟು ಕ್ಲೋರೊಫಿಲ್ , ಕಿತ್ತಳೆ ಹಣ್ಣಿನಷ್ಟೇ ವಿಟಮಿನ್ ಸಿ , ಕೋಳಿಮೊಟ್ಟೆಗಿಂತ 36 ಪಟ್ಟು ಮೆಗ್ನೀಷಿಯಂ , ಬಾದಾಮಿಗಿಂತ 12 ಪಟ್ಟು ವಿಟಮಿನ್ ಇ , ಗಜ್ಜರಿ ಅಥವಾ ಕ್ಯಾರಟ್ಟಿಗಿಂತ 10 ಪಟ್ಟು ವಿಟಮಿನ್ ಎ , ಬೆಣ್ಣೆ ಮತ್ತು ತುಪ್ಪಕ್ಕಿಂತ 9 ಪಟ್ಟು ಪ್ರೊಟೀನ್ , ಪಲಾಕ್ ಸೊಪ್ಪಿಗಿಂತ 25 ಪಟ್ಟು ಹೆಚ್ಚು ಕಬ್ಬಿಣ ಮತ್ತು ಒಮೇಗ 3 , 6 ,9 ಪೋಷಕಾಂಶಗಳನ್ನ ಹೊಂದಿರುವ ನುಗ್ಗೆ ಸೊಪ್ಪು ಸಹಜವಾಗಿಯೇ ಮನುಷ್ಯರ ಶರೀರದ ಪ್ರತಿರೋಧ ಕಟ್ಟಬಲ್ಲದು.

ನುಗ್ಗೆಯನ್ನ ಅಮೇರಿಕನ್ನರು ಕುದುರೆ ಮೂಲಂಗಿ [Horse Radish ಎಂದು ಕರೆಯುತ್ತಾರೆ ಯಾಕೆಂದರೆ ನುಗ್ಗೆ ಮರದ ತಾಯಿ ಬೇರು ಮೂಲಂಗಿಗಿಂತ 10 ಪಟ್ಟು ದೊಡ್ಡದಾಗಿರುತ್ತದೆ. ಮಳೆಗಾಲದಲ್ಲಿ ಸಿಗುವ ಹೆಚ್ಚು ನೀರನ್ನ ತನ್ನ ಮೂಲಂಗಿಯಂಥ ಬೇರಿನಲ್ಲಿ ಕಾದಿಟ್ಟುಕೊಳ್ಳುವ ನುಗ್ಗೆ ಮರ ಜನವರಿ ಮತ್ತು ಫೆಬ್ರುವರಿ ತಿಂಗಳ ಬಿರುಸಾದ ಬೇಗೆಯಲ್ಲೂ ಬೆಳಕಿನ ಗೊಂಚಲಿನಂಥ ಹೂ ಬಿಡಲು ಬಳಸಿಕೊಳ್ಳುತ್ತದೆ.

ಅಮೇರಿಕ ಮತ್ತು ಅದರ ಇತರೆ ದುಷ್ಠ ಸಹಚರ ದೇಶಗಳು ದಕ್ಷಿಣ ಅಮೇರಿಕದ ಪುಟ್ಟ ದ್ವೀಪದೇಶ ಕ್ಯೂಬಾದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದಾಗ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಅವರು ಕರ್ನಾಟಕದ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಸಹಕಾರ ಪಡೆದು ಭಾರತ ಮತ್ತು ಶ್ರೀಲಂಕದಿಂದ 2 ಟನ್ ನುಗ್ಗೆ ಬೀಜ ತರಿಸಿಕೊಂಡು , ಮೊದಲು ತಾವೇ ಖುದ್ದಾಗಿ‌ ತಮ್ಮ ಹಿತ್ತಲಿನಲ್ಲಿ ಬೆಳೆಯುತ್ತ, ಕ್ಯೂಬಾ ದೇಶದಾದ್ಯಂತ ಪರಿಚಯಿಸುತ್ತ ಹೋದದ್ದು ಕ್ಯೂಬನ್ನರು ಆರ್ಥಿಕ ದಿಗ್ಬಂಧನದ ನಡುವೆಯೂ ಉತ್ತಮ ಪೋಷಕಾಂಶಗಳನ್ನ ಉಣಲು ಸಾಧ್ಯವಾಯಿತು.

■ನುಗ್ಗೆ ಬೇಸಾಯ ವಿಧಾನ

◆ನುಗ್ಗೆ ಸೂರ್ಯನ ಬಿಸಿಲನ್ನ ಬಯಸುವ ಸಸ್ಯ
◆ನುಗ್ಗೆ ಬೇಸಾಯಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ
◆ಗೆಲ್ಲು(ಕಾಂಡ) ನೆಟ್ಟು ಅಥವಾ ಬೀಜದಿಂದ ಸಸಿ ತಯಾರಿಸಿ ಬೆಳೆಸಬಹುದು.
◆ಗೆಲ್ಲು ನೆಟ್ಟರೆ ಗಾಳಿಗೆ ಮುರುಟಿ ಬೀಳುವ ತೊಡಕು ಇರುವುದರಿಂದ ಬೀಜದಿಂದ ಸಸಿ ತಯಾರಿಸಿ ಬೆಳೆಸುವುದೇ ಸೂಕ್ತ
◆ತೋಟಗಾರಿಕೆ ಬೆಳೆಗಳ ನಡುವೆ ಅಂತರ ಬೆಳೆಯಾಗಿಯೂ ಬೆಳೆಯಬಹುದು.

■ಬೀಜದಿಂದ ನುಗ್ಗೆ ಬೆಳೆ ವಿಧಾನ

◆8 x 4 ಅಳತೆಯ ನರ್ಸರಿ ಕವರಿಗೆ ಫಲವತ್ತಾದ ಮಣ್ಣು ತುಂಬಿ ಬೀಜವನ್ನ ಮಣ್ಣಿನೊಳಗೆ ಒಂದು ಅಂಗುಲ ಆಳಕ್ಕೆ ಬಿತ್ತಿ , ಅದು ಹುಟ್ಟುವ ತನಕ ಬೀಜ ಕೊಳೆಯದಂತೆ ಮಿತವಾಗಿ ನೀರು ಸಿಂಪಡಿಸುತ್ತಿರಿ ; ಬೀಜ 7 ರಿಂದ 9 ದಿನಗಳಲ್ಲಿ ಹುಟ್ಟಿ ದವನದಂತೆ ವೇಗವಾಗಿ ಬೆಳೆದು 30 – 40 ದಿನಗಳಲ್ಲಿ ಸಸಿ ತಯಾರಾಗುತ್ತವೆ.
◆45 ಸೆಂಟಿಮೀಟರು ಆಳದ ಗುಂಡಿ ತೆಗೆಯಿರಿ‌, ಮಣ್ಣಿನ ಗುಣ ನೋಡಿಕೊಂಡು ಕೊಟ್ಟಿಗೆ ಗೊಬ್ಬರ , ಕೆರೆಯ ಕಪ್ಪು ಗೋಡು ಮತ್ತು ತರಗೆಲೆಗಳನ್ನ ಮಿಶ್ರ ಮಾಡಿ ತಯಾರಿಸಿದ ಕಾಂಪೋಸ್ಟ್ ಗೊಬ್ಬರವನ್ನ ಗುಂಡಿ ತೋಡಿದ ಮೇಲಿನ ಪದರದ ತಾಯಿಮಣ್ಣಿನ ಜೊತೆ ಬೆರೆಸಿ ಪಾತಿ ಸಿದ್ಧಪಡಿಸಿ ನೆಡಿ. ನೆಟ್ಟ 15 ದಿನಗಳ ನಂತರ ಹೊಂಗೆ ಹಿಂಡಿ, ಬೇವಿನ ಹಿಂಡಿಯನ್ನ ಸಮಪ್ರಮಾಣದಲ್ಲಿ ಬೆರೆಸಿ ನುಗ್ಗೆಯ ಪಾತಿಗೆ ಉದುರಿಸಿ ಕಳೆಗತ್ತಿಯಿಂದ ಕೆದಕಿ , ತೆಳ್ಳಗೆ ನೀರು ಸಿಂಪಡಿಸಿ.
◆ನುಗ್ಗೆ ಸಾಲಿನ ನಡುವೆ ಅಲ್ಲಲ್ಲಿ ಹರಳು[Castor] ಬಿತ್ತಿ‌ , ಬೆಳೆದ ಹರಳಿನ ಗಿಡಗಳನ್ನ ಕತ್ತರಿಸಿ ನುಗ್ಗೆ ಪಾತಿಗೆ ಹೊದಿಸಿ.

◆ಏಕಬೆಳೆ ವಿಧಾನದಲ್ಲಿ ಬೆಳೆಯುವುದು ಅಷ್ಟು ಸೂಕ್ತವಲ್ಲ , ಅದ್ದರಿಂದ ನುಗ್ಗೆಯ ಸಾಲುಗಳ ನಡುವೆ ಅನುಕೂಲಕ್ಕೆ ತಕ್ಕಂತೆ 12 ರಿಂದ 15 ಅಡಿ ಅಂತರ ಕೊಟ್ಟು ನಡುವೆ ಮಳೆ ಆಶ್ರಿತ ಅಥವಾ ನೀರಾವರಿ ಆಶ್ರಿತ ಬೆಳೆಗಳನ್ನ ಬೆಳೆದುಕೊಳ್ಳಬಹುದು.
◆ನುಗ್ಗೆ ಗಿಡ 4 – 5 ಅಡಿ ಎತ್ತರಕ್ಕೆ ಬೆಳೆದ ನಂತರ ಪಾತಿಯಿಂದ 2 ಅಡಿ ಎತ್ತರದಲ್ಲಿ ತೋಟಗಾರಿಕೆ ಕತ್ತರಿ(Sicateur] ಬಳಸಿ , ಬಿದ್ದ ಮಳೆನೀರು ಕತ್ತರಿಸಿದ ಭಾಗದಲ್ಲಿ ತಂಗಿ ಕಾಂಡ ಕೊಳೆಯದಂತೆ ವಾರೆಯಾಗಿ ಕತ್ತರಿಸಿ

■ನುಗ್ಗೆ ಬೀಜ ಆಯ್ಕೆ‌

◆ಭಾಗ್ಯ , ಪಿ.ಕೆ. ಎಮ್ 1 ಮತ್ತು ನಾಟಿನುಗ್ಗೆ ಈ ಯಾವುದನ್ನಾದರೂ ನಿಮ್ಮ ವಿವೇಚನೆಗೆ ಅನುಸಾರ ಆಯ್ಕೆ ಮಾಡಿ.
◆ಕೆಲವು ಬೀಜದ ಅಂಗಡಿಗಳು ಪಿ.ಕೆ.ಎಂ 2 ತಳಿ ಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಆದರೆ ಪಿ.ಕೆ.ಎಂ 2 ತಳಿಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ ಅಧಿಕೃತವಾಗಿ ಈ ಬೀಜವನ್ನ ಬಿಡುಗಡೆ ಮಾಡಿರುವುದು ಇನ್ನೂ ಖಚಿತವಾಗಿಲ್ಲ.
◆ನುಗ್ಗೆ ನೆಟ್ಟ 6 ತಿಂಗಳಲ್ಲಿ ಹೂ ಬಿಟ್ಟು ಶ್ರಾವಣ ಮಾಸದ ತನಕ ಕಾಯಿ ಬಿಡುತ್ತದೆ , ಆದ್ದರಿಂದ ನುಗ್ಗೆಯನ್ನ ಮೇ – ಜೂನ್ ತಿಂಗಳಲ್ಲೇ ನೆಡುವುದು ಸೂಕ್ತ
◆ನುಗ್ಗೆ ಕಾಯಿ ಪೂರ್ತಿ ಕೊಯ್ಲಾದ ನಂತರ ರೆಂಬೆಗಳ ತುದಿ ಸವರಿ ಪೊದೆಯಾಗುವಂತೆ ನಿಗಾ ವಹಿಸಿ , ರೆಂಬೆ ಸವರುವ ಕೆಲಸ ಆಗಸ್ಟ್ ತಿಂಗಳ ಒಳಗೆ ಮುಗಿದಿರಬೇಕು. ಆಗಸ್ಟ್ ನಂತರ ಸವರಿದರೆ ಕಾಂಡ ಕೊಳೆಯುವ ಅಪಾಯವಿದೆ.
◆ “ನುಗ್ಗೆ ಬೆಳೆಸಿದರೆ ಬದುಕೆಲ್ಲ ನುಗ್ಗು ನುಗ್ಗಾಗುತ್ತದೆ ” ಎಂದಿರುವ ಮೂಡತನವನ್ನ ನಂಬಬೇಡಿ
◆”ನುಗ್ಗೆಯನ್ನ ಮುರಿದು ಬೆಳೆಸು , ಮಕ್ಕಳನ್ನ ಹೊಡೆದು ಬೆಳೆಸು ” ಎಂಬ ಮತ್ತೊಂದು ನಂಬಿಕೆಯಿದೆ . ಅದರೆ ನುಗ್ಗೆಯನ್ನ ಮುರಿಯದೇ ತೋಟಗಾರಿಕೆ ಕತ್ತರಿ[Secateur] ಬಳಸಿ , ಕಾಂಡ ಸಿಗಿಯದಂತೆ ಕತ್ತರಿಸಿ ಬೆಳೆಸಿ. ” ಮಕ್ಕಳನ್ನ ಹೊಡೆದು ಬೆಳೆಸಿ ” ಎಂಬುದು ಮಕ್ಕಳ ಕ್ರಿಯಾಶೀಲತೆ ಬಗ್ಗೆ ಅರಿವಿಲ್ಲದವರು ಹೇಳಿರುವ ಮಾತು , ಮಕ್ಕಳನ್ಮ ಯಾವುದೇ ಕಾರಣಕ್ಕೂ ದಂಡಿಸದೇ ಮನ ಒಲಿಕೆಯ ಭಾಷಾ ಸಂವಹನದ ಮೂಲಕವೇ ಬೆಳೆಸಿ.

■ನುಗ್ಗೆ ಮರದ ಇತರೆ ಉಪಯೋಗಗಳು

◆ಸವರಿದ ನುಗ್ಗೆಯ ಕಾಂಡವನ್ನ ತುಂಡು ತುಂಡಾಗಿ ಕೊಚ್ಚಿ , ನುಗ್ಗೆ ಗಿಡದ ಪಾತಿಗೆ ಹೊದಿಕೆ ಮಾಡಿದರೆ ಪಾತಿಯ ಜೈವಿಕ ಅಹಾರ ವರ್ತುಲಕ್ಕೆ ಅಗತ್ಯವಾಗಿರುವ ‘ ಲಿಗ್ನೋಪ್ರೊಟೀನ್ ‘ ಸಿಕ್ಕಂತಾಗುತ್ತದೆ.
◆ನುಗ್ಗೆ ಬೀಜದ ಪುಡಿಯನ್ನ ಹೊಂಡು ನೀರು, ಮತ್ತು ಉಪ್ಪು ನೀರು ಶುದ್ಧಗೊಳಿಸಲು ಬಳಸಲಾಗುತ್ತಿದೆ [Cationic water purification]
◆ನುಗ್ಗೆ ಬೀಜದಿಂದ ತಯಾರಿಸಲಾಗುವ ‘ ಬೆನ್ ಎಣ್ಣೆ[Ben Oil ] ಅಡುಗೆಗೆ ಒದಗಿ ಬರುವ ಎಣ್ಣೆ.

LEAVE A REPLY

Please enter your comment!
Please enter your name here