ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

0
92

ಉಡುಪಿ, ನವೆಂಬರ್ 14 : ಮಕ್ಕಳು ಪ್ರತೀ ದಿನ ತಮ್ಮ ಬಾಲ್ಯದ ಸಂಭ್ರಮವನ್ನು ಆನಂದಿಸುವ ಮತ್ತು ಅವರ ಹಕ್ಕುಗಳನ್ನು ದೊರಕಿಸಲು ಸೂಕ್ತ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು.

ಅವರು ಇಂದು ಉಡುಪಿ ಬೋರ್ಡ್ ಹೈಸ್ಕೂಲ್ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ರೋಟರಿ ಉಡುಪಿಯ ಸಹಯೋಗದೊಂದಿಗೆ ನಡೆದ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತೀ ಮಗುವಿನಲ್ಲೂ ವಿಶೇಷ ಪ್ರತಿಭೆ ಮತ್ತು ವಿಶಿಷ್ಠತೆ ಇರುತ್ತದೆ. ಅದನ್ನು ಗುರುತಿಸಿ, ಬೆಳೆಯಲು ಅಗತ್ಯ ವಾತಾವರಣ ನಿರ್ಮಿಸಬೇಕು. ಮನೆಯಲ್ಲಿ ಹಿರಿಯರನ್ನು ಅನುಸರಿಸಿ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ಪೋಷಕರು ಮನೆಯಲ್ಲಿ ಮೊಬೈಲ್ ಬಳಕೆಗೆ ಹೆಚ್ಚು ಗಮನ ನೀಡದೇ ಮಕ್ಕಳ ಜೊತೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕು. ಇದರಿಂದ ಮಕ್ಕಳು ಸಹ ಅನಾವಶ್ಯಕವಾಗಿ ಮೊಬೈಲ್ ಬಳಕೆ ಮಾಡುವುದು ಕಡಿಮೆಯಾಗುತ್ತದೆ ಎಂದರು.
ದೈನಂದಿನ ಬದುಕಿನಲ್ಲಿ ಮಕ್ಕಳು ಎದುರಿಸುವ ಸಮಸ್ಯೆಗಳ ಬಗ್ಗೆ ಶಾಲೆಯಲ್ಲಿ ಅಗತ್ಯ ತರಬೇತಿ ನೀಡಬೇಕು. ಆತ್ಮ ರಕ್ಷಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ನೀಡಬೇಕು. ನಿರಂತರವಾಗಿ ಮಕ್ಕಳ ರಕ್ಷಣಾ ಕಾರ್ಯಚರಣೆಗಳನ್ನು ನಡೆಸಬೇಕು ಎಂದರು.
ಮಕ್ಕಳು ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಅಧಿಕಾರಿಗಳಿಗೆ ಸುರಕ್ಷಾ ಬಂಧನ ಕಟ್ಟಿದರು ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದರು.
ಪ್ರತಿಜ್ಞಾ ವಿಧಿ ಭೋಧಿಸಿದ 2ನೇ ಹೆಚ್ಚುವರಿ ಸಿವಿಲ್ ಮುಖ್ಯ ನ್ಯಾಯಾಧೀಶ ಸೋಮನಾಥ್ ಮಾತನಾಡಿ, ಬಾಲ ನ್ಯಾಯ ಮಂಡಳಿ ಮುಂದೆ ಬಹುತೇಕ ಪ್ರಕರಣಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಪ್ರೀತಿ ನೀಡದಿರುವುದು ಹಾಗೂ ಹೆಚ್ಚು ಸಮಯ ಅವರೊಂದಿಗೆ ಕಳೆಯದೇ ಇರುವುದು ಕಂಡುಬರುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಜೊತೆ ಹೆಚ್ಚು ಬೆರೆಯುವುದು ಮತ್ತು ಅವರನ್ನು ವಿವಿಧ ಹೊರಾಂಗಣ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ ಅವರಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ನೀಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ.ಎಸ್ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವೀಣಾ ವಿವೇಕಾನಂದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೋನಾಲ್ಡ್ ಫುರ್ಟಾಡೋ, ಬೋರ್ಡ್ ಹೈಸ್ಕೂಲ್ನ ಮುಖ್ಯೋಪಾಧ್ಯಾಯನಿ ಶಾಂತಿ ಪೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಚೈಲ್ಡ್ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು, ಚೈಲ್ಡ್ಲೈನ್ ಸಂಯೋಜಕಿ ಜ್ಯೋತಿ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಗುರುರಾಜ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here