ವಿವೇಕ ಯೋಜನೆಯಡಿ ಶಾಲೆಗಳ ಕೊಠಡಿ ನಿರ್ಮಾಣ; ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

0
56

ಹುಬ್ಬಳ್ಳಿ: ನ.14: ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು. ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳು ದೊರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ಹೊಸುರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಶಹರ, ಹೊಸುರ ಸರಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿವೇಕ ಯೋಜನೆಯಡಿ ರೂ. 82 ಲಕ್ಷ ವೆಚ್ಚದಲ್ಲಿ 5 ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ವಿವೇಕ ಯೋಜನೆ ಜಾರಿಗೆ ತರಲಾಗಿದೆ. ಶೈಕ್ಷಣಿಕ ಗುಣಮಟ್ಟ ಜಾಸ್ತಿಯಾದಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳವಾಗಲಿದೆ. ಸರ್ಕಾರ ಮತ್ತು ಸಮಾಜ ಕೂಡಿದಾಗ ಶಿಕ್ಷಣವೂ ಬೆಳೆಯುತ್ತದೆ. ಶೀಘ್ರದಲ್ಲಿ ಕೊಠಡಿ ನಿರ್ಮಾಣ ಮಾಡಿ, ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು. ಲೋಕೋಪಯೋಗಿ ಇಲಾಖೆಯಿಂದ ಉತ್ತಮ ಕೊಠಡಿಗಳು ನಿರ್ಮಾಣವಾಗಲಿವೆ ಎಂದು ಭರವಸೆ ನೀಡಿದರು.
ಇಂದು ಜವಾಹರಲಾಲ್ ನೆಹರು ಅವರ ಜನ್ಮದಿನವಿದ್ದು, ಮಕ್ಕಳಿಗಾಗಿ ಯೋಗ್ಯ ಕಟ್ಟಡವನ್ನು ನಿರ್ಮಿಸಲಾಗುವುದು. ವಿವೇಕ ಯೋಜನೆಯಡಿ ಶಾಲೆಗಳ ಕೊಠಡಿಗಳನ್ನು ನಿರ್ಮಾಣ ಮಾಡಿ ಕೊಡಲಾಗುತ್ತದೆ. ಸರಕಾರಿ ಸೌಲಭ್ಯಗಳು ಹೆಚ್ಚಿದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿ ವರ್ಷ ಮಹಿಳೆಯರಿಂದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಹೊರ ಹೊಮ್ಮುತ್ತದೆ. ಸರ್ಕಾರಿ ಶಾಲೆಗಳು ಉನ್ನತ್ತ ಮಟ್ಟಕ್ಕೆ ಬೆಳೆಯಬೇಕಾಗಿದೆ. ಈಗಾಗಲೇ ಪ್ರತಿ ತಾಲೂಕಿನಲ್ಲಿ ಪದವಿ ಪೂರ್ವ ಕಾಲೇಜ್ ನಿರ್ಮಾಣ ಮಾಡಲಾಗಿದೆ. ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಎಸ್.ಎಸ್. ಕೆಳದಿಮಠ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಪಂಡಿತ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಜಿ.ಸಿ. ಕೋಲಕಾರ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಮೀನಾಕ್ಷಿ ವಂಟಮೂರಿ, ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ, ಸಿದ್ದಣ್ಣ ಮೊಗಲಿಶೆಟ್ಟರ, ವಿನಾಯಕ ದೋಂಗಡಿ, ಎ.ಎಸ್. ಮಠದ, ಲೋಕೋಪಯೋಗಿ ಇಲಾಖೆಯ ಸಹಾಯಕ ಮುಖ್ಯ ಅಭಿಯಂತರರಾದ ಎಚ್.ಜಿ. ಗುಂಡಳ್ಳಿ, ಶಶಿಧರ ಕುಂಬಾರ, ಶಿಕ್ಷಕಿಯರಾದ ನಿರ್ಮಲಾ ಶೆಟ್ಟರ, ವಿದ್ಯಾ ಬಿಲ್ಲೂರ, ಕಮಲಾ ಸಾಲಿಮಠ, ಸಮ್ರೀನ, ರಾಜಶ್ರೀ ಐ ದುಡ್ಡಿ ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಹಾಜರಿದ್ದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಗೌಡ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ ವಂದಿಸಿದರು. ಶಿಕ್ಷಕಿ ವಿ.ಜಿ. ಗಲಭಿ ನಿರೂಪಿಸಿದರು.

LEAVE A REPLY

Please enter your comment!
Please enter your name here