ಮಹದಾಯಿ ಆದೇಶ ‘ನಿರ್ಗತಿಕ ಕೂಸು’: ಎಚ್ಕೆ ಪಾಟೀಲ್

0
52

ಹುಬ್ಬಳ್ಳಿ, ಡಿ:೩೦: ಮಹದಾಯಿ ಸಮಗ್ರ ಯೋಜನಾ ವರದಿಗೆ (ಡಿ.ಪಿ.ಆರ್) ಕೇಂದ್ರ ಜಲ ಆಯೋಗದ ಅನುಮೋದನೆ ದೊರೆತಿದೆ ಎಂದು ಬಿಜೆಪಿ ವರಸೆ ತೆಗೆದಿದೆ. ಆದರೆ ಈ ಕುರಿತಾದ ಆದೇಶದಲ್ಲಿ ಎಲ್ಲಿಯೂ ದಿನಾಂಕ ನಮೂದಿಸಲಾಗಿಲ್ಲ ಇದು ನಿರ್ಗತಿಕ ಕೂಸಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆದೇಶ, ದಾಖಲೆ ಪತ್ರಕ್ಕೆ ದಿನಾಂಕ ನಮೂದಿತವಾಗಿರಬೇಕು, ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ದಾಖಲೆಗಳಿಗೆ ದಿನಾಂಕವೇ ಇಲ್ಲ. ಅದು ಅಧಿಕೃತತೆ ಇಲ್ಲದ ನಿರ್ಗತಿಕ ಕೂಸು ಎಂದು ನುಡಿದರು.

ಮಹದಾಯಿ, ನೆಲ, ಜಲ ಇತ್ಯಾದಿ ರಕ್ಷಣೆಗೆ ಜನವರಿ ೨ ರಂದು ಕಾಂಗ್ರೆಸ್‌ನಿಂದ ಜನಾಂದೋಲನ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಇಂಥ ಹೋರಾಟದ ಸಿದ್ಧತೆ ಆರಂಭವಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದು ಅವರು ಟೀಕಿಸಿದರು.

ಮುಗ್ಧ ರೈತರಿಗೆ ಸುಳ್ಳು ಹೇಳುವುದು,ಮೋಸ ಮಾಡುವುದು ಬಿಜೆಪಿಯ ವರಸೆ ಎಂದ ಅವರು, ಚುನಾವಣೆ ಬಂದಾಗ ಬಿಜೆಪಿಯವರು ಇಂಥದ್ದನ್ನೆ ಮಾಡುತ್ತಾರೆ ಎಂದು ಪ್ರಹಾರ ಮಾಡಿದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿರುವ ಏಳು ಪುಟಗಳ ದಾಖಲೆಗೆ ಒಂದು ಕಡೆಯೂ ದಿನಾಂಕವನ್ನೇ ನಮೂದಿಸಲಾಗಿಲ್ಲ, ಇದು ಅನುಮತಿ ದೊರೆತಿದೆ ಎಂದು ರಾಜ್ಯಕ್ಕೆ ಮಾಡಲಾಗುತ್ತಿರುವ ದ್ರೋಹ ಎಂದು ಅವರು ಆರೋಪಿಸಿದರು.

ನಮ್ಮ ಅಧಿಕಾರಾವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಕುಡಿಯುವ ನೀರಿಗಾಗಿ ಬಳಕೆ ಎನ್ನುವ ಅನುಮತಿಯೂ ದೊರೆತಿತ್ತು. ಗೋವಾ ಮುಖ್ಯಮಂತ್ರಿ ತಪ್ಪು ಮಾಹಿತಿಯಿಂದ ನಮಗೆ ದೊರೆತಿದ್ದ ಕ್ಲಿಯರೆನ್ಸ್ ಸ್ಥಗಿತಗೊಂಡಿತ್ತು. ಗೋವಾದವರಿಂದ ಸಭೆಗಳ ಮುಂದೂಡಿಕೆ ಕಾರ್ಯ ನಡೆದು ನ್ಯಾಯಾಲಯದ ಮೆಟ್ಟಿಲೇರಿ ನಂತರ ಟ್ರಿಬ್ಯುನಲ್ ಸ್ಥಾಪನೆ ಆಯ್ತು, ಅಲ್ಲಿಂದ ಇಲ್ಲಿಯವರೆಗೂ ಏನೂ ಮಾಡಿರದ ಬಿಜೆಪಿ ನವಂಬರ್‌ನಲ್ಲಿ ಡಿಪಿಆರ್ ಸಿದ್ಧ ಮಾಡಿಕೊಂಡಿತ್ತು ಎಂದು ಪಾಟೀಲರು ಎಳೆ ಎಳೆಯಾಗಿ ವಿಷಯ ಬಿಚ್ಚಿಟ್ಟರು. ಬಿಜೆಪಿಯವರು ಮಲಪ್ರಭಾ ಭಾಗದ ಮುಗ್ಧ ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here