ದೀಪದ ಕವಿ ಎಂದೇ ಹೆಸರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಭಾವಾಂತರಂಗದ ಕವಿಗಳು ಹೌದು….

0
57

ದೀಪದ ಕವಿ ಎಂದೇ ಹೆಸರಾದ ಡಾ. ಜಿಎಸ್ ಶಿವರುದ್ರಪ್ಪನವರು ಭಾವಾಂತರಂಗದ ಕವಿಯಾಗಿ ಕಾವ್ಯಪ್ರಿಯರ ಮನದಲ್ಲಿ ಎಂದೆಂದಿಗೂ ಪ್ರಿಯರಾಗಿ ನಿಂತಿದ್ದಾರೆ ಎಂದು ಸುಶೀಲಾನಗರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಜಿ ಎಂ ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು…

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಸುಶೀಲಾ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಂಡೂರು ವತಿಯಿಂದ ಏರ್ಪಡಿಸಲಾಗಿದ್ದ ಬಾವಿಹಳ್ಳಿ ರುದ್ರಗೌಡರ ದತ್ತಿ ಹಾಗೂ ಶ್ರೀಮತಿ ಕೆ ಲಿಂಗಮ್ಮ ಲಿಂಗಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಇವರು ಕರ್ನಾಟಕದ ಮೂರನೆಯ ರಾಷ್ಟ್ರಕವಿಯಾದ ಜಿ. ಎಸ್. ಶಿವರುದ್ರಪ್ಪನವರು ತಮ್ಮ ಹಲವಾರು ಕವನ ಸಂಕಲನಗಳು, ಗದ್ಯ ಗ್ರಂಥಗಳು, ವಿಮರ್ಶಾ ಗ್ರಂಥಗಳು, ಜೀವನ ಚರಿತ್ರೆ ಹಾಗೂ ಪ್ರವಾಸ ಕಥನಗಳ ಮೂಲಕ ಸಾಹಿತ್ಯಪ್ರಿಯರ ಹೃದಯಗಳಲ್ಲಿ ಎಂದಿಗೂ ಜೀವಂತವಿದ್ದು ಅವರ ಹಲವಾರು ಕವಿತೆಗಳು ಜನಪ್ರಿಯ ಭಾವಗೀತೆಗಳಾಗಿ ಹೊರಹೊಮ್ಮಿದ್ದು ಮಾನಸ ಸರೋವರ ಕನ್ನಡ ಚಲನಚಿತ್ರದಲ್ಲಿಯೂ ಸಹ ಇವರ ಎರಡು ಗೀತೆಗಳನ್ನು ಬಳಸಿಕೊಳ್ಳಲಾಗಿದೆ ಎಂದರು.

ಇವರ ಕವಿತೆಗಳಲ್ಲಿನ ವಸ್ತು ವಿಷಯ ಕಾವ್ಯ ಪ್ರೇಮಿಗಳ ಮನ ಮುಟ್ಟುವಂತಿದ್ದು ತಾಯ್ತನದ ಪ್ರಾಮುಖ್ಯತೆಯನ್ನು ಪ್ರತಿನಿಧಿಸುವ ” ಸ್ತ್ರೀ “, ಮನುಷ್ಯ ಮನುಷ್ಯರ ಮಧ್ಯೆ ಇರಬೇಕಾದ ಪ್ರೀತಿಯನ್ನು ಪ್ರತಿನಿಧಿಸುವ ” ಪ್ರೀತಿ ಇಲ್ಲದ ಮೇಲೆ “, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರ್ವಹಿಸಬೇಕಾದ ಕಾರ್ಯ ತತ್ಪರತೆ ಕುರಿತಾದ ” ಎದೆ ತುಂಬಿ ಹಾಡಿದೆನು ಅಂದು ನಾನು “, ಅಹಂನ ಕೋಟೆಯಿಂದ ಹೊರಬಂದು ಜೀವಿಸಬೇಕಾದ ಸಾರ್ಥಕತೆಯ ಕುರಿತಾದ “ಎಲ್ಲೋ ಹುಡುಕಿದೆ ಇಲ್ಲದ ದೇವರ ” ಮೊದಲಾದ ಕವಿತೆಗಳು ಜೀವನದ ಸೂಕ್ಷ್ಮ ಸಂವೇದಗಳನ್ನು ಕೇಳುಗರಿಗೆ ಹಾಗೂ ಓದುಗರಿಗೆ ಕಟ್ಟಿಕೊಡುವ ಕವಿತೆಗಳಾಗಿದ್ದು ಅವರ ಒಂದೊಂದು ಕವಿತೆಯೂ ಕೂಡ ಅದ್ಭುತ ಕಾವ್ಯ ಲಹರಿಯಾಗಿದೆ ಎಂದರು. ಕನ್ನಡ ನಾಡು ನುಡಿಯನ್ನ ಕಟ್ಟುವಂತಹ ಮಹತ್ಕಾರ್ಯವನ್ನು ಕನ್ನಡ ನಾಡಿನ ಕವಿಪುಂಗವರು ಹಾಗೂ ಸಾಹಿತಿವರೇಣ್ಯರು ಮಾಡಿದ್ದು ಅವರಂತೆಯೇ ನಾವುಗಳು ಕೂಡ ಕನ್ನಡ ನಾಡು ಮತ್ತು ನುಡಿಯ ಏಳಿಗೆಗಾಗಿ ಶ್ರಮಿಸಬೇಕಿದ್ದು, ಮಕ್ಕಳು ಕನ್ನಡದ ಕುಡಿಗಳು ಮತ್ತು ಕಿಡಿಗಳಾಗಿದ್ದು ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಕವಿ -ಸಾಹಿತಿಗಳ ತತ್ವ ಸಂದೇಶಗಳನ್ನು ಅರಿತು ಪಾಲಿಸುವ ಮೂಲಕ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎ. ಎಂ. ಶಿವಮೂರ್ತಿ ಸ್ವಾಮಿ ಇವರು ಸಂಡೂರು ತಾಲೂಕಿನಲ್ಲಿ ದಾಖಲೆಯ 45 ದತ್ತಿಗಳು ನೊಂದಾಯಿತವಾಗಿದ್ದು ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಪರಿಷತ್ತು ಸಂಡೂರು ತಾಲೂಕು ಘಟಕದ ವತಿಯಿಂದ ಕನ್ನಡ ಪ್ರೀತಿ ಮತ್ತು ಸಾಹಿತ್ಯ ಪ್ರೇಮವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿಯೂ ಆಯೋಜಿಸುತ್ತಿದ್ದು ಶಾಲಾ ಮಕ್ಕಳು ಸಾಹಿತ್ಯ ಪ್ರೇಮಿಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ ಗುರುಗಳಾದ ಕಲ್ಪನಾ ಇವರು ಶಾಲೆಗಳಲ್ಲಿ ನಡೆಯುವ ಇಂತಹ ಸಾಹಿತಿಕ ಕಾರ್ಯಕ್ರಮಗಳು ನಿಜಕ್ಕೂ ಕನ್ನಡ ನಾಡು ನುಡಿಯನ್ನು ಕಟ್ಟುವಂತಹ ಕೆಲಸ ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಮಂಜು ನಾಯ್ಕ, ದತ್ತಿ ದಾನಿಗಳಾದ ಕುಟುಂಬದವರಾದ ಗಣೇಶ್, ಬಿ ಕೆ ಜಿ ಸಿಬ್ಬಂದಿ ಶಿವಕುಮಾರ್, ಶಿಕ್ಷಕ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ರಾಜೇಶ್ವರಿ ಪ್ರಾರ್ಥಿಸಿದರು. ಶಿಕ್ಷಕಿ ಕೊಟ್ರಮ್ಮ ವಂದಿಸಿದರು. ಶಿಕ್ಷಕಿ ಅನಿತಾ ನಿರೂಪಿಸಿದರು.

LEAVE A REPLY

Please enter your comment!
Please enter your name here