ಆಂಗ್ಲೋ-ಮೈಸೂರು ಯುದ್ಧವೂ
ಮತ್ತು ಸಿದ್ರಾಮಯ್ಯನವರೂ

0
58

ಇದು 1999 ರಲ್ಲಿ ನಡೆದ ಬೆಳವಣಿಗೆ.
ಅವತ್ತಿಗಾಗಲೇ ಆಡಳಿತಾರೂಢ ಜನತಾದಳ ಇಬ್ಭಾಗವಾಗಿ ಸಂಯುಕ್ತ ಜನತಾದಳ ಮತ್ತು ಜಾತ್ಯತೀತ ಜನತಾ ದಳ ತಲೆ ಎತ್ತಿದ್ದವು.
ಈ ಪೈಕಿ ಸಂಯುಕ್ತ ಜನತಾದಳ ನೇರವಾಗಿ ಬಿಜೆಪಿ ಜತೆ ಕೈ ಜೋಡಿಸಿ ವಿಧಾನಸಭೆ ಚುನಾವಣೆಗೆ ಅಣಿಯಾದರೆ,ಜಾತ್ಯತೀತ ಜನತಾ ದಳ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಜ್ಜಾಗಿತ್ತು.
ಆ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಪಾಲಿಗೆ ಪ್ರಮುಖ ಎದುರಾಳಿಯಾಗಿ ಕಾಣಿಸಿಕೊಂಡಿದ್ದು ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿ ಕೂಟ.ಯಾಕೆಂದರೆ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದ ನಾಯಕರು ಅಂತ ಯಾರಿದ್ದರು?ಅವರೆಲ್ಲ ಈ ಮೈತ್ರಿಕೂಟದ ಮುಂಚೂಣಿಯಲ್ಲಿದ್ದರು.
ಮುಖ್ಯಮಂತ್ರಿ ಜೆ.ಹೆಚ್‌.ಪಟೇಲ್‌,ಯಡಿಯೂರಪ್ಪ,ರಾಜಶೇಖರ ಮೂರ್ತಿ ಅವರಿಂದ ಹಿಡಿದು ಲಿಂಗಾಯತ ಸಮುದಾಯದ ಪಾಲಿಗೆ ಎವರ್‌ ಗ್ರೀನ್‌ ಆಗಿದ್ದ ರಾಮಕೃಷ್ಣ ಹೆಗಡೆ ಅವರ ತನಕ ಘಟಾನುಘಟಿಗಳ ಪಡೆಯೇ ಮೈತ್ರಿಕೂಟದ ಮುಂದೆ ನಿಂತಿತ್ತು.
ಪ್ರಬಲ ಲಿಂಗಾಯತ ಸಮುದಾಯದ ಮತಗಳು ವಾಲಿದೆಡೆ ಹಲ ಜಾತಿ,ವರ್ಗಗಳು ವಾಲುತ್ತವೆ.ಆ ಮೂಲಕ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿಯುತ್ತದೆ ಎಂಬುದು ಅವತ್ತಿನ ಲೆಕ್ಕಾಚಾರ.
ಆದರೆ ಈ ಲೆಕ್ಕಾಚಾರ ಹುಸಿಯಾಗಿ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಗೆದ್ದು ಅಧಿಕಾರ ಹಿಡಿಯಿತು.ಒಕ್ಕಲಿಗ ಪ್ಲಸ್‌ ಅಹಿಂದ ಮತಗಳ ಕ್ರೋಢೀಕರಣದಿಂದ ಇದು ಸಾಧ್ಯವಾಯಿತಾದರೂ,ಇಂತಹ ಬೆಳವಣಿಗೆಗೆ ಮತ್ತೊಂದು ಪ್ರಬಲ ಕಾರಣವೂ ಇತ್ತು.
ಅದೆಂದರೆ ಗೆದ್ದು ಅಧಿಕಾರ ಹಿಡಿಯುವುದು ನಿಶ್ಚಿತ ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಮತ್ತು ಸಂಯುಕ್ತ ಜನತಾದಳದ ನಾಯಕರು ಒಳಗಿಂದೊಳಗೇ ಆಟವಾಡಿ ಒಬ್ಬರ ಕಾಲು ಮತ್ತೊಬ್ಬರು ಎಳೆದುಕೊಂಡರು.
ಇದರಲ್ಲಿ ಪ್ರಮುಖರಾದವರು ಜೆ.ಹೆಚ್.ಪಟೇಲ್‌ ಮತ್ತು ಯಡಿಯೂರಪ್ಪ.ಈ ಇಬ್ಬರೂ ನಾಯಕರಿಗೆ ಇದ್ದ ನಂಬಿಕೆ ಎಂದರೆ ಚುನಾವಣೆಯಲ್ಲಿ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿಯುತ್ತದೆ.ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಾಯಕತ್ವದ ಪ್ರಶ್ನೆ ಸಹಜವಾಗಿಯೇ ಭುಗಿಲೇಳುತ್ತದೆ ಎಂಬುದು.
ಒಂದು ಸಲ ಈ ಪ್ರಶ್ನೆ ಮೇಲೆದ್ದರೆ ಧೀರ್ಘ ಕಾಲೀನ ಸಮಸ್ಯೆ ಶುರುವಾಗುತ್ತದೆ.ಹಾಗಾಗುವ ಬದಲು ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ಸೂಕ್ತ ಎಂಬುದು ಈ ಇಬ್ಬರ ಲೆಕ್ಕಾಚಾರವಾಗಿತ್ತು.
ಇದೇ ಕಾರಣಕ್ಕಾಗಿ ಪಟೇಲರ ವಿರುದ್ಧ ಚನ್ನಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ ವಡ್ನಾಳ್‌ ರಾಜಣ್ಣ ಅವರಿಗೆ ಯಡಿಯೂರಪ್ಪ, ಮತ್ತು ಯಡಿಯೂರಪ್ಪ ಅವರ ವಿರುದ್ಧ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮಹಾಲಿಂಗಪ್ಪ ಅವರಿಗೆ ಪಟೇಲರು ಬೆಂಬಲ ನೀಡಿದರು.
ಅವತ್ತು ಪಟೇಲರ ಆಕಾಂಕ್ಷೆಗೆ ಯಡಿಯೂರಪ್ಪ ಅವರ ವಿರೋಧಿಯಾಗಿದ್ದ ಮಾಜಿ ಸಿಎಂ ಬಂಗಾರಪ್ಪ ಸಾಥ್ ನೀಡಿದ್ದು ಸಹಜವೇ ಆಗಿತ್ತು.
ಪರಿಣಾಮ?ಮುಖ್ಯಮಂತ್ರಿ ಪಟೇಲರು ಚನ್ನಗಿರಿಯಲ್ಲಿ,ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಸೋಲು ಅನುಭವಿಸಬೇಕಾಯಿತು.ಇಂತಹದೇ ರಣತಂತ್ರ ಕ್ಷೇತ್ರಗಳ ಮಟ್ಟದಲ್ಲೂನಡೆದಿದ್ದರಿಂದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಗ್ರಾಫು 63 ಸೀಟುಗಳ ಮೇಲೆ ಏರಲಿಲ್ಲ.
ಅಂದ ಹಾಗೆ ಈ ಘಟನೆಯನ್ನು ಏಕೆ ಸ್ಮರಿಸಿಕೊಳ್ಳಬೇಕೆಂದರೆ ಕರ್ನಾಟಕದ ರಾಜಕಾರಣದಲ್ಲಿ ಅಂತಹದೇ ಬೆಳವಣಿಗೆ ಘಟಿಸುವ ಲಕ್ಷಣಗಳು ಕಾಂಗ್ರೆಸ್‌ ಪಾರ್ಟಿಯ ಗರ್ಭದಲ್ಲಿ ಕಾಣಿಸಿಕೊಂಡಿವೆ.
ಅವತ್ತು ಯಡಿಯೂರಪ್ಪ ಮತ್ತು ಪಟೇಲರಿದ್ದ ಜಾಗದಲ್ಲಿ ಈ ಸಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ನಿಂತಿದ್ದಾರೆ.ಈ ಇಬ್ಬರಿಗೂ ಮುಂದಿನ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಗೇರುವ ಕನಸಿದೆ.
ಈ ಕನಸು ಯಾವ್ಯಾವ ರೂಪದಲ್ಲಿ ರಾಜ್ಯ ಕಾಂಗ್ರೆಸ್‌ ಪಕ್ಷವನ್ನು ತಲ್ಲಣಗೊಳಿಸುತ್ತಿದೆ ಎಂಬುದು ಈಗ ರಹಸ್ಯವಲ್ಲ.ಅಂದ ಹಾಗೆ ಬದಲಾದ ಕಾಲಘಟ್ಟದಲ್ಲಿ ಈ ಇಬ್ಬರು ನಾಯಕರು ವಿಧಾನಸಭಾ ಚುನಾವಣೆಯಲ್ಲಿ ವೈಯಕ್ತಿಕವಾಗಿ ಗೆಲ್ಲಬಹುದು.
ಆದರೆ ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಈ ಇಬ್ಬರ ಟೀಮು ಪರಸ್ಪರರ ಕಾಲೆಳೆಯಲು ಹೊರಟರೆ ಏನಾಗಬಹುದು?ಎಂಬ ಪ್ರಶ್ನೆ ರಾಜ್ಯ ಕಾಂಗ್ರೆಸ್‌ ಪಾಳೆಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ.


ಕಳೆದ ವಾರ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಕಾಲದಲ್ಲಿ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಹಿರಿಯ ನಾಯಕರೊಬ್ಬರು ಹೇಳುತ್ತಿದ್ದರು.
ಅವರ ಪ್ರಕಾರ,1798-99 ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್‌ ಮಧ್ಯೆ ನಡೆದ ಅಂಗ್ಲೋ-ಮೈಸೂರು ಯುದ್ಧಕ್ಕೂ 2018 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೂ ಒಂದು ಹೋಲಿಕೆ ಇದೆ.
ಅವತ್ತು ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಸೋತು ಹೋದ.ಹಾಗೆ ಆತ ಸೋಲಲು ಇದ್ದ ಬಹುದೊಡ್ಡ ಕಾರಣವೆಂದರೆ ಆತನಿಗಾದ ನಂಬಿಕೆ ದ್ರೋಹ.ಆ ಹೊತ್ತಿನಲ್ಲಿ ಟಿಪ್ಪುವಿನ ನಂಬಿಕಸ್ಥರೇ ಬ್ರಿಟಿಷರ ಜತೆ ಕೈ ಜೋಡಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ ಟಿಪ್ಪುವಿನ ಶಸ್ತ್ರಾಗಾರಕ್ಕೆ ನೀರು ನುಗ್ಗಿಸಿ ಅವು ತೋಪೆದ್ದು ಹೋಗುವಂತೆ ಮಾಡಿದರು.ಪರಿಣಾಮ?ಟಿಪ್ಪು ಯುದ್ಧದಲ್ಲಿ ಸೋಲುವುದು ಅನಿವಾರ್ಯವಾಯಿತು.
ಅವತ್ತು ಟಿಪ್ಪುವಿಗೆ ಬಿದ್ದ ಹೊಡೆತವೇ 2018 ರಲ್ಲಿ ಸಿದ್ಧರಾಮಯ್ಯ ಅವರಿಗೆ ಬಿತ್ತು.ವೈಯಕ್ತಿಕವಾಗಿ ಹೇಳಬೇಕೆಂದರೆ ಯುದ್ಧಕ್ಕೆ ಬೇಕು ಅಂತ ಸಿದ್ಧರಾಮಯ್ಯ ಯಾವತ್ತೂ ತಮ್ಮ ಕೈಯ್ಯಲ್ಲಿ ಒಂದು ನೆಲಬಾಂಬು ಮುಟ್ಟಿದ ನಾಯಕರಲ್ಲ.
ಆದರೆ ಅವರ ಅಕ್ಕ-ಪಕ್ಕ ಇದ್ದ ಕೆಲವರು ಒಂದು,ಎರಡು,ಮೂರು ಸಾವಿರ ನೆಲಬಾಂಬುಗಳನ್ನು ಸಜ್ಜುಗೊಳಿಸಿಕೊಂಡಿದ್ದರು.ಚುನಾವಣೆಯ ಟೈಮಿನಲ್ಲಿ ಅವರು ಈ ನೆಲಬಾಂಬುಗಳನ್ನು ಪೂರೈಸಿದ್ದರೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ಸು ವಿರೋಧಿ ಪಾಳೆಯವನ್ನು ಉಡಾಯಿಸಿಬಿಡುತ್ತಿತ್ತು.
ಆದರೆ ಚುನಾವಣೆಯ ಟೈಮಿನಲ್ಲಿ ಸಿದ್ಧರಾಮಯ್ಯ ಅವರು ನಂಬಿಕೊಂಡಿದ್ದ ಶಸ್ತ್ರಾಗಾರದ ಬಾಗಿಲು ತೆರೆದುಕೊಳ್ಳಲೇ ಇಲ್ಲ.ನೆಲ ಬಾಂಬುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಬಹುತೇಕರು ನಾಪತ್ತೆಯಾದರು.
ಸಿಕ್ಕ ಕೆಲವರು:ನಮ್ಮ ಹತ್ತಿರ ನೆಲಬಾಂಬುಗಳಿರುವುದು ಗೊತ್ತಾಗಿ ಎದುರಾಳಿ ಪಾಳೆಯ ನೆಲಬಾಂಬು ತಜ್ಷರಿಂದ ಮುತ್ತಿಗೆ ಹಾಕಿಸಿದೆ.ಆ ತಜ್ಞರು ನಮ್ಮ ಬಳಿ ಇದ್ದ ನೆಲಬಾಂಬುಗಳನ್ನು ನಿಷ್ಜ್ರಿಯಗೊಳಿಸಿದ್ದಾರೆ ಎಂದು ಕೈ ಎತ್ತಿ ಬಿಟ್ಟರು.
ಕೊನೆ ಕೊನೆಗೆ ಪರಿಸ್ಥಿತಿ ಎಲ್ಲಿಗೆ ತಲುಪಿತು ಎಂದರೆ ಸಿದ್ಧರಾಮಯ್ಯ ಅವರು ತಮಗೆ ತುರ್ತಾಗಿ ಬೇಕಾದ ಹತ್ತೋ ಹನ್ನೆರಡು ನೆಲಬಾಂಬುಗಳಿಗಾಗಿ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದ ಎಂ.ಟಿ.ಬಿ.ನಾಗರಾಜು ಅವರನ್ನು ಕೇಳಿಕೊಳ್ಳುವ ಸ್ಥಿತಿ ಬಂತು.
ಅವತ್ತೇ ಪರಿಸ್ಥಿತಿ ಹಾಗಾಗಿತ್ತು ಎಂದರೆ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಸಿದ್ಧರಾಮಯ್ಯ ಅವರ ಸ್ಥಿತಿ ಏನಾಗಬಹುದು?ಅಂತ ಊಹಿಸಿ.
ನೋ ಡೌಟ್‌,ಇವತ್ತಿಗೂ ಎದುರಾಳಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಡುವ ಶಕ್ತಿ ಇರುವುದು ಸಿದ್ಧರಾಮಯ್ಯ ಅವರಿಗೇ.ಆದರೆ ಟೈಮಿಗೆ ಸರಿಯಾಗಿ ಅಗತ್ಯದಷ್ಟು ನೆಲಬಾಂಬುಗಳು ಸಿಗಲಿಲ್ಲವೆಂದರೆ ಯುದ್ಧ ಗೆಲ್ಲುವುದು ಹೇಗೆ?
ಸಿದ್ಧರಾಮಯ್ಯ ಅವರ ಈ ಪರಿಸ್ಥಿತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಗೊತ್ತು.ಎಷ್ಟೇ ಆದರೂ ಅವರು ಇಂಡಿಪೆಂಡೆಂಟಾಗಿ ನೆಲಬಾಂಬು ಸಂಗ್ರಹಿಸಿಟ್ಟುಕೊಂಡವರು.
ಆದರೆ ಇರುವ ನೆಲಬಾಂಬುಗಳನ್ನೆಲ್ಲ ಖರ್ಚು ಮಾಡಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರೂ ತಮಗಾಗುವ ಲಾಭ ಅಷ್ಟರಲ್ಲೇ ಇದೆ ಎಂಬುದು ಅವರ ಯೋಚನೆ.ಹೀಗಾಗಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯದಿರಲಿ ಎಂದವರು ಬಯಸಿದ್ದಾರೆ.
ಹೀಗೆ ಯಾವ ಪಕ್ಷವೂ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಹೋದಾಗ ಪುನ: ಕರ್ನಾಟಕದಲ್ಲಿ ಮೈತ್ರಿ ಕೂಟ ಸರ್ಕಾರ ರಚನೆ ಅನಿವಾರ್ಯವಾಗುತ್ತದೆ.ಅಂತಹ ಸಂದರ್ಭದಲ್ಲಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್‌ ಸಜ್ಜಾಗುತ್ತಾರೆ.
ಜೆಡಿಎಸ್‌ ಜತೆ ಹೊಂದಾಣಿಕೆಯಾದರೆ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಕಾಗುತ್ತದೆ.ಒಬ್ಬ ಒಕ್ಕಲಿಗ ನಾಯಕ ಸಿಎಂ ಆದಾಗ ಮತ್ತೊಂದು ಪಕ್ಷದಿಂದ ಒಕ್ಕಲಿಗ ಉಪಮುಖ್ಯಮಂತ್ರಿ ಬರಲು ಸಾಧ್ಯವೇ?ಅನ್ನುವ ಪ್ರಶ್ನೆ ಏಳಬಹುದು.
ಆದರೆ ಈ ಪ್ರಶ್ನೆಗೆ ಬಿಜೆಪಿಯವರು ಉತ್ತರ ಕಂಡು ಹಿಡಿದಾಗಿದೆ.ಅದೆಂದರೆ ಲಿಂಗಾಯತ ನಾಯಕ ಯಡಿಯೂರಪ್ಪ ಅವರ ಕಾಲದಲ್ಲಿ,ಅದೇ ಸಮುದಾಯದ ಲಕ್ಷ್ಣಣ ಸವದಿ ಉಪಮುಖ್ಯಮಂತ್ರಿ ಆಗಿರಲಿಲ್ಲವೇ?
ಅಂದ ಮೇಲೆ ಈ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್‌ ನಾಯಕರ ಮಧ್ಯೆ ಯಾವ ಗೊಂದಲ ಇರಲು ಸಾಧ್ಯವೇ ಇಲ್ಲ.ಅದರೊಂದಿಗೆ ಅಧಿಕಾರ ಹಂಚಿಕೆಯ ಸೂತ್ರವೂ ಉಭಯ ಪಕ್ಷಗಳ ಮಧ್ಯೆ ನಡೆಯಬಹುದು.ಹಾಗಾದಾಗ ಸಹಜವಾಗಿಯೇ ಡಿ.ಕೆ.ಶಿವಕುಮಾರ್‌ ಅಧಿಕಾರಕ್ಕಾಗಿ ಇನ್ನಷ್ಟುಕಾಲ ಕಾಯಲು ಸಜ್ಜಾಗುತ್ತಾರೆ.
ಆ ಮೂಲಕ ಸಿದ್ಧರಾಮಯ್ಯ ಅವರು ದೂರವಾಗುವುದು ಡಿ.ಕೆ.ಶಿವಕುಮಾರ್‌ ಅವರಿಗೂ ಬೇಕು,ಜೆಡಿಎಸ್‌ ನಾಯಕರಿಗೂ ಬೇಕು.
ಇವತ್ತು ಕುಮಾರಸ್ವಾಮಿ ಬಿಜೆಪಿ ಜತೆ ಪರೋಕ್ಷ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಅಂತ ನಿಮಗನ್ನಿಸಬಹುದು.ಆದರೆ ದೂರಗಾಮಿ ನೆಲೆಯಲ್ಲಿ ಬಿಜೆಪಿ ಜತೆ ಕೈ ಜೋಡಿಸುವುದು ಎಷ್ಟು ಡೇಂಜರ್‌ ಅಂತ ದೇವೇಗೌಡರಿಗೆ ಗೊತ್ತಿದೆ.ಕುಮಾರಸ್ವಾಮಿ ಅವರಿಗೂ ಗೊತ್ತಿದೆ.
ಆದರೆ ಸಿದ್ಧರಾಮಯ್ಯ ಇಲ್ಲದ ಕಾಂಗ್ರೆಸ್‌ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಅವರು ತಯಾರಾಗಿಯೇ ಇದ್ದಾರೆ.ಹೀಗಾಗಿ ಪರಿಸ್ಥಿತಿ ನೋಡಿದರೆ ಸಿದ್ಧರಾಮಯ್ಯ ದೊಡ್ಡ ಗಂಡಾಂತರಕ್ಕೆ ಸಿಕ್ಕಿ ಬೀಳುವುದು ಗ್ಯಾರಂಟಿ.
ಮುಂದಿನ ಚುನಾವಣೆಯಲ್ಲಿ ಇದು ಸ್ಪಷ್ಟವಾಗುತ್ತದೆ ಎಂಬುದು ಈ ಹಿರಿಯ ನಾಯಕರ ಮಾತು.


ಆದರೆ ಇಂತಹ ಅನುಮಾನಗಳೆಲ್ಲದರ ನಡುವೆ ಶಿವಾಜಿ ನಗರದ ಶಾಸಕ ರಿಜ್ವಾನ್‌ ಆರ್ಷದ್‌ ಅವರಂತವರಿಗೆ ಸಿದ್ಧರಾಮಯ್ಯ ವರ್ಸಸ್‌ ಡಿ.ಕೆ.ಶಿವಕುಮಾರ್‌ ಎಪಿಸೋಡು ದೊಡ್ಡ ತೊಡಕು ಅಂತನ್ನಿಸುತ್ತಿಲ್ಲ.
ಅವರ ಪ್ರಕಾರ,ಯಾರ ಮನಸ್ಸಿನಲ್ಲಿ ಏನೇ ಇರಬಹುದು.ಆದರೆ ಎಲ್ಲ ಸಮಸ್ಯೆಗಳಿಗೆ ಹೈಕಮಾಂಡ್‌ ವರಿಷ್ಟರ ಬಳಿ ಮದ್ದು ಇದೆ.ಕೊನೆಯ ಕ್ಷಣದವರೆಗೆ ಅವರು ಸುಮ್ಮನಿರುತ್ತಾರೆ.ಆನಂತರ ಯಾರಿಗೆ ಏನು ಹೇಳಬೇಕೋ ಹೇಳುತ್ತಾರೆ.
ಹೀಗಾಗಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಹುದ್ದೆಗಾಗಿ ಬಡಿದಾಡುತ್ತಾರೆ ಎಂಬುದು ಸುಳ್ಳು.ಎಲ್ಲಕ್ಕಿಂತ ಮುಖ್ಯವಾಗಿ ಇಬ್ಬರಿಗೂ ಗೊತ್ತಿರುವ ವಿಷಯವೆಂದರೆ ಬಿಜೆಪಿ ಆಡಳಿತದ ಬಗ್ಗೆ ಜನಾಕ್ರೋಶ ಇದೆ ಅನ್ನುವುದು.
ಇವತ್ತು ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ.ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.ಸರ್ಕಾರಿ ಕಾಮಗಾರಿ ಪಡೆಯಲು ನಲವತ್ತು ಪರ್ಸೆಂಟ್‌ ಕಮೀಷನ್‌ ಕೊಡಬೇಕು ಎಂದು ಗುತ್ತಿಗೆದಾರರ ಸಂಘ ಪದೇ ಪದೇ ಆರೋಪಿಸುತ್ತಿದೆ.
ಇಂತವನ್ನೆಲ್ಲ ಮುಚ್ಚಿ ಹಾಕುವ ಸಲುವಾಗಿಯೇ ಬಿಜೆಪಿಯವರು ಹಿಜಾಬು,ಹಲಾಲು ಅಂತ ಗಲಭೆ ಎಬ್ಬಿಸುತ್ತಿದ್ದಾರೆ.ಇಂತಹ ವಿಷಯಗಳೆಲ್ಲ ಮುಂದಿನ ಚುನಾವಣೆಯವರೆಗೂ ಇರುತ್ತದೆ.ಆನಂತರ ಅವು ನಾಪತ್ತೆಯಾಗುತ್ತವೆ.
ಹೀಗಾಗಿ ಅವರು ಹಿಜಾಬು ಎಂದರೆ ನಾವು ಬೆಲೆ ಏರಿಕೆಯ ಬಗ್ಗೆ ಜನರ ಗಮನ ಸೆಳೆಯಬೇಕು,ಹಲಾಲು ಎಂದರೆ ನಲವತ್ತು ಪರ್ಸೆಂಟ್‌ ಕಮೀಷನ್ನಿನ ಬಗ್ಗೆ ಹೇಳಬೇಕು.ನಾಯಕರು ಮಾತ್ರವಲ್ಲ,ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಇದನ್ನೇ ಹೇಳುತ್ತಾ ಹೋಗುವಂತಾಗಬೇಕು.
ಹೀಗಾಗಿ ಬಿಜೆಪಿಯನ್ನು ಎದುರಿಸುವುದು ಹೇಗೆ?ಎಂಬುದು ಇವತ್ತಿನ ಮುಖ್ಯ ಅಜೆಂಡಾ ಅಗಿರುವಾಗ ಸಿದ್ಧರಾಮಯ್ಯ ಅವರಾಗಲೀ,ಡಿ.ಕೆ.ಶಿವಕುಮಾರ್‌ ಅವರಾಗಲೀ ನಾಯಕತ್ವಕ್ಕಾಗಿ ಕಾಂಗ್ರೆಸ್ ಪಕ್ಷವನ್ನು,ಆ ಮೂಲಕ ಜನರ ಹಿತವನ್ನು ಬಲಿಕೊಡುತ್ತಾರೆ ಎಂಬುದು ಸುಳ್ಳು ಎಂಬುದು ರಿಜ್ವಾನ್‌ ಆರ್ಷದ್‌ ಮಾತು.
ಅರ್ಥಾತ್‌,ಗೊಂದಲ ಎಂಬುದು ಆಡಳಿತಾರೂಢ ಬಿಜೆಪಿಯನ್ನು ಮಾತ್ರವಲ್ಲ,ಪ್ರತಿಪಕ್ಷ ಕಾಂಗ್ರೆಸ್‌ ಪಕ್ಷವನ್ನೂ ಬೇಯಿಸುತ್ತಿದೆ.ಮುಂದೇನು ಕತೆಯೋ?ಕಾದು ನೋಡಬೇಕು.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here