ಕರ್ನಾಟಕ ಬಿಜೆಪಿಯ ಭದ್ರಕೋಟೆ ಆಗಲು ಈ ಘಟನೆ ನೆರವಾಯಿತು

0
171

1971 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್(ಓ) ಹೀನಾಯ ಸೋಲು ಅನುಭವಿಸಿತ್ತು.
ಅವತ್ತು ಇಂದಿರಾಗಾಂಧಿ ಅವರ ಕಾಂಗ್ರೆಸ್(ಆರ್) ಪಡೆ ಗೆಲುವು ಸಾಧಿಸಿದಾಗ ರಾಜ್ಯದ ಒಬ್ಬ ನಾಯಕರು ತುಂಬ ಚಿಂತಿತರಾಗಿದ್ದರು.
ಯಾಕೆಂದರೆ ಕಾಂಗ್ರೆಸ್ (ಆರ್) ಪಕ್ಷದ ಗೆಲುವು ಸಾಮಾನ್ಯದ್ದಲ್ಲ ಎಂಬುದು ಅವರಿಗೆ ಗೊತ್ತಿತ್ತು.
ಅಷ್ಟೇ ಅಲ್ಲ,ಈ ಫಲಿತಾಂಶ ರಾಜ್ಯ ರಾಜಕಾರಣದ ಚಿತ್ರವನ್ನೇ ಬದಲಿಸಲಿದೆ ಅಂತ ಮನದಟ್ಟಾಗಿತ್ತು.
ಹೀಗಾಗಿ ಅವತ್ತು ಕಾಂಗ್ರೆಸ್ (ಓ) ಪಕ್ಷವನ್ನು ಮಣಿಸಿದ್ದ ಕಾಂಗ್ರೆಸ್ (ಆರ್) ಪಕ್ಷದ ಮುಂಚೂಣಿಯಲ್ಲಿದ್ದ ದೇವರಾಜ ಅರಸರ ಜತೆ ಕೈಗೂಡಿಸಲು ಆ ನಾಯಕ ಬಯಸಿದರು.ಅವರ ಹೆಸರು-
ವೀರೇಂದ್ರ ಪಾಟೀಲ್
ಅಂದ ಹಾಗೆ ವೀರೇಂದ್ರ ಪಾಟೀಲರ ಈ ಬಯಕೆ ಸಣ್ಣ ವಿಷಯವಾಗಿರಲಿಲ್ಲ.ಯಾಕೆಂದರೆ,1968 ರಿಂದ 1971 ರವರೆಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಇದೇ ವೀರೇಂದ್ರ ಪಾಟೀಲ್.
ಮುಖ್ಯಮಂತ್ರಿಯಾದವರು ತಮ್ಮ ಪಕ್ಷಕ್ಕಾದ ಸೋಲಿನ ಹಿನ್ನೆಲೆಯಲ್ಲಿ ಪಕ್ಷಾಂತರ ಮಾಡಲು ಬಯಸಿದ ಮತ್ತೊಂದು ಉದಾಹರಣೆ ಈ ರಾಜ್ಯದಲ್ಲಿರಲಿಲ್ಲ.
ಅದಕ್ಕಿಂತ ಕುತೂಹಲಕಾರಿ ಎಂದರೆ,ತಾವು ಮಾತ್ರವಲ್ಲ,ಇಡಿ ಇಡಿಯಾಗಿ ಕಾಂಗ್ರೆಸ್ (ಓ) ಪಕ್ಷವೇ ಇಂದಿರಾಗಾಂಧಿ ಬಣದಲ್ಲಿ ವಿಲೀನವಾಗಬೇಕು ಎಂದವರು ಬಯಸಿದ್ದರು.
ಹಾಗಂತಲೇ ಕಾಂಗ್ರೆಸ್ (ಓ) ಪಕ್ಷದ ಪ್ರಮುಖರ ಸಭೆಯಲ್ಲಿ ಈ ವಿಷಯವನ್ನು ಪಾಟೀಲರು ಪ್ರಸ್ತಾಪಿಸಿದರು.
ರಾಜ್ಯದ ಜನ ಇಂದಿರಾಗಾಂಧಿ ಅವರ ಜತೆಗಿದ್ದಾರೆ.ಹೀಗಾಗಿ ನಮ್ಮ ಪಕ್ಷಕ್ಕೆ ಭವಿಷ್ಯವಿಲ್ಲ ಅನ್ನುವುದು ನಮ್ಮ ಜತೆಗಿರುವ ಬಹುತೇಕರ ಅಭಿಪ್ರಾಯ.
ಹೀಗಿರುವಾಗ ಕೆಲವರು ಮಾತ್ರ ಅಲ್ಲಿಗೆ ಹೋಗುವುದು ಸರಿಯಲ್ಲ.ಒಪ್ಪಿಗೆ ಇದ್ದರೆ ಎಲ್ಲರೂ ಒಗ್ಗೂಡಿ ಆ ಕಡೆ ಹೋಗೋಣ ಎಂಬುದು ವೀರೇಂದ್ರ ಪಾಟೀಲರ ಮಾತಾಗಿತ್ತು.
ಆದರೆ ರಾಮಕೃಷ್ಣ ಹೆಗಡೆ, ಪಿ.ಎಂ.ನಾಡಗೌಡ ಸೇರಿದಂತೆ ನಿಜಲಿಂಗಪ್ಪ ಅವರ ಕೆಲ ಕಟ್ಟಾ ಅನುಯಾಯಿಗಳು ಈ ಪ್ರಪೋಸಲ್ಲನ್ನೇ ತಿರಸ್ಕರಿಸಿಬಿಟ್ಟರು.

ಇವತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ಸುಭದ್ರವಾಗಿ ತಲೆ ಎತ್ತಿ ನಿಂತಿದ್ದರೆ ಅದರ ಮೂಲ ಕಾರಣ ಇದು.
ಯಾಕೆಂದರೆ ಅವತ್ತು ವೀರೇಂದ್ರ ಪಾಟೀಲರ ಪ್ರಪೋಸಲ್ಲಿಗೆ ಕಾಂಗ್ರೆಸ್ (ಓ) ನ ಕೆಲ ನಾಯಕರು ವಿರೋಧ ವ್ಯಕ್ತಪಡಿಸದೆ ಇದ್ದಿದ್ದರೆ ಇಂದಿರಾಗಾಂಧಿ ಬೆಂಬಲಿತ ಕಾಂಗ್ರೆಸ್ (ಆರ್) ಗೆ ಪ್ರಬಲ ವಿರೋಧಿಗಳೇ ಇರುತ್ತಿರಲಿಲ್ಲ.
ಆದರೆ ಅವತ್ತು ಕಾಂಗ್ರೆಸ್ (ಓ) ಉಳಿದುಕೊಂಡಿದ್ದರಿಂದ ಜನತಾ ಪರಿವಾರ ತಲೆ ಎತ್ತಲು ದಾರಿಯಾಯಿತು.
ಈ ಜನತಾ ಪರಿವಾರದ ಒಡಕೇ ಕರ್ನಾಟಕದಲ್ಲಿ ಬಿಜೆಪಿ ದೈತ್ಯ ಶಕ್ತಿಯಾಗಿ ಮೇಲೆದ್ದು ನಿಲ್ಲಲು ಸಾಧ್ಯವಾಯಿತು.
ಸೂಕ್ಷ್ಮವಾಗಿ ಗಮನಿಸಿದರೆ ಜನತಾ ಪರಿವಾರ ಗಳಿಸಿದ ಬಲವೆಲ್ಲ,ಪರೋಕ್ಷವಾಗಿ ಬಿಜೆಪಿ ಪಾಲಿನ ಗೊಬ್ಬರವಾಗಿ ರೂಪುಗೊಳ್ಳುತ್ತಾ ಬಂದಿರುವುದು ಸ್ಪಷ್ಟ.

ಅಂದ ಹಾಗೆ ಬಿಜೆಪಿಗೆ ಗೊಬ್ಬರವಾದ ಜನತಾಪರಿವಾರ ತನ್ನ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಕಾಲಾನುಕಾಲಕ್ಕೆ ಪಡೆದ ಬಗೆಯನ್ನೇ ಗಮನಿಸಿ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಬೆಳವಣಿಗೆಗಳು ಈ ದಿಸೆಯಲ್ಲಿ ಅದಕ್ಕೆ ನೆರವಾಯಿತು.
1975 ರ ಜೂನ್ 25 ರಂದು ಪ್ರಧಾನಿ ಇಂದಿರಾಗಾಂಧಿ ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರಲ್ಲ?
ಅದನ್ನು ವಿರೋಧಿಸಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಸಂಪೂರ್ಣ ಕ್ರಾಂತಿ ಶುರುವಾಯಿತು.
ಈ ಹೋರಾಟಕ್ಕೆ ದೇಶದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಯಿತು.
ಅಂತಿಮವಾಗಿ ಈ ಹೋರಾಟ ಯಶಸ್ವಿಯಾಯಿತು.ಮತ್ತದರ ಫಲವಾಗಿ ದೇಶದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಮೊರಾರ್ಜಿ ದೇಸಾಯಿ ಅವರ ನಾಯಕತ್ವದಲ್ಲಿ ಅಸ್ತಿತ್ವಕ್ಕೆ ಬಂತು.
ಮುಂದೆ ಇಂದಿರಾಗಾಂಧಿಯವರ ಕೈ ಚಳಕದಿಂದ ಮೊರಾರ್ಜಿ ಅವರ ಸರ್ಕಾರ ಉರುಳಿತು.
ಚೌಧುರಿ ಚರಣ್ ಸಿಂಗ್ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ ಇಂದಿರಾಗಾಂಧಿ ತಮ್ಮಿಚ್ಚೆಯನ್ನು ಪೂರೈಸಿಕೊಂಡರು.
ಅಷ್ಟೇ ಅಲ್ಲ,ಮೊರಾರ್ಜಿ ಸರ್ಕಾರದ ಪತನಕ್ಕೆ ನೆರವು ನೀಡಿದ ಚರಣ್ ಸಿಂಗ್ ಪ್ರಧಾನಿಯಾಗಿ ಕೂರುವಂತೆ ನೋಡಿಕೊಂಡು, ಬಹುಮತ ಸಾಬೀತು ಮಾಡಬೇಕಾದ ಕಾಲದಲ್ಲಿ ಉಲ್ಟಾ ಹೊಡೆದು ಚರಣ್ ಸಿಂಗ್ ಉರುಳಿ ಬೀಳುವಂತೆ ನೋಡಿಕೊಂಡರು.
ಇದು ಜನತಾ ಪರಿವಾರ ಎಂಬ ವೃಕ್ಷ. ದೇಶದೆಲ್ಲೆಡೆ ತನ್ನ ಕೊಂಬೆಗಳನ್ನು ಚಾಚಿಕೊಳ್ಳಲು ಪ್ರೇರಣೆಯಾಯಿತು.ಜನಸಂಘ ಬಿಜೆಪಿಯಾಗಿ ಈ ಕೊಂಬೆಗಳ ನೆರಳಲ್ಲೇ ಬೆಳೆಯತೊಡಗಿತು.
1983 ರ ಹೊತ್ತಿಗೆ ಕರ್ನಾಟಕದಲ್ಲಿ ಜನತಾರಂಗ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹದಿನೆಂಟು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು ಇದಕ್ಕೊಂದು ಉದಾಹರಣೆ.

ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಜನತಾಪರಿವಾರ ಬೆಳೆದು ನಿಂತರೂ 1996 ಮತ್ತು 1998 ರ ನಡುವಿನ ಬೆಳವಣಿಗೆಗಳು ಬಿಜೆಪಿಯ ಬಲ ಹೆಚ್ಚಾಗುವಂತೆ ಮಾಡಿತು.
ಮೊದಲನೆಯದಾಗಿ ತೃತೀಯ ರಂಗ ಸರ್ಕಾರದ ವೈಫಲ್ಯ ಕಾಂಗ್ರೆಸ್ ವಿರೋಧಿ ಶಕ್ತಿಗಳ ಭ್ರಮನಿರಸನಕ್ಕೆ ಕಾರಣವಾಗಿ ಪರ್ಯಾಯ ಶಕ್ತಿಯ ಕಡೆ ಅದು ಗಮನ ಹರಿಸುವಂತೆ ಮಾಡಿತು.
ಅದೇ ಕಾಲಕ್ಕೆ ರಾಮಕೃಷ್ಣ ಹೆಗಡೆ ಅವರ ಉಚ್ಚಾಟನೆಯ ಬೆಳವಣಿಗೆ ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಭದ್ರವಾಗಿ ತಳವೂರುವಂತೆ ಮಾಡಿತು.

ಅಂದ ಹಾಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳಲ್ಲಿ ಬಿಜೆಪಿಯ ಬೆಳವಣಿಗೆ ಏಕರೂಪದ್ದಲ್ಲ.
ಉತ್ತರ ಭಾರತದಲ್ಲಿ ಅದರ ನೆಲೆ ವ್ಯಾಪಕವಾಗಿದ್ದರೆ ದಕ್ಷಿಣ ಭಾರತದಲ್ಲಿ ಅದಕ್ಕೆ ಸುಭದ್ರ ನೆಲೆ ಆಗಿರುವುದು ಕರ್ನಾಟಕ ಮಾತ್ರ.
ಅದರ ಈ ಯಶಸ್ಸಿನ ಬೇರುಗಳಿರುವುದು 1971ರ ಬೆಳವಣಿಗೆಯಲ್ಲಿ.ಒಂದು ವೇಳೆ ಅವತ್ತು ವೀರೇಂದ್ರ ಪಾಟೀಲರ ಪ್ರಪೋಸಲ್ಲಿಗೆ ಕಾಂಗ್ರೆಸ್(ಓ)ಪಕ್ಷದ ಎಲ್ಲ ನಾಯಕರು ಯೆಸ್ ಎಂದಿದ್ದರೆ ಕಮಲಪಾಳೆಯದ ಪಾಲಿಗೆ ಕರ್ನಾಟಕ ಸುಭದ್ರ ನೆಲೆಯಾಗುತ್ತಿರಲಿಲ್ಲ.
ತುರ್ತು ಪರಿಸ್ಥಿತಿಯ ಕಾಲಘಟ್ಟವನ್ನು ವಾರ್ಷಿಕ ಜಯಂತಿಯಂತೆ ಆಚರಿಸುವ ರಾಜ್ಯ ಬಿಜೆಪಿ ಈ ಅಂಶವನ್ನು ಮರೆಯಬಾರದು.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here