ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಅಧಿಕಾರಿಗಳಿಗೆ ಸನ್ಮಾನ ‘ಕೆಲಸದ ಜವಾಬ್ದಾರಿ ಮಹಿಳೆಯರಿಗೆ ವಹಿಸಿದ್ದಲ್ಲಿ ಅಚ್ಚುಕಟ್ಟು ನಿರ್ವಹಣೆ’

0
81

ಬಳ್ಳಾರಿ,ಮಾ.06 ಭವಿಷ್ಯದ ಕೋವಿಡ್-19 ನಿಯಂತ್ರಣದಲ್ಲಿ ಮಹಿಳಾ ನಾಯಕತ್ವ’ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷಣೆಯನ್ನು ಬಲಗೊಳಿಸಲು ಬಳ್ಳಾರಿಯ ಎಫ್.ಪಿ.ಎ.ಆಯ್ ಶಾಖೆಯ ವತಿಯಿಂದ ಕರೋನಾ ನಿಯಂತ್ರಣದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಿಸಿದ ಜಿಲ್ಲೆಯ ಪ್ರಮುಖ ಮಹಿಳಾ ಅಧಿಕಾರಿಗಳಿಗೆ ಶನಿವಾರ ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ನಂದಿನಿ ಕೆ.ಆರ್., ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಪರಿವೀಕ್ಷಣಾಧಿಕಾರಿ ಡಾ.ಮರಿಯಂಬಿ, ನಿವೃತ್ತ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಕಾಯಕಲ್ಪ ಸಮನ್ವಯಾಧಿಕಾರಿಗಳಾದ ಡಾ.ವಿಜಯಲಕ್ಷ್ಮೀ,ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತನು ಮನದಿಂದ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಈ ಸನ್ಮಾನ ಸಲ್ಲಬೇಕು ಎಂದರು. ಅಲ್ಲದೇ ಮಹಿಳೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಬಗ್ಗೆ ವಿಶೇಷ ಅರಿವು ಮೂಡಿಸಲು ಎಲ್ಲ ತರಹದ ಕ್ರಮಕೈಗೊಂಡಿರುವುದಾಗಿ ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಮಾತನಾಡಿ ಮಹಿಳೆಯರಿಗೆ ಸರ್ಕಾರದ ಎಲ್ಲಾ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳ ಅರಿವು ಇರಬೇಕು ಎಂದರು. ಯಾವುದೇ ಕೆಲಸವನ್ನು ಒಬ್ಬ ಮಹಿಳೆಗೆ ವಹಿಸಿದರೆ ಅವರ ಹೆಚ್ಚಿನ ಮುತುವರ್ಜಿವಹಿಸಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಎಸ್.ವಿಜಯಸಿಂಹ ಅವರು ಈ ಜಾಗತಿಕ ಕೋವಿಡ್ ಸಂದರ್ಭದಲ್ಲಿ ನಮ್ಮ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಮತ್ತು ಅವಶ್ಯಕತೆ ಇರುವವರಿಗೆ ತನ್ನ ಸಹಾಯಹಸ್ತವನ್ನು ನೀಡಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಕಾರ್ಯದರ್ಶಿ ಟಿ.ಜಿ.ವಿಠ್ಠಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನಿಲ ಶಾಖಾಪುರ ಪ್ರಾರ್ಥಿಸಿದರು. ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಎಸ್.ವಿಜಯಲಕ್ಷ್ಮಿ ನಿರೂಪಿಸಿದರು. ಸುಜಾತಾ ಪುರಾಣಿಕ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು.
ಮಹಿಳಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜಯಿಯಾದ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು.ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here