ಪ್ರೀತಿ-ವಿಶ್ವಾಸದ ವಾತಾವರಣ ನಿರ್ಮಿಸಿ: ಕಮಲಾ ಹಂಪನಾ

0
90

ದಾವಣಗೆರೆ ಮಾ.09.ಸಮಾಜದಲ್ಲಿ ಪ್ರತಿ ಮಹಿಳೆಗೂ ಬದುಕುವ ಸ್ವಾತಂತ್ರ್ಯ, ಸ್ವಾಭಿಮಾನ ಇದೆ. ದೌರ್ಜನ್ಯ, ಶೋಷಣೆ ಬಿಟ್ಟು ಪ್ರೀತಿ, ವಿಶ್ವಾಸದಿಂದ ಗೌರವಯುತವಾಗಿ ಬಾಳುವ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದು ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಐಕ್ಯೂಎಸಿ ಮತ್ತು ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದ ಪಯಣದಲ್ಲಿ ಯಾರೂ ಮೇಲಲ್ಲ, ಯೂರೂ ಕೀಳಲ್ಲ. ಇದೊಂದು ಬಂಡಿ ಇದ್ದಂತೆ ಸ್ವಲ್ಪ ವ್ಯತ್ಯಾಸವಾದರೂ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಸಮಾನತೆ, ಪರಸ್ಪರ ವಿಶ್ವಾಸ, ಆತ್ಮೀಯ ಸಂಬಂಧದೊಂದಿಗೆ ಬದುಕುವುದು ಮುಖ್ಯ ಎಂದು ಹೇಳಿದರು.
ಮಹಿಳೆ ಮೇಲಿನ ಶೋಷಣೆ ಇಂದು ನಿನ್ನೆಯದಲ್ಲ. ಶತ ಶತಮಾನಗಳಿಂದ ಶೋಷಣೆಯ ಮಾತುಗಳನ್ನು ಕೇಳುತ್ತಿದ್ದೇವೆ. ಮಹಿಳೆ ಬಗ್ಗೆ ಸಾಕ್ರೆಟಿಸ್, ಮನು, ಅರಿಸ್ಟಾಟಲ್‍ನಂತಹ ತತ್ವಜ್ಞಾನಿಗಳು ಕೀಳಾಗಿ ಮಾತನಾಡಿದನ್ನು ಗಮನಿಸಿದರೆ ಆಗಿನ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂಬುದು ಅರ್ಥವಾಗುತ್ತದೆ.ಆದರೆ ಇನ್ನೊಂದೆಡೆ ಮಹಿಳೆಯನ್ನು ಹಾಡಿ ಹೊಗಳಿ, ಅಟ್ಟಕ್ಕೇರಿಸಿದ, ಪೂಜ್ಯನೀಯ ಸ್ಥಾನವನ್ನೂ ನೀಡಿ ಗೌರವಿಸಿದ ಪ್ರಸ್ತಾಪವೂ ಇದೆ. ಆದರೆ ಏನೇ ಆಗಿದ್ದರೂ ಅಮಾನವೀಯ ವರ್ತನೆ, ದೌರ್ಜನ್ಯsಸಲ್ಲದು ಎಂದರು.
ಇದು ಭಾರತಕ್ಕಷ್ಟೇ ಸೀಮಿತವೂ ಅಲ್ಲ, ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಈ ತಾರತಮ್ಯ ಧೋರಣೆ ಇದೆ. ಯಹೂದಿಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಮನೆಯಲ್ಲಿ ಆ ದಿನ ದೀಪ ಹಚ್ಚುವುದಿಲ್ಲ. ಅದೇ ಭಾರತದಲ್ಲಿ ಹುಟ್ಟುವ ಮುನ್ನವೇ ಸಾಯಿಸುವ ಅಥವಾ ಹುಟ್ಟಿದ ಮೇಲೆ ಸಾಯಿಸುವ ದುಸ್ಥಿತಿ ಇದೆ. ಇಂಥ ವ್ಯವಸ್ಥೆ ಬದಲಾಗಬೇಕು. ಅದಕ್ಕೆ ಜಾಗೃತಿ ಅಗತ್ಯ.. ಮಹಿಳೆಯರಲ್ಲಿ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಕೊರೊನಾ ವಾರಿಯರ್ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಎ.ಎಂ.ಶಿಲ್ಪಶ್ರೀ ಮಾತನಾಡಿ, ಪ್ರಕೃತಿಯ ವಿಕಾರ ರೂಪ ಕೊರೊನಾ. ಅದರ ಸೋಂಕು ಜೀವಾಪಾಯಕ್ಕೆ ಕಾರಣವಾಗಿತ್ತು. ವೈಯಕ್ತಿಕ ಜೀವದ ಹಂಗು ತೊರೆದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಗಗಳ ರಕ್ಷಣೆ ಮಾಡಲು ನಮ್ಮನ್ನು ಸೇವೆಗೆ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಅದ್ಭುತ ಅನುಭವ. ಇದಕ್ಕೆ ಯಾವುದೇ ರೀತಿಯ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದರು.
ಕೊರೊನಾ ವಾರಿಯರ್ ಆರೋಗ್ಯ ಸಹಾಯಕಿ ರತ್ನಮ್ಮ, ಸುಖದ ಸಂದರ್ಭಕ್ಕಿಂತ ಕಷ್ಟದ ಸನ್ನಿವೇಶದಲ್ಲಿ ಸೇವೆ ಸಲ್ಲಿಸುವಾಗ ಸಿಗುವ ಖುಷಿ, ನೆಮ್ಮದಿ, ತೃಪ್ತಿ ಇನ್ನೆಲ್ಲೂ ಸಿಗುವುದಿಲ್ಲ. ಅಂಥ ಅನುಭವ ನನಗೆ ಕೊರೊನಾ ಸಂದರ್ಭದಲ್ಲಿ ಆಗಿದೆ. ಲಾಕ್‍ಡೌನ್ ಸಮಯದಲ್ಲಿ ಕುಟುಂಬದವರು, ಸಮಾಜದ ಜನ ದೂರವಿಟ್ಟಿದ್ದರೂ ಅವರ ಜೀವರಕ್ಷಣೆಗೆ ದುಡಿದ ಸಂತೃಪ್ತಿ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಜೀವನದಲ್ಲಿ ಗಂಡು- ಹೆಣ್ಣಿನ ನಡುವಿನ ವೈಯಕ್ತಿಕ ಪ್ರತಿಷ್ಠೆಗಿಂತ ಸಮನ್ವಯತೆ ಮುಖ್ಯ.. ಪರಸ್ಪರ ಹೊಂದಾಣಿಕೆ ಸುಖ ಜೀವನದ ಸೋಪಾನ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಮಲಾ ಹಂಪನಾ, ಕೊರೊನಾ ವಾರಿಯರ್ಸ್ ಡಾ.ಶಿಲ್ಪಶ್ರೀ, ದಾದಿ ರತ್ನಮ್ಮ ಅವರನ್ನು ವಿಶ್ವವಿದ್ಯಾನಿಲಯದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ, ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ ಮಾತನಾಡಿದರು. ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ ಉಪಸ್ಥಿತರಿದ್ದರು. ಡಾ. ನಾಗಸ್ವರೂಪ, ಡಾ.ಎಚ್.ವಿ.ಶಾಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಟಿ.ಎಲ್.ಪ್ರವೀಣ್ ವಂದಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here