ಸಂಡೂರು ತಾಲ್ಲೂಕಿನ ರಾಮಘಡ ಅಂದರೆ ಇತಿಹಾಸದ ಹೊಸಮಲೆ ದುರ್ಗ….

0
581

ಇತಿಹಾಸ ಉಳಿಬೇಕು..

ಹೊಸಮಲೆದುರ್ಗ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲನಗರದ ಪಶ್ಚಿಮಕ್ಕೆ ೩೨೨೦ ಅಡಿ ಎತ್ತರದ ಬೆಟ್ಟದ ಮೇಲಿರುವುದೇ ಹೊಸಮಲೆದುರ್ಗ. ಇದು ಸಂಡೂರಿನಿಂದ ವಾಯುವ್ಯ ದಿಕ್ಕಿಗೆ ಹತ್ತು ಕಿ.ಮೀ. ದೂರದಲ್ಲಿದೆ. ಇದನ್ನು ರಾಮನಮಲೆ ರಾಮಘಡವೆಂತಲೂ ಕರೆಯುತ್ತಾರೆ.
ಇಲ್ಲಿ ಸುಮಾರು ಇಪ್ಪತ್ತು ಮನೆಗಳಿವೆ. ಸಂಡೂರು ಕೈಫಿಯತ್ತು ಇದನ್ನು ರಾಮನದುರ್ಗ ಮತ್ತು ಹೊಸಮಲೆದುರ್ಗವೆಂದು ಕರೆದಿದೆ.[1] ಕ್ರಿ.ಶ. ಶತಮಾನದಲ್ಲಿ ದಕ್ಷಿಣ ಭಾರತದ ರಾಜಕೀಯ ಸ್ಥಿತಿ-ಗತಿಗಳು ಸ್ಪರ್ಧಾತ್ಮಕವಾಗಿದ್ದವು. ಸೇವುಣ, ಕಾಕತೀಯ, ಹಾಗೂ ಹೊಯ್ಸಳರ ಮಧ್ಯೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತು, ಸೇವಣರು, ಕಾಕತೀಯರು, ಪಾಂಡ್ಯರು ಮತ್ತು ಹೊಯ್ಸಳರನ್ನು ಬಗ್ಗುಬಡಿದು ರಾಜ್ಯಕಟ್ಟಿದ ಶ್ರೇಯಸ್ಸು ಕಂಪಿಲರಾಯ ಮತ್ತು ಕುಮಾರ ರಾಮನಿಗೆ ಸಲ್ಲುತ್ತದೆ. ದೆಹಲಿಯ ಮಹಮದ್ ಬಿನ್ ತುಘಲಕ್ ನ ಅಧಿಕಾರಿಗಳಿಗೆ ಕಪ್ಪಕಾಣಿಕೆಗಳನ್ನು ಕೊಡಲು ನಿರಾಕರಿಸಿದರಲ್ಲದೆ ಅವನ ವಿರುದ್ಧ ಅನೇಕ ಬಾರಿ ಯುದ್ಧಗಳನ್ನು ಮಾಡಲಾಯಿತು. ಕ್ರಿ.ಶ. ೧೩೩೬ರಲ್ಲಿ ಸುಲ್ತಾನನ ಭಯಂಕರ ಸೈನ್ಯ ತಿಂಗಳು ಗಟ್ಟಲೆ ಕೋಟೆಯನ್ನು ಸುತ್ತುವರೆದು ನಿಂತಾಗ ಕೋಟೆಯೊಳಗಿರುವ ಆಹಾರ ಸಾಮಗ್ರಿ ಮುಗಿದಾಗ ವೈರಿಗೆ ಶರಣಾಗದೆ ಕೋಟೆ ಬಾಗಿಲನ್ನು ತೆರೆದು ವೈರಿಪಡೆಯ ಮೇಲೆ ಬಿದ್ದು ವೀರಸ್ವರ್ಗವನ್ನು ಪಡೆದ ವಿಷಯ ನಮ್ಮ ಇತಿಹಾಸದಲ್ಲೇ ಮರೆಯಲಾಗದ ಘಟನೆ. ಅರ್ಧಶತಕದಷ್ಟೇ ಕಾಲ ಬಾಳಿ ಬೆಳಗಿದ ಇವರು ತಮ್ಮದೆ ಸ್ವಂತಿಕೆಯನ್ನು ಪ್ರತ್ಯೇಕತೆಯನ್ನು ಉಳಿಸಿ ಬೆಳಸಿಕೊಳ್ಳಲು ಸಮರ್ಥಕವಾಗಿ ಹೋರಾಟ ನಡೆಸಿದ್ದು ಒಂದು ಅಸಮಾನ್ಯ ಸಂಗತಿಯಾಗಿದೆ.

ಇಟ್ನ್ ಬಟುಟಾ, ಇಸಾಮಿ, ಫರ್ನಾವೊನ್ಯೂನಿಜ್ ಮುಂತಾದ ವಿದೇಶಿಯರು, ದೇಶಿಯ ಜಾನಪದರು ಕಾವ್ಯಕಾರರು ಶುದ್ಧ ಚಾರಿತ್ರ್ಯ, ಶೀಲ, ಶೌರ್ಯ, ಸಾಹಸದ ವ್ಯಕ್ತಿತ್ವ, ವರ್ಚಸ್ಸು, ಕರ್ನಾಟಕದ ತುಂಬಾ ಜನಜನಿತವಾಗಿ ಕಾವ್ಯಗಳಿಗೆ, ಜನಪದ ಹಾಡುಗಳಿಗೆ, ಯಕ್ಷಗಾನಗಳಿಗೆ, ನಾಟಕಗಳಿಗೆ ಕಥಾ ವಸ್ತುಗಳನ್ನು ಒದಗಿಸಿವೆ. ಹೀಗೆ ಜನಪ್ರಿಯವಾದ ಕಂಪಿಲ, ಕುಮಾರ ರಾಮನ ಕೋಟೆ ಸ್ಮಾರಕಗಳು ಹೊಸಮಲೆದುರ್ಗದಲ್ಲಿ ಕಂಡುಬರುತ್ತವೆ. ಇವುಗಳ ಅಧ್ಯಯನವನ್ನು ಒಳಗೊಂಡ ಭಾಗವಿದೆ.

ಮುಮ್ಮಡಿಸಿಂಗ ಈ ಅರಸರಲ್ಲಿ ಹಿರಿಯ ಈತನ ಕಾಲದಿಂದಲೇ ಈ ವಂಶೀಯರಿಗೆ ಹೊಯ್ಸಳರೊಂದಿಗೆ ದ್ವೇಷವಿದ್ದಂತೆ ಕಂಡುಬರುತ್ತದೆ. ಏಕೆಂದರೆ ಕ್ರಿ.ಶ. ೧೨೮೧ರಲ್ಲಿ ಮುಮ್ಮಡಿಸಿಂಗನು ಹೊಯ್ಸಳ ಅಧಿಪತ್ಯಕ್ಕೆ ಸೇರಿದ ಬೆಮ್ಮಲೂರು ಕಲ್ಲಿಂಗ ಎಂದರೆ ಇಂದಿನ ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದಂತೆ ತಿಳಿದುಬರುತ್ತದೆ.[2] ಇದೇ ಮುಮ್ಮಡಿ ಸಿಂಗನು ಲೇಪಂಡುಕಲ್ಲು ಎಂಬಲ್ಲಿ ಸಂಗಯ್ಯನಾಯಕನೊಂದಿಗೆ ಯುದ್ಧ ಮಾಡಿದನೆಂಬುದಾಗಿ ಹೊಳಲ್ಕೆರೆ ತಾಲೂಕು ಲೋಕದವೊಳಲ ಗ್ರಾಮವೊಂದರಲ್ಲಿರುವ ಶಾಸನದಲ್ಲಿ ತಿಳಿದು ಬರುತ್ತದೆ.[3] ಈ ಎಡೆಯೂ ಹೊಯ್ಸಳರ ಅಧಿಪತ್ಯಕ್ಕೆ ಸೇರಿತ್ತು. ಕಂಪಿಲನ ಕಾಲಕ್ಕೆ ಈ ದ್ವೇಷವು ಮತ್ತಷ್ಟೂ ಪುಟವಿಕ್ಕಿದಂತಾಯಿತು.

ಮೊದಮೊದಲು ಕಂಪಿಲನು ದೇವಗಿಯ ರಾಮದೇವರಾಯನ ರಣನಾಯಕನಾಗಿದ್ದುಕೊಂಡು ಅವನ ಪರವಾಗಿ ಹೊಯ್ಸಳರ ಮೇಲೆ ಯುದ್ಧ ಮಾಡಿರುವಂತೆ ವಿಧಿತವಾಗುತ್ತದೆ. ಕ್ರಿ.ಶ. ೧೩೦೩ ರಲ್ಲಿ ಸೇವುಣರ ರಣನಾಯಕನಾದ ಕಂಪಿಲನಿಗೂ ಹೊಯ್ಸಳ ಮುಮ್ಮಡಿ ಬಲ್ಲಾಳನ ಮೈದುನನೂ ಚಿತ್ರದುರ್ಗದ ಮಾಂಡಳಿಕನೂ ಆದ ಸೋಮೆಯ ಡಣ್ಣಾಯಕನಿಗೂ ಹೊಳಲ್ಕೆರೆಯ ಬಳಿ ಯುದ್ಧ ನಡೆದುದಾಗಿ ಒಂದು ವೀರಗಲ್ಲಿನಲ್ಲಿ ವ್ಯಕ್ತವಾಗಿದೆ.[4] ಕ್ರಿ.ಶ. ೧೩೨೦ರಲ್ಲಿ ಹೊಯ್ಸಳ ವೀರಬಲ್ಲಾಳನು ಕಂಪಿಲನ ನೆಲೆಯಾದ ದೊರವಡಿಯ ಮೇಲೆ ದಂಡೆತ್ತಿ ಬಂದಂತೆಯೂ ಆ ಕದನದಲ್ಲಿ ಬಲ್ಲಾಳನ ಸೇನಾಧಿಪತಿ ಕೂರುಕನಾಯಕನು ಹತನಾದಂತೆಯೂ ಗೊತ್ತಾಗುತ್ತದೆ.[5] ಕ್ರಿ.ಶ. ೧೩೨೩ರ ರಾಮಘಡದ ಶಾಸನದಲ್ಲಿ ಬಲ್ಲಾಳನಿಗೂ ಕಂಪಿಲನಿಗೂ ಹೊಸಮಲೆಯಲ್ಲಿ ಯುದ್ಧ ಸಂಭವಿಸಿದಂತೆ ತಿಳಿಸುತ್ತದೆ.[6] ಈ ಮೇಲೆ ಹೇಳಿದಂತೆ ಎಲ್ಲಾ ಯುದ್ಧಗಳು ಹೊಯ್ಸಳರ ವಿರುದ್ಧವೇ ನಡೆದಿವೆ. ಹಾಗಾಗಿ ಕಂಪಿಲನಿಗೂ ಹೊಯ್ಸಳರಿಗೂ ಬದ್ಧ ವೈರತ್ವವಿರುವುದು ಸ್ಪಷ್ಟವಾಗುತ್ತದೆ. ಮುಮ್ಮಡಿಸಿಂಗನ ಮಗನಾದ ಕಂಪಿಲದೇವನನ್ನು ಕ್ರಿ.ಶ. ೧೩೦೩ರಲ್ಲಿಯೇ ಸೇವುಣ (ರಣ?) ನಾಯ್ಕನೆಂಬುದಾಗಿ ಕರೆದಿರುವುದನ್ನು ನೋಡುತ್ತೇವೆ.[7] ಪ್ರಾಯಶಃ ಈ ವೇಳೆಗಾಗಲೇ ಈ ಮನೆತನದವರು ಯಾದವರ ಆಶ್ರಯವನ್ನು ಗಳಿಸಿ ಅವರ ಪತನಾ ನಂತರ ಸ್ವತಂತ್ರ ರಾಜ್ಯ ನಿರ್ಮಿಸಿಕೊಂಡಿರಬೇಕೆಂಬ ಅಭಿಪ್ರಾಯವನ್ನು ಜಿ.ವರದರಾಜ್ ರಾವ್‌ರವರು ವ್ಯಕ್ತಪಡಿಸುತ್ತಾರೆ.[8] ಕ್ರಿ.ಶ.೧೨೭೬ರಲ್ಲಿ ಸೇವುಣ ಮತ್ತು ಹೊಯ್ಸಳರ ನಡುವೆ ನಡೆದ ಕದನದಲ್ಲಿ ಕಂಪಿಲರಾಯ ಮುಖ್ಯಪಾತ್ರ ವಹಿಸಿದನೆಂಬ ಅಭಿಶಂಕರವರ ಅಭಿಮತ.[9] ಕ್ರಿ.ಶ. ೧೨೮೦ರಲ್ಲಿ ಮುಮ್ಮಡಿಸಿಂಗ ನಾಯಕನ ಮೇಲೆ ಸೇವುಣರು ದಾಳಿ ಮಾಡಿದರು. ಕಮ್ಮಟವನ್ನು ಮುರಿಯಲು ಸೇವುಣರು ತದನಂತರವೂ ಎರಡು ಬಾರಿ ಪ್ರಯಾಸ ಮಾಡಿ ವಿಫಲರಾದರು. ಮುಮ್ಮಡಿ ಬಲ್ಲಾಳ ಕ್ರಿ.ಶ. ೧೩೨೦ರಲ್ಲಿ ದೊರವಡಿಯಲ್ಲಿ ಕಂಪಿಲರಾಯನನ್ನು ದಂಡಿಸಲು ಯತ್ನಿಸಿದರು. ಈ ಕದನ ನಿರ್ಣಾಯಕವಾದಂತೆ ಕಂಡುಬರುವುದಿಲ್ಲ. ಇದು ಕಾಲ್ಪನಿಕವಾದುದು ಎಂದು ಅಭಿಶಂಕರವರೇ ಅಭಿಮತಿಸಿದ್ದಾರೆ.[10] ಶ್ರೀ ವೀರ ಕಂಪಿಲ ದೇವನ ಮೇಲೆ ಬಲ್ಲಾಳನು ಬಂದಲ್ಲಿ ಇಬ್ಬರು ದಾಯದ ದಂಡಿನೊಳಗೆ ದಂಡಿನ ಬಯಿಚಯ್ಯನು ಎಂಬ ಉಲ್ಲೇಖ ಬಂದಿದೆ. ಇವು ಎರಡನ್ನೂ ಒಟ್ಟಿಗೆ ಸೇರಿಸಿದರೆ ಅವು ಪರಸ್ಪರ ಪೂರಕವಾಗಿ ಮುಮ್ಮಡಿಸಿಂಗೆ ನಾಯಕನ ಮೂಲವು ಹೊಯ್ಸಳ ವಂಶದ ಒಂದು ಶಾಖೆಯಲ್ಲಿ ಇದ್ದಿರ ಬಹುದೆಂದು ಕೆ.ಅಭಿಶಂಕರ್ ರವರು ತರ್ಕಿಸಿದ್ದಾರೆ.[11] ಅಭಿಶಂಕರರವರ ತರ್ಕಕ್ಕಿಂತ ಜಿ.ವರದರಾಜ್ ರಾವ್ ರವರು ನೀಡುವ ವಿವರಣೆಗಳು ಸ್ಪಷ್ಟವಾಗಿರುವುದರಿಂದ ಸದ್ಯಕ್ಕೆ ಸೇವುಣರ ಮೂಲವನ್ನೇ ಒಪ್ಪಲಾಗಿದೆ.

ಹೀಗೆ ಸೇವುಣ ಯಾದವರರ ಮೂಲದಿಂದ ಬಂದವರಾದ ಇವರ ವಂಶಾವಳಿಯ ಭಿನ್ನವಾಗಿದೆ. ಆರ್.ಎಸ್. ಪಂಚಮುಖಿಯವರು ಪೆರುನಾಯಕ ಈ ವಂಶದ ಹಿರಿಯನಿರಬಹುದೆಂದು ಶಂಕಿಸಿದ್ದಾರೆ.[12] ಕ್ರಿ.ಶ. ೧೫೨೮ರ ಹೊಸಮಲೆದುರ್ಗದ ಶಾಸನದಲ್ಲಿ ವಂಶಾವಳಿ ಈ ಕೆಳಗಿನಂತಿದೆ.[13]

ಮುಮ್ಮಡಿಸಿಂಗ
ಖಂಡೆರಾಯ ಕಂಪಿಲರಾಯ
ವೀರಗುಜ್ಜಲ ಹರಿಹರದೇವಿ
ಹೊಸಮಲೆ ರಾಮನಾಥ ಒಡೆಯ

ಅಂತೆಯೇ ಪ್ರಸನ್ನ ವಿರೂಪಾಕ್ಷಿ ದೇವಾಲಯದ ಬಳಿ ಇರುವ ಕಂಪಿಲನ ಶಾಸನದಲ್ಲಿ ಈ ಮೇಲಿನಂತೆಯೇ ವಂಶಾವಳಿ ಇದ್ದು ಮುಮ್ಮಡಿಸಿಂಗನ ಹೆಂಡತಿಯ ಹೆಸರನ್ನು ಪ್ರತ್ಯೇಕವಾಗಿ ಹೆಸರಿಸುತ್ತದೆ.[14] ಅದರಲ್ಲಿ ಮಾದನಾಯಕಿತಿ ಕಂಪಿಲರಾಯನ ತಾಯಿ ಆಗಿದ್ದಾಳೆ.

ಈ ವಂಶಾವಳಿ ಪ್ರಕಾರ ಮುಮ್ಮಡಿ ಸಿಂಗನಾಯಕ, ಹಾಗೂ ಕಂಪಿಲರಾಯ ದೊರವಡಿಯಿಂದ ಆಳುತ್ತಿದ್ದರು. ದೇವಗಿರಿ ಯಾದವರ ಸಾಮಂತರಾದ ಇವರ ಆಡಳಿತಕ್ಕೆ ಬಳ್ಳಾರಿ, ರಾಯಚೂರು, ಧಾರವಾಡ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳು ಒಳಗೊಂಡಿದ್ದವು.[15] ನಂತರ ಇವರ ರಾಜಧಾನಿಯನ್ನು ದೊರವಡಿಯಿಂದ ಹೊಸಮಲೆ ದುರ್ಗಕ್ಕೆ ಸ್ಥಳಾಂತರಿಸಲಾಗಿರುವ ವಿಷಯ ಈ ಕೆಳಗಿನಂತೆ ಪ್ರಸ್ತಾಪಿಸಲ್ಪಟ್ಟಿವೆ. ಹೊಸಮಲೆದುರ್ಗ ಎಲ್ಲಿದೆ ಎಂಬುದಕ್ಕೆ ನಂಜುಂಡನು ತನ್ನ ರಾಮನಾಥ ಚರಿತ್ರೆಯಲ್ಲಿ ಕಂಪಿಲನ ನೆಲೆಯಾದ ಹೊಸಮಲೆದುರ್ಗ ಆ ವಿರೂಪಾಕ್ಷನ ನಿಲಯದ ದಕ್ಷಿಣ ಭೂವಳದೊಳು ಮೃಗಗಳ ಅವಾಸ ದಂತಿರ್ಪುದು ಎಂದಿದ್ದಾನೆ.[16] ಡಬ್ಲು ಪ್ರಾಸ್ನಿಸ್ ಎಂಬುವರು ಹೊಸಮಲೆ ಪ್ರದೇಶವನ್ನು ಪರಿಚಯ ಮಾಡಿಕೊಳ್ಳುತ್ತಾ ಇಲ್ಲಿ ಪಾಳು ಕೋಟೆಯ ಚಿನ್ಹೆಗಳಿವೆ ಎಂದೂ ಇದನ್ನು ಕುಮಾರರಾಮನೆಂಬ ಪಾಳೆಯಗಾರನು ಕಟ್ಟಿಸಿದನೆಂದೂ ಪ್ರತೀತಿ ಇರುವುದಾಗಿ ಹೇಳಿದ್ದಾನೆ.[17] ಜಿ.ಡಿ.ಎಂ. ಡೆರೆಂಟ್ ರವರು ಹೊಸಮಲೆದುರ್ಗವು ತುಂಗಾಭದ್ರ ನದಿಯಿಂದ ೨೦ ಕಿ.ಮೀ ದಕ್ಷಿಣಕ್ಕೆ ಇದೆ ಎಂದಿದ್ದಾರೆ.[18] ಕಂಪಿಲನು ಹೊಸಮಲೆದುರ್ಗವನ್ನು ಕಟ್ಟಿಸಿದ ವಿವರವು ಚೆನ್ನರಾಮನ ಸಾಂಗತ್ಯದ ೨, ೪೫-೪೫ರಲ್ಲಿ ಬರುತ್ತದೆ.[19] ಕಂಪಿಲನು ಹೊಸಮಲೆಯಲ್ಲಿ ಸುಪ್ರತಿಷ್ಟತನಾದ ಮೇಲೆ, ಮಂತ್ರಿಯಾದ ಬೈಚಪ್ಪನೇ ನೆರೆಹೊರೆಯ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಗೆದ್ದು ಬರುತ್ತಾನೆ.[20] ಮುಮ್ಮಡಿಸಿಂಗನ ಮರಣಾ ನಂತರ ಕಂಪಿಲರಾಯನು ರಾಯದುರ್ಗದಿಂದ ಬೇಟೆಯಾಡುತ್ತಾ ಬರುತ್ತಿರುವಾಗ ಸಂಡೂರಿನ ಬಳಿ ಪ್ರಶಸ್ತವಾದ ಒಂದು ಎಡೆಯಲ್ಲಿ ನೆಲೆಸಿ ಹೊಸಮಲೆದುರ್ಗವನ್ನು ನಿರ್ಮಿಸಿದನೆಂದು ಕೈಫಿಯತ್ತುಗಳು ಹೇಳುತ್ತವೆ.[21] ಕಂಪಿಲನು ಹೊಸಮಲೆದುರ್ಗವನ್ನು ಕಟ್ಟಿಸಿ ಅಲ್ಲಿಂದ ಆಳಲು ಪ್ರಾರಂಭಿಸಿದನೆಂದು ಚನ್ನಬಸಪ್ಪ ಪಾಟೀಲರು ಅಭಿಪ್ರಾಯಪಡುತ್ತಾರೆ.[22] ಕ್ರಿ.ಶ. ೧೩೨೦ ಕಂಪಿಲನ ಶಾಸನವು ದೊರೆವದಿಯಲ್ಲಿ ದೊರೆತಿದೆ. ಕ್ರಿ.ಶ.೧೩೨೩ರ ಕಂಪಿಲನ ಶಾಸನವೂ ಹೊಸಮಲೆದುರ್ಗದಲ್ಲಿ ಕಂಡುಬರುತ್ತದೆ. ಪ್ರಾಯಶಃ ಇವರು ೧೩೨೦-೨೩ರ ಮಧ್ಯದಲ್ಲಿಯೇ ಹೊಸಮಲೆದುರ್ಗಕ್ಕೆ ಬಂದಿರುತ್ತಾರೆ.[23] ಇದೇ ಅವಧಿಯಲ್ಲಿ ಹೊಸಮಲೆದುರ್ಗದಲ್ಲಿ ಕೋಟೆ ನಿರ್ಮಾಣವಾಗಿದ್ದಿರಬಹುದು. ಕ್ರಿ.ಶ. ೧೩೩೩ರಲ್ಲಿ[24] ಈ ಕುಮಾರರಾಮ ಹಾಗೂ ಕಂಪಿಲನು ವೀರಸ್ವರ್ಗ ಸೇರಿದರು.

ಹೊಸಮಲೆ ಗುಡ್ಡವು ಸಮುದ್ರ ಮಟ್ಟದಿಂದ ೩೨೨೦ ಅಡಿ ಎತ್ತರವಾಗಿದೆ. ಈ ಗುಡ್ಡದ ಮೇಲೆ ಸಮತಟ್ಟಾದ ಪ್ರದೇಶವಿದೆ. ಇಲ್ಲಿಯೇ ಹೊಸಮಲೆ ಕೋಟೆ ಇರುವುದು. ಈ ಕೋಟೆಯ ಸುತ್ತಲೂ ಆಳವಾದ ಮತ್ತು ಕಡಿದಾದ ಬೆಟ್ಟದ ಕಣಿವೆಗಳಿವೆ. ಸುಮಾರು ೨ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕೋಟೆಯನ್ನು ದೊಡ್ಡ ಹಾಗೂ ಮಧ್ಯಮ ಗಾತ್ರದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಪ್ರಕೃತಿಯ ಸಹಜ ವೈಪರೀತ್ಯ ಹಾಗೂ ಗಣಿಗಾರಿಕೆಯ ಕಾರಣದಿಂದಾಗಿ ಕೋಟೆಯ ಬಹುತೇಕ ಭಾಗ ಶಿಥಿಲಗೊಂಡಿವೆ. ಅಳಿದುಳಿದ ಕೋಟೆ ಗೋಡೆ ಮಾತ್ರ ಅಲ್ಲಲ್ಲಿ ಕಂಡುಬರುತ್ತದೆ.

ಈ ಕೋಟೆಯನ್ನು ವರದರಾಜ್ ರವರು ವನದುರ್ಗವೆಂದು ಕರೆದಿದ್ದಾರೆ.[25] ಈ ಕೋಟೆಗೆ ಮೂರು ಬಾಗಿಲುಗಳು ಇದ್ದುದಾಗಿ ರಾಮಶರ್ಮರ ಅಭಿಪ್ರಾಯವನ್ನು ವರದರಾಜ್ ರವರು ಸಮರ್ಥಿಸಿದ್ದಾರೆ.[26] ಡಾ.ಚನ್ನಬಸಪ್ಪ ಪಾಟೀಲರು ಹೊಸಮಲೆದುರ್ಗ ಕೋಟೆಗೆ ನಾಲ್ಕು ಬಾಗಿಲುಗಳಿರುವುದನ್ನು ಗುರುತಿಸಿದ್ದಾರೆ.[27] ಕೋಟೆಯ ಆಗ್ನೇಯ ಭಾಗಕ್ಕೆ ಒಂದು ಬಾಗಿಲಿದೆ. L ಆಕಾರದಲ್ಲಿರುವ ಬಾಗಿಲಿನ ಪ್ರವೇಶದ್ವಾರವು ದಕ್ಷಿಣದಿಂದ ಉತ್ತರಕ್ಕೆ ಸಾಗಿ ಮುಂದೆ ಪಶ್ಚಿಮದೆಡೆಗೆ ತಿರುಗುತ್ತದೆ. ಇದನ್ನೆ ಹುಣಚೂಟಿ ಬಾಗಿಲು ಎಂಬುದಾಗಿ ಜಿ.ವರದರಜ್ ರಾವ್ ರವರು ಗುರುತಿಸಿರಬಹುದು.[28] ಕೋಟೆಯ ಪೂರ್ವದಿಕ್ಕಿಗೆ ಎರಡನೆಯ ಬಾಗಿಲಿದೆ. ಇದನ್ನು ಚನ್ನಬಸಪ್ಪ ಪಾಟೀಲರು ಕವಣೆಕಲ್ಲು ಬಾಗಿಲೆಂದು ಕರೆದಿರುವರು.[29] ಜಿ.ವರದರಾಜ್‌ರವರು ಗುರುತಿಸಿರುವ ಕವಣೆಕಲ್ಲು ಬಾಗಿಲು ಇದೇ ಆಗಿದೆ.[30] ಈ ಬಾಗಿಲ ಬಳಿಯಲ್ಲಿ ಕವಣೆಕಲ್ಲುಗಳ ರಾಶಿಗಳೇ ಬಿದ್ದಿವೆ. ಈ ಕಾರಣಕ್ಕಾಗಿ ಈ ಮೇಲಿನ ಹೆಸರು ಬಂದಿರಬಹುದು. ಪಾಯಶಃ ಯುದ್ಧದ ಸಮಯದಲ್ಲಿ ಶತ್ರು ಪಡೆಯ ಮೇಲೆ ಕವಣೆಯಿಂದ ಎಸೆಯಲಾಗುತ್ತಿದ್ದ ಕಲ್ಲುಗಳಿವು. ಈ ಬಾಗಿಲಿನ ಹೊರಭಾಗದಲ್ಲಿ ಕವಣೆಕಲ್ಲುಗಳು ಚದುರಿಕೊಂಡು ಬಿದ್ದಿರುವುದನ್ನು ಇಂದಿಗೂ ಕಾಣಬಹುದು. ಇದನ್ನೂ ಪಾಟೀಲರು ಗುರುತಿಸಿದ್ದಾರೆ.[31] ಈ ಕೋಟೆಯ ಉತ್ತರ ದಿಕ್ಕಿಗಿರುವುದೇ ಮೂರನೆಯ ಬಾಗಿಲು. ಇದನ್ನೆ ಜಿ.ವರದರಾಜ್ ರಾವ್ ರವರು ಹೊಸಪೇಟೆ ಬಾಗಿಲೆಂದು ಗುರುತಿಸಿರಬಹುದು.[32] ಕೋಟೆಯ ದಕ್ಷಿಣಕ್ಕೆ ನಾಲ್ಕನೆಯ ಬಾಗಿಲಿದೆ. ಇದು ಶಿಥಿಲವಾಗಿದೆ. ಉತ್ತರ ಮತ್ತು ಪೂರ್ವಕ್ಕಿರುವ ಬಾಗಿಲುಗಳು ಬಹಳ ಮುಖ್ಯವಾಗಿವೆ. ಇವುಗಳೇ ಮುಖ್ಯ ಪ್ರವೇಶದ್ವಾರಗಳಂತೆ ಕಂಡು ಬರುತ್ತವೆ. ಪೂರ್ವದ ಪ್ರವೇಶದ್ವಾರವನ್ನು ತಲುಪಲು ಸುತ್ತು ಬಳಸಿ ಬರಬೇಕಾಗುತ್ತದೆ. ಕೆಳಗೆ ದಟ್ಟವಾದ ಕಾಡು ಆಳವಾದ ಕಣಿವೆಗಳು ಪ್ರಕೃತಿಸಹಜವಾಗಿವೆ. ಉತ್ತರದ ಬಾಗಿಲನ್ನು ದಿನನಿತ್ಯದ ಓಡಾಟಕ್ಕಾಗಿ ಬಳಸಿರಬಹುದು. ಶಿಥಿಲಾವಸ್ಥೆಯಲ್ಲಿರುವ ಕೋಟೆಯು ೪-೫ ಅಡಿ ಎತ್ತರದ ಕಾಡುಗಲ್ಲಿನ ಗೋಡೆಗಳನ್ನು ಮಾತ್ರ ಇಲ್ಲಿ ಉಳಿಸಿಕೊಂಡಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಹುಡುಕುವಲ್ಲಿಯೇ ಈ ಕೋಟೆಯ ಮಹತ್ವವನ್ನು ಅರಿಯಲಾಗಿದೆ. ಒಂದನೆಯದಾಗಿ ಮುಮ್ಮಡಿ ಸಿಂಗೇನಾಯಕ ಹಾಗೂ ಕಂಪಿಲರಾಯ ದೊರೆವದಿಯಿಂದ ಆಳುತ್ತಿದ್ದರು. ದೊರೆವದಿಯಿಂದ ತಮ್ಮ ರಾಜಧಾನಿಯನ್ನು ಹೊಸಮಲೆದುರ್ಗಕ್ಕೆ ಸ್ಥಳಾಂತರಿಸಿದರೇಕೆ? ಎರಡನೆಯದಾಗಿ ಕೊನೆಯವರೆಗೂ ಈ ದುರ್ಗದಲ್ಲೇಕೆ ಆಶ್ರಯ ಪಡೆದರೆಂಬುದಕ್ಕೆ ಈ ಕೆಳಗಿನಂತೆ ಉತ್ತರ ಕಂಡುಕೊಂಡಿದೆ.

ಪಾಂಚಾಳಗಂಗನ ಕೃತಿಯಲ್ಲಿ ಹೊಸಮಲೆಯನ್ನು ಕುರಿತು ಹೀಗೆ ಹೇಳಿದೆ; ಆದ್ವಿಪಾಂತರ ದಕ್ಷಿಣಭಾಗದೊಳಗೆ ತಾನೆಸೆದುದು ಹೊಸಮಲೆಯು ಎಂದು ಮೊದಲಾಗಿ ದೇಶದೊಳಧಿಕವೆಂದೆನಿಸುವ ಹೊಸಮಲೆ ಶೇಷ ಮಂಡಳಿಸಿದಂದದಲಿ ವಾಸವಾದ್ಯರಿಗೆ ಅಸಾಧ್ಯವೆಂಬಂತೆ ವಿಶೇಷವಲ್ಲಿ ಪರ್ವತವು ಎಂದು ಮುಂದುವರೆಯುತ್ತದೆ ಅನಂತರ ಜೆಂಬುನೆರಲೆ, ದಾಳಿಂಬೆ, ಖರ್ಜೂರ, ದ್ರಾಕ್ಷಿ, ಅಂಬಟೆ, ಅರನೆಲ್ಲಿ, ಮಾವುಯಿಂಬ ಪಲಸು ತಂಗಕೇಡಿಯ ಮರಗಳು ಸಂಭ್ರಮದೊಳು ರಾಜಿಸುವವು ನಾಗ ಚಿತ್ರವು ರುದ್ರಾಕ್ಷಿಯ ಮತ್ತಿಯ ಮರ ಬಿಲ್ವತ್ರಗಳು ಅತ್ತಿ ಕಲ್ಹತ್ತಿ ಹೆಬ್ಬಿದಿರು ಕಿರು ಬಿದಿರಿನಿಂದ ಮೊತ್ತದಿಂದಲಿ ಪಸರಿಪುದು ಎಂಬುದಾಗಿ ಆ ಎಡೆಯ ಗಿಡಮರಗಳ ಪ್ರಸ್ತಾಪವು ಬರುತ್ತದೆ.[33] ಆಗ ಕವಿ ಬತ್ತಿ ನಡೆದನತಿ ಬೇಗದಿ ಕಂಪಿಲ ಮುತ್ತಿದನಾ ಹೊಸಮಲೆಯ ಎತ್ತ ನೋಡಿದರತ್ತಾ ದಟ್ಟಡವಿ ಎಂದಿದ್ದಾನೆ. ಕೆಲವರು ಈ ವರ್ಣನೆ ಹಂಪಿಯ ಬಳಿಯ ಕಮ್ಮಟದುರ್ಗದ್ದು ಎಂದಿದ್ದಾರೆ. ಪ್ರಾಯಶಃ ಈ ವರ್ಣನೆಗೆ ಪೂರಕವಾದ ಪರಿಸರವೂ ಹೊಸಮಲೆದುರ್ಗದಲ್ಲಿದೆ. ಹಾಗಾಗಿ ಹೆಚ್ಚಾಗಿ ಇದಕ್ಕೆ ಅನ್ವಯಿಸುವುದು.

ದೊರವದಿಯು ಬಯಲು ಪ್ರದೇಶವಾಗಿದ್ದು, ರಕ್ಷಣೆಗೆ ಅಷ್ಟೊಂದು ಪ್ರಸ್ತವಾಗಿರಲಿಲ್ಲ. ಮುಮ್ಮಡಿಸಿಂಗ ಹಾಗೂ ಕಂಪಿಲರಾಯರು ದೇವಗಿರಿಯ ಯಾದವ ರಾಮದೇವನ ಸಾಮಂತರಾಗಿದ್ದರು. ರಾಮದೇವನ ಮರಣಾನಂತರ ಸ್ವತಂತ್ರ್ಯ ರಾಜ್ಯವನ್ನು ನಿಭಾಯಿಸಲು ದೊರವದಿಗಿಂತ ಹೊಸಮಲೆ ಆಯಾಕಟ್ಟಿನ ಸ್ಥಳವೆಂದು ಅರಿತ ಕಂಪಿಲ, ಮುಮ್ಮಡಿ ಸಿಂಗನ ನಂತರ ರಾಜಧಾನಿಯನ್ನು ಹೊಸಮಲೆಗೆ ಸ್ಥಳಾಂತರಿಸಿ, ಇಲ್ಲಿಯೇ ಭದ್ರವಾದ ಕೋಟೆಯೊಂದನ್ನು ನಿರ್ಮಿಸಿದ. ಈ ಪ್ರದೇಶ ಅಭೇದ್ಯವಾದ ಕಾಡು, ಗಿರಿ-ಕಂದರಗಳಿಂದ ಸುತ್ತುವರೆದಿದೆ. ಶತ್ರುಪಡೆಯು ಅಷ್ಟು ಬೇಗನೆ ಈ ಪ್ರದೇಶವನ್ನು ಪತ್ತೆ ಹಚ್ಚುವ ಹಾಗಿರಲಿಲ್ಲ. ಹೀಗಾಗಿ ಹೊಸಮಲೆಗೆ ರಾಜಧಾನಿಯನ್ನು ಸ್ಥಳಾಂತರಿಸಲಾಗಿದೆ.

ಕುಮಾರರಾಮನ ಮೇಲೆ ಮೋಹಗೊಂಡ ರತ್ನಾಜಿ ನನ್ನ ಗಂಡ ವೃದ್ಧ, ಆತನಿಂದ ನನ್ನ ಬಯಕೆ ತೃಪ್ತಿಯಾಗಲಿಲ್ಲ. ನೀನು ನನ್ನೊಂದಿಗೆ ಸಮ್ಮಿಳನಗೊಂಡಲ್ಲಿ ಕಂಪಿಲರಾಯನಿಗೆ ವಿಷ ಪ್ರಯೋಗ ಮಾಡಿಕೊಂದು ನಿನಗೆ ಪಟ್ಟಾಭಿಷೇಕ ಮಾಡಿ ‘ಹೊಸಮಲೆದುರ್ಗ’ವನ್ನೂ ಕೊಡುತ್ತೇನೆಂದು ಹೇಳಿರುವ ವಿಷಯವು ಭಟ್ಟರಹಳ್ಳಿ ಕೈಫಿಯತ್ತಿನಲ್ಲಿ ಬರುತ್ತದೆ.[34] ಇಲ್ಲಿ ಹೊಸಮಲೆದುರ್ಗವು ಕುಮ್ಮಟದುರ್ಗದಷ್ಟೇ ಮಹತ್ವವನ್ನು ಪಡೆದುಕೊಂಡಿರುವುದು ವ್ಯಕ್ತವಾಗುತ್ತದೆ.

ಎರಡನೆಯ ಪ್ರಶ್ನೆಗೆ ಉತ್ತರವಾಗಿ ಕುಮ್ಮಟದುರ್ಗಕ್ಕೆ ಶತ್ರುಗಳು ಆಕ್ರಮಿಸಿದರೆ ರಕ್ಷಣೆ ಪಡೆಯಲು ಹೊಸಮಲೆದುರ್ಗ ಯೋಗ್ಯ ಸ್ಥಳವಾಗಿತ್ತು. ನೇಮಿಯು ಕ್ರಿ.ಶ. ೧೩೨೭ರಲ್ಲಿ ಕುಮ್ಮಟ ದುರ್ಗದ ಮೇಲೆ ಯುದ್ಧಕ್ಕೆ ಬಂದಾಗ ಕಂಪಿಲರಾಯನು ಕುಮಾರರಾಮನನ್ನು ಹೊಸಮಲೆ ದುರ್ಗಕ್ಕೆ ಹೋಗಲು ಸೂಚಿಸುತ್ತಾನೆ.[35] ಆದರೆ ಕುಮಾರರಾಮ ತನ್ನ ತಂದೆ, ತಾಯಿ ಹರಿಯಾಲದೇವಿ ಈತನ ಆಶ್ರಿತ ಬಾಹದರಖಾನ್ ಇವರೆಲ್ಲರನ್ನೂ ಹೊಸಮಲೆದುರ್ಗಕ್ಕೆ ಕಳಿಸಿ ತಾನೊಬ್ಬನೆ ಯುದ್ಧಕ್ಕೆ ನಿಲ್ಲುತ್ತಾನೆ.[36]

ಹೊಸಮಲೆದುರ್ಗ ಕಮ್ಮಟದುರ್ಗದಂತೆ ನಿರ್ಜನವಾದ ಪ್ರದೇಶವಾಗಿರಲಿಲ್ಲ. ಆದ್ದರಿಂದ ಇತ್ತೀಚೆಗೆ ನಿರ್ಮಿಸಿದ ಪಾದ್ರಿ ಬಂಗಲೆ, ಹಲಕೆಲವು ವಾಸದ ಮನೆಗಳು ಇಲ್ಲಿವೆ. ಈ ದುರ್ಗವೂ ತುಂಬಾ ಎತ್ತರದಲ್ಲಿರುವುದರಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಬಳ್ಳಾರಿಯಲ್ಲಿದ್ದ ಮಿಲಿಟರಿಯರು ಬಂದು ಇಲ್ಲಿ ತಂಗುತ್ತಿದ್ದರೆಂದು ತಿಳಿದುಬರುತ್ತದೆ. ಇಂದಿಗೂ ಪಾದ್ರಿ ಬಂಗಲೆಗೆ ಕ್ರೈಸ್ತ ಸನ್ಯಾಸಿಯರು ಬೇಸಿಗೆಯ ಶಿಬಿರಕ್ಕಾಗಿ ಬಂದುಹೋಗುತ್ತಾರೆ. ಉತ್ತಮವಾದ ಹವಾಗುಣ ಇಲ್ಲಿರುವುದರಿಂದ ಮತ್ತು ರಕ್ಷಣೆಗೆ ಯೋಗ್ಯವಾಗಿರುವುದರಿಂದಲೇ ಕುಮ್ಮಟದ ಅರಸರು ಕೊನೆಯವರೆಗೂ ಈ ದುರ್ಗವನ್ನು ನೆಚ್ಚಿಕೊಂಡಿದ್ದರು.

ಇಲ್ಲಿ ರಾಮನಾಥ, ಆಂಜನೇಯ, ತಾಯಮ್ಮನ ದೇವಾಲಯಗಳು ಹಾಗೂ ಹುಲಿಯಪ್ಪಯ್ಯನ ಮಠವೂ ಇದೆ. ಇವುಗಳಲ್ಲಿ ರಾಮನಾಥನ ದೇವಾಲಯವು ಮುಖ್ಯವಾಗಿದೆ. ಇದರಲ್ಲಿ ಗರ್ಭಗೃಹ ಮತ್ತು ತೆರೆದ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಲಿಂಗವಿದೆ. ಕುಮಾರರಾಮನ ಕತ್ತರಿಸಿದ ರುಂಡವು ಈ ಲಿಂಗದ ರೂಪ ಪಡೆಯಿತ್ತೆಂದು ನಂಬಿಕೆ. ಲಿಂಗದ ಹಿಂಭಾಗದಲ್ಲಿ ಕೇಶವನ ಶಿಲ್ಪವಿದೆ. ಸಭಾಮಂಟಪದಲ್ಲಿ ಸಾದಾ ಕೆತ್ತನೆಯ ಕಂಬಗಳಿವೆ. ಹಾಗೂ ಬಿಲ್ಲುಬಾಣ ಹಿಡಿದ ವೀರರ ಶಿಲ್ಪವಿದೆ. ದೇವಾಲಯದ ಬಲಭಾಗದ ಮುಂದಿರುವ ಶಾಸನ ಕಲ್ಲಿನ ಮೇಲ್ಭಾಗದಲ್ಲಿ ಲಿಂಗ, ನಂದಿ ಮತ್ತು ವೀರನ ಶಿಲ್ಪಗಳಿವೆ. ವೀರನು ಲಿಂಗದ ಮುಂದೆ ಕೈಮುಗಿದು ನಿಂತಿದ್ದಾನೆ. ಈ ವೀರನೇ ಕುಮಾರರಾಮ[37] ಶಾಸನ ಕಲ್ಲಿನ ಕೆಳಭಾಗದಲ್ಲಿ ಕಮಾನಿನಾಕಾರದ ಗೂಡಿನಲ್ಲಿ ಕೈಮುಗಿದು ನಿಂತ ಮಹಿಳೆಯ ಶಿಲ್ಪವಿದೆ. ಈಕೆ ಗೋಪಾಯಿ, ಗೋಪಾಯಿಯೇ ಈ ಗುಡಿಯನ್ನು ಕ್ರಿ.ಶ. ೧೫೨೭ ರಲ್ಲಿ ಕಟ್ಟಿಸಿದಂತೆ ಈ ಶಾಸನದಲ್ಲಿ ವ್ಯಕ್ತವಾಗಿದೆ.[38]

೧೬ನೆಯ ಶತಮಾನದಲ್ಲಿ ನಿರ್ಮಾಣವಾದ ದೇವಾಲಯವು ಇತ್ತೀಚೆಗೆ ಪೂರ್ಣ ಜೀರ್ಣೋದ್ಧಾರಗೊಂಡು ಹಳೇ ರೂಪವನ್ನು ಕಳೆದುಕೊಂಡಿದೆ. ಇದರ ಮುಂದೆ ಗರುಡ ಗಂಬವಿದೆ. ಆಗ್ನೇಯ ಹತ್ತಿರದಲ್ಲಿ ಗಣೇಶ, ಕಾಳಿ, ತ್ರಿಶೂಲ ಹಾಗೂ ಡಮರು ಹಿಡಿದ ಶೈವದೇವತೆ, ಭೈರವ ವಿಷ್ಣು, ತೀರ್ಥಂಕರನ ಪ್ರಭಾವಳಿ, ನಾಗರಕಲ್ಲು ಮತ್ತು ವೀರಗಲ್ಲುಗಳಿವೆ. ಈ ವೀರಗಲ್ಲಿನಲ್ಲಿ ಕ್ರಿ.ಶ. ೧೩೨೩ ರ ಶಾಸನವಿದೆ. ಹೊಯ್ಸಳ ಮೂರನೆಯ ಬಲ್ಲಾಳನು ಕಂಪೊಲನ ಮೇಲೆ ದಂಡೆತ್ತಿ ಬಂದಾಗ ಬಯಿಚ ಜೋವನು ಯುದ್ಧದಲ್ಲಿ ಹೋರಾಡಿ ವೀರಸ್ವರ್ಗವನ್ನು ಪಡೆದನೆಂದು ಈ ಶಾಸನ ತಿಳಿಸುವುದು.[39]

ಇತ್ತೀಚಿಗೆ ನಿರ್ಮಿಸಲಾದ ಆಂಜನೇಯ ದೇವಾಲಯದಲ್ಲಿ ಪ್ರಾಚೀನವೆನ್ನಬಹುದಾದ ಎರಡು ಆಂಜನೇಯ ಶಿಲ್ಪಗಳು ಹಾಗೂ ಶಿವಲಿಂಗವಿದೆ. ಇಲ್ಲಿಯ ತಾಯಮ್ಮ ದೇವಾಲಯ ಹೊಸದು. ಇದರ ಬಳಿ ದಂಪತಿಗಳು ಕೈಮುಗಿದು ನಿಂತ ವೀರಗಲ್ಲಿದೆ. ಹುಲಿಮಾನಪ್ಪ ಹಾಗೂ ವೀರಭದ್ರ ಶಿಲ್ಪಗಳನ್ನೊಳಗೊಂಡ ಶಿಥಿಲಾವಸ್ಥೆಯ ದೇವಾಲಯವೊಂದಿದೆ. ಹುಲಿಯ ಮೇಲೆ ಸವಾರನಾಗಿರುವ ಮಾನಪ್ಪನು ಎರಡು ಕೈಗಳಲ್ಲಿ ಹಾವುಗಳನ್ನು ಹಿಡಿದಿದ್ದಾನೆ. ಕೆಳಗೆ ಕೋಲು ಹಿಡಿದು ನಿಂತ ಇಬ್ಬರು ಗಡ್ಡದಾರಿ ಪುರುಷರಿದ್ದಾರೆ. ಈ ಗುಡಿಯ ಮುಂದೆ ಭೈರವ, ವೀರಗಲ್ಲು ಹಾಗೂ ಸ್ತ್ರೀ ಶಿಲ್ಪಗಳಿವೆ. ರಾಮನಾಥನ ದೇವಾಲಯದ ನೈರುತ್ಯಕ್ಕೆ ಉದ್ದ-ದಪ್ಪನೆಯ ಗೋಡೆಗಳು, ಬಾಗಿಲಾವಶೇಷಗಳು, ವಿಶಾಲ ಸ್ಥಳವಿದೆ. ಇವುಗಳಿಂದ ಇವು ಅರಮನೆ ಕಟ್ಟಡಕ್ಕೆ ಸಂಬಂಧಿಸಿದವೆಂದು ಶಾಸನದಲ್ಲಿ ಹರಿಯಾಳ ದೇವಿ ನಿವಾಸವೆಂದು ಗುರುತಿಸಿದೆ.[40]

ಸಂಗ್ರಹ ವರದಿ

LEAVE A REPLY

Please enter your comment!
Please enter your name here